ADVERTISEMENT

ಚಂದ್ರಯಾನ: ಚೀನಾದ ಗಗನನೌಕೆಯಲ್ಲಿ ಫ್ರಾನ್ಸ್‌, ರಷ್ಯಾದ ಸಾಧನಗಳ ಬಳಕೆ

ಏಜೆನ್ಸೀಸ್
Published 25 ಏಪ್ರಿಲ್ 2021, 8:15 IST
Last Updated 25 ಏಪ್ರಿಲ್ 2021, 8:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಚಂದ್ರಯಾನ ಕಾರ್ಯಕ್ರಮದ ಭಾಗವಾಗಿ ಚೀನಾ ಮುಂದಿನ ವರ್ಷ ‘ರೋಬೊಟ್‌ ಲೂನಾರ್‌ ಲ್ಯಾಂಡರ್‌’ ಹೊತ್ತ ಗಗನನೌಕೆಯನ್ನು ಉಡ್ಡಯನ ಮಾಡಲಿದೆ.

ಫ್ರಾನ್ಸ್‌, ಸ್ವೀಡನ್‌, ರಷ್ಯಾ ಹಾಗೂ ಇಟಲಿ ದೇಶಗಳು ಅಭಿವೃದ್ಧಿಪಡಿಸಿರುವ ಸಾಧನಗಳನ್ನು ಈ ಗಗನನೌಕೆಯಲ್ಲಿ ಬಳಸಲಾಗುತ್ತದೆ ಎಂದು ಸರ್ಕಾರಿ ಒಡೆತನದ ಸುದ್ದಿಸಂಸ್ಥೆ ಷಿನ್‌ಹುವಾ ವರದಿ ಮಾಡಿದೆ.

‘ಚಾಂಗ್‌ಯಿ–6’ ಎಂಬ ಹೆಸರಿನ ಗಗನನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು, ಅಲ್ಲಿನ ಮೇಲ್ಮೈಯ ಮಾದರಿಗಳನ್ನು ಹೊತ್ತು ಭೂಮಿಗೆ ಮರಳುವುದು’ ಎಂದು ಚಂದ್ರಯಾನ ಕಾರ್ಯಕ್ರಮದ ಮುಖ್ಯ ವಿಜ್ಞಾನಿ ಹು ಹಾವೊ ಶನಿವಾರ ತಿಳಿಸಿದರು.

ADVERTISEMENT

ಈ ದೇಶಗಳು ಪೂರೈಕೆ ಮಾಡಿರುವ ಸಾಧನಗಳು ಯಾವುವು, ಅವುಗಳ ಕಾರ್ಯಗಳ ಬಗ್ಗೆ ಅವರು ಹೆಚ್ಚಿನ ವಿವರ ನೀಡಲಿಲ್ಲ.

‘ಕಾರ್ಯಕ್ರಮದ ಭಾಗವಾಗಿ ಚಂದ್ರನ ಕಕ್ಷೆಯಲ್ಲಿ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಉದ್ದೇಶವಿದೆ. ಗಗನನೌಕೆಯೊಂದು ಕ್ಷುದ್ರಗ್ರಹವೊಂದರ ಮಣ್ಣನ್ನು ಈ ಬಾಹ್ಯಾಕಾಶ ನಿಲ್ದಾಣಕ್ಕೆ ತರಲಿದೆ. ನಂತರ, ಚಂದ್ರನ ಮೇಲಿಳಿದ ವ್ಯೋಮಯಾನಿಯೊಬ್ಬರು ಕ್ಷುದ್ರಗ್ರಹದ ಮಣ್ಣನ್ನು ಭೂಮಿಗೆ ತರುವರು. ಈ ಅಂತರಿಕ್ಷ ಯಾನದ ಸಿದ್ಧತೆಯೂ ನಡೆಯುತ್ತಿದೆ’ ಎಂದು ವಿವರಿಸಿದರು.

ಈ ಮೊದಲು ಉಡ್ಡಯನ ಮಾಡಿದ್ದ ‘ಚಾಂಗ್‌ಯಿ–5’ ಗಗನನೌಕೆ ಚಂದ್ರನ ಮೇಲಿನ ಮಾದರಿಗಳನ್ನು ಸಂಗ್ರಹಿಸಿ, ಕಳೆದ ಡಿಸೆಂಬರ್‌ನಲ್ಲಿ ಭೂಮಿಗೆ ಮರಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.