ADVERTISEMENT

ನಡೆಯುವುದು ಜಾರುವಷ್ಟೇ ಸುಲಭ!

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 21:30 IST
Last Updated 25 ಅಕ್ಟೋಬರ್ 2022, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇತರೆ ಪ್ರಾಣಿಗಳಂತೇ ನಾವೂ ನಾಲ್ಕು ಕಾಲುಗಳಲ್ಲೇ ನಡೆದಾಡುತ್ತಿದ್ದೆವು. ವಿಕಾಸವಾಗುತ್ತಿದ್ದಂತೇ ಎರಡು ಕಾಲುಗಳಲ್ಲಿ ನಡೆಯುವದನ್ನೂ, ಮುಂಗಾಲುಗಳನ್ನು ಕೈಗಳನ್ನಾಗಿ ಮಾಡಿಕೊಂಡು ಬದುಕುವುದನ್ನೂ ಕಲಿತೆವು ಎನ್ನುವುದು ವಿಕಾಸವಾದ. ಆದರೆ ಇನ್ನೂ ಮುಂದುವರಿದು ಪ್ರಸ್ತುತ ಯಾಂತ್ರೀಕರಣಗೊಂಡಿರುವ ಜೀವನಶೈಲಿಗೆ ನಾವು ತಲುಪಿದ್ದೇವೆ. ಆದರೆ ನಾಯಿ, ಹಸು, ಮೇಕೆ, ಕುರಿ, ಹುಲಿ, ಸಿಂಹ ಅಥವಾ ಯಾವುದೇ ನಾಲ್ಕು ಕಾಲುಗಳ ಪ್ರಾಣಿಗಳ ನಡಿಗೆಯನ್ನು ಎಂದಾದರೂ ಗಮನಿಸಿದ್ದೀರಾ? ಅವುಗಳ ನಡಿಗೆಯೂ ನಾವು ಎರಡೇ ಕಾಲುಗಳಲ್ಲಿ ನಡೆದಷ್ಟೇ ಸುಲಭವೇ, ಅದಕ್ಕಿಂತಲೂ ಸುಲಭವೇ ಅಥವಾ ಇನ್ನು ಸಂಕೀರ್ಣವೋ ಎಂದು ಯೋಚಿಸಿದ್ದೀರಾ? ಹಾಗೊಂದು ವೇಳೆ ಅದರತ್ತ ಗಮನ ಹರಿಸಿದ್ದರೂ ನಾಲ್ಕು ಕಾಲಿನ ಪ್ರಾಣಿಗಳ ನಡಿಗೆಯನ್ನು ನೋಡಿದರೆ ತುಂಬಾ ಸಂಕೀರ್ಣವಿರಬಹುದೇನೋ ಎನ್ನಿಸುತ್ತದೆ. ಅದು ಸರಿಯೂ ಹೌದು. ಇದು ನಮ್ಮ ಹಾಗೇ ವಿಜ್ಞಾನಿಗಳ ಕುತೂಹಲದ ಪ್ರಶ್ನೆಯೂ ಆಗಿತ್ತು. ಅದರ ಬೆನ್ನತ್ತಿದಾಗ ನಾಲ್ಕು ಕಾಲಿನ ಪ್ರಾಣಿಗಳಲ್ಲಿ ಒಂದು ಮುಂಗಾಲು ಹಾಗೂ ಅದರ ಹಿಂದಿನ ಕಾಲು, ಎರಡು ಕಾಲಿನ ಪ್ರಾಣಿಯಂತೆ ಚಲಿಸುತ್ತವೆ ಮತ್ತು ಇನ್ನೊಂದು ಮುಂಗಾಲು ಹಾಗೂ ಅದರ ಹಿಂದಿನ ಕಾಲು ಮತ್ತೊಂದು ದ್ವಿಪಾದಿಯಂತೆ ಚಲಿಸುತ್ತವೆ. ಅಂದರೆ ಎರಡು ದ್ವಿಪಾದಿ ಪ್ರಾಣಿಗಳಂತೆ ಚಲಿಸುತ್ತವೆ ಈ ಚತುಷ್ಪಾದಿಗಳು ಎನ್ನುವುದು ತಿಳಿಯಿತು. ಆದರೆ ನಾವು ಮಾತ್ರ ಇಂತಹ ಸಂಕೀರ್ಣ ಚಲನಾವ್ಯವಸ್ಥೆಯಿರುವ ಬಹುಪಾದಿ ಪ್ರಾಣಿಗಳನ್ನು ಅನುಕರಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ನಮ್ಮಂತೆಯೇ ಕಾಣುವ ನಮ್ಮ ಕೆಲಸಗಳೆಲ್ಲವನ್ನೂ ಮಾಡಬಲ್ಲಂತಹ ರೋಬಾಟುಗಳನ್ನೂ ಕಂಡು ಹಿಡಿದು ಬದುಕನ್ನು ಸುಗಮಗೊಳಿಸಿಕೊಂಡಿದ್ದೇವೆ.

ರೋಬಾಟುಗಳು ಹೇಗೆ ನಡೆಯುತ್ತವೆ ಎನ್ನುವ ಕಲ್ಪನೆ ಎಲ್ಲರಿಗೂ ಇದೆ. ಅವು ನಮ್ಮಂತೆ ಸರಾಗವಾಗಿ ನಡೆಯಲಾರವು. ಅವುಗಳ ಕೈಕಾಲುಗಳ ಚಲನೆ ನಾವು ಚಲಿಸಿದಷ್ಟು ಆರಾಮದಾಯಕವಾಗಿ ತೋರುವುದಿಲ್ಲ. ಆದರೀಗ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಡಿಪಾರ್ಟ್‌ಮೆಂಟ್‌ ಆಫ್ ಮೆಕ್ಯಾನಿಕಲ್‌ ಅ್ಯಂಡ್‌ ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಭಾಗದ ವಿಜ್ಞಾನಿ ನಿಕ್‌ ಗ್ರೇವಿಶ್‌ ಮತ್ತು ತಂಡದವರು ನಾಲ್ಕು ಕಾಲಿನಲ್ಲಿ ನಡೆಯುವುದು, ಅಂದರೆ ಬಹುಪಾದಿ ರೋಬಾಟುಗಳ ನಡಿಗೆ ಜಾರಿದಷ್ಟೇ ಸುಲಭ, ಎನ್ನುತ್ತಿದ್ದಾರೆ. ನಡೆಯುವಾಗ ಕಾಲುಗಳಿಗಿರುವ ಶ್ರಮ ಜಾರುವಾಗ ಇರುವುದಿಲ್ಲ ಅಲ್ಲವೇ?

ಇದನ್ನು ಅಧ್ಯಯನ ಮಾಡಲು ಇವರು ಆರು ಕಾಲುಗಳಿರುವ ಇರುವೆಗಳು ಹಾಗೂ ರೋಬಾಟುಗಳನ್ನು ಹೋಲಿಸಿ ನೋಡಿದ್ದಾರೆ. ಈ ಪ್ರಯೋಗದಲ್ಲಿ ಅರ್ಜೆಂಟೈನಾದ ಇರುವೆಗಳ ಅನೇಕ ಗೂಡುಗಳನ್ನು ಬೆನ್ನತ್ತಿ ಪರೀಕ್ಷಿಸಿದ್ದಾರೆ, ಗ್ರೇವಿಶ್‌ ಮತ್ತು ತಂಡದವರು. ಇವು ತಮ್ಮ ಗೂಡುಗಳು ನಾಶವಾದರೆ ಕೂಡಲೇ ಪುನಃ ಕಟ್ಟಿಕೊಳ್ಳಬಲ್ಲವಂತೆ. ವಿವಿಧ ಭೂಪ್ರದೇಶಗಳಲ್ಲಿಯೂ ಒಂದೇ ಸಮನೆ ಅತ್ಯಂತ ದೂರ ಕ್ರಮಿಸಬಲ್ಲವಂತೆ. ಒಟ್ಟಾರೆ ಸಾಹಸಿ ಇರುವೆಗಳು ಎಂತಲೇ ಹೇಳಬಹುದು. ಈ ಅರ್ಜೆಂಟೈನಾ ಇರುವೆಗಳನ್ನು ಪ್ರಯೋಗಕ್ಕೆ ಬಹಳ ಸುಲಭವಾಗಿ ಬಳಸಿಕೊಳ್ಳಬಹುದಂತೆ. ಹಾಗಾಗಿ ಗ್ರೇವಿಶ್‌ ಮತ್ತು ಸಹಸಂಶೋಧಕರು ನಿರ್ದಿಷ್ಟ ಜಾಗಗಳಲ್ಲಿ ಅವುಗಳಿಗೆ ಆಹಾರವನ್ನು ಇರಿಸಿ ಅದರೆಡೆಗೆ ಈ ಇರುವೆಗಳನ್ನು ಸೆಳೆದಿದ್ದಾರೆ. ಆಹಾರದ ವಾಸನೆ ಹಿಡಿದ ಇರುವೆಗಳು ಅದನ್ನು ಅರಸುತ್ತಾ ಸಾಲುಗಟ್ಟಿ ಸಾಗುತ್ತವೆ. ಹೀಗೆ ಚಲಿಸುವಾಗ ಅವುಗಳ ಚಲನೆಯನ್ನು ಅಧ್ಯಯನ ಮಾಡಿದ್ದಾರೆ ವಿಜ್ಞಾನಿಗಳು. ಈ ಹಿಂದೆಯೂ ವಿಜ್ಞಾನಿಗಳು ಇರುವೆಗಳ ಕಾಲುಗಳ ಚಲನೆಯ ಹಿಂದಿರುವ ವಿಜ್ಞಾನವನ್ನು ಅರಿತು ಅದನ್ನು ರೋಬಾಟುಗಳ ಮೇಲೆ ಅನ್ವಯಿಸಲು ಪ್ರಯತ್ನಿಸಿದ್ದಾರೆ. ಹೀಗೆ ಮಾಡುತ್ತಾ ನಡಿಗೆ, ಜಿಗಿತ, ಜಾರುವುದು ಹಾಗೂ ಅಂಟುದ್ರವಗಳಲ್ಲಿ ಈಜುವುದು – ಇವುಗಳ ನಡುವಿನ ಸಂಬಂಧ ಹಾಗೂ ವ್ಯತ್ಯಾಸವನ್ನು ಪತ್ತೆಮಾಡಿ ಗಣಿತದ ಮಾದರಿಯೊಂದನ್ನು ರಚಿಸಿದ್ದರು.

ADVERTISEMENT

ಅದುವೇ ಮಿಷಿಗನ್‌ ವಿಶ್ವವಿದ್ಯಾನಿಲಯದ ಶಾಯ್‌ ರೆವ್‌ಜೆನ್‌ ಮತ್ತು ತಂಡದವರು ರೂಪಿಸಿರುವ, ಪ್ರಾಣಿಗಳ ಸಂಕೀರ್ಣ ಚಲನೆಗಳನ್ನು ಅರ್ಥಮಾಡಿಕೊಳ್ಳಲು ಅವುಗಳ ಚಲನವನಗಳನ್ನು ಯಾವುದೋ ಆಕಾರಕ್ಕೆ ಹೋಲಿಸಿ ಸರಳೀಕರಿಸುವ ಒಂದು ನಿಯಮ. ಈ ನಿಯಮವನ್ನು ಬಳಸಿಕೊಂಡು ನಿಕ್‌ ಗ್ರೇವಿಶ್‌ ಮತ್ತು ಸಹಸಂಶೋಧಕರು ವಿವಿಧ ಪ್ರಾಣಿಗಳು ಹಾಗೂ ರೋಬಾಟುಗಳನ್ನು ಅಧ್ಯಯನ ಮಾಡಿದ್ದಾರೆ. ಈ ಮಾದರಿಯ ಸಹಾಯದಿಂದ ಗ್ರೇವಿಶ್‌ ಮತ್ತು ಸಂಗಡಿಗರು, ಈ ಕ್ಷಣ ಒಂದು ಭಾವಭಂಗಿಯಲ್ಲಿರುವ ಯಾವುದೋ ಪ್ರಾಣಿ, ಅಥವಾ ರೋಬಾಟು ಮುಂದಿನ ಕ್ಷಣ ಯಾವ ಭಂಗಿಯಲ್ಲಿ ಇರಬಹುದು ಎಂದು ಅಂದಾಜಿಸಿದ್ದಾರೆ. ನಂತರ ಈ ನಿಯಮವನ್ನು ಅವರು ಪರೀಕ್ಷೆಗೆ ತೆಗೆದುಕೊಂಡಿದ್ದ ಇರುವೆ ಹಾಗೂ ಎರಡು ವಿಭಿನ್ನ ರೀತಿಯ ಆರು ಕಾಲಿನ ಮತ್ತು ಬಹುಪಾದಿ ರೋಬಾಟುಗಳಿಗೆ ಅನ್ವಯಿಸಿ ನೋಡಿದ್ದಾರೆ. ಇರುವೆ ಹಾಗೂ ರೋಬಾಟುಗಳ ನಡಿಗೆಯಲ್ಲಿ ಬಹಳಷ್ಟು ವ್ಯತ್ಯಾಸವಿದ್ದರೂ, ಅವುಗಳ ಭಂಗಿಯ ಆಧಾರದ ಮೇಲೆ ಅವೆರಡೂ ನಂತರ ಯಾವ ಭಂಗಿಯನ್ನು ತೆಗೆದುಕೊಳ್ಳುತ್ತವೆ ಎಂದು ಅಂದಾಜಿಸಲು ಸಾಧ್ಯವಾಯಿತಂತೆ. ನಾವು ನೆಲದ ಮೇಲೆ ಬೀಳದೆ ನಡೆಯುತ್ತಿದ್ದೇವೆ ಎಂದರೆ ನಮ್ಮ ಪಾದ ಹಾಗೂ ನೆಲದ ನಡುವೆ ಒಂದು ಘರ್ಷಣಾ ಬಲ ಏರ್ಪಟ್ಟಿರುತ್ತದೆ. ಈ ಘರ್ಷಣೆ ಇಲ್ಲದಿದ್ದರೆ ನಾವು ಬೀಳುವುದು ಸಹಜ. ರೋಬಾಟುಗಳೂ ಕೂಡ ಸುಲಭವಾಗಿ ನಡೆಯಬೇಕಾದರೆ ಈ ಘರ್ಷಣಾ ಬಲ ಅವಶ್ಯಕ. ಈ ಮಾದರಿಯು ಘರ್ಷಣೆಯಿರುವ ಎಲ್ಲಾ ಪ್ರದೇಶಗಳಲ್ಲಿ ಚಲಿಸುವ ರೋಬಾಟುಗಳಿಗೆ ಅನ್ವಯವಾಗಬಲ್ಲದಂತೆ.

ಈ ಗಣಿತದ ಮಾದರಿಯನ್ನು ಉಪಯೋಗಿಸಿ ಮೊದಲಿಗೆ ಜಾರುವುದು ಮತ್ತು ಅಂಟುದ್ರವಗಳಲ್ಲಿ ಈಜಾಡುವುದು ಹೇಗೆ ಎನ್ನುವುದನ್ನು ಮಾತ್ರ ತಿಳಿದುಕೊಳ್ಳುವ ಪ್ರಯತ್ನವಾಗಿತ್ತು. ಈಗ ಗ್ರೇವಿಶ್‌ ಮತ್ತು ತಂಡದವರು ಅದೇ ನಿಯಮವನ್ನು ಉಪಯೋಗಿಸಿ ಬಹುಪಾದಿಗಳು ಅಂದರೆ ರೋಬಾಟುಗಳು ಆರಾಮಾಗಿ ನಡೆಯಬಲ್ಲವೇ ಅಥವಾ ಜಾರಿಬೀಳುತ್ತವೆಯೇ ಎಂದು ಪರೀಕ್ಷಿಸಿದ್ದಾರೆ. ನಡೆ, ಜಿಗಿ, ತೆವಳು ಅಥವಾ ಈಜು ಯಾವುದೇ ಚಲನೆಗೂ ಈ ಮಾದರಿಯು ಸಾರ್ವತ್ರಿಕವಾಗಿ ಅನ್ವಯವಾಗಬಲ್ಲದು ಎಂದು ಸಾಬೀತಾಗಿರುವುದರಿಂದ, ಇದರ ಸಹಾಯದಿಂದ ರೋಬಾಟುಗಳ ವಿನ್ಯಾಸ ಹಾಗೂ ಅವುಗಳ ಚಲನೆಯನ್ನು ಹೇಗೆಲ್ಲಾ ನಿಯಂತ್ರಿಸಬಹುದು ಎನ್ನುವುದರ ಬಗ್ಗೆ ಸೂಕ್ಷ್ಮ ಒಳನೋಟ ಸಿಕ್ಕಿದೆ ಎಂಬುದು ವಿಜ್ಞಾನಿಗಳ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.