ADVERTISEMENT

PV Web Exclusive: ಕೆನಡಾದಿಂದ ಶಾಖಾಹಾರಿ ಲಸಿಕೆ!

ಇ.ಎಸ್.ಸುಧೀಂದ್ರ ಪ್ರಸಾದ್
Published 15 ಜನವರಿ 2021, 10:49 IST
Last Updated 15 ಜನವರಿ 2021, 10:49 IST
ನಿಕೋಟಿಯಾನಾ ಬೆಂಥಮಿನಿಯಾ
ನಿಕೋಟಿಯಾನಾ ಬೆಂಥಮಿನಿಯಾ   

ಕೋವಿಡ್ ಲಸಿಕೆ ಪ್ರಯೋಗಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಲಸಿಕೆಯಲ್ಲಿ ಹಂದಿಯ ಕೊಬ್ಬು ಬಳಸಿರುವ ಕುರಿತು ಕೆಲ ಮುಸ್ಲಿಂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಹಾಗೆಯೇ ಆಕಳ ರಕ್ತ ಬಳಸಿರುವ ಕುರಿತು ಕೆಲ ಹಿಂದೂ ಸಂಘಟನೆಗಳು ಸ್ಪಷ್ಟನೆ ಬಯಸಿವೆ. ಆದರೆ ಇದರ ನಡುವೆಯೇ ಸಸ್ಯಜನ್ಯದಿಂದ ಸಿದ್ಧಗೊಂಡ ಕೋವಿಡ್ ಲಸಿಕೆಗೆ ಕೆನಡಾ ಸಿದ್ಧತೆ ನಡೆಸಿದೆ.

ಬರೋಬ್ಬರಿ ಒಂದು ವರ್ಷದ ಸುದೀರ್ಘ ಹೋರಾಟಕ್ಕೊಂದು ಪರಿಹಾರ ಎಂಬಂತೆ ಕೋವಿಡ್–19 ಲಸಿಕೆ ಬಿಡುಗಡೆಗೆ ಹಲವು ಔಷಧ ಕಂಪನಿಗಳು ಪೈಪೋಟಿ ನಡೆಸಿವೆ. ಭಾರತದಲ್ಲಿ ಜ. 16ರಿಂದ ಲಸಿಕೆ ಅಭಿಯಾನ ಆರಂಭವಾಗುತ್ತಿದೆ. ಆದರೆ ಲಸಿಕೆಯ ಪೈಪೋಟಿಯಲ್ಲಿರುವ ಕೆನಡಾದ ಮೆಡಿಕಾಗೊ ಕಂಪನಿಯದ್ದು ಭಿನ್ನ ಹಾದಿ. ಅದು ಆಯ್ದುಕೊಂಡಿದ್ದು ಸಸ್ಯಗಳ ಮೂಲಕ ವೈರಾಣು ಕೊಲ್ಲುವ ಲಸಿಕೆಯ ಅಭಿವೃದ್ಧಿ.

ಹೀಗೆ ಆಯ್ದುಕೊಂಡ ಆ ಸಸ್ಯ ಕೆನಡಾದ ಕ್ಯುಬೆಕ್ ನಗರದ ಹೊರವಲಯದಲ್ಲಿರುವ 11 ಫುಟ್‌ಬಾಲ್‌ ಕ್ರೀಡಾಂಗಣಗಳಷ್ಟು ದೊಡ್ಡದಾದ ಹೈಟೆಕ್ ಹಸಿರುಮನೆಯಲ್ಲಿ ಸೊಂಪಾಗಿ ಬೆಳೆಯಲಾಗಿದೆ. ನಿಕೋಟಿಯಾನಾ ಬೆಂಥಮಿನಿಯಾ ಎಂಬ ಈ ಸಸ್ಯ ತಂಬಾಕಿನ ಪ್ರಬೇಧಕ್ಕೆ ಸೇರಿದ್ದು. ಅಷ್ಟಕ್ಕೂ ಇದು ಸಿಗುವುದು ಆಸ್ಟ್ರೇಲಿಯಾದಲ್ಲಿ. ಅಲ್ಲಿಂದ ತಂದಿರುವ ಈ ಸಸ್ಯಗಳನ್ನು ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಬೆಳೆದಿರುವ ಕಂಪನಿ, ಇದರ ಮೂಲಕ 7.6 ಕೋಟಿ ಲಸಿಕೆ ಸಿದ್ಧಪಡಿಸಲು ಕೆಲಸ ಆರಂಭಿಸಿದೆ. ಆದರೆ ಅನುಮತಿಗಾಗಿ ಕಾದಿದೆ.

ADVERTISEMENT

ಲಸಿಕೆ ಕ್ಷೇತ್ರದಲ್ಲಿ ವಿನೂತನ ತಂತ್ರಜ್ಞಾನ ಎಂದೇ ಹೇಳಿಕೊಳ್ಳುತ್ತಿರುವ ಕಂಪನಿ, ಈ ಸಸ್ಯದಿಂದ ಸಿದ್ಧಪಡಿಸಿದ ಲಸಿಕೆಯನ್ನು ಇಡಲು ದುಬಾರಿಯಾದ ಅತ್ಯಂತ ಕಡಿಮೆ ತಾಪಮಾನದ ತಂಪು ಪೆಟ್ಟಿಗೆಗಳ ಅಗತ್ಯವಿಲ್ಲ ಎಂದಿದೆ. 2ರಿಂದ 8 ಡಿಗ್ರಿ ಸೆಲ್ಶಿಯಸ್ ಸಾಮಾನ್ಯ ತಂಪು ಪೆಟ್ಟಿಗೆ ಇದಕ್ಕೆ ಸಾಕು ಎಂದೆನ್ನುತ್ತಿರುವುದನ್ನು ವಿಜ್ಞಾನ ಲೋಕ ಬೆರಗಿನಿಂದ ನೋಡುತ್ತಿದೆ.

ಒಂದು ವರ್ಷದ ಹಿಂದೆ ಕಂಡುಬಂದ ಕೋವಿಡ್‌ಗೆ ಇಷ್ಟು ಬೇಗ ಗಿಡಬೆಳೆಸಿ ಔಷಧ ಕಂಡುಹಿಡಿಯಲಾಯಿತೇ ಎಂಬ ಪ್ರಶ್ನೆ ಸಹಜವಾಗಿ ಮೂಡಲಿದೆ. ವಾಸ್ತವದಲ್ಲಿ ಬಹಳಾ ವರ್ಷಗಳ ಹಿಂದೆಯೇ ಇಂಥದ್ದೊಂದು ಸಾಂಕ್ರಾಮಿಕ ರೋಗಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಮಡಿಕಾಗೊ ಕೆನಡಾ ಸರ್ಕಾರಕ್ಕೆ ಹೇಳಿತ್ತಂತೆ. ಅದರ ನಡುವೆ ತಂಬಾಕಿನ ಸಸ್ಯವನ್ನು ಬಳಸಿ ಲಸಿಕೆ ತಯಾರಿಸುತ್ತಿರುವುದಕ್ಕೆ ಸಾಕಷ್ಟು ಟೀಕೆಗಳು ಹಾಗೂ ತಡೆಗಳೂ ಕಂಪನಿಗೆ ಎದುರಾಗಿವೆ. ಆದರೆ ಕಂಪನಿ ಮಾತ್ರ ತನ್ನ ಗುರಿಯಿಂದ ಹಿಂದೆ ಸರಿಯಲಿಲ್ಲ.

ತನ್ನ ಲಸಿಕೆಯ ಮೊದಲ ಪ್ರಯೋಗದಲ್ಲೇ ಲಸಿಕೆ ಪಡೆದ ಶೇ 100ರಷ್ಟು ಜನರ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದ್ದು, ಯಾವುದೇ ಅಡ್ಡ ಪರಿಣಾಮ ಉಂಟಾಗಿರುವ ಕುರಿತು ದಾಖಲಾಗಿಲ್ಲ. ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ಸದ್ಯ ನಡೆಯುತ್ತಿದ್ದು, ಮೂರನೇ ಹಂತ ಫೆಬ್ರುವರಿಯಿಂದ ಆರಂಭವಾಗುವ ನಿರೀಕ್ಷೆ ಇದೆ ಎಂದು ಕಂಪನಿ ಹೇಳಿದೆ.

ಇದರಲ್ಲಿ 11 ರಾಷ್ಟ್ರಗಳ 30ಸಾವಿರ ಜನರನ್ನು ಒಳಗೊಳ್ಳುವ ಸಾಧ್ಯತೆಗಳಿವೆ. ಒಂದೊಮ್ಮೆ ಎಲ್ಲಾ ಹಂತಗಳಲ್ಲೂ ಇದು ಯಶಸ್ಸುಗಳಿಸಿದರೆ, ಅನುಮತಿ ದೊರೆಯುವ ಸಾಧ್ಯತೆ ಇದೆ. ಹಾಗೊಮ್ಮೆ ಮಾರುಕಟ್ಟೆಗೆ ಇದು ಬಂದಿದ್ದೇ ಆದಲ್ಲಿ, 21 ದಿನಗಳ ಅಂತರದಲ್ಲಿ ಎರಡು ಬಾರಿ ಲಸಿಕೆ ಪಡೆಯಬೇಕು. ಆದರೆ ಕೆನಡಾದ ಆರೋಗ್ಯ ಇಲಾಖೆ ಇದಕ್ಕೆ ಸಮ್ಮತಿ ನೀಡಬೇಕಿದೆ.

ಸಸ್ಯಕ್ಕೆ ವೈರಾಣು ಸೇರಿಸುವ ಪ್ರಕ್ರಿಯೆ
ನಿಕೋಟಿಯಾನಾ ಬೆಂಥಮಿನಿಯಾ ಈ ಸಸ್ಯದೊಳಕ್ಕೆ ಸ್ಪೈಕ್‌ ಪ್ರೊಟೀನ್ ಸೇರಿಸಿದಾಗ ಇದರೊಳಗೆ ವೈರಾಣು ಮಾದರಿಯ ವಸ್ತು ಉತ್ಪತ್ತಿಯಾಗುತ್ತದೆ. ಆದರೆ ಇದು ಹಾನಿಕಾರಕ ವೈರಾಣುವಲ್ಲ. ಬದಲಿಗೆ ಸ್ಪೈಕ್ ಪ್ರೊಟೀನ್ ಹೊರಕೋಶ ಹೊಂದಿರುವ ಒಂದು ಕ್ಯಾಪ್ಸೂಲ್‌. ಆದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಲು ಇದು ವೈರಾಣುವಿನಂತೆಯೇ ಕೆಲಸ ಮಾಡಲಿದೆ ಎಂದು ಇದರ ವಿಜ್ಞಾನಿ ಡಾ. ಹಾಲ್ಪೆರಿನ್ ವಿವರಿಸಿದ್ದಾರೆ.

ಸದ್ಯ ಕ್ಲಿನಿಕಲ್ ಟ್ರಯಲ್ಸ್‌ನಲ್ಲಿರುವ ಈ ಲಸಿಕೆಯನ್ನು ಬಳಕೆಗೆ ಅನುಮತಿ ನೀಡುವಂತೆ ಮೆಡಿಕಾಗೊ ಕಂಪನಿ ಕೆನಡಾ ಸರ್ಕಾರವನ್ನು ಕೇಳಿದೆ. ಆದರೆ ತಂಬಾಕಿನ ಸಸ್ಯದಿಂದ ಲಸಿಕೆ ಉತ್ಪಾದಿಸುತ್ತಿರುವುದಕ್ಕೆ ಒಂದಷ್ಟು ವಿರೋಧಗಳು ವ್ಯಕ್ತವಾಗಿವೆ. ಇದಕ್ಕೆ ಸ್ಪಷ್ಟನೆ ನೀಡಿರುವ ಕಂಪನಿ, ಸಿಗರೇಟಿಗೆ ಬಳಸುವ ತಂಬಾಕಿನ ಸಸ್ಯಕ್ಕೂ, ಲಸಿಕೆಗೆ ಬಳಸುತ್ತಿರುವ ಸಸ್ಯಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿ ಲಸಿಕೆ ಉತ್ಪಾದನೆಯಲ್ಲಿ ತಂಬಾಕಿನ ಸಸ್ಯವನ್ನು ಬಳಸುತ್ತಿಲ್ಲ ಎಂದಿದೆ.

2021ರ ಮಧ್ಯದಲ್ಲಿ 8 ಕೋಟಿ ಲಸಿಕೆಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ 10 ಫುಟ್‌ಬಾಲ್ ಕ್ರೀಡಾಂಗಣದಷ್ಟು ದೊಡ್ಡ ಪ್ರದೇಶದಲ್ಲಿ ನಿಕೋಟಿಯಾನಾ ಬೆಂಥಮಿನಿಯಾ ಸಸ್ಯಗಳನ್ನು ಬೆಳೆಯಲಾಗಿದೆ. ಕೆನಡಾ ಜನರೂ ಈ ಲಸಿಕೆಯ ಹಾದಿಯನ್ನು ಕಾಯುತ್ತಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.