ADVERTISEMENT

ರಾಹುಲ್ ಚಿತ್ರ, ಅವರದೇ ಹೆಸರು; ಟ್ವಿಟರ್‌ನಲ್ಲಿ ಕಾಂಗ್ರೆಸ್‌ ಭಿನ್ನ ಪ್ರತಿಭಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2021, 13:54 IST
Last Updated 12 ಆಗಸ್ಟ್ 2021, 13:54 IST
ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿರುವ ರಾಹುಲ್‌ ಗಾಂಧಿ
ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿರುವ ರಾಹುಲ್‌ ಗಾಂಧಿ   

ಬೆಂಗಳೂರು: ಕಾಂಗ್ರೆಸ್‌ನ ಅಧಿಕೃತ ಟ್ವಿಟರ್‌ ಖಾತೆ, ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರ ಖಾತೆಗಳನ್ನು ಟ್ವಿಟರ್‌ ನಿರ್ಬಂಧಿಸಿದೆ. ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ಸಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಕಿಡಿ ಕಾರಿದ್ದಾರೆ. ಕಾಂಗ್ರೆಸ್‌ ಸದಸ್ಯರು ತಮ್ಮ ಖಾತೆಗಳನ್ನು 'ರಾಹುಲ್‌' ಮಯ ಮಾಡಲು ಮುಂದಾಗಿದ್ದಾರೆ.

ಕಾಂಗ್ರೆಸ್‌ನ ಯುವ ಘಟಕ ಪ್ರತಿಭಟನಾ ಅಭಿಯಾನ ಆರಂಭಿಸಿದ್ದು, ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಹಾಗೂ ಯುವ ಘಟಕದ ಅಧಿಕೃತ ಟ್ವಿಟರ್‌ ಖಾತೆಯ ಫ್ರೊಫೈಲ್‌ ಚಿತ್ರವನ್ನು ಬದಲಿಸಿ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಚಿತ್ರವನ್ನು ಅಪ್‌ಲೋಡ್‌ ಮಾಡಲಾಗಿದೆ. ಹಾಗೇ ತಮ್ಮ ಹೆಸರಿನ ಬದಲು ರಾಹುಲ್‌ ಗಾಂಧಿ ಎಂದು ಬದಲಿಸಿಕೊಳ್ಳಲಾಗಿದೆ.

ರಾಹುಲ್‌ ಗಾಂಧಿ ಅವರ ಚಿತ್ರದ ಜೊತೆಗೆ 'ರಾಹುಲ್‌ ಗಾಂಧಿ–ದನಿ ಇಲ್ಲದವರ ಪರವಾದ ಧ್ವನಿ' ಎಂದು ಪ್ರಕಟಿಸಲಾಗಿದೆ. ಬಹುತೇಕ ಕಾಂಗ್ರೆಸ್‌ ಸದಸ್ಯರು, ಬೆಂಬಲಿಗರು ರಾಹುಲ್‌ ಅವರ ಚಿತ್ರವನ್ನೇ ತಮ್ಮ ಪ್ರೊಫೈಲ್‌ ಚಿತ್ರವಾಗಿಸಿಕೊಳ್ಳುತ್ತಿದ್ದು, ರಾಹುಲ್‌ ಗಾಂಧಿ (#RahulGandhi) ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಸೃಷ್ಟಿಸಿದೆ. ಭಿನ್ನ ರೀತಿಯ ಈ ಪ್ರತಿಭಟನೆಯು ಟ್ವೀಟಿಗರ ಗಮನ ಸೆಳೆದಿದೆ.

ADVERTISEMENT

'ರಾಹುಲ್‌ ಗಾಂಧಿ ಕೇವಲ ವ್ಯಕ್ತಿಯಲ್ಲ ಅವರೊಂದು ಆದರ್ಶ. ಅದು ಭಾರತದ ಆತ್ಮ ಮತ್ತು ಧ್ವನಿಯನ್ನು ಪ್ರತಿನಿಧಿಸುತ್ತದೆ', 'ಟ್ವಿಟರ್‌ ಇಂಡಿಯಾ ಭವಿಷ್ಯವನ್ನು ತಡೆಯಲಾಗುವುದಿಲ್ಲ',... ಹೀಗೆ ರಾಹುಲ್‌ ಅವರನ್ನು ಬೆಂಬಲಿಸಿ ಹಾಗೂ ಟ್ವಿಟರ್‌ ಕ್ರಮವನ್ನು ವಿರೋಧಿಸಿ ಹಲವು ಟ್ವೀಟ್‌ಗಳು ಪ್ರಕಟಗೊಳ್ಳುತ್ತಿವೆ.

ಕಳೆದ ವಾರ ದೆಹಲಿಯಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು ಸಂತ್ರಸ್ತೆಯ ಕುಟುಂಬದವರ ಛಾಯಾಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದು ನಿಯಮದ ಉಲ್ಲಂಘನೆಯಾಗಿದೆ ಎಂದಿರುವ ಟ್ವಿಟರ್‌, ವ್ಯಕ್ತಿಯ ಖಾಸಗಿತನ ಮತ್ತು ಸುರಕ್ಷತೆಯ ಕಾರಣಗಳಿಂದ ಕ್ರಮಕೈಗೊಳ್ಳಲಾಗಿದೆ ಎಂದು ಖಾತೆ ನಿರ್ಬಂಧಿಸಿರುವುದನ್ನು ಸಮರ್ಥಿಸಿಕೊಂಡಿದೆ.

ಟ್ವಿಟರ್‌ ಪ್ರಕಾರ, ಟ್ವಿಟರ್‌ನ ನಿಯಮಗಳ ಉಲ್ಲಂಘನೆಯಾದರೆ ನಿರ್ದಿಷ್ಟ ಖಾತೆಯನ್ನು ನಿರ್ಬಂಧಿಸಲಾಗುತ್ತದೆ. ಉಲ್ಲಂಘನೆಯಾಗಿರುವ ಪೋಸ್ಟ್‌ ಅನ್ನು ಸಾರ್ವಜನಿಕವಾಗಿ ಕಾಣಿಸದಂತೆ ಮಾಡುವ ಜೊತೆಗೆ ನೋಟಿಸ್‌ ಪ್ರಕಟಿಸುತ್ತದೆ. ಆ ಟ್ವೀಟ್‌ ಅನ್ನು ಸ್ವತಃ ಟ್ವೀಟಿಗ ತೆಗೆದು ಹಾಕಬೇಕು, ಇಲ್ಲವೇ ಅವರ ಮನವಿ ಸಮ್ಮತಿಯಾಗುವವರೆಗೂ ಖಾತೆಯು ನಿರ್ಬಂಧಿಸಲ್ಪಟ್ಟಿರುತ್ತದೆ.

ರಾಹುಲ್‌ ಗಾಂಧಿಯವರ ಟ್ವೀಟ್ ಪೋಸ್ಟ್‌ನಲ್ಲಿ, ಸಂತ್ರಸ್ತೆಯ ಗುರುತನ್ನು ಬಹಿರಂಗಗೊಳಿಸಿ, ಕಾನೂನು ಉಲ್ಲಂಘಿಸಿದ್ದಕ್ಕಾಗಿ, ಅವರ ಟ್ವಿಟರ್‌ ಖಾತೆಯನ್ನು ಅಮಾನತುಗೊಳಿಸುವಂತೆ ಟ್ವಿಟರ್‌ ಸಾಮಾಜಿಕ ಮಾಧ್ಯಮ ಸಂಸ್ಥೆಗೆ 'ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು (ಎನ್‌ಸಿಪಿಸಿಆರ್)' ನಿರ್ದೇಶನ ನೀಡಿತ್ತು. ಬಿಜೆಪಿ ಸಹ ರಾಹುಲ್‌ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿತ್ತು.

ಸರ್ಕಾರದ ಒತ್ತಡಕ್ಕೆ ಮಣಿದು, ನಿಯಮ ಉಲ್ಲಂಘನೆಯ ಆರೋಪ ಹೊರಿಸಿ ತಮ್ಮ ಪಕ್ಷದ ಅಧಿಕೃತ ಟ್ವಿಟರ್ ಖಾತೆಯನ್ನು ನಿರ್ಬಂಧಿಸಿದೆ ಎಂದು ಕಾಂಗ್ರೆಸ್‌ ಪಕ್ಷವು ಟ್ವಿಟರ್ ವಿರುದ್ಧ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.