ADVERTISEMENT

ಗಗನಯಾನ ಯೋಜನೆಗೆ ಹಸಿರು ಇಂಧನ: ಕೆ.ಶಿವನ್‌

ಪಿಟಿಐ
Published 26 ಡಿಸೆಂಬರ್ 2020, 11:58 IST
Last Updated 26 ಡಿಸೆಂಬರ್ 2020, 11:58 IST
ಕೆ.ಶಿವನ್‌
ಕೆ.ಶಿವನ್‌   

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಮಹತ್ವಾಕಾಂಕ್ಷೆಯ ಮಾನವ ಸಹಿತ ‘ಗಗನಯಾನ’ ಯೋಜನೆಗೆ ಹಸಿರು ಇಂಧನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಶಿವನ್‌ ಶನಿವಾರ ಹೇಳಿದರು.

ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯ 16ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭವಿಷ್ಯದಲ್ಲಿ ರಾಕೆಟ್‌ನ ಪ್ರತಿ ಹಂತದಲ್ಲೂ ಈ ಇಂಧನವನ್ನು ಬಳಸಿಕೊಳ್ಳಬಹುದಾಗಿದೆ’ ಎಂದರು. ಸಾಮಾನ್ಯವಾಗಿ ರಾಕೆಟ್‌ಗಳಲ್ಲಿ ಹೈಡ್ರೊಜೀನ್‌(ನೈಟ್ರೊಜನ್‌ ಹಾಗೂ ಹೈಡ್ರೊಜನ್‌ ದ್ರವ ಸಂಯುಕ್ತ) ರಾಕೆಟ್‌ ಇಂಧನವನ್ನು ಬಳಸಲಾಗುತ್ತದೆ. ಇದು ವಿಷಕಾರಿಯಾಗಿದ್ದು, ಕ್ಯಾನ್ಸರ್‌ಗೂ ಕಾರಣವಾಗುತ್ತದೆ. ಈ ಇಂಧನದ ಬದಲಾಗಿ ಇದೀಗ ಪರಿಸರ ಸ್ನೇಹಿ ಇಂಧನದ ಅಭಿವೃದ್ಧಿಗೆ ಇಸ್ರೊ ಮುಂದಾಗಿದೆ.

‘ಭಾರತವು ಆರ್ಥಿಕ ಅಭಿವೃದ್ಧಿಯತ್ತ ಚಿತ್ತನೆಟ್ಟಿದ್ದು, ಈ ಸಂದರ್ಭದಲ್ಲಿ ಹಸಿರು ತಂತ್ರಜ್ಞಾನಗಳನ್ನು ಬಳಸಿಕೊಂಡು ಪರಿಸರದ ಮೇಲಾಗುತ್ತಿರುವ ಹಾನಿಯನ್ನು ಕಡಿಮೆಗೊಳಿಸುವುದಕ್ಕೂ ನಾವು ಗಮನಹರಿಸಬೇಕು. ಇಸ್ರೊ ಪ್ರಸ್ತುತ ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸುವ ಲೀಥಿಯಂ ಐಓನ್‌ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಿದ್ದು, ಇದು ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಸಹಕಾರಿಯಾಗಲಿದೆ’ ಎಂದರು.

ಪಿಎಸ್‌ಎಲ್‌ವಿ ರಾಕೆಟ್‌ನಲ್ಲಿ ನಾಲ್ಕು ಹಂತವಿದ್ದು, ಉಪಗ್ರಹಗಳನ್ನು ನಿಗದಿತ ಕಕ್ಷೆಯಲ್ಲಿ ಇರಿಸಲು ಇವುಗಳಿಗೆ ಇಂಧನವನ್ನು ತುಂಬಿಸಿ ಉಡಾವಣೆಗೊಳಿಸಲಾಗುತ್ತದೆ. ಜಿಎಸ್‌ಎಲ್‌ವಿ ರಾಕೆಟ್‌ನಲ್ಲಿ ಮೂರು ಹಂತವಿದೆ. ಈ ಹಿಂದೆ 2021ರ ಡಿಸೆಂಬರ್‌ನಲ್ಲಿ ಗಗನಯಾನ ಉಡಾವಣೆಗೆ ಇಸ್ರೊ ನಿರ್ಧರಿಸಿತ್ತು. ಕೋವಿಡ್‌–19 ಕಾರಣದಿಂದಾಗಿ ಈ ಯೋಜನೆಯು ಒಂದು ವರ್ಷ ವಿಳಂಬವಾಗಲಿದೆ ಎಂದು ಇಸ್ರೊ ತಿಂಗಳ ಆರಂಭದಲ್ಲಿ ತಿಳಿಸಿತ್ತು.

‘ನಮ್ಮ ಮುಂದಿನ ಪಿಎಸ್‌ಎಲ್‌ವಿಯಲ್ಲಿ ಸ್ಟಾರ್ಟ್‌ಅಪ್‌ ಸಂಸ್ಥೆಗಳ ಉಪಗ್ರಹಗಳು ಇರಲಿವೆ. ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಸರ್ಕಾರೇತರ ಸಂಸ್ಥೆಗಳ ಭಾಗವಹಿಸುವಿಕೆಗೆ ಸಾಕಷ್ಟು ಅವಕಾಶವನ್ನು ಇದೀಗ ಸರ್ಕಾರ ಕಲ್ಪಿಸಿದೆ’ ಎಂದರು.

‘ಸೋಲಿನಿಂದ ಪಾಠ’: ಆನ್‌ಲೈನ್‌ ಮುಖಾಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಿವನ್‌, ‘ನೀವು ಸೋಲಬಹುದು. ಆದರೆ ಪ್ರತಿ ಸೋಲು ಒಂದು ಮುಖ್ಯವಾದ ಪಾಠವನ್ನು ಕಲಿಸುತ್ತದೆ. ಉತ್ಕೃಷ್ಟವಾದ ಸೋಲುಗಳಿಂದಲೇ ಇಂದು ಇಸ್ರೊ ಬೆಳೆದು ನಿಂತಿದೆ. ಯೋಜನೆಯೊಂದು ವಿಫಲವಾದಾಗ, ನಮ್ಮ ವ್ಯವಸ್ಥೆಯು ಮತ್ತಷ್ಟು ಸುಧಾರಣೆಯನ್ನು ಕಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.