ADVERTISEMENT

ಮಲಗುಳಿಗೆಯೊಂದು ಬಂದಿದೆ

ಕೊಳ್ಳೇಗಾಲ ಶರ್ಮ
Published 3 ಜನವರಿ 2023, 19:45 IST
Last Updated 3 ಜನವರಿ 2023, 19:45 IST
   

‘ಹೇಲು ತಿನ್ನುವ ಬುದ್ಧಿ’ ಎಂದು ಬೈಯುವವರಿಗೆ ಎಚ್ಚರಿಕೆ. ಇದೋ ಮಲವೇ ತುಂಬಿರುವ ಗುಳಿಗೆಯೊಂದು ಬಂದಿದೆ! ದೇಹದೊಳಗೆ ಕಸಿ ಮಾಡಬಲ್ಲ ಇದನ್ನು ವಿಶೇಷ ಚಿಕಿತ್ಸೆಯಾಗಿ ಬಳಸಬಹುದು ಎಂದು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ ‘ಎಫ್‌ಡಿಎ’ ಕಳೆದ ತಿಂಗಳು ಪರವಾನಗಿ ನೀಡಿದೆ.

ಮಲಗುಳಿಗೆಯೇ ಎಂದು ಅಸಹ್ಯ ಪಡಬೇಕಿಲ್ಲ. ಈ ಗುಳಿಗೆ ಮಲದಂತೆ ಕಾಣುವುದೂ ಇಲ್ಲ. ಅದನ್ನು ತಿನ್ನಲೂ ಬೇಕಿಲ್ಲ. ಅವಶ್ಯಕ ಇರುವ ರೋಗಿಗಳಿಗೆ ಅದನ್ನು ಗುದದ ಮೂಲಕ ಒಳತಳ್ಳಿ ಕಸಿ ಮಾಡಲಾಗುವುದು ಎನ್ನುತ್ತದೆ, ಎಫ್‌ಡಿಎ.

‘ರಿಬಯೋಟಾ’ ಎಂಬ (Rebyota) ಹೆಸರಿನ ಈ ಗುಳಿಗೆಯನ್ನು ಕರುಳಿನ ಸೋಂಕಿನಿಂದ ನರಳುವವರಿಗೆ ನೀಡಲಾಗುವುದು. ಅದರಲ್ಲಿಯೂ ವಿಶೇಷವಾಗಿ ‘ಕ್ಲಾಸ್ಟ್ರಿಡಿಯೋಡಿಸ್‌ ಡಿಫೀಸೈಲ್‌ ಸೋಂಕು’ ಎಂದು ಕರೆಯುವ, ‘ಕ್ಲಾಸ್ಟ್ರಿಡಿಯೋಡಿಸ್‌ ಡಿಫೀಸೈಲ್‌’ ಎನ್ನುವ ಬ್ಯಾಕ್ಟೀರಿಯಾದಿಂದಾಗುವ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ಇದನ್ನು ಚಿಕಿತ್ಸೆ ಎಂದು ಎಫ್‌ಡಿಎ ಪರವಾನಿಗೆ ನೀಡಿದೆ.

ADVERTISEMENT

‘ರಿಬಯೋಟಾ’ ಎನ್ನುವ ಮಲಗುಳಿಗೆಯನ್ನು ಹದಿನೆಂಟು ವರ್ಷ ಮೀರಿದ ವಯಸ್ಕರಿಗೆ ಚಿಕಿತ್ಸೆಯಾಗಿ ನೀಡಬಹುದಂತೆ. ಈ ಚಿಕಿತ್ಸೆಗೆ ಕಾರಣ, ಕರುಳಿನಲ್ಲಿ ಸೂಕ್ಷ್ಮಜೀವಿಗಳ ಕೊರತೆ. ನಮ್ಮ ಕರುಳು ಸೂಕ್ಷ್ಮಜೀವಿಗಳ ಸಾಗರ. ಹಲವು ಬಗೆಯ ಬ್ಯಾಕ್ಟೀರಿಯಾಗಳು ಅಲ್ಲಿ ನೆಲೆಸಿವೆ. ಆದರೆ ಕೆಲವೊಂದು ಸಂದರ್ಭದಲ್ಲಿ ಅವೆಲ್ಲವೂ ಕಾಣೆಯಾಗಿ, ತೊಂದರೆ ನೀಡುವ ಕ್ಲಾಸ್ಟ್ರೀಡಿಯೋಡಿಸ್‌ನಂತಹ ಬ್ಯಾಕ್ಟೀರಿಯಾಗಳಷ್ಟೆ ಉಳಿದುಕೊಳ್ಳಬಹುದು. ಇಂತಹ ಸನ್ನಿವೇಶಗಳು ದೇಹಕ್ಕೆ ಅಪಾಯಕಾರಿ ಎನ್ನುತ್ತಾರೆ ವೈದ್ಯರು.

ಮಲಗುಳಿಗೆಗಳ ಕಸಿಯನ್ನು ‘ಫೀಕಲ್‌ ಟ್ರಾನ್ಸ್‌ಪ್ಲಾಂಟ್‌’ ಎನ್ನುತ್ತಾರೆ. ಸಾಮಾನ್ಯವಾಗಿ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಮ್ಮ ಆಹಾರಪದ್ಧತಿ ಹಾಗೂ ಔಷಧಗಳ ವಿಪರೀತ ಬಳಕೆ ಬದಲಿಸಿಬಿಡುತ್ತವೆ. ಹಾನಿಕಾರಕ ಸೋಂಕು ಉಂಟಾಗುತ್ತದೆ. ಅತಿಯಾದ ಆ್ಯಂಟಿಬಯಾಟಿಕ್‌ ಬಳಕೆ ಹಾಗೂ ನಾರಿನಂಶ ಕಡಿಮೆ ಇರುವಂತಹ ಆಹಾರ ಪದಾರ್ಥಗಳ ಸೇವನೆ ಕರುಳಿನಲ್ಲಿ ಸಹಜವಾಗಿಯೇ ಇರುವ ಸೂಕ್ಷ್ಮಜೀವಿಗಳ ಬೆಳೆವಣಿಗೆಗೆ ತೊಡಕಾಗುತ್ತವೆ. ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಕ್ಲಾಸ್ಟ್ರೀಡಿಯೋಡಿಸಿನಂತಹ ಹಾನಿಕಾರಕ ಜೀವಿಗಳು ನೆಲೆಸುವುದಕ್ಕೆ ಹಾದಿ ಮಾಡಿಕೊಡುತ್ತವೆ.

ರಿಬಯೋಟಾ ಹೀಗೆ ಕರುಳಿನ ಬ್ಯಾಕ್ಟೀರಿಯಾ ಕೊರತೆಗಳನ್ನು ನೀಗುವ ಒಂದು ಉಪಾಯ. ಕರುಳಿನ ಬ್ಯಾಕ್ಟೀರಿಯಾಗಳು ಸುದೀರ್ಘ ಸೋಂಕಿನಿಂದಾಗಿ ಅತಿಯಾಗಿ ಪ್ರತಿಜೈವಿಕ - ಆ್ಯಂಟಿಬಯಾಟಿಕ್‌ - ಔಷಧಗಳನ್ನು ಬಳಸುವುದರಿಂದ ಕಾಣೆಯಾಗುತ್ತವೆ. ಕ್ಲಾಸ್ಟ್ರಿಡಿಯೋಡಿಸ್‌ ಅಲ್ಲಿ ನೆಲೆಸುತ್ತದೆ. ಒಂದು ವೇಳೆ ಈ ಬ್ಯಾಕ್ಟೀರಿಯಾ ಆ್ಯಂಟಿಬಯಾಟಿಕ್ಕನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದರೆ, ಎಷ್ಟೇ ಔಷಧ ಕೊಟ್ಟರೂ ಕರುಳಿನ ಸೋಂಕು ನೀಗುವುದಿಲ್ಲ ಹೊಟ್ಟೆನೋವು, ಭೇದಿ ಮೊದಲಾದ ತೊಂದರೆಗಳಿಂದಾಗಿ ಮತ್ತೆ ಮತ್ತೆ ನರಳಬೇಕಾಗುತ್ತದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಚಿಕಿತ್ಸೆ ಫಲ ಕೊಡದೆ ಸಾವೂ ಉಂಟಾಗಬಹುದು.

ಅಮೆರಿಕೆಯಲ್ಲಿ ಪ್ರತಿ ವರ್ಷವೂ ಹೀಗೆ ಕ್ಲಾಸ್ಟ್ರಿಡಿಯೋಡಿಸ್‌ ಸೋಂಕಿನಿಂದಾಗಿ ಅಂದಾಜು ಹದಿನೈದು ಸಾವಿರದಿಂದ ಮೂವತ್ತು ಸಾವಿರ ಮಂದಿ ಮರಣಿಸುತ್ತಾರೆ ಎಂಬ ಲೆಕ್ಕವಿದೆ. ಇದಕ್ಕಿಂತಲೂ ಹೆಚ್ಚು ಮಂದಿ ಹೊಟ್ಟೆಯ ಹುಣ್ಣಿನಿಂದ ಭಾರತದಲ್ಲಿ ಸಾಯುತ್ತಾರೆ ಎನ್ನುವುದು ಗಮನಾರ್ಹ. ಆದರೆ ಕ್ಲಾಸ್ಟ್ರೀಡಿಯೋಡಿಸ್‌ ಸೋಂಕಿನಿಂದ ಆಗುವ ಸಾವನ್ನು ತಡೆಯಲು ಹಲವು ಚಿಕಿತ್ಸೋಪಾಯಗಳನ್ನು ವೈದ್ಯರು ಹುಡುಕುತ್ತಿದ್ದರು. ಕರುಳಿನಿಂದ ಕಾಣೆಯಾದ ಬ್ಯಾಕ್ಟೀರಿಯಾಗಳನ್ನು ಕೃತಕವಾಗಿ ಮರಳಿ ಕಸಿ ಮಾಡಿದರೆ ಹೇಗೆ ಎನ್ನುವ ಯೋಚನೆಯೇ ರಿಬಯೋಟಾ ಎನ್ನುವ ಮಲಗುಳಿಗೆಗೆ ಮೂಲ.

ರಿಬಯೋಟಾವನ್ನು ಕ್ಲಾಸ್ಟ್ರಿಡಿಯೋಸಿಸ್‌ ಸೋಂಕು ಮರುಕಳಿಸುತ್ತಿದ್ದ ರೋಗಿಗಳಿಗೆ ನೀಡಿ ಪರೀಕ್ಷಿಸಲಾಗಿದೆ. ಇವರೆಲ್ಲರಿಗೂ ಆ್ಯಂಟಿಬಯಾಟಿಕ್ಕನ್ನು ನೀಡಿ, ಗುಣವಾಯಿತು ಎಂದು ತಿಳಿದಾಗಲೂ ಸೋಂಕು ಹಾಗೂ ಭೇದಿ ಮರುಕಳಿಸಿದ್ದುವು. ಒಟ್ಟು ಒಂಬೈನೂರ ಎಪ್ಪತ್ತೆಂಟು ರೋಗಿಗಳನ್ನು ಪರೀಕ್ಷಿಸಲಾಯಿತು. ಇವರಲ್ಲಿ ಕೆಲವರಿಗೆ ಒಂದು ಗುಳಿಗೆ ರಿಬಯೋಟಾವನ್ನು ಕಸಿ ಮಾಡಲಾಯಿತು. ಇನ್ನು ಕೆಲವರಿಗೆ ಸುಳ್ಳು ಗುಳಿಗೆಯನ್ನು ಕಸಿ ಮಾಡಲಾಯಿತು. ಕೆಲವರಿಗೆ ಒಂದು ಸುಳ್ಳುಗುಳಿಗೆ, ಹಾಗೂ ಒಂದು ರಿಬಯೋಟಾವನ್ನು ಕಸಿ ಮಾಡಲಾಯಿತು. ಅನಂತರ ಎಂಟು ವಾರಗಳೊಳಗೆ ಇವರಲ್ಲಿ ಕಾಯಿಲೆ ಮರುಕಳಿಸುತ್ತದೆಯೋ ಎಂದು ಗಮನಿಸಲಾಯಿತು. ರಿಬಯೋಟಾ ಪಡೆದವರಲ್ಲಿ ಮುಕ್ಕಾಲು ಪಾಲು ಮಂದಿಗೆ ಕಾಯಿಲೆ ಮರುಕಳಿಸಲಿಲ್ಲ. ಅದನ್ನು ಪಡೆಯದ ಸುಳ್ಳುಗುಳಿಗೆಯನ್ನಷ್ಟೆ ಪಡೆದವರಲ್ಲಿ ಅರ್ಧಕ್ಕರ್ಧ ಜನರಲ್ಲಿ ಕಾಯಿಲೆ ಮರುಕಳಿಸಿತ್ತು ಎನ್ನುತ್ತದೆ ಎಫ್‌ಡಿಎ.

ರಿಬಯೋಟಾವನ್ನು ಆರೋಗ್ಯವಂತ ಜನರ ಮಲದಿಂದ ತಯಾರಿಸಲಾಗುತ್ತದೆ. ಮಲವನ್ನು ಒಣಗಿಸಿ, ಇತರೆ ರಸಾಯನಿಕಗಳು ಇಲ್ಲದಂತೆ ಶುಚಿಗೊಳಿಸಿ, ಕೇವಲ ಬ್ಯಾಕ್ಟೀರಿಯಾಗಳಷ್ಟೆ ಇರುವಂತೆ ಮಾಡಿ ನೀಡಲಾಗುತ್ತದೆ. ಆರೋಗ್ಯವಂತರಿಂದಲೇ ಮಲವನ್ನು ಪಡೆದಿದ್ದರೂ, ತೊಂದರೆ ಕೊಡಬಲ್ಲ ಬ್ಯಾಕ್ಟೀರಿಯಾಗಳೂ ಇರಬಹುದು. ಅವರು ಸೇವಿಸಿದ ಆಹಾರದಲ್ಲಿನ ಅಲರ್ಜಿಕಾರಕಗಳೂ ತೊಂದರೆ ಕೊಡಬಹುದು ಎನ್ನುತ್ತಾರೆ, ವೈದ್ಯರು. ರಿಬಯೋಟಾವನ್ನು ಪಡೆದ ಕೆಲವರಿಗೆ ಸ್ವಲ್ಪ ಕಾಲ ಹೊಟ್ಟೆ ನೋವು, ಭೇದಿ, ಹೂಸು ಇದ್ದುವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.