ADVERTISEMENT

ಪಾರ್ಕಿಂಗ್‌ ಶುಲ್ಕ ವರ್ಷಕ್ಕೆ 20 ಸೆಂಟ್!

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 19:30 IST
Last Updated 9 ಜನವರಿ 2021, 19:30 IST
ಕ್ಷುದ್ರಗ್ರಹದ ಬಳಿ ಕಂಡ ಉಪಗ್ರಹ
ಕ್ಷುದ್ರಗ್ರಹದ ಬಳಿ ಕಂಡ ಉಪಗ್ರಹ   

ಇದು ಮೂರು ಕಾಸಿನ ಬಂಡವಾಳ ಹಾಕದೆ, ಹನಿ ಬೆವರೂ ಸುರಿಸದೆ, ಪಿತ್ರಾರ್ಜಿತವಲ್ಲದಿದ್ದರೂ ಕೋಟಿ ಯೋಜನ ದೂರದ ದೊಡ್ಡ ಕಲ್ಲುಬಂಡೆ ERO’s [ಕ್ಷುದ್ರ ಗ್ರಹ/ Asteroid] ತನ್ನದೇ - ಸ್ವಯಾರ್ಜಿತ ಭೂಮಿ ಎಂದು, ಉಪಗ್ರಹ ಚಿತ್ರಗಳನ್ನು ಬಳಸಿ, ನಕ್ಷೆ ಬರೆದು, ನಿವೇಶನಗಳನ್ನು ಮಾಡಿ ಇತರರ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಿ ಬಡಿವಾರ ತೋರಿದ, ಅಮೆರಿಕದ ಭೂಪನೊಬ್ಬನ ಕತೆ!

ನಮ್ಮ ಸೌರಮಂಡಲದಲ್ಲಿ ಕ್ಷುದ್ರಗ್ರಹಗಳಿರುವುದು ಮಂಗಳ ಮತ್ತು ಗುರು ಗ್ರಹಗಳ ನಡುವೆ. ERO’s ಸಹ ಈ ಕ್ಷುದ್ರಗ್ರಹಗಳ ಗುಂಪಿಗೇ ಸೇರಿದುದು. ಕೆಲವೊಮ್ಮೆ ಭೂಮಿಗೆ ಮಂಗಳಗ್ರಹಕ್ಕಿಂತಲೂ ಅಂತರದಲ್ಲಿ ಹತ್ತಿರವಾಗುವ ವಿಶೇಷ ಕಕ್ಷೆಯಲ್ಲಿರುವ (ORBIT), ದೂರದ ಭವಿಷ್ಯದಲ್ಲಿ ಭೂಮಿಯನ್ನು ಅಪ್ಪಳಿಸುವ ಸಾಧ್ಯತೆ ಅಧಿಕವಾಗಿರುವ, ಹಲವು ಸಕಾರಣಗಳಿಂದ ಪ್ರಾಜ್ಞರನ್ನು ಸೂಜಿಗಲ್ಲಿನಂತೆ ಸೆಳೆದ ಅನನ್ಯ ಕ್ಷುದ್ರಗ್ರಹ.

ERO’s - ಮೇಲ್ಮೈ ವಿಸ್ತೀರ್ಣದಲ್ಲಿ ಕೇವಲ ಅರ್ಧ ಬೆಂಗಳೂರಿನಷ್ಟಿರುವ ಸಣ್ಣ ಆಕಾಶಕಾಯ. ಮಾನವ ನಿರ್ಮಿತ ಕೃತಕ ಉಪಗ್ರಹ ನೌಕೆಯೊಂದು ಪ್ರದಕ್ಷಿಣೆ ಹಾಕಿದ, ನೆಲ ಸ್ಪರ್ಶಿಸಿದ ಮೊದಲ ಕ್ಷುದ್ರಗ್ರಹ ಸಹ.

ADVERTISEMENT

ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಮದುವೆ ಚಿಂತೆ!

2001ರ ಫೆಬ್ರುವರಿ 12ರಂದು ನಾಸಾ ನಿರ್ಮಿತ ಉಪಗ್ರಹ ನೌಕೆ Near Shoemaker – ERO’s ಕ್ಷುದ್ರಗ್ರಹದ ಮೇಲ್ಮೈಯನ್ನು ಸ್ಪರ್ಶಿಸಿತು. ಪ್ರಾಜ್ಞರು ಹೊಸ ಸತ್ಯವನ್ನು ಅರಿಯುವ ತವಕದಲ್ಲಿದ್ದರು. ಸಾಮಾನ್ಯರು ದುಂಬಿ ಹೂವಿನ ಮೇಲೆ ಕುಳಿತಷ್ಟೇ ಸಲೀಸಾಗಿ ಅನ್ಯ ಆಕಾಶಕಾಯದ ಮೇಲೆ ಉಪಗ್ರಹ ನೌಕೆ ಇಳಿದ ಬೆರಗನ್ನು ಅರ್ಥೈಸುವ ಪ್ರಯತ್ನದಲ್ಲಿದ್ದರು. ಸಾಮಾನ್ಯನಾಗಿದ್ದ ಅಮೆರಿಕದ ಪ್ರಜೆ ನೆಮಿಜ್‌ಗೆ ಜಗಕಾಣದ, ಕೇಳಿರದ ಅಸಾಮಾನ್ಯ ಆಲೋಚನೆಯೊಂದು ಬಂತು! ತನ್ನ ಸ್ವಯಾರ್ಜಿತ ಆಸ್ತಿ ERO’s ನಲ್ಲಿ ಉಪಗ್ರಹ ನೌಕೆ ಇಳಿದಿದೆ ಬಾಡಿಗೆ ಕೊಡಿ ಎಂದ....!

ಉಪಗ್ರಹ ನೌಕೆ ಶಾಶ್ವತವಾಗಿ ಅಲ್ಲಿಯೇ ಇರುವುದರಿಂದ ವಾರ್ಷಿಕ 20 ಸೆಂಟ್‌ನಂತೆ ಮುಂದಿನ ನೂರು ವರ್ಷದ ಬಾಡಿಗೆ 20 ಡಾಲರ್ ಕೊಡಿ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾದ ಆಡಳಿತ ವರ್ಗಕ್ಕೆ ಪತ್ರಬರೆದ. ಸಾಮಾನ್ಯವಾಗಿ ಒಂದು ಲೋಟ ಕಾಫಿಗೆ 10 ರೂಪಾಯಿ ಕೊಡುವ ಈ ಕಾಲದಲ್ಲಿ ನೆಮಿಜ್‌ ಕೇಳಿದ್ದು ಗಂಟೆ, ದಿನ, ತಿಂಗಳಿಗಲ್ಲ; ವರ್ಷಕ್ಕೆ 20 ಸೆಂಟ್ ಅಂದರೆ 8 ರೂಪಾಯಿ ಅಷ್ಟೇ! ಸಾವಿರಾರು ಕೋಟಿ ಖರ್ಚು ಮಾಡುವ ನಾಸಾಗೆ 8 ರೂಪಾಯಿ ಹಿರಿದೇ? – ಆದರೂ ನೈಯಾಪೈಸೆ ಕೊಡಲಿಲ್ಲ. ಒಳಗೊಂದು ಬಹು ಸೂಕ್ಷ್ಮ ವಿಚಾರವಿತ್ತು. ನೆಮಿಜ್‌ ಕೋರ್ಟ್ ಮೊರೆಹೋದ. ಕೋಟಿ ದೂರದಲಿ, ಕತ್ತಲೆಯ ಕೂಪದಲಿ, ಸ್ವರೂಪವೇ ತಿಳಿಯದಿದ್ದ ದೊಡ್ಡ ಕಲ್ಲುಬಂಡೆಯ ಒಡೆತನ ಹಾಸ್ಯಾಸ್ಪದ ಎನಿಸಿದರೂ, ಬರೋಬ್ಬರಿ ಆರು ತಿಂಗಳು ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆದವು. ಈ ಪ್ರಕರಣ ಒಂದು ಹೊಸ ಮುನ್ನುಡಿ ಬರೆಯಿತು.

1898ರಲ್ಲಿ ಮೊದಲು ಗುರುತಿಸಿದ ಖಗೋಳಜ್ಞ “ಗುಸ್ತಾವ್ ವಿಟ್” ERO’s ತನ್ನದೆಂದಿರಲಿಲ್ಲ. ಪ್ರಪಂಚದ ಯಾವ ದೇಶವೂ ತನ್ನದೆಂದಿಲ್ಲ. ಇದನ್ನು ಗಮನಿಸಿಯೇ ನೆಮಿಜ್‌ ERO’s ಕ್ಷುದ್ರಗ್ರಹವನ್ನು ತನ್ನದೆಂದಿದ್ದು! ‘ಯಾರಿಗೂ ಬೇಡವಾದ ವಸ್ತುವನ್ನು ತನ್ನದೆಂದರೆ ತಪ್ಪೇನು?’ ಇದು ನೆಮಿಜ್‌ನ ತರ್ಕ. ಭಂಡತನವೋ? ಅತಿ ಜಾಣತನವೋ ತಿಳಿಯದು! ಈ ತರ್ಕವನ್ನೇ ಸೂಕ್ತವಾದ ಕಾಯ್ದೆಗಳು, ಅಮೆರಿಕದ ಪ್ರಜೆಯ ಸಾಂವಿಧಾನಿಕ ಹಕ್ಕುಗಳ ಜೊತೆ ಸೇರಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ.

ತನ್ನ ಸಾಂವಿಧಾನಿಕ ಹಕ್ಕುಗಳ ಚ್ಯುತಿ ಆಗಿದೆ ಎನ್ನುವುದನ್ನು ಸಮರ್ಥವಾಗಿ ಮಂಡಿಸಲು ನೆಮಿಜ್‌ ಸೋತ ಕಾರಣ ಪ್ರಕರಣ ಬಿದ್ದು ಹೋಯಿತು. ನೆಮಿಜ್‌ – ERO’s ಅನ್ನು ಮಾತ್ರ ತನ್ನದೆಂದಿದ್ದ. ಅವನಿಂದ ಪ್ರೇರಿತನಾಗಿ ಪುಗ್ಸಟ್ಟೆ ಸಿಗುತ್ತೆ ಅಂತ ನಾನು ಸೂರ್ಯ ನನ್ನದೆಂದರೆ, ಗುರು ಗ್ರಹವನ್ನು ನೀವು ನಿಮ್ಮದೆಂದರೆ, ಚಂದಿರನನ್ನು ಮತ್ತೊಬ್ಬರು ತಮ್ಮದೆಂದರೆ, ಬಾನಂಗಳದಲ್ಲಿ ಕಾಣುವ ಚುಕ್ಕೆಗಳಿಗಾಗಿ ಹೊಡೆದಾಡಿಕೊಳ್ಳಲು ಮುಂದಾದರೆ ಗತಿ ಏನು?

1967ರ ಬಾಹ್ಯಾಕಾಶ ಒಪ್ಪಂದದ ಪ್ರಕಾರ - ಬಾಹ್ಯಾಕಾಶ ಎಲ್ಲರ ಆಸ್ತಿ. ಉಪಯೋಗಿಸಲು ಸರ್ವರೂ ಸಮನಾಗಿ ಸ್ವತಂತ್ರರು. ಒಬ್ಬರ ಆಸ್ತಿಯೆಂದರೆ ಮತ್ತೊಬ್ಬರ ಬಳಕೆಗೆ ತಡೆದಂತೆ, ಸ್ವಾತಂತ್ರ್ಯಕ್ಕೆ ಅಂಕುಶ ಹಾಕಿದಂತೆ. ಆದುದರಿಂದ ಇಲ್ಲಿ ಆಸ್ತಿ ಎಂಬುದಿಲ್ಲ. ಬಳಸಬಹುದು ಆದರೆ ತಮ್ಮದೆನ್ನುವಂತಿಲ್ಲ ಅಷ್ಟೆ. ಇದು ಬಾಹ್ಯಾಕಾಶವನ್ನು ಗಲಾಟೆ ಗದ್ದಲಗಳಿಂದ ಮುಕ್ತವಾಗಿಡಲು ಮೂಡಿದ ದೇಶಗಳ ನಡುವಿನ ಒಡಂಬಡಿಕೆ. ಸಾಮಾನ್ಯವಾಗಿ ಮೂಡುವ ಪ್ರಶ್ನೆ - ದೇಶಗಳಿಗೆ ನಿರ್ಬಂಧವಿದೆ, ಸರಿ. ಆದರೆ ಖಾಸಗಿಯಾಗಿ ನಾನು ನನ್ನದೆನ್ನಬಹುದಲ್ಲ. ದೇಶ ಸಹಿ ಮಾಡಿದೆ ನಿಜ. ನಾನು ಇದಕ್ಕೆ ‘ಹ್ಞೂಂ’ ಎಂದಿಲ್ಲವಲ್ಲ. ಹೀಗಿದ್ದರೂ ಆ ಧಾರಾಳತನದ ಒಪ್ಪಂದ ನನಗೂ ಅನ್ವಯಿಸುವುದೇ?

ಕರ್ಣನಂಥ ಕರ್ಣನಿಗೇ ಅಂಗಾಧಿಪತಿ ಎನ್ನಲು ದುರ್ಯೋಧನನ ಮುದ್ರೆ ಬೇಕಿತ್ತು. ಇನ್ನು ಸಾಮಾನ್ಯ ನಾನು ಸೂರ್ಯ ನನ್ನದೆಂದರೆ ಯಾರು ಒಪ್ಪಿಯಾರು? ಮಾತಿಗೆ ಬೆಲೆ ಬರಲು ದೇಶದ ಸರ್ಕಾರದ ಮಾನ್ಯತೆ ಬೇಕು. ಸರ್ಕಾರ ಒಪ್ಪಿದರೆ 1967ರ ಒಪ್ಪಂದವನ್ನು ವಿರೋಧಿಸಿದಂತೆ. ಒಟ್ಟಿನಲ್ಲಿ ಖಾಸಗಿಯಾಗಿಯೂ ಬಾಹ್ಯಾಕಾಶದಲ್ಲಿ ಆಸ್ತಿ ಮಾಡಲು ಸಾಧ್ಯವಿಲ್ಲ!

ನೆಮಿಜ್‌ಗೆ ಅಥವಾ ನಾಸಾಗೆ ಇದು ಕೇವಲ 8 ರೂಪಾಯಿಗಾಗಿ ಬೇಡಿಕೆ ಇಟ್ಟ ಪ್ರಕರಣ ಆಗಿರಲಿಲ್ಲ. ನ್ಯಾಯಾಲಯದಲ್ಲಿ ಈ ಹೊಸ ಬಗೆಯ ವಿಚಾರಗಳ ಚರ್ಚೆ ನಡೆಯ ಬೇಕಿತ್ತು, ದೇಶೀಯ ವ್ಯವಸ್ಥೆಯಲ್ಲಿ ಹೊಸ ಬಗೆಯ ಸ್ಪಷ್ಟ ನಿಯಮಾವಳಿಗಳು, ಸೂಚನೆಗಳು ಇರುವ ಹೊಸ ಶಾಸನವೊಂದರ ರಚನೆ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಗಮನ ಸೆಳೆಯುವಲ್ಲಿ ಈ ಪ್ರಕರಣ ಸಫಲವಾಯಿತು. ನಂತರದ ಅಮೆರಿಕದ ಬಾಹ್ಯಾಕಾಶ ಕಾಯ್ದೆಗಳ ರೂಪುರೇಷೆಗಳನ್ನು ನಿರ್ಧರಿಸುವುದರಲ್ಲಿ ಈ ಪ್ರಕರಣ ಸಹಕರಿಸಿದ್ದಂತೂ ನಿಜ.

ಶ್ರಾವಣ ಮಾಸದ ಸಾಚಾತನ, ಉದರ ವೈರಾಗ್ಯ ವರ್ಷಪೂರ್ತಿ ಇರಲು ಸಾಧ್ಯವೇ? ತಂತ್ರಜ್ಞಾನ ಸಹಕರಿಸುವಾಗ ಖನಿಜ ಭಂಡಾರವನ್ನು ಕಂಡರೂ ನಿರ್ಮೋಹಿಯಂತಿರಲು ಸಾಧ್ಯವೇ? ಅಮೆರಿಕದ ಸಂಸತ್ತಿನ ಅನುಮೋದನೆ ಪಡೆದ ಕಾಯ್ದೆ ‘Commercial Space Launch Competitiveness Act of 2015’ ಬಾಹ್ಯಾಕಾಶದಲ್ಲಿ/ ಚಂದ್ರ, ಮಂಗಳ ಅಥವಾ ಇನ್ನಾವುದೇ ಆಕಾಶಕಾಯದಲ್ಲಿ ಖಾಸಗಿಯಾಗಿ ಗಣಿಗಾರಿಕೆ ಮಾಡುವುದನ್ನು ಒಪ್ಪುತ್ತದೆ. 1967ರ ಬಾಹ್ಯಾಕಾಶ ಒಪ್ಪಂದಕ್ಕೆ ಚ್ಯುತಿ ಬರದಂತೆ ಹೇಗೆ ನಡೆದುಕೊಳ್ಳುವರೋ ಗೊತ್ತಿಲ್ಲ. ಅಮೆರಿಕದಲ್ಲಿ ದಿಡ್ಡಿ ಬಾಗಿಲು ತೆರೆದಾಗಿದೆ. ಕೊಳ್ಳೆಹೊಡೆಯಲು ಬಾಹ್ಯಾಕಾಶಕ್ಕೆ ದಂಡಯಾತ್ರೆ ಮೊದಲು ಯಾರು ಹೊರಡುವರು ಎನ್ನುವುದಷ್ಟೇ ಬಾಕಿಯಿರುವುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.