ADVERTISEMENT

ಭಾನುವಾರ ರಾತ್ರಿ ಭೂಮಿಗೆ ಬೀಳುತ್ತಿದೆ 38 ವರ್ಷದ ಹಳೇ ಉಪಗ್ರಹ: ಪರಿಣಾಮಗಳೇನು?

ಏಜೆನ್ಸೀಸ್
Published 7 ಜನವರಿ 2023, 7:56 IST
Last Updated 7 ಜನವರಿ 2023, 7:56 IST
ಇಆರ್‌ಬಿಎಸ್‌ (ಟ್ವಿಟರ್‌ ಚಿತ್ರ: @NASAEarth)
ಇಆರ್‌ಬಿಎಸ್‌ (ಟ್ವಿಟರ್‌ ಚಿತ್ರ: @NASAEarth)   

ಕೇಪ್ ಕ್ಯಾನವೆರಲ್ (ಅಮೆರಿಕ): 38 ವರ್ಷ ಹಳೆಯದಾದ ನಾಸಾ ಉಪಗ್ರಹವೊಂದು ಈ ಭಾನುವಾರ ಆಗಸದಿಂದ ಭೂಮಿಗೆ ಬೀಳಲಿದೆ.

ಉಪಗ್ರಹ ಭೂಮಿಗೆ ಬೀಳುತ್ತಿದ್ದರೂ ಅದರಿಂದ ಅಪಾಯದ ಸಾಧ್ಯತೆ ತೀರ ಕಡಿಮೆ ಎಂದು ನಾಸಾ ಶುಕ್ರವಾರ ಹೇಳಿದೆ. 2,450 ಕೆ.ಜಿ ತೂಕದ ಉಪಗ್ರಹವು ಭೂಮಿಯ ವಾತಾವರಣ ಪ್ರವೇಶಿಸುತ್ತಲೇ ಬಹುಪಾಲು ಉರಿದುಹೋಗಲಿದೆ. ಆದರೂ, ಕೆಲವು ತುಣುಕುಗಳಷ್ಟೇ ಭೂಮಿಗೆ ಬೀಳಲಿವೆ. ಇದರಿಂದ ಅಪಾಯವೇನಿಲ್ಲ ಎಂದು ನಾಸಾ ಹೇಳಿದೆ.

ಅವಶೇಷಗಳು ಭೂಮಿಗೆ ಬೀಳುತ್ತಿರುವುದರಿಂದ 9,400 ಜನರಲ್ಲಿ ಯಾರಿಗಾದರೂ ಒಬ್ಬರಿಗೆ ತೊಂದರೆಯಾಗಬಹುದು ಎಂದು ನಾಸಾ ತಿಳಿಸಿದೆ. ರಕ್ಷಣಾ ಇಲಾಖೆಯ ಪ್ರಕಾರ ಉಪಗ್ರಹವು ಭಾನುವಾರ ಸಂಜೆ 6.40ಕ್ಕೆ ಭೂಮಿಗೆ ಬೀಳಲಿದೆ ಎನ್ನಲಾಗಿದೆ. ಆದರೆ, ಸೋಮವಾರ 1 ಗಂಟೆಗೆ (ಮುಂಜಾನೆ) ಉಪಗ್ರಹ ಬೀಳಬಹುದು ಎಂದು ಕ್ಯಾಲಿಫೋರ್ನಿಯಾ ಮೂಲದ 'ಏರೋಸ್ಪೇಸ್ ಕಾರ್ಪೊರೇಷನ್' ಹೇಳಿದೆ.

ADVERTISEMENT

ಆಫ್ರಿಕಾ, ಏಷ್ಯಾ, ಮಧ್ಯಪ್ರಾಚ್ಯ, ಉತ್ತರ ಮತ್ತು ದಕ್ಷಿಣ ಅಮೆರಿಕದ ಪಶ್ಚಿಮ ಭಾಗಗಳನ್ನು ಇದು ಹಾದುಹೋಗಬಹುದು ಎಂದು ಅಂದಾಜಿಸಲಾಗಿದೆ.

ಇಆರ್‌ಬಿಎಸ್‌ ಎಂದು ಕರೆಯಲಾಗುವ ‘ಅರ್ತ್‌ ರೇಡಿಯೇಷನ್‌ ಬಜೆಟ್‌ ಸ್ಯಾಟಿಲೆಟ್‌’ ಅನ್ನು 1984 ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್‌ ಮೂಲಕ ನಭಕ್ಕೆ ಹಾರಿಸಲಾಗಿತ್ತು. ಅದರ ನಿರೀಕ್ಷಿತ ಜೀವಿತಾವಧಿಯು ಎರಡು ವರ್ಷಗಳಷ್ಟೇ ಆಗಿದ್ದವು. ಆದರೆ, 2005ರಲ್ಲಿ ನಿಷ್ಕ್ರಿಯವಾದ ಉಪಗ್ರಹ, ಅಲ್ಲಿಯ ವರೆಗೂ ಓಝೋನ್ ಮತ್ತು ವಾತಾವರಣದ ಇತರ ಮಾಪನಗಳನ್ನು ಮಾಡುತ್ತಲೇ ಇತ್ತು. ಭೂಮಿಯು ಸೂರ್ಯನಿಂದ ಹೀರಿಕೊಳ್ಳುವ ಶಕ್ತಿ ಮತ್ತು ಹೊರಸೂಸುವ ಶಕ್ತಿಯನ್ನು ಅಧ್ಯಯನ ಮಾಡುವ ಉಪಗ್ರಹವನ್ನು ‘ಅರ್ತ್‌ ರೇಡಿಯೇಷನ್‌ ಬಜೆಟ್‌ ಸ್ಯಾಟಿಲೆಟ್‌’ ಎನ್ನಲಾಗುತ್ತದೆ. ಅದನ್ನೇ ಈ ಉಪಗ್ರಹವೂ ಮಾಡಿತ್ತು.

1984ರಲ್ಲಿ ಈ ಉಪಗ್ರವನ್ನು ವಿಶೇಷವಾಗಿ ಕಕ್ಷೆಗೆ ಸೇರಿಸಲಾಗಿತ್ತು. ಅಮೆರಿಕದ ಮೊದಲ ಮಹಿಳಾ ಗಗನಯಾನಿ ಸ್ಯಾಲಿ ರೈಡ್ ಅವರು ಚಾಲೆಂಜರ್‌ ನೌಕೆಯ ‘ರೋಬೋಟ್ ಆರ್ಮ್’ ಎಂಬ ಸಾಧನ ಬಳಸಿ ಇಆರ್‌ಬಿಎಸ್‌ ಅನ್ನು ಕಕ್ಷೆಗೆ ಬಿಡುಗಡೆ ಮಾಡಿದ್ದರು. ಅದೇ ಕಾರ್ಯಾಚರಣೆಯಲ್ಲಿ ಅಮೆರಿಕದ ಮಹಿಳಾ ಗಗನಯಾನಿ ಕ್ಯಾಥರಿನ್ ಸುಲ್ಲಿವನ್ ಅವರು ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡಿದ್ದರು. ಇಬ್ಬರು ಮಹಿಳಾ ಗಗನಯಾತ್ರಿಗಳು ಒಟ್ಟಿಗೆ ಬಾಹ್ಯಾಕಾಶಕ್ಕೆ ಹಾರಿದ್ದು ಅದೇ ಮೊದಲ ಬಾರಿಯೂ ಆಗಿತ್ತು.

2012 ರಲ್ಲಿ ನಿಧನರಾಗಿದ್ದ ಸ್ಯಾಲಿ ರೈಡ್‌ ಅವರಿಗೆ ಅದು ಎರಡನೇ ಮತ್ತು ಅಂತಿಮ ಬಾಹ್ಯಾಕಾಶ ಯಾನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.