ADVERTISEMENT

ಲಸಿಕೆಯಿಂದ ಕೋವಿಡ್‌ ವಿರುದ್ಧ ದೀರ್ಘಾಕಾಲೀನ ರಕ್ಷಣೆ: ತಜ್ಞರು

ಪಿಟಿಐ
Published 23 ಫೆಬ್ರುವರಿ 2021, 4:50 IST
Last Updated 23 ಫೆಬ್ರುವರಿ 2021, 4:50 IST
ಸಾಂದರ್ಭಿಕ ಚಿತ್ರ – ರಾಯಿಟರ್ಸ್
ಸಾಂದರ್ಭಿಕ ಚಿತ್ರ – ರಾಯಿಟರ್ಸ್   

ನವದೆಹಲಿ: ಲಸಿಕೆ ಪಡೆಯುವ ಮೂಲಕ ಕೋವಿಡ್–19 ವಿರುದ್ಧ ವಿಶ್ವಾಸಾರ್ಹ ಮತ್ತು ದೀರ್ಘಾಕಾಲೀನ ರಕ್ಷಣೆ ಪಡೆಯಬಹುದು ಎಂದು ತಜ್ಞರು ಹೇಳಿದ್ದಾರೆ. ಲಸಿಕೆ ಪಡೆಯುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳು ಹಲವು ತಿಂಗಳುಗಳವರೆಗೆ ದೇಹದಲ್ಲಿ ಇರಲಿವೆ ಎಂದು ಅವರು ತಿಳಿಸಿದ್ದಾರೆ.

ಇಟಲಿ, ಅಮೆರಿಕ, ಬ್ರಿಟನ್‌ನಂತಹ ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾದ್ದು ಬಹು ಮುಖ್ಯ ಎಂದು ಚೆನ್ನೈ ಮ್ಯಾಥಮ್ಯಾಟಿಕಲ್ ಇನ್‌ಸ್ಟಿಟ್ಯೂಟ್‌ನ ರಾಜೀವ ಕರಂಡೈಕರ್, ಸಿಎಸ್‌ಐಆರ್‌ ನಿರ್ದೇಶಕ ಶೇಖರ್ ಮಾಂಡೆ, ಹೈದರಾಬಾದ್‌ ಐಐಟಿಯ ಎಂ.ವಿದ್ಯಾಸಾಗರ್ ಹೇಳಿದ್ದಾರೆ.

ಸೆರೋಲಾಜಿಕಲ್ ಸಮೀಕ್ಷೆಗಳು ಮತ್ತು ಮಾದರಿ ಮುನ್ಸೂಚನೆಗಳಿಂದ ತಿಳಿದುಬಂದಿರುವ ಪ್ರಕಾರ ಭಾರತದ ಜನಸಂಖ್ಯೆಯ ಗಣನೀಯ ಪ್ರಮಾಣವು ಪ್ರಸ್ತುತ ಕೋವಿಡ್ ವಿರುದ್ಧ ನಿರೋಧಕ ಶಕ್ತಿಯನ್ನು ಹೊಂದಿದೆ. ಇದರಲ್ಲಿ ಕೆಲವು ನೈಸರ್ಗಿಕ ರೂಪದ ನಿರೋಧಕ ಶಕ್ತಿಯೂ ಒಳಗೊಂಡಿದೆ ಎಂದು ತಜ್ಞರು ಹೇಳಿದ್ದಾರೆ.

‘ಸಹಜ ಪ್ರತಿಕಾಯಗಳ ಉಪಸ್ಥಿತಿಯಿಂದ ದೊರೆಯುವ ಪ್ರತಿರೋಧಕತೆಯು ಹಲವು ತಿಂಗಳುಗಳವರೆಗೆ ಇರುತ್ತದೆ. ಇದು ಹೆಚ್ಚು ಕಾಲ ಉಳಿಯುತ್ತದೆ ಎನ್ನಲಾಗದು. ಆದರೆ ಲಸಿಕೆ ನೀಡಿಕೆ ಮೂಲಕ ದೊರೆಯುವ ಪ್ರತಿರೋಧಕತೆಯು ವಿಶ್ವಾಸಾರ್ಹವಾಗಿದೆ ಮತ್ತು ದೀರ್ಘ ಕಾಲದವರೆಗೆ ದೇಹದಲ್ಲಿ ಇರಬಲ್ಲದು’ ಎಂದು ಅವರು ಹೇಳಿದ್ದಾರೆ.

ಸೋಂಕಿನ ವಿರುದ್ಧ ಲಸಿಕೆಯು ಹೆಚ್ಚು ಪ್ರಬಲ ರೋಗನಿರೋಧಕ ಶಕ್ತಿಯನ್ನು ಉಂಟುಮಾಡುತ್ತದೆ ಎಂಬುದು ಇತ್ತೀಚೆಗೆ ತಿಳಿದುಬಂದಿದೆ. ಹೀಗಾಗಿ ಸೋಂಕು ಹರಡುವಿಕೆ ತಡೆಗೆ ಲಸಿಕೆ ಪರಿಣಾಮಕಾರಿ ಎಂದು ಅವರು ಹೇಳಿದ್ದಾರೆ.

ಲಸಿಕೆಗೆ ಹೋಲಿಸಿದರೆ ಸೋಂಕು ತಗುಲಿದ ಬಳಿಕ ದೇಹದಲ್ಲಿ ಸಹಜವಾಗಿ ಉತ್ಪತ್ತಿಯಾಗಿರುವ ಪ್ರತಿರೋಧ ವ್ಯವಸ್ಥೆಯು ವೈರಸ್‌ನ ರೂಪಾಂತರದ ವಿರುದ್ಧ ಕಡಿಮೆ ರಕ್ಷಣೆ ಒದಗಿಸುತ್ತದೆ ಎಂದು ಕೆಲವು ವೈದ್ಯಕೀಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ವಿಚಾರದ ಬಗ್ಗೆ ನಿರ್ಣಾಯಕ ತೀರ್ಮಾನಕ್ಕೆ ಬರಲಾಗಿಲ್ಲ ಎಂದೂ ತಜ್ಞರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.