ADVERTISEMENT

ಕೊರೊನಾ: ಮೈ ಮರೆಯಬೇಡಿ ಎಂದು ಎಚ್ಚರಿಸಿ ಆಕರ್ಷಕ ಡೂಡಲ್ ಹಾಕಿದ ಗೂಗಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2021, 12:27 IST
Last Updated 16 ಅಕ್ಟೋಬರ್ 2021, 12:27 IST
ಗೂಗಲ್
ಗೂಗಲ್   

ಬೆಂಗಳೂರು: ಸದ್ಯ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಕೊರೊನಾದ ಆರ್ಭಟ ತಗ್ಗಿದ್ದರೂಆತಂಕ ಎಲ್ಲರಲ್ಲಿ ಮನೆ ಮಾಡಿದೆ.

ತಜ್ಞರು ಕೊರೊನಾ ಮೂರನೇ ಅಲೆಯ ಎಚ್ಚರಿಕೆ ನೀಡಿದ್ದರೂ ಜನಸಾಮಾನ್ಯರು ಮೈ ಮರೆತು ಓಡಾಡುತ್ತಿರುವುದು ಬಹುತೇಕ ಕಡೆ ಕಂಡು ಬರುತ್ತಿದೆ. ಸರ್ಕಾರ ಕೂಡ ಜನರಿಗೆ ಹುಶಾರಾಗಿರುವಂತೆ ತಿಳಿಸಿದೆ.

ಈ ನಿಟ್ಟಿನಲ್ಲಿ ಮೂರನೇ ಅಲೆ ಬರಬಹುದು ಎಂದು ಗೂಗಲ್ ಕೂಡ ಎಚ್ಚರಿಸಿದ್ದು, ಇದಕ್ಕಾಗಿ ಎಚ್ಚರಿಕೆಯಿಂದ ಇರುವಂತೆ ಹೇಳಿ ಆಕರ್ಷಕ ಡೂಡಲ್‌ನ್ನು ಇಂದು ಹಾಕಿದೆ.

ADVERTISEMENT

ಮಾಸ್ಕ್ ಧರಿಸಿ, ಲಸಿಕೆ ಪಡೆಯಿರಿ ಎಂದು ಹೇಳಿರುವ ಗೂಗಲ್ ಡೂಡಲ್‌ ಗಮನ ಸೆಳೆದಿದೆ. ಈ ಮೂಲಕ ಜನರಿಗೆ ಲಸಿಕೆ ಬಗ್ಗೆ ಗೂಗಲ್ ಕೂಡ ಜಾಗೃತಿ ಮೂಡಿಸುತ್ತಿದ್ದು, ಡೂಡಲ್ ಒತ್ತಿದರೆ ಭಾರತ ಸೇರಿದಂತೆ ಜಗತ್ತಿನಲ್ಲಿ ನಡೆಯುತ್ತಿರುವ ಸಂಪೂರ್ಣ ಕೊರೊನಾ ಲಸೀಕಾಕರಣದ ಬಗ್ಗೆ ಮಾಹಿತಿ ಸಿಗುತ್ತದೆ.

ಸದ್ಯ ಭಾರತದಲ್ಲಿ 97.1 ಕೋಟಿ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 27.8 ಕೋಟಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು ಸಂಪೂರ್ಣ ಲಸಿಕೆ ಶೇ 20.1 ರಷ್ಟಾಗಿದೆ ಎಂದು ಸರ್ಕಾರದ ಅಂಕಿ–ಅಂಶಗಳನ್ನು ಉಲ್ಲೇಖಿಸಿ ಗೂಗಲ್ ಮಾಹಿತಿ ನೀಡಿದೆ.

ಇನ್ನು ವಿಶ್ವದಲ್ಲಿ 664 ಕೋಟಿ ಮೊದಲ ಡೋಸ್ ನೀಡಲಾಗಿದೆ. 282 ಕೋಟಿ ಜನರಿಗೆ ಎರಡೂ ಡೋಸ್ ನೀಡಲಾಗಿದೆ. ಶೇ 36.2 ರಷ್ಟು ಜನ ವಿಶ್ವದಲ್ಲಿ ಸಂಪೂರ್ಣ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಗೂಗಲ್ ತಿಳಿಸಿದೆ.

ಭಾರತ ಸೇರಿದಂತೆ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಎಷ್ಟು ಪ್ರಮಾಣದ ಲಸಿಕೆ ಆಗಿದೆ. ಸಂಪೂರ್ಣ ಲಸಿಕೆ ಎಷ್ಟಾಗಿದೆ. ಎಲ್ಲೆಲ್ಲಿ ಲಸಿಕೆ ಲಭ್ಯವಿದೆ. ಲಸಿಕೆ ಹೇಗೆ ಪಡೆಯಬೇಕು. ಎಲ್ಲೆಲ್ಲಿ ಯಾವ ಯಾವ ಲಸಿಕೆ ಲಭ್ಯವಿದೆ, ಲಸಿಕೆ ಪಡೆಯಲು ಮಾಡಬೇಕಾದ್ದು ಏನು ಎಂಬುದನ್ನು ಸುಲಭವಾಗಿ ಜನರಿಗೆ ಸಿಗುವಂತೆ ಗೂಗಲ್ ಮಾಡಿದೆ.

ಡೂಡಲ್ ಆಕರ್ಷಕವಾಗಿ ಮೂಡಿ ಬಂದಿದ್ದು, ಕೊರೊನಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿರುವುದಲ್ಲದೇ ಲಸಿಕೆ ಪಡೆದು, ಮಾಸ್ಕ್‌ ಧರಿಸಿ ಅಮೂಲ್ಯ ಜನರ ಪ್ರಾಣ ಉಳಿಸಿ ಎಂದು ಗೂಗಲ್ ಮನವಿ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.