ADVERTISEMENT

ಕೋವಿಡ್‌ ಲಸಿಕೆಯಲ್ಲೂ ಮೋಸ: ಕೇಂದ್ರದ ವಿರುದ್ಧ ಟ್ವಿಟರ್‌ನಲ್ಲಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಮೇ 2021, 20:26 IST
Last Updated 30 ಮೇ 2021, 20:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ಸುಳ್ಳು ಹೇಳಿ ದಕ್ಷಿಣ ಭಾರತದವರನ್ನು ನಂಬಿಸುವುದನ್ನು ಬಿಡಿ. ರಾಜ್ಯಕ್ಕೆ ಸಿಗಬೇಕಾದ ಲಸಿಕೆ ಪಡೆಯಲು ಕೇಂದ್ರದ ಕೊರಳು ಪಟ್ಟಿ ಹಿಡಿದು ಕೇಳುವ ತಾಕತ್ತು ಬೆಳೆಸಿಕೊಳ್ಳಿ. ಕನ್ನಡಿಗರು ಮೆಚ್ಚುತ್ತಾರೆ. ಪದೇ ಪದೇ ಮಲತಾಯಿ ಧೋರಣೆ ಸಹಿಸುವುದಕ್ಕೆ ಸಾಧ್ಯವಿಲ್ಲ’..

ಡಾ.ಪಿ.ಆಂಜನಪ್ಪ ಎಂಬುವರು ಭಾನುವಾರ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬಗೆ ಇದು.

‘ಆಮ್ಲಜನಕ ಹಾಗೂ ಔಷಧಗಳ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವೆಸಗಿದ್ದ ಕೇಂದ್ರ ಸರ್ಕಾರ ಈಗ ಲಸಿಕೆ ವಿಚಾರದಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿದೆ‘ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ‘ಲಸಿಕೆಯಲ್ಲೂ ಮೋಸ’ ಎಂಬ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಟ್ವಿಟರ್ ಅಭಿಯಾನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನೂರಾರು ಮಂದಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರೇ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿ ಕಮಿಷನ್‌ ತೆಗೆದುಕೊಳ್ಳುತ್ತಿರುವ ನಿಮ್ಮದೇ ಪಕ್ಷದ ಶಾಸಕರು, ಸಂಸದರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ’ ಎಂದು ದಯಾನಂದ ಗೌಡ ಪ್ರಶ್ನಿಸಿದ್ದಾರೆ.

‘ಮೇ 1ರವರೆಗೆ ಕೇಂದ್ರದಿಂದ ರಾಜ್ಯಕ್ಕೆ1.91 ಲಕ್ಷ ಡೋಸ್‌ ಲಸಿಕೆ ಪೂರೈಕೆಯಾಗಿದೆ. ಈ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ15.61 ಲಕ್ಷ, ಬಿಹಾರಕ್ಕೆ10.2 ಲಕ್ಷ, ಮಧ್ಯಪ್ರದೇಶಕ್ಕೆ 8.57 ಲಕ್ಷ, ಗುಜರಾತ್‌ಗೆ3.47 ಲಕ್ಷ ಡೋಸ್‌ ಲಸಿಕೆ ಸಿಕ್ಕಿದೆ. ದಕ್ಷಿಣ ರಾಜ್ಯಗಳಿಗೆ ಒಟ್ಟು 7.3 ಲಕ್ಷ ಹಾಗೂ ದೇಶದ ಇತರ ರಾಜ್ಯಗಳಿಗೆ 89 ಲಕ್ಷ ಲಸಿಕೆ ನೀಡಲಾಗಿದೆ’ ಎಂದು ಎಚ್‌.ಕೆ.ನವನೀತ್‌ ತಿಳಿಸಿದ್ದಾರೆ.

‘ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ಮಾತ್ರ ಕೋವಿಡ್‌ ಪೀಡಿತರ ಸಂಖ್ಯೆ ಕಡಿಮೆ ಇರುವ ಗುಜರಾತ್‌ ಮತ್ತು ಉತ್ತರ ಪ್ರದೇಶಕ್ಕೆ ಹೆಚ್ಚು ಲಸಿಕೆ ಹಂಚಿಕೆ ಮಾಡುತ್ತಿದೆ. ಇದು ಎಷ್ಟು ಸರಿ?’ ಎಂದು ಪ್ರಸಾದ್‌ ಪ್ರಶ್ನಿಸಿದ್ದಾರೆ. ಈ ಟ್ವೀಟ್‌ ಅನ್ನು ಅವರು ಪ್ರಧಾನಿ ಮೋದಿಗೆ ಟ್ಯಾಗ್‌ ಮಾಡಿದ್ದಾರೆ.

‘ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ಅಭಿವೃದ್ಧಿಯ ಮಳೆಗರೆಯುತ್ತೇವೆ ಎಂದು ಮಣ್ಣೆರಚಿದ್ದ ಬಿಜೆಪಿಯವರು ಈಗ ನಮ್ಮ ನಾಡಿಗೆ ಲಸಿಕೆ ಹಂಚುವಲ್ಲೂ ಮೋಸವೆಸಗಿದ್ದಾರೆ’ ಎಂದು ಎಚ್‌.ಎಂ.ಶ್ರುತಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.