ADVERTISEMENT

'ಮಂಗಳ'ನಲ್ಲಿ ನವರತ್ನಗಳಲ್ಲೊಂದಾದ ಗೋಮೇಧಿ ಪತ್ತೆ: ಜೀವಿಗಳ ಅಧ್ಯಯನಕ್ಕೆ ಹೊಸ ಆಯಾಮ

ಪಿಟಿಐ
Published 3 ಫೆಬ್ರುವರಿ 2022, 7:08 IST
Last Updated 3 ಫೆಬ್ರುವರಿ 2022, 7:08 IST
ಎನ್‌ಡಬ್ಳ್ಯುಎ 7034 ಉಲ್ಕಾಶಿಲೆ (ಚಿತ್ರ: ನಾಸಾ)
ಎನ್‌ಡಬ್ಳ್ಯುಎ 7034 ಉಲ್ಕಾಶಿಲೆ (ಚಿತ್ರ: ನಾಸಾ)   

ಪರ್ತ್‌: ಮಂಗಳ ಗ್ರಹದಲ್ಲಿ ನವರತ್ನಗಳ ಪೈಕಿ ಒಂದಾದ ಗೋಮೇಧಿ (ಝಿಕ್ರಾನ್‌) ಖನಿಜ ಪತ್ತೆಯಾಗಿದೆ. ಈ ಮೂಲಕ ಮಂಗಳ ಗ್ರಹದಲ್ಲಿ ಜೀವಿಗಳ ಇರುವಿಕೆಗೆ ಸಂಬಂಧಿಸಿದ ಅಧ್ಯಯನಕ್ಕೆ ಹೊಸ ಆಯಾಮ ಸಿಕ್ಕಂತಾಗಿದೆ.

ಆಫ್ರಿಕಾದ ವಾಯುವ್ಯ ಮರುಭೂಮಿಯಲ್ಲಿ ಸಿಕ್ಕಿದ ಮಂಗಳ ಗ್ರಹದ ಉಲ್ಕಾಶಿಲೆ 'ಎನ್‌ಡಬ್ಳ್ಯುಎ 7034'ನಲ್ಲಿ ಝಿಕ್ರಾನ್‌ ಖನಿಜದ ಸೂಕ್ಷ್ಮ ರಚನೆಯ ಕಣಗಳು ಪತ್ತೆಯಾಗಿವೆ. 320 ಗ್ರಾಮ್‌ ತೂಕದ ಉಲ್ಕಾಶಿಲೆಯ ಬಗ್ಗೆ 2013ರಲ್ಲಿ ವರದಿಯಾಗಿತ್ತು. ಉಲ್ಕಾಶಿಲೆಯಲ್ಲಿ ಪತ್ತೆಯಾದ ಏಕಮಾತ್ರ ಆಮ್ಲಜನಕ ಐಸೋಟೋಪ್‌ನಿಂದ ಇದರ ಮೂಲ ಮಂಗಳ ಗ್ರಹ ಎಂಬುದು ಬಹಿರಂಗವಾಗಿತ್ತು.

ಝಿಕ್ರಾನ್‌ ಅನ್ನು ಜಿಯೋಕ್ರೊನೊಮೀಟರ್‌ ಎಂದು ಗುರುತಿಸಲಾಗುತ್ತದೆ. ಅಂದರೆ, ಇದರಿಂದ ಅಗ್ನಿಶಿಲೆಯಾಗಿ ನಿರ್ಮಾಣಗೊಂಡು ಎಷ್ಟು ಕಾಲವಾಗಿದೆ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ. ಅಗ್ನಿಶಿಲೆ ಎಂಬುದು ಭೂಮಿಯ ಆಳದಲ್ಲಿ ಹುದುಗಿರುವ ಮ್ಯಾಗ್ಮ ಅಥವಾ ಮಾತೃಶಿಲಾದ್ರವದ ಆರುವಿಕೆಯಿಂದ ಉತ್ಪತ್ತಿಯಾದ್ದುದ್ದಾಗಿದೆ. ಹೀಗಾಗಿ ಝಿಕ್ರಾನ್‌ ಖನಿಜಾಂಶದ ಪತ್ತೆಯಿಂದ ಮಂಗಳ ಗ್ರಹದಲ್ಲೂ ಪುರಾತನ ಕಾಲದಲ್ಲಿ ಜೀವಿಗಳಿದ್ದಿರಬಹುದೇ ಎಂಬ ಅಧ್ಯಯನಕ್ಕೆ ಪೂರಕ ಮಾಹಿತಿ ಸಿಗಬಹುದು ಎಂಬುದು ಸಂಶೋಧಕರ ಅಭಿಲಾಷೆ.

ADVERTISEMENT

ಹಿಂದಿನ ಅಧ್ಯಯನಗಳ ಪ್ರಕಾರ ಎನ್‌ಡಬ್ಳ್ಯುಎ 7034ನಲ್ಲಿ ಪತ್ತೆಯಾಗಿರುವ ಝಿಕ್ರಾನ್‌ ಖನಿಜವು ಭಾರಿ ಹಿಂದಿನ ಕಾಲದ್ದಾಗಿದೆ. ಸುಮಾರು 4.48 ಶತಕೋಟಿ ವರ್ಷಗಳ ಹಿಂದಿನದ್ದಾಗಿದೆ. ಇದನ್ನು ಮಂಗಳ ಗ್ರಹದ ಅತ್ಯಂತ ಪುರಾತನ ಖನಿಜ ಎಂದು ಗುರುತಿಸಲಾಗಿದೆ. ಇದು ಭೂಮಿಯ ಅತ್ಯಂತ ಪುರಾತನ ಝಿಕ್ರಾನ್‌ಗಿಂತಲೂ ಹಳೆಯದಾಗಿದೆ.

ಝಿಕ್ರಾನ್‌ನಿಂದ ಉಲ್ಕಾಶಿಲೆಗಳ ಪರಿಣಾಮಗಳ ಬಗ್ಗೆಯೂ ಅಧ್ಯಯನ ನಡೆಸಬಹುದಾಗಿದೆ. ಇದರಲ್ಲಿ ಶಾಕ್‌ ವೇವ್ಸ್‌ (ಸ್ಫೋಟದಿಂದ ಉತ್ಪತ್ತಿಯಾಗುವ ಶಕ್ತಿಯುತ ಒತ್ತಡದ ಅಲೆ) ಸಂಚಾರದಿಂದ ಉಂಟಾದ ಅತ್ಯಂತ ಸೂಕ್ಷ್ಮ ಹಾನಿಯು ಹಾಗೆಯೇ ಉಳಿದುಕೊಂಡಿರುತ್ತದೆ. ಆದರೆ ಝಿಕ್ರಾನ್‌ನಲ್ಲಿ ಪತ್ತೆಯಾದ ಸೂಕ್ಷ್ಮ ಹಾನಿಯ ಕುರುಹುಗಳು ಶಾಕ್‌ ವೇವ್‌ ಪರಿಣಾಮದಿಂದಲೇ ಸಂಭವಿಸಿದೆಯೇ ಎಂಬುದಕ್ಕೆ ನಿಖರ ಉತ್ತರ ಸಿಕ್ಕಿಲ್ಲ.

ಎನ್‌ಡಬ್ಳ್ಯುಎ 7034 ಉಲ್ಕಾಶಿಲೆಯು ಭೂಮಿಯಲ್ಲಿ ಸಿಗುವ ಕಾಂಗ್ಲೊಮೆರೆಟ್‌ ಎಂಬ ಕಲ್ಲಿನಂತಹದ್ದೇ ವಸ್ತುವಾಗಿದೆ. ಹಲವು ಬಗೆಯ ಖನಿಜಗಳು ಒಟ್ಟಾಗಿ ಕಲ್ಲಿನ ರೂಪು ಪಡೆದಿರುವುದನ್ನು ಕಾಂಗ್ಲೊಮೆರೆಟ್ ಎನ್ನಲಾಗುತ್ತದೆ. ಇಂತಹ ಕಲ್ಲುಗಳಲ್ಲಿರುವ ಪ್ರತಿಯೊಂದು ಖನಿಜವು ಪ್ರತ್ಯೇಕ ಉಗಮವನ್ನು ಹೊಂದಿರುತ್ತದೆ. ಇದನ್ನು ಆಧಾರವಾಗಿ ಇಟ್ಟುಕೊಂಡು ಉಲ್ಕಾಶಿಲೆಯ ಝಿಕ್ರಾನ್‌ ಖನಿಜದ ಕಣಗಳ ಮೇಲೆ ಅಧ್ಯಯನ ನಡೆಸಲಾಗುತ್ತಿದೆ. ಪರಿಣಾಮಕಾರಿ ಪುರಾವೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.