ADVERTISEMENT

ಎಸ್‌.ಎಸ್‌.ಕ್ಯಾಥರೀನ್‌ ಜಾನ್ಸನ್‌ ಹೆಸರಿನ ಗಗನನೌಕೆ ಉಡಾಯಿಸಿದ ನಾಸಾ

ಗಣಿತ ಪ್ರತಿಭೆಗೆ ಗೌರವ ಸಲ್ಲಿಸಿದ ನಾಸಾ

ಏಜೆನ್ಸೀಸ್
Published 21 ಫೆಬ್ರುವರಿ 2021, 5:47 IST
Last Updated 21 ಫೆಬ್ರುವರಿ 2021, 5:47 IST
ನಾಸಾ
ನಾಸಾ   

ಕೇಪ್‌ ಕ್ಯಾನವೆರಲ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ ಗಣಿತ ವಿಭಾಗದ ಪ್ರತಿಭೆ, ಕಪ್ಪು ಮಹಿಳೆ ಎಸ್‌.ಎಸ್‌.ಕ್ಯಾಥರೀನ್‌ ಜಾನ್ಸನ್‌ ಹೆಸರಿನ ಗಗನನೌಕೆಯನ್ನು ವರ್ಜೀನಿಯಾದಲ್ಲಿರುವ ಉಡ್ಡಯನ ಕೇಂದ್ರದಿಂದ ಉಡಾಯಿಸಲಾಯಿತು.

ಜಾನ್ಸನ್‌ ಅವರ ಪ್ರತಿಭೆ, ಗಣಿತಕ್ಕೆ ನೀಡಿದ ಕೊಡುಗೆಯನ್ನು ವಿವರಿಸುವ ಪಾತ್ರವಿರುವ ‘ಹಿಡನ್‌ ಫಿಗರ್ಸ್‌’ ಚಲನಚಿತ್ರ 2016ರಲ್ಲಿ ತೆರೆ ಕಂಡಿತ್ತು. ಅವರು ಕಳೆದ ವರ್ಷ ಫೆಬ್ರುವರಿ 21ರಂದು ನಿಧನರಾದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.

ಈ ಗಗನನೌಕೆ ಇಂಟರ್‌ನ್ಯಾಷನಲ್‌ ಸ್ಪೇಸ್‌ ಸ್ಟೇಷನ್‌ಅನ್ನುಸೋಮವಾರ ತಲುಪಲಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ನಾರ್ಥ್ರಪ್‌ ಗ್ರುಮನ್ ಸಂಸ್ಥೆ ಸಿಗ್ನಸ್‌ ಕ್ಯಾಪ್ಸೂಲ್‌ ಎಂಬ ಗಗನನೌಕೆಯನ್ನು ಅಭಿವೃದ್ಧಿಪಡಿಸಿದೆ. ಜಾನ್ಸನ್‌ ಅವರ ಗೌರವಾರ್ಥ ಈ ಗಗನನೌಕೆಗೆ ಕ್ಯಾಥೀರಿನ್‌ ಜಾನ್ಸನ್‌ ಎಂದು ಹೆಸರಿಸಲಾಗಿದೆ.

‘ಅಮೆರಿಕ ಮೊಟ್ಟ ಮೊದಲ ಗಗನನೌಕೆಯನ್ನು ಉಡ್ಡಯನ ಮಾಡಲು ಜಾನ್ಸನ್‌ ಅವರು ಪ್ರತಿಪಾದಿಸಿದ ಗಣಿತ ಸೂತ್ರಗಳು ನೆರವಾದವು. ತಮಗೆದುರಾದ ಅಡೆತಡೆಗಳನ್ನು ಮೀರಿ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದರು. ತಮ್ಮದೇ ಛಾಪು ಮೂಡಿಸಿದ ಕಪ್ಪು ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು ’ ಎಂದು ಗಗನನೌಕೆಯನ್ನು ಅಭಿವೃದ್ಧಿಪಡಿಸಿರುವ ಸಂಸ್ಥೆ ನಾರ್ಥ್ರಪ್ ಗ್ರುಮನ್‌ನ ಉಪಾಧ್ಯಕ್ಷ ಫ್ರಾಂಕ್‌ ಡಿಮೌರೊ ಹೇಳಿದರು.

‘ಈಗ ನಿಮಗೆಲ್ಲ ಒಂದು ಹೋಂವರ್ಕ್‌ ಕೊಡುವೆ. ಎಲ್ಲರೂ ಹಿಡನ್‌ ಫಿಗರ್ಸ್‌ ಚಿತ್ರವನ್ನು ವೀಕ್ಷಿಸಿ. ಇದರಿಂದ ಜಾನ್ಸನ್‌ ಅವರ ಜೀವನ–ಸಾಧನೆ ತಿಳಿಯಲು ಸಾಧ್ಯವಾಗುವುದು’ ಎಂದು ಫ್ರಾಂಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.