ADVERTISEMENT

ಫೇಸ್‌ಬುಕ್, ಇನ್‌ಸ್ಟಾಗ್ರಾಂ ‘ನಕಲಿ ಖಾತೆ’ ಹಾವಳಿ: ಇಲ್ಲ ಕಡಿವಾಣ

ನಿತ್ಯವೂ 20ಕ್ಕೂ ಹೆಚ್ಚು ಪ್ರಕರಣ ದಾಖಲು

ಸಂತೋಷ ಜಿಗಳಿಕೊಪ್ಪ
Published 15 ಜುಲೈ 2021, 19:31 IST
Last Updated 15 ಜುಲೈ 2021, 19:31 IST
ಫೇಸ್‌ಬುಕ್
ಫೇಸ್‌ಬುಕ್   

ಬೆಂಗಳೂರು: ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಹಾವಳಿ ಹೆಚ್ಚಾಗಿದ್ದು, ಈ ವಂಚನೆ ಜಾಲಕ್ಕೆ ಸಿಲುಕಿ ಸಾವಿರಾರು ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ.

ಜಾಲತಾಣಗಳಲ್ಲಿ ಖಾತೆ ಹೊಂದಿರುವವರ ಫೋಟೊ ಹಾಗೂ ವೈಯಕ್ತಿಕ ವಿವರ ಕದಿಯುತ್ತಿರುವ ಸೈಬರ್ ವಂಚಕರು, ಅವರ ಹೆಸರಿನಲ್ಲೇ ನಕಲಿ ಖಾತೆ ತೆರೆದು ಸ್ನೇಹಿತರಿಗೆ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ. ‘ತುರ್ತು ಸಹಾಯ ಬೇಕಾಗಿದೆ’ ಎಂಬ ಸಂದೇಶವನ್ನು ಕಳುಹಿಸಿ ಹಣ ಪಡೆದು ವಂಚಿಸುತ್ತಿದ್ದಾರೆ.

ಇಂಥ ಕೃತ್ಯಗಳ ಬಗ್ಗೆ ಸೈಬರ್‌ ಕ್ರೈಂ ಠಾಣೆಗಳಲ್ಲಿ ನಿತ್ಯವೂ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಪೊಲೀಸರಿಂದ ಪ್ರಕರಣ ಭೇದಿಸುವುದು ವಿಳಂಬವಾಗುತ್ತಿದ್ದು, ಇದು ವಂಚಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ.

ADVERTISEMENT

‘ನಕಲಿ ಖಾತೆ ಬಗ್ಗೆ ದೂರು ಕೊಟ್ಟಿದ್ದೆ. ಎಫ್‌ಐಆರ್ ದಾಖಲಿಸಿದ್ದು ಬಿಟ್ಟರೆ ತನಿಖೆಯಲ್ಲಿ ಪ್ರಗತಿ ಕಂಡುಬಂದಿಲ್ಲ. ನಕಲಿ ಖಾತೆಗಳ ಸಂಖ್ಯೆ ನಿತ್ಯವೂ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಯಾವಾಗ’ ಎಂದು ದೂರುದಾರರೊಬ್ಬರು ಪ್ರಶ್ನಿಸಿದರು.

‘ಉತ್ತರ ಭಾರತ ರಾಜ್ಯಗಳ ಕೆಲವರು ಕೃತ್ಯ ಎಸಗುತ್ತಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಆರೋಪಿಗಳನ್ನು ಹಿಡಿದುಕೊಂಡು ಬರಲು ಹೆಚ್ಚಿನ ಸಿಬ್ಬಂದಿ ಹಾಗೂ ಹಣಕಾಸಿನ ವ್ಯವಸ್ಥೆ ಬೇಕು. ಈ ಎರಡಕ್ಕೂ ಕೊರತೆ ಇರುವುದಾಗಿ ಪೊಲೀಸರು ಅಳಲು ತೋಡಿಕೊಳ್ಳುತ್ತಾರೆ. ವಂಚನೆ ಮೊತ್ತಕ್ಕಿಂತಲೂ ದುಪ್ಪಟ್ಟು ಮೊತ್ತ ತನಿಖೆಗೆ ಖರ್ಚಾಗುತ್ತಿದೆ. ಹೀಗಾಗಿ, ಇಂಥ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದೂ ಅವರು ಆರೋಪಿಸಿದರು.

‘ಸಾಮಾನ್ಯರಿಂದ ಹಿಡಿದು ಪ್ರಭಾವಿಗಳವರೆಗೂ ಬಹುತೇಕರು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದಿದ್ದಾರೆ. ದೊಡ್ಡ ಸ್ನೇಹಿತರ ಬಳಗ ಹೊಂದಿದ್ದಾರೆ. ಇಂಥವರನ್ನೇ ಗುರಿಯಾಗಿಸಿಕೊಂಡು ಸೈಬರ್ ವಂಚಕರು ನಕಲಿ ಖಾತೆ ಸೃಷ್ಟಿಸುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸೈಬರ್ ಕ್ರೈಂ ಠಾಣೆ ಇನ್‌ಸ್ಪೆಕ್ಟರ್‌ ಹೇಳಿದರು.

‘ಇಂಟರ್‌ನೆಟ್ ಪ್ರೋಟೊಕಾಲ್ (ಐ.ಪಿ) ಆಧರಿಸಿ ತನಿಖೆ ಆರಂಭಿಸಲಾಗುತ್ತದೆ. ಬಹುತೇಕ ಐ.ಪಿ.ಗಳೇ ನಕಲಿ ಆಗಿರುತ್ತವೆ. ಇತ್ತೀಚೆಗೆ ಕೆಲಸದ ಒತ್ತಡ ಹೆಚ್ಚಿದ್ದು, ಆರೋಪಿಗಳಪತ್ತೆ ಕಷ್ಟವಾಗಿದೆ’ ಎಂದೂ ಹೇಳಿದರು.

ಸಚಿವರು, ಶಾಸಕರು, ಐಎಎಸ್, ಐಪಿಎಸ್, ಕೆಎಎಸ್, ಸಾಹಿತಿಗಳು, ಸಿನಿಮಾ ಕಲಾವಿದರು, ವೈದ್ಯರು, ಉದ್ಯಮಿಗಳು, ಲೇಖಕರು, ಪತ್ರಕರ್ತರು…. ಹೀಗೆ ಪ್ರತಿಯೊಂದು ಕ್ಷೇತ್ರದ ಹಲವು ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿದೆ.

ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಚುರುಕಿನ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಸಾಮಾನ್ಯರ ವಿಚಾರದಲ್ಲಿ ತನಿಖೆ ವಿಳಂಬವಾಗುತ್ತಿದೆ. ಸೈಬರ್ ಅಪರಾಧ ತನಿಖೆಗಾಗಿ ಪ್ರತ್ಯೇಕ ಸೆನ್ ಠಾಣೆಗಳನ್ನು ತೆರೆಯಲಾಗಿದ್ದು, ದೂರು ಸ್ವೀಕರಿಸುವುದಕ್ಕಷ್ಟೇ ಬಹುತೇಕ ಠಾಣೆಗಳು ಸೀಮಿತವಾಗಿರುವ ಆರೋಪವಿದೆ.

ನಕಲಿ ಖಾತೆ– ತಡೆ ಹೇಗೆ

l ಖಾತೆಯಲ್ಲಿರುವ ಮಾಹಿತಿ ಪರಿಶೀಲಿಸಬೇಕು. ವಾಸಸ್ಥಳ, ಜನ್ಮ ಸ್ಥಳ, ಶಾಲಾ ಶಿಕ್ಷಣ ವಿವರ ಹಾಗೂ ಇತರ ಮಾಹಿತಿ.

l ಈಗಾಗಲೇ ಖಾತೆ ಹೊಂದಿರುವ ಸ್ನೇಹಿತ, ಹೊಸದೊಂದು ಖಾತೆಯಿಂದ ರಿಕ್ವೆಸ್ಟ್ ಕಳುಹಿಸಿದರೆ ಆತನನ್ನೇ ನೇರವಾಗಿ ವಿಚಾರಿಸಬೇಕು.

l ‘ಹಣ ಕಳುಹಿಸಿ’ ಎಂಬ ಸಂದೇಶ ಬಂದರೆ, ಖಾತೆದಾರರಿಗೆ ಕರೆ ಮಾಡಿ ಅಥವಾ ಖುದ್ದಾಗಿ ವಿಚಾರಿಸಿ ಮುಂದುವರಿಯುವುದು ಒಳ್ಳೆಯದು.

l ನಕಲಿ ಖಾತೆಗಳು ಕಂಡುಬಂದರೆ ‘ರಿಪೋರ್ಟ್’ ಮಾಡಲು ಅವಕಾಶವಿದೆ.

l ಫೇಸ್‌ಬುಕ್‌ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ‘ಪ್ರೈವೆಸಿ’ ಆಯ್ಕೆ ಬಳಸಿ, ಸ್ನೇಹಿತರಿಗಷ್ಟೇ ತಮ್ಮ ಖಾತೆ ವಿವರ ಕಾಣುವಂತೆ ಮಾಡಬಹುದು.

ಪ್ರಕರಣ ಭೇದಿಸಲು ಪೊಲೀಸರಿಗೆ ತರಬೇತಿ: ಕಮಲ್‌ ಪಂತ್‌

‘ಸಾಮಾಜಿಕ ಜಾಲತಾಣಗಳ ನಕಲಿ ಖಾತೆ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ತರಬೇತಿ ನೀಡಲಾಗಿದೆ. ನಕಲಿ ಖಾತೆಗಳು ಕಂಡುಬಂದರೆ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ದೂರು ನೀಡಬೇಕು’ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದರು.

‘ನಕಲಿ ಖಾತೆಗಳ ಬಗ್ಗೆ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಎಚ್ಚರಿಕೆ ವಹಿಸುವ ಮೂಲಕ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಪುರಾವೆ ಸಮೇತ ದೂರು ನೀಡಿದರೆ, ಮೊದಲಿಗೆ ನಕಲಿ ಖಾತೆ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು. ನಂತರ, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಲಾಗುವುದು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.