ADVERTISEMENT

ಮಣ್ಣು-ಕಲ್ಲಿನ ಮಾದರಿ ತರುವ ಕಾರ್ಯಾಚರಣೆ: ಮಂಗಳನ ಅಂಗಳಕ್ಕಿಳಿದ ನಾಸಾ ನೌಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 19:30 IST
Last Updated 19 ಫೆಬ್ರುವರಿ 2021, 19:30 IST
   

ಮಂಗಳ ಗ್ರಹದಲ್ಲಿ ಜೀವಿಗಳು, ಸೂಕ್ಷ್ಮಾಣು ಜೀವಿಗಳು ಇದ್ದವೇ ಎಂಬುದನ್ನು ಪರಿಶೀಲಿಸಲು ಅಲ್ಲಿನ ಮಣ್ಣು-ಕಲ್ಲಿನ ಮಾದರಿಯನ್ನು ತರಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಕಳುಹಿಸಿದ್ದ ‘ಪರ್ಸಿವಿಯರೆನ್ಸ್‌’ ರೋವರ್‌ ನೌಕೆಯು ಶುಕ್ರವಾರ ಯಶಸ್ವಿಯಾಗಿ ಮಂಗಳನ ಅಂಗಳದಲ್ಲಿ ಇಳಿದಿದೆ. ನಾಸಾದ ‘ಮಾರ್ಸ್‌ 2020’ ಯೋಜನೆಯ ಒಂದು ಪ್ರಮುಖ ಘಟ್ಟ ಮುಗಿದಿದೆ. ಪರ್ಸಿವಿಯರೆನ್ಸ್ ರೋವರ್ ನೌಕೆಯು, ಮಂಗಳನ ಅಂಗಳದಲ್ಲಿ ಮಾದರಿ ಸಂಗ್ರಹ ಕಾರ್ಯವನ್ನು ಶೀಘ್ರವೇ ಆರಂಭಿಸಲಿದೆ.

1,026 ಕೆ.ಜಿ. ಪರ್ಸಿವಿಯರೆನ್ಸ್ ನೌಕೆಯ ತೂಕ
23 ಕ್ಯಾಮೆರಾಗಳನ್ನು ಈ ನೌಕೆ ಹೊಂದಿದೆ
2 ವರ್ಷಗಳ ಕಾಲ ಮಂಗಳನ ಅಂಗಳದಲ್ಲಿ ಈ ನೌಕೆ ಮಾದರಿ ಸಂಗ್ರಹ ಕಾರ್ಯ ನಡೆಸಲಿದೆ

ಜಝೇರೋ ಕುಳಿ
ಮಂಗಳನ ಸಮಭಾಜಕ ವೃತ್ತದಿಂದ ಉತ್ತರ ದಿಕ್ಕಿನಲ್ಲಿ ಇರುವ ಜಝೇರೋ ಕುಳಿಯಲ್ಲಿ ಪರ್ಸಿವಿಯರೆನ್ಸ್ ನೌಕೆ ಇಳಿದಿದೆ. ಸುಮಾರು 45 ಕಿ.ಮೀ.ನಷ್ಟು ಉದ್ದದ ವ್ಯಾಸವಿರುವ ಈ ಕುಳಿ 350 ಕೋಟಿ ವರ್ಷಗಳ ಹಿಂದೆ ದೊಡ್ಡ ಸರೋವರವಾಗಿತ್ತು. ಹಲವು ನದಿಗಳು ಈ ಸರೋವರವನ್ನು ಬಂದು ಸೇರುತ್ತಿದ್ದವು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ನೀರು ಇದ್ದ ಕಾರಣಕ್ಕೆ ಇಲ್ಲಿ ಜೀವಿಗಳು ಇದ್ದಿರುವ ಸಾಧ್ಯತೆ ಇದೆ. ಹೀಗಾಗಿ ಅಧ್ಯಯನಕ್ಕೆ ಈ ಕುಳಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ADVERTISEMENT
ಪರ್ಸಿವಿಯರೆನ್ಸ್‌ ನೌಕೆ ಕಳುಹಿಸಿದ ಮಂಗಳ ಗ್ರಹದ ಮೊದಲ ಚಿತ್ರ

ಮಣ್ಣು ತರುವ ಕಾರ್ಯಾಚರಣೆ
1. ಪರ್ಸಿವಿಯರೆನ್ಸ್ ರೋವರ್ ಅನ್ನು ಹೊತ್ತಿದ್ದ ನೌಕೆಯನ್ನು 2020ರ ಜುಲೈ 30ರಂದು ಫ್ಲಾರಿಡಾದಿಂದ ಉಡ್ಡಯನ ಮಾಡಲಾಗಿತ್ತು. ಬರೋಬ್ಬರಿ 203 ದಿನಗಳ ಪ್ರಯಾಣದ ನಂತರ ಆ ನೌಕೆಯು ಈಗ ಮಂಗಳನ ಅಂಗಳ ತಲುಪಿದೆ. ಹಲವು ರಾಕೆಟ್‌ಗಳನ್ನು ಹೊಂದಿದ್ದ ಮತ್ತು ಕ್ರೇನ್‌ ಸವಲತ್ತು ಇದ್ದ ಪರಿಭ್ರಮಣ ನೌಕೆಯ ಮೂಲಕ ಪರ್ಸಿವಿಯರೆನ್ಸ್ ನೌಕೆಯನ್ನು ಮಂಗಳಕ್ಕೆ ಇಳಿಸಲಾಗಿದೆ. ಮಂಗಳನ ಅಂಗಳದಿಂದ ಮಣ್ಣಿನ ಮಾದರಿಯನ್ನು ಭೂಮಿಗೆ ತರುವ ಕಾರ್ಯಾಚರಣೆಯನ್ನು ನಾಸಾ ಮತ್ತು ಯೂರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್‌ಎ) ಜಂಟಿಯಾಗಿ ನಡೆಸಲಿವೆ.

2. ಪರ್ಸಿವಿಯರೆನ್ಸ್‌ ತನ್ನಲ್ಲಿರುವ ಕೂರಿಗೆ (ಡ್ರಿಲ್ಲರ್‌) ಯಂತ್ರದ ಮೂಲಕ ಮಂಗಳನ ನೆಲದಲ್ಲಿನ ಮಣ್ಣು ಮತ್ತು ಕಲ್ಲನ್ನು ಕೊರೆಯಲಿದೆ

3. ಹೀಗೆ ಸಂಗ್ರಹಿಸಿದ ಮಾದರಿಗಳನ್ನು ಕ್ಯಾನ್‌ಗಳಲ್ಲಿ ಸಂಗ್ರಹಿಸಲಿದೆ. ಆ ಕ್ಯಾನ್‌ಗಳಲ್ಲಿ ಅಲ್ಲಿಯೇ ಬಿಸಾಡಿ ಮುಂದಕ್ಕೆ ಹೋಗಲಿದೆ

4. 2026ರ ವೇಳೆಗೆ ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ಮತ್ತೊಂದು ಸಣ್ಣ ರೋವರ್ ನೌಕೆ ಮಂಗಳನ ಅಂಗಳದಲ್ಲಿ ಇಳಿಯಲಿದೆ. ಪರ್ಸಿವಿಯರೆನ್ಸ್ ನೌಕೆ ಬಿಸಾಡಿರುವ ಕ್ಯಾನ್‌ಗಳನ್ನು ಈ ರೋವರ್ ಸಂಗ್ರಹಿಸಲಿದೆ

5. ಇದೇ ವೇಳೆಗೆ ಮಂಗಳನ ಅಂಗಳದಲ್ಲಿ ಮತ್ತೊಂದು ಲ್ಯಾಂಡರ್ ನೌಕೆ ಇಳಿಯಲಿದೆ. ಮಾದರಿ ಇರುವ ಕ್ಯಾನ್‌ಗಳನ್ನು ಈ ಲ್ಯಾಂಡರ್‌ ನೌಕೆಗೆ ರೋವರ್ ನೌಕೆಯು ತುಂಬಲಿದೆ. ಆ ಕ್ಯಾನ್‌ಗಳನ್ನು ಸಣ್ಣ ರಾಕೆಟ್‌ಗಳಿಗೆ ಅಳವಡಿಸಿ, ನಭಕ್ಕೆ ಉಡ್ಡಯನ ಮಾಡಲಾಗುತ್ತದೆ

6. ಮಂಗಳನ ಸುತ್ತ ಸುತ್ತುತ್ತಿರುವ ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ಉಪಗ್ರಹವು ಈ ಕ್ಯಾನ್‌ಗಳನ್ನು ಹಿಡಿದುಕೊಳ್ಳಲಿದೆ

7. ಅಂತಿಮವಾಗಿ ಈ ಕ್ಯಾನ್‌ಗಳನ್ನು ಭೂಮಿಯಲ್ಲಿರುವ ಗ್ರೌಂಡ್‌ ಸ್ಟೇಷನ್‌ಗೆಉಪಗ್ರಹವು ರವಾನೆ ಮಾಡಲಿದೆ. 2031ರ ವೇಳೆಗೆ ಮೊದಲ ಮಾದರಿ ಭೂಮಿಯನ್ನು ತಲುಪುವ ಸಾಧ್ಯತೆ ಇದೆ

ಆಧಾರ: ನಾಸಾ, ಪಿಟಿಐ, ರಾಯಿಟರ್ಸ್, ಬಿಬಿಸಿ

ಲ್ಯಾಂಡಿಂಗ್‌ ಮುಂದಾಳು ಕರ್ನಾಟಕ ಮೂಲದ ಮಹಿಳೆ
‘ಟಚ್‌ಡೌನ್ ಕನ್‌ಫರ್ಮ್‌ಡ್‌’. ನಾಸಾದ ಪರ್ಸಿವಿಯರೆನ್ಸ್ ರೋವರ್ ನೌಕೆ ಮಂಗಳನ ನೆಲವನ್ನು ಸ್ಪರ್ಶಿಸಿದನ್ನು ದೃಢಪಡಿಸಿದ ಘೋಷಣೆ ಇದು. ನಾಸಾದ ವಿಜ್ಞಾನಿಗಳಿಗೆ ಮತ್ತು ಈ ನೆಲಸ್ಪರ್ಶವನ್ನು ಕುತೂಹಲದಿಂದ ಕಾಯುತ್ತಿದ್ದ ಆಸಕ್ತರಿಗೆ ಈ ವಿಚಾರವನ್ನು ತಿಳಿಸಿದ್ದು ಭಾರತೀಯ ಮೂಲದ ವಿಜ್ಞಾನಿ ಸ್ವಾತಿ ಮೋಹನ್. ಸ್ವಾತಿ ಅವರು, ಪರ್ಸಿವಿಯರೆನ್ಸ್‌ ನೌಕೆಯ ನೆಲಸ್ಪರ್ಶ ಕಾರ್ಯಾಚರಣೆಯ ನಿರ್ದೇಶನ, ಪಥನಿರ್ದೇಶನ ಮತ್ತು ನಿಯಂತ್ರಣ ಕಾರ್ಯಾಚರಣೆ ತಂಡದ ಮುಖ್ಯಸ್ಥರಾಗಿದ್ದಾರೆ. ಈ ವಿಭಾಗವನ್ನು ಮಂಗಳನ ನೆಲಕ್ಕೆ ಇಳಿಯುವ ಕಾರ್ಯಾಚರಣೆಯ ಕಣ್ಣು-ಕಿವಿ ಎನ್ನಲಾಗುತ್ತದೆ.

ಸ್ವಾತಿ ಮೋಹನ್

ಸ್ವಾತಿ ಅವರ ತಂದೆ-ತಾಯಿಯಾದ ಮೋಹನ್ ಮತ್ತು ಜ್ಯೋತಿ ಅವರು, ಕನ್ನಡ ನಾಡಿನವರು. ಒಂದು ವರ್ಷದ ಮಗುವಾಗಿದ್ದಾಗಲೇ ಸ್ವಾತಿ ಮೋಹನ್ ಅವರ ತಂದೆ-ತಾಯಿ, ಬೆಂಗಳೂರಿನಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು. ಅಮೆರಿಕದ ಉತ್ತರ ವರ್ಜೀನಿಯಾದಲ್ಲಿ ನೆಲೆಸಿದ್ದರು. ಸ್ವಾತಿ ಅವರು ಏರೊನಾಟಿಕ್ಸ್ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ‘9ನೇ ವರ್ಷದಲ್ಲಿ ಸ್ಟಾರ್‌ ಟ್ರೆಕ್‌ ಧಾರಾವಾಹಿ ನೋಡಿದ್ದೆ. ಬಾಹ್ಯಾಕಾಶ ಸಂಶೋಧನೆಗೆ ಬರಲು ಆ ಧಾರಾವಾಹಿಯೇ ಸ್ಫೂರ್ತಿ’ ಎಂದು ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.