ADVERTISEMENT

ಕೊರೊನಾ ವೈರಸ್‌ನ ದುರ್ಬಲ ಭಾಗಗಳ ಪತ್ತೆ ಹಚ್ಚುತ್ತಿರುವ ವಿಜ್ಞಾನಿಗಳು; ಕಾರಣ ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2021, 7:55 IST
Last Updated 26 ಸೆಪ್ಟೆಂಬರ್ 2021, 7:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ ರೂಪಾಂತರಗೊಳ್ಳುತ್ತಾ ಸಾಗಿರುವ ಮಾರಕ ಕೊರೊನಾ ವೈರಸ್ ಹುಟ್ಟಡಗಿಸಲು ವಿಜ್ಞಾನಿಗಳು ತಿಣುಕಾಡುತ್ತಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ಮಾನವನ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಲಸಿಕೆಗಳು ಬಂದಿದ್ದರೂ ಅವು ಶೇ 100 ರಷ್ಟು ಪರಿಣಾಮಕಾರಿಯಲ್ಲ. ಹೀಗಾಗಿ ಕೊರೊನಾ ಮಾತ್ರ ಇನ್ನೂ ತನ್ನ ಅಟ್ಟಹಾಸವನ್ನು ನಿಲ್ಲಿಸುತ್ತಿಲ್ಲ.

ಇದೀಗ ಹೊಸದಾಗಿ ಬಂದಿರುವ ಮಾಹಿತಿಗಳ ಪ್ರಕಾರ ವಿಜ್ಞಾನಿಗಳು ಲಸಿಕೆ ಪ್ರಭಾವವನ್ನು ಇನ್ನಷ್ಟು ಹೆಚ್ಚಿಸಲು ಕೊರೊನಾ ವೈರಸ್‌ನ ದುರ್ಬಲ ಭಾಗಗಳ ಬಗ್ಗೆ ಹೆಚ್ಚು ಸಂಶೋಧನೆ ನಡೆಸುತ್ತಿದ್ದಾರೆ.

ಬ್ಲೂಮ್‌ಬರ್ಗ್ ವರದಿ ಮಾಡಿರುವ ಪ್ರಕಾರ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿರುವ ‘ಲಾ ಜೊಲ್ಲಾ ಇನ್‌ಸ್ಟಿಟ್ಯೂಟ್‌ ಆಫ್ ಇಮ್ಯುನಾಲಾಜಿ‘ ಸಂಸ್ಥೆ ಈ ಸಂಶೋಧನೆ ಮಾಡುತ್ತಿದ್ದು,SARS-CoV-2 ವೈರಸ್‌ (ಕೊರೊನಾವೈರಸ್) ಯಾವ ಯಾವ ಭಾಗ ದುರ್ಬಲವಾಗಿರುತ್ತದೆ ಎಂಬುದರ ಮೇಲೆ ಅಧ್ಯಯನ ಕೈಗೊಂಡಿದೆ.

ADVERTISEMENT

ಅಲ್ಲದೇ ಈ ಆಧ್ಯಯನ ಮಾಡುವ ಮೂಲಕ ವೈರಸ್ ರೂಪಾಂತರಗೊಳ್ಳುವುದನ್ನು ಹೇಗೆ ತಪ್ಪಿಸಬಹುದು ಎನ್ನುವುದನ್ನೂ ವಿಜ್ಞಾನಿಗಳು ಕಂಡುಕೊಳ್ಳಲಿದ್ದಾರೆ. ಇದಕ್ಕಾಗಿ ವಿಜ್ಞಾನಿಗಳ 56 ತಂಡಗಳು ಕೆಲಸ ಮಾಡುತ್ತಿವೆ ಎನ್ನಲಾಗಿದೆ.

ಕೊರೊನಾದ 3ಡಿ ಇಮೇಜ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಅದರ ರೋಗಕಾರಕದ ದುರ್ಬಲ ತಾಣಗಳು ಮತ್ತು ಅವುಗಳನ್ನು ಚಿಕಿತ್ಸೆಗೆ ಬಳಸಿಕೊಳ್ಳುವ ವಿಧಾನಗಳನ್ನು ನಮ್ಮ ಸಂಶೋಧನೆ ಬಹಿರಂಗಪಡಿಸಲಿದೆ ಎಂದು ‘ಲಾ ಜೊಲ್ಲಾ ಇನ್‌ಸ್ಟಿಟ್ಯೂಟ್‌‘ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಓಲ್ಮನ್ ಸಫೈರ್ ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.