ADVERTISEMENT

ಮುಸ್ಸಂಜೆಯಲ್ಲಿ ವಜ್ರದಂತೆ ಹೊಳೆಯುವ ಶುಕ್ರ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 20:30 IST
Last Updated 3 ಡಿಸೆಂಬರ್ 2021, 20:30 IST
ಹೊಳೆಯುವ ಶುಕ್ರ ಗ್ರಹ
ಹೊಳೆಯುವ ಶುಕ್ರ ಗ್ರಹ   

ಉಡುಪಿ: ಮುಸ್ಸಂಜೆಯ ಪಶ್ಚಿಮ ಆಕಾಶದಲ್ಲಿ ಶುಕ್ರಗ್ರಹ ವಜ್ರದಂತೆ ಹೊಳೆಯಲಿದ್ದು, ಎಲ್ಲರನ್ನೂ ಆಕರ್ಷಿಸಲಿದೆ. ಡಿ.4 ರಿಂದ 7ರವರೆಗೂ ಹೊಳೆಯುವ ಶುಕ್ರನನ್ನು ವೀಕ್ಷಿಸಲು ಪ್ರಶಸ್ತ ಸಮಯವಾಗಿದ್ದು, ಶುಕ್ರನಿಂದ ಸ್ವಲ್ಪ ಮೇಲಿನ ಆಕಾಶದಲ್ಲಿ ಶನಿ ಹಾಗೂ ಗುರು ಗ್ರಹಗಳನ್ನೂ ನೋಡಬಹುದು.

ಡಿಸೆಂಬರ್‌ ತಿಂಗಳಲ್ಲಿ ಶುಕ್ರ ಪಶ್ಚಿಮ ಆಕಾಶದಲ್ಲಿ ದಿಗಂತದೆಡೆಗೆ ಸಾಗುತ್ತಾನೆ. ಈ ವಿದ್ಯಮಾನವನ್ನು ಮತ್ತೆ ವೀಕ್ಷಿಸಲು 19 ತಿಂಗಳು ಕಾಯಬೇಕು. 584 ದಿನಗಳಲ್ಲಿ ಈ ವಾರ ಮಾತ್ರವೇ ಸಂಜೆಯ ಹೊತ್ತು ಶುಕ್ರ ಗ್ರಹ ‘ಬೆಳ್ಳಿ ಚುಕ್ಕಿ’ಯಾಗಿ ಆಕರ್ಷಕವಾಗಿ ಮಿಂಚಲಿದೆ. ಅಪರೂಪದ ಈ ದೃಶ್ಯವನ್ನು ಖಗೋಳಾಸಕ್ತರು ಕಣ್ತುಂಬಿಕೊಳ್ಳಬಹುದು.

11 ಕೋಟಿ ಕಿ.ಮೀ. ದೂರದಲ್ಲಿ ದೀರ್ಘ ವೃತ್ತಾಕಾರದಲ್ಲಿ ಸೂರ್ಯನನ್ನು ಸುತ್ತುವ ಶುಕ್ರ ಗ್ರಹವು ಭೂಮಿಗಿಂತ ಸೂರ್ಯನಿಗೇ ಹೆಚ್ಚು ಹತ್ತಿರದಲ್ಲಿ ಇದೆ. ಭೂಮಿಯು ಸೂರ್ಯನಿಂದ 15 ಕೋಟಿ ಕಿ.ಮೀ. ದೂರದಲ್ಲಿದೆ. ಎರಡೂ ಗ್ರಹಗಳು ಸೂರ್ಯನನ್ನು ಸುತ್ತುವಾಗ ಭೂಮಿಯಿಂದ ಶುಕ್ರ ಗ್ರಹ ಒಂದೇ ದೂರದಲ್ಲಿರುವುದಿಲ್ಲ. 584 ದಿನಗಳಿಗೊಮ್ಮೆ ಭೂಮಿಗೆ ಅತೀ ಸಮೀಪ ಅಂದರೆ 4 ಕೋಟಿ ಕಿ.ಮೀ. ಹತ್ತಿರಕ್ಕೆ ಬರುತ್ತದೆ. ಮತ್ತೆ 9 ತಿಂಗಳ ನಂತರ ಅತೀ ದೂರ ಅಂದರೆ 26 ಕೋಟಿ ಕಿಮೀ ದೂರಕ್ಕೆ ಸರಿಯುತ್ತದೆ.

ADVERTISEMENT

ಈ ಪ್ರಕ್ರಿಯೆಗಳಿಗೆ ‘ಸುಪೀರಿಯರ್ ಕನ್ಜಂಕ್ಷನ್ ಹಾಗೂ ಇನ್ಫೀರಿಯರ್ ಕನ್ಜಂಕ್ಷನ್ ಎನ್ನಲಾಗುತ್ತದೆ. ಜ.8ರಂದು ಶುಕ್ರನ ಇನ್ಫೀರಿಯರ್ ಕನ್ಜಂಕ್ಷನ್ ಕಾಣಬಹುದು. ಮತ್ತೊಂದು ವಿಶೇಷ ಎಂದರೆ, ಶುಕ್ರನಿಗೆ ಸ್ವಯಂ ಪ್ರಭೆ ಇಲ್ಲ. ಶುಕ್ರ ಹೊಳೆಯುವುದು ಸೂರ್ಯನಿಂದ ಪ್ರತಿಫಲಿಸುವ ಬೆಳಕಿನಿಂದ.

ಈ ವಾರ ಶುಕ್ರ ಗ್ರಹ ಭೂಮಿಯಿಂದ 6 ಕೋಟಿ ಕಿ.ಮೀ ದೂರದಲ್ಲಿದ್ದು, ತದಿಗೆಯ ಚಂದ್ರನಂತೆ ಕಾಣುತ್ತದೆ. 584 ದಿನಗಳ ತಿರುಗಾಟದಲ್ಲಿ ಈ ವಾರ ಶುಕ್ರಗ್ರಹವು ಅತ್ಯಂತ ಪ್ರಭೆಯಿಂದ ಕೂಡಿರಲಿದ್ದು, ಫಳ ಫಳ ಹೊಳೆಯುತ್ತ ಆಕರ್ಷಿಸಲಿದೆ. ಶುಕ್ರ ಗ್ರಹ ರಾತ್ರಿಯಿಡೀ ಕಾಣುವುದಿಲ್ಲ. ಕೆಲ ಸಮಯ ಸಂಜೆಯ ಪಶ್ಚಿಮ ಆಕಾಶದಲ್ಲಿ ಹೆಚ್ಚೆಂದರೆ ಎರಡೂವರೆ ಗಂಟೆಗಳ ಕಾಲ ಗೋಚರಿಸಲಿದೆ.. ಕೆಲ ಸಮಯ ಪೂರ್ವ ಆಕಾಶದಲ್ಲಿ ಬೆಳಗಿನ ಸೂರ್ಯೋದಯಕ್ಕೆ ಮೊದಲು ಕಾಣುತ್ತದೆ.

ಈಗ ಪಶ್ಚಿಮ ಆಕಾಶದಲ್ಲಿ ಸಂಜೆ ಕಾಣುವ ಶುಕ್ರ 2022ರ ಪೆಬ್ರವರಿಯಿಂದ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಕಾಣುತ್ತದೆ. ದೂರದರ್ಶಕದಲ್ಲಿ ಶುಕ್ರನನ್ನು ನೋಡಲು ಈ ಸಮಯ ಬಹಳ ಪ್ರಶಸ್ತವಾಗಿದೆ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸ್ಥಾಪಕ ಸಂಯೋಜಕ ಡಾ.ಎ.ಪಿ. ಭಟ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.