ADVERTISEMENT

ವೈರಾಣು, ಬ್ಯಾಕ್ಟೀರಿಯಾ ಪ್ರತ್ಯೇಕಿಸುವ ತಂತ್ರಜ್ಞಾನ!

ರೂಪಾಂತರ ವೈರಾಣು ಹೆಚ್ಚಳಕ್ಕೆ ಆ್ಯಂಟಿ ಬಯೊಟಿಕ್ ಕಾರಣ

ಎಸ್.ರವಿಪ್ರಕಾಶ್
Published 19 ಮೇ 2021, 19:31 IST
Last Updated 19 ಮೇ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರ್‍ಯಾಪಿಡ್ ಆಂಟಿಜನ್ ಮತ್ತು ಆರ್‌ಟಿಪಿಸಿಆರ್‌ ಕೊರೊನಾ ವೈರಾಣು ಪತ್ತೆ ಹಚ್ಚುವಲ್ಲಿ ವಿಫಲವಾಗುತ್ತಿರುವ ಬೆನ್ನಲ್ಲೇ, ಬ್ಯಾಕ್ಟೀರಿಯಾ ಮತ್ತು ವೈರಾಣುವನ್ನು ನಿಖರವಾಗಿ ಪ್ರತ್ಯೇಕಿಸುವ ಅತ್ಯಾಧುನಿಕ ಅನುಕ್ರಮಣಿಕೆ (ಸೀಕ್ವೆನ್ಸಿಂಗ್) ತಂತ್ರಜ್ಞಾನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ರಕ್ತದಲ್ಲಿನ ಜೈವಿಕ ಕೋಶಗಳು ಅಭಿವ್ಯಕ್ತಪಡಿಸುವ ಎಂಆರ್‌ಎನ್‌ಎ ಅಥವಾ ಸಂದೇಶವಾಹಕ ಆರ್‌ಎನ್‌ಎ ಆಣ್ವಿಕ ಜೈವಿಕಗಳನ್ನು(ಮಾಲೆಕ್ಯುಲಾರ್‌ ಬಯೋಮಾರ್ಕರ್‌) ಈ ಹೊಸ ಅನುಕ್ರಮಣಿಕೆ ತಂತ್ರಜ್ಞಾನ ಬಳಸಿ ಮಾಪನ ಮಾಡಲಾಗುತ್ತದೆ. ಇದು ರೋಗ ಪತ್ತೆಯಲ್ಲಿ ಕ್ರಾಂತಿಕಾರವಾಗಬಲ್ಲದು ಎಂದು ವಿಶ್ಲೇಷಿಸಲಾಗಿದೆ.

ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ರೋಗ ಪತ್ತೆಗೆ ಕರಾರುವಾಕ್ಕಾದ ಈ ವಿಧಾನ ಅತಿ ಅಗತ್ಯ. ತಪ್ಪು ಗ್ರಹಿಕೆ ಮತ್ತು ತಪ್ಪು ವ್ಯಾಖ್ಯಾನಗಳಿಂದ ಎಡವಟ್ಟುಗಳಿಗೆ ಕಾರಣವಾಗುತ್ತಿದೆ. ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ಆಳವಾದ ತಿಳಿವಳಿಕೆ ಇಲ್ಲದ ಎಷ್ಟೋ ವೈದ್ಯರು ತಮಗೆ ತೋಚಿದಂತೆ ಸಲಹೆ ನೀಡುತ್ತಿರುವ ಬಗ್ಗೆಯೂ ಅಧ್ಯಯನ ಆತಂಕ ವ್ಯಕ್ತಪಡಿಸಿದೆ.

ADVERTISEMENT

ವೈರಾಣು ಮತ್ತು ಬ್ಯಾಕ್ಟೀರಿಯಾವನ್ನು ಪ್ರತ್ಯೇಕಿಸಿ ಖಚಿತಪಡಿಸಿಕೊಳ್ಳದೇ ವೈದ್ಯರು ಕಣ್ಣು ಮುಚ್ಚಿಕೊಂಡು ಎಲ್ಲ ಬಗೆಯ ಸೋಂಕಿಗೂ ಪ್ರತಿಜೈವಿಕಗಳನ್ನು (ಆ್ಯಂಟಿ ಬಯೊಟಿಕ್‌) ನೀಡುವುದು ವೈರಾಣು ರೂಪಾಂತರಗೊಳ್ಳಲು ಕಾರಣವಾಗುತ್ತಿದೆ ಎಂದು ಅಧ್ಯಯನ ಪ್ರತಿಪಾದಿಸಿದೆ.

ಬ್ಯಾಕ್ಟೀರಿಯಾದಿಂದ ಉಂಟಾದ ತೀವ್ರ ಸ್ವರೂಪದ ಸೋಂಕು ಮತ್ತು ವೈರಾಣುವಿನಿಂದ ಉಂಟಾದ ಸೋಂಕನ್ನು ಪ್ರತ್ಯೇಕಿಸಿ ಪತ್ತೆ ಮಾಡಲು ಹೊಸ ಬಯೋ ಮಾರ್ಕರ್‌ಗೆ ಶಕ್ಯವಾಗಿದೆ. ರಕ್ತದಲ್ಲಿ ವೈವಿಧ್ಯ ಸಂದೇಶ ವಾಹಕ ಆರ್‌ಎನ್‌ಎ (ಎಂಆರ್‌ಎನ್‌ಎ) ಸಿಕ್ಕಿದ್ದು, ಅವುಗಳ ವೈವಿಧ್ಯ ಮಟ್ಟದಿಂದಲೇ ಸೋಂಕು ವೈರಾಣುವಿದೇ ಅಥವಾ ಬ್ಯಾಕ್ಟೀರಿಯಾದ್ದೆ ಎಂಬುದನ್ನು ಗುರುತಿಸಬಲ್ಲದು.

ಕೋವಿಡ್‌ ಸಾಂಕ್ರಾಮಿಕದಿಂದ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಇದಕ್ಕೆ ಚಿಕಿತ್ಸೆ ನೀಡುವುದೂ ಸವಾಲು. ಸಾಕಷ್ಟು ಸಂದರ್ಭದಲ್ಲಿ ತಪ್ಪಾಗಿ ರೋಗ ಲಕ್ಷಣ ಪತ್ತೆ ಮಾಡಲಾಗುತ್ತಿದೆ. ಇದರ ಪರಿಣಾಮ ‘ಟ್ರಯಲ್ ಅಂಡ್ ಎರರ್‌’ ವಿಧಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅನಗತ್ಯವಾಗಿ ಪ್ರತಿಜೈವಿಕಗಳನ್ನು ಬಳಕೆ ಮಾಡಲಾಗುತ್ತಿದೆ.

ಮಾನವ ದೇಹವು ಬ್ಯಾಕ್ಟೀರಿಯಾ ಸೋಂಕು ಮತ್ತು ವೈರಾಣುವಿನ ಸೋಂಕಿಗೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಸೋಂಕಿನ ವಿಧಕ್ಕೆ ಅನುಗುಣವಾಗಿ ರಕ್ತದಲ್ಲಿ ವಿಭಿನ್ನ ರೀತಿಯ ಆಣ್ವಿಕಗಳಾದ ಪ್ರೋಟಿನ್‌ ಮತ್ತು ಆರ್‌ಎನ್‌ಎಗಳನ್ನು ಉತ್ಪಾದನೆಯಾಗುತ್ತದೆ. ಪ್ರತಿಜೈವಿಕಗಳು ಬ್ಯಾಕ್ಟೀರಿಯಾ ಸೋಂಕಿಗೆ ಚಿಕಿತ್ಸೆ ನೀಡಬಲ್ಲವು. ಆದರೆ, ವೈರಾಣುವಿನ ಸೋಂಕಿಗೆ ಪರಿಣಾಮಕಾರಿ ಅಲ್ಲ. ಎಲ್ಲ ಬಗೆಯ ಸೋಂಕುಗಳಿಗೆ ಮನಬಂದಂತೆ ಪ್ರತಿ ಜೈವಿಕಗಳನ್ನು ಬಳಸುವುದರಿಂದ, ಬ್ಯಾಕ್ಟೀರಿಯಾಗಳ ತಳಿಗಳು ಹೆಚ್ಚಲು ಅಥವಾ ರೂಪಾಂತರಗೊಳ್ಳಲು ಕಾರಣವಾಗಿದ್ದು, ಇದರಿಂದ ಪ್ರತಿಜೈವಿಕದ ವಿರುದ್ಧ ಪ್ರತಿರೋಧಕಗಳನ್ನು ಬೆಳೆಸಿಕೊಂಡಿವೆ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಜೀವರಸಾಯನ ಶಾಸ್ತ್ರ ವಿಭಾಗದ ಸಂಶೋಧನಾ ಸಹಾಯಕ ಸತ್ಯಭಾರತಿ ರವಿಚಂದ್ರನ್.

ಹಲವು ಸಂದರ್ಭಗಳಲ್ಲಿ ರೋಗವಿಧಾನವನ್ನು ಸರಿಯಾಗಿ ಪತ್ತೆ ಮಾಡಲು ಸಾಧ್ಯವಾಗದ ಕಾರಣ ಅಥವಾ ತಪ್ಪಾಗಿ ಅರ್ಥೈಸುವುದರಿಂದ ವೈರಾಣುವಿನ ಸೋಂಕಿಗೂ ಪ್ರತಿ ಜೈವಿಕಗಳನ್ನು ನೀಡಲಾಗುತ್ತಿದೆ. ಸದ್ಯಕ್ಕೆ ಚಾಲ್ತಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಾಣುವಿನ ಸೋಂಕು ಪ್ರತ್ಯೇಕಿಸಿ ಪತ್ತೆ ಮಾಡುವ ವಿಧಾನ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇದನ್ನು ತ್ವರಿತಗತಿಯಲ್ಲಿ ನಿಖರವಾಗಿ ಪತ್ತೆ ಮಾಡಿದರೆ ಅರ್ಧ ಯುದ್ಧವನ್ನು ಗೆದ್ದಂತೆಯೇ ಎನ್ನುತ್ತಾರೆ ಅವರು.

ಈ ಅಧ್ಯಯನ ‘ಇ–ಬಯೋಮೆಡಿಕಲ್‌’ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಮತ್ತು ಎಂಎಸ್‌ ರಾಮಯ್ಯ ಆಸ್ಪತ್ರೆಯ ಸಂಶೋಧನಾ ಸಂಸ್ಥೆ ಕೋವಿಡ್‌ ರೋಗಿಗಳ ಆರ್‌ಟಿಪಿಸಿಆರ್‌ ರಕ್ತದ ಮಾದರಿಗಳನ್ನು ಬಳಸಿ ಈ ಅಧ್ಯಯನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.