ADVERTISEMENT

ಆಮೆಗಳ ಸಾಗರ ಬೇಹುಗಾರಿಕೆ

ಶರತ್ ಭಟ್ಟ ಸೇರಾಜೆ
Published 27 ಡಿಸೆಂಬರ್ 2022, 19:30 IST
Last Updated 27 ಡಿಸೆಂಬರ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಪಂ ಜೆ ಮಂಗೇಶರಾಯರು ಹೇಳಿದಂತೆ, ‘ಬರುವುದು ಬರಬರ ಭರದಲಿ ಬರುವುದು ಬೊಬ್ಬೆಯ ಹಬ್ಬಿಸಿ, ಒಂದೇ ಬಾರಿಗೆ ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ, ಅಬ್ಬರದಲಿ ಭೋರ್ ಭೋರನೆ ಗುಮ್ಮಿಸಿ’ ಎಂಬಂತೆ ಬರುವ ಚಂಡಮಾರುತದ ಕಾಟ ಪೂರ್ವ ಕರಾವಳಿಯಲ್ಲಿ ಪ್ರತಿವರ್ಷವೂ ಇದ್ದದ್ದೇ. ಅದು ಎಬ್ಬಿಸುವ ಹಾವಳಿ, ಉಂಟುಮಾಡುವ ಧ್ವಂಸ, ಸಾವು–ನೋವು – ಇವುಗಳಿಂದಾಗಿ ಎಲ್ಲರಿಗೂ ತಲೆನೋವಾಗಿ ಕಾಡುತ್ತದೆ. ಅದನ್ನು ದಮನ ಮಾಡುವುದೋ, ಹತೋಟಿಗೆ ತರುವುದೋ ನಮ್ಮ ಕೈಯಲ್ಲಿಲ್ಲ, ಹಾಗಾಗಿ ಅದು ಬರುವುದರ ಮುನ್ಸೂಚನೆ ಕೊಡುವುದಕ್ಕಾದರೂ ಆಗಬೇಕು ಎಂಬುದು ವಿಜ್ಞಾನಿಗಳ ಸಂಕಲ್ಪ.

ಎಷ್ಟೋ ಸುಂಟರಗಾಳಿಗಳು ಸಮುದ್ರದಲ್ಲಿ ಹುಟ್ಟುತ್ತವೆ. ಅವು ಗಾಳಿಯ ಒತ್ತಡ, ಉಷ್ಣತೆ ಮುಂತಾದ ಅಂಶಗಳನ್ನು ಅವಲಂಬಿಸಿರುತ್ತವೆ ಕೂಡ. ಹೀಗಾಗಿ, ಇವುಗಳ ಬಗ್ಗೆ ಮುನ್ನುಡಿಯಲಿಕ್ಕೆ ಸಮುದ್ರದಲ್ಲಿನ ಒತ್ತಡ, ಉಷ್ಣಾಂಶ, ಆಳ, ಲವಣತ್ವ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹ ಮಾಡಬೇಕಾಗುತ್ತದೆ. ಹಾಗೆ ಸಂಗ್ರಹ ಮಾಡಿದ ಮಾಹಿತಿಯನ್ನು ಇಟ್ಟುಕೊಂಡು ಸಮೀಕರಣಗಳನ್ನು ಬಳಸಿ ಲೆಕ್ಕಾಚಾರ ಮಾಡಬೇಕಾಗುತ್ತದೆ. ಒಂದು ಹಂತದವರೆಗೆ ಇಂಥ ಮಾಹಿತಿಗಳನ್ನು ಆಗಸದಿಂದ ಉಪಗ್ರಹಗಳು ವಿಜ್ಞಾನಿಗಳಿಗೆ ರವಾನಿಸುತ್ತವೆ; ಆದರೆ ಅವು ಎಷ್ಟೋ ಸಲ ಸಾಕಾಗುವುದಿಲ್ಲ, ಸಮುದ್ರದ ಆಳಗಳ ವಿವರಗಳನ್ನು ಎಲ್ಲ ಅದಕ್ಕೆ ತಿಳಿಯಲಾಗುವುದಿಲ್ಲ. ಸಮುದ್ರಗಳಲ್ಲಿ ಒಂದಷ್ಟು ತೇಲುಬುರುಡೆಗಳನ್ನೂ ಇದೇ ಕೆಲಸಕ್ಕಾಗಿ ತೇಲಿಬಿಟ್ಟಿರುತ್ತಾರೆ. ಅವುಗಳು ಕೊಡುವ ಮಾಹಿತಿಯೂ ಒಂದು ಮಿತಿಯೊಳಗೇ ಇರುವುದರಿಂದ, ಅವು ಮೇಲ್ಪದರದ ವಿವರಣೆಯನ್ನು ಕೊಡಬಲ್ಲವಾದ್ದರಿಂದ, ಅದೂ ಸಾಕಾಗುವುದಿಲ್ಲ. ಅಮೆರಿಕಾದಂಥ ದೇಶಗಳಲ್ಲಿ ಡ್ರೋನುಗಳನ್ನು ಹಾರಿಬಿಟ್ಟೂ ಸ್ವಲ್ಪ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ, ಅದು ಕೊಡುವುದೂ ಅಪೂರ್ಣ ವಿವರಗಳನ್ನೇ. ಹಾಗಾದರೆ ಸಾಗರದಾಳಗಳಿಗೆ ಇಳಿದು ಈ ವಿವರಗಳನ್ನು ಪತ್ತೆ ಮಾಡುವವರು ಯಾರು ಎಂಬುದು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ಎಂಬ ಕಥೆಯಂತೆಯೇ ಆಗಿಬಿಡುತ್ತದೆ.

ಇದಕ್ಕೆ ಒಂದು ಉಪಾಯವನ್ನು ಕಂಡುಹಿಡಿದದ್ದು ಫ್ರಾನ್ಸಿನ ವಿಜ್ಞಾನಿಯೊಬ್ಬರು. ಹವಾಮಾನತಜ್ಞರಿಗೆ ಬೇಕಾಗುವುದು ಸುಮಾರಾಗಿ 25ರಿಂದ 200 ಮೀಟರ್ ಆಳದ ಮಾಹಿತಿ. ಸಾಧಾರಣ ಇಷ್ಟೇ ಆಳಕ್ಕೆ ಹೋಗುವ, ಹೋಗಿ ಸಂಚಾರ ಮಾಡುವ ವ್ಯವಸ್ಥೆಯೊಂದನ್ನು ಪ್ರಕೃತಿಯೇ ರೂಪಿಸಿದೆ - ಅವುಗಳಿಗೆ ‘ಆಮೆಗಳು’ ಎಂದು ಹೆಸರು! ಸುಪ್ತಸಾಗರದ ಒಳಗಿನಿಂದ ವಾರ್ತಾವಾಹಿನಿಯ ವರದಿಗಾರನಂತೆ ಮಾಹಿತಿಯನ್ನು ರವಾನಿಸುವ ಕೆಲಸಕ್ಕೆ ಅದೇ ಕಾರ್ಯಕ್ಷೇತ್ರದಲ್ಲಿ ಇರುವ ಆಮೆಗಳನ್ನೇ ಯಾಕೆ ನಿಯೋಜಿಸಬಾರದು ಎಂಬ ಆಲೋಚನೆ ವಿಜ್ಞಾನಿಗೆ ಬಂತು; ಮತ್ತು ಅವರು ಅದನ್ನು ಕಾರ್ಯರೂಪಕ್ಕೂ ತಂದರು. ಕಾಳಿದಾಸನ ‘ಮೇಘದೂತ’ಕಾವ್ಯದಲ್ಲಿ ದೂರದಲ್ಲಿರುವ ನಲ್ಲೆಗೆ ಸಂದೇಶ ತಲುಪಿಸುವ ಕೆಲಸವನ್ನು ಗಾಳಿಯಲ್ಲಿ ತೇಲುತ್ತ ಸಾಗುವ ಮೋಡಕ್ಕೆ ವಹಿಸಿ ಕೊಡಲಾಯಿತು; ಇಲ್ಲಿ ಅಡಿಗಡಿಗೆ ಕೂರ್ಮಸಂದೇಶಗಳನ್ನು ಕಳಿಸಿಕೊಡಲಿಕ್ಕೆ ನೀರಿನಲ್ಲಿ ಸಾಗುವ ಆಮೆಗಳ ನೇಮಕಾತಿ. ಅಲ್ಲಿ ಯಕ್ಷನೊಬ್ಬನ ಮನಸ್ಸಿನಲ್ಲೆದ್ದ ವಿರಹದ ಬಿರುಗಾಳಿಯ ಬಗ್ಗೆ ಮಾಹಿತಿ; ಇಲ್ಲಿ ಬಿರುಗಾಳಿಗೆ ಕಾರಣವಾಗಬಲ್ಲ ಕಡಲಿನಾಳದ ಉಷ್ಣತೆ, ಒತ್ತಡ, ಉಪ್ಪಿನ ಅಂಶ ಇವುಗಳ ಬಗ್ಗೆ ಮಾಹಿತಿ.

ADVERTISEMENT

ಆಮೆಯ ಬೆನ್ನಿನ ಚಿಪ್ಪಿಗೆ ಸಾಧನವೊಂದನ್ನು ಜೋಡಿಸಲಾಯಿತು. ಆ ಸಾಧನವು ಸಮುದ್ರದಲ್ಲಿ ಆಗಾಗ ಉಷ್ಣತೆ, ಒತ್ತಡ, ಲವಣತ್ವ – ಇವುಗಳನ್ನು ಅಳೆಯಬಲ್ಲದು, ಜಿಪಿಎಸ್ಸಿನಂತೆ ಕೆಲಸ ಮಾಡಿ ಅಷ್ಟಿಷ್ಟು ಹವಾಮಾನ ವರದಿಯ ಮುಖ್ಯ ಅಂಶಗಳನ್ನೂ ಕಳಿಸಬಲ್ಲದು. ಆಮೆಗಳು ಬೇರೆ ಬೇರೆ ಕಡೆಗೆ ಸಾಗಿದಂತೆ, ಆಳಕ್ಕೆ ಇಳಿದಂತೆ, ಸಮುದ್ರದ ಉದ್ದ, ಅಗಲ, ಆಳ ಎಲ್ಲವಕ್ಕೂ ಯಾರಾದರೂ ಸಾಗಿ ಸಮೀಕ್ಷೆ ಮಾಡಿದರೆ ಎಷ್ಟು ದತ್ತಾಂಶಗಳು ಸಿಗಬಹುದೋ ಅಷ್ಟೂ ಮಾಹಿತಿ ಸಿಕ್ಕಿ ಬಿಡುತ್ತದೆ. ಇಂಥ ಜಾಗದಲ್ಲಿ ಇಷ್ಟು ಆಳದಲ್ಲಿ, ಇಷ್ಟು ಉಷ್ಣತೆಯಿದೆ ಎಂಬಂಥ ಸುದ್ದಿಯು ಲಭ್ಯವಾಗಿಬಿಡುತ್ತದೆ. ಈ ಆಮೆಗಳಿಗೆ ಹೊರಟ ತೀರಕ್ಕೆ ಮರಳಿ ಬರುವ ಅಭ್ಯಾಸವೂ ಇರುವುದರಿಂದ ವಿಜ್ಞಾನಿಗಳು ಇಡೀ ಸಾಧನವನ್ನೇ ತೆಗೆದು ಅದರಲ್ಲಿ ಸಂಗ್ರಹವಾದ ಮಾಹಿತಿಯನ್ನೆಲ್ಲ ಹೊರತೆಗೆಯಲೂ ಸಾಧ್ಯವಾಗುತ್ತದೆ. ಆಮೆಗಳು ಐವತ್ತರಿಂದ ನೂರು ಕೆ.ಜಿ ಭಾರ ಇರುತ್ತವೆ. ಅವುಗಳಿಗೆ 250 ಗ್ರಾಂ ತೂಕ ಇರುವ ಈ ಸಾಧನಗಳನ್ನು ಹೊತ್ತೊಯ್ಯಲು ಅಂಥ ಕಷ್ಟವೇನೂ ಆಗಲಾರದು ಎಂದು ವಿಜ್ಞಾನಿಗಳ ಅಂದಾಜು; ಹಕ್ಕಿಗಳಿಗಾದರೆ ಆ ಭಾರವನ್ನು ಹೊರುವುದು ಕಷ್ಟಸಾಧ್ಯವಾದೀತೇನೋ!

ಫ್ರೆಂಚ್ ವಿಜ್ಞಾನಿಯ ಈ ಉಪಾಯದಿಂದ ಉತ್ತೇಜಿತರಾಗಿ ಹಲವು ಬೇರೆ ಬೇರೆ ಕಡೆಗಳಲ್ಲಿಯೂ ಈ ತಂತ್ರವನ್ನು ಬಳಸಲು ಹವಾಮಾನತಜ್ಞರು ಮುಂದಾಗಿದ್ದಾರೆ. ‘STORM’ (Sea Turtles for Ocean Research and Monitoring) ಎಂಬ ಯೋಜನೆ ಹೀಗೇ ಹುಟ್ಟಿಕೊಂಡಿತು. 2019ನೇ ಇಸವಿಯಲ್ಲಿ ‘ಕೆನೆತ್’ ಎಂಬ ಚಂಡಮಾರುತ ಆಫ್ರಿಕಾದಲ್ಲಿ ಬೀಸಿತ್ತು. ಆ ಚಂಡಮಾರುತ ಜನ್ಮತಾಳಿದ ಜಾಗದಲ್ಲಿ ಇಂಥ ಸಂದೇಶವಾಹಕ ಆಮೆಯೊಂದು ಕೆಲವು ದಿನಗಳ ಕಾಲ ತಂಗಿತ್ತಂತೆ. ಯೋಜನೆ ಶುರುವಾಗಿ ಒಂದೂವರೆ ವರ್ಷದಲ್ಲಿ, ಹತ್ತಾರು ಆಮೆಗಳು ಸೇರಿ ಸುಮಾರು ಒಂದೂಕಾಲು ಲಕ್ಷ ಮಾಹಿತಿಯ ತುಣುಕುಗಳನ್ನು ಕಳಿಸಿದ್ದವು. ಚಂಡಮಾರುತಕ್ಕೆ ಮೊದಲು ಆಮೆಗಳು ಹೇಗೆ ವರ್ತಿಸುತ್ತವೆ; ತಮ್ಮ ಪಥವನ್ನೇನಾದರೂ ಅವು ಬದಲಿಸುತ್ತವೆಯೇ ಎಂಬುದೂ ಒಂದು ಅಧ್ಯಯನಾರ್ಹವಾದ ಸಂಗತಿ. ಅದರ ಮೇಲೂ ವಿಜ್ಞಾನಿಗಳು ಕಣ್ಣಿಟ್ಟಿದ್ದಾರೆ. ಸಾಧ್ಯವಾದಷ್ಟು ಮಟ್ಟಿಗೂ ಪ್ರಾಣಿಹಿಂಸೆ ಆಗದಂತೆ ಜಾಗ್ರತೆ ವಹಿಸಿದ್ದಾರೆ. ಉದಾಹರಣೆಗೆ, ಈ ಕೆಲಸಕ್ಕೆಂದೇ ಆಮೆಗಳನ್ನು ಹಿಡಿದು ತಂದಿಲ್ಲ, ಮೀನು ಹಿಡಿಯುವಾಗಲೋ ದೋಣಿಗೊ ಆಕಸ್ಮಿಕವಾಗಿ ಸಿಕ್ಕ ಆಮೆಗಳನ್ನು ಮಾತ್ರ ಈ ಯೋಜನೆಗೆ ಬಳಸಿದ್ದಾರೆ. ಸಾಧನವನ್ನು ಅಂಟಿಸುವ ಅಂಟು ಕೂಡ ಆ ಜೀವಿಗೆ ತೊಂದರೆ ಮಾಡದಂತೆ ನೋಡಿಕೊಂಡಿದ್ದಾರೆ.

ಹೀಗಿದೆ, ಸಾಗರತಳದಲ್ಲಿ ಬೇಹುಗಾರಿಕೆ ಮಾಡುವ ಆಮೆಗಳ ವೃತ್ತಾಂತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.