ADVERTISEMENT

ಸಿಸಿಐ ನೋಟಿಸ್‌ಗೆ ತಡೆ ನಿರಾಕರಣೆ

ಗೋಪ್ಯತೆ ನೀತಿ ತನಿಖೆ ಪ್ರಶ್ನಿಸಿ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ ಅರ್ಜಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 19:12 IST
Last Updated 23 ಜೂನ್ 2021, 19:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ಗೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ನೀಡಿರುವ ನೋಟಿಸ್‌ಗೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್‌ ನಿರಾಕರಿಸಿದೆ. ಪರಿಷ್ಕೃತ ಗೋಪ್ಯತೆ ನೀತಿಯ ಕುರಿತು ಮಾರ್ಚ್‌ನಲ್ಲಿ ಆದೇಶಿಸಲಾದ ತನಿಖೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಯನ್ನು ಒದಗಿಸುವಂತೆ ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್‌ಗೆ ಭಾರತದ ಸ್ಪರ್ಧಾ ಆಯೋಗ ಸೂಚಿಸಿತ್ತು.

‘ನೋಟಿಸ್‌ಗೆ ವಿಭಾಗೀಯ ನ್ಯಾಯಪೀಠ ತಡೆ ನೀಡಿಲ್ಲ. ಈ ಹಂತದಲ್ಲಿ ತಡೆ ನೀಡುವುದಿಲ್ಲ’ ಎಂದು ನ್ಯಾಯಪೀಠ ಮಂಗಳವಾರ ತಿಳಿಸಿದ್ದು, ಬುಧವಾರ ಇದರ ಪ್ರತಿ ಲಭ್ಯವಾಗಿದೆ. ನ್ಯಾಯಮೂರ್ತಿಗಳಾದ ಅನುಪ್ ಜೆ. ಭಂಭಾನಿ ಮತ್ತು ಜಸ್ಮೀತ್ ಸಿಂಗ್ ಅವರ ರಜಾದಿನದ ನ್ಯಾಯಪೀಠ ವಿಚಾರಣೆ ನಡೆಸಿತು. ತನಿಖೆಯ ಭಾಗವಾಗಿ, ಜೂನ್ 4ರಂದು ಹೊಸ ನೋಟಿಸ್ ನೀಡಿರುವುದು ಕಾನೂನಿಗೆ ಅನುಗುಣವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ಅವರು ತಿಳಿಸಿದ್ದಾರೆ ಎಂದು ಪೀಠ ಹೇಳಿತು. ‘ವರದಿಯನ್ನು ಸಿದ್ಧಪಡಿಸಿದ ನಂತರ ಅದನ್ನು ಸಿಸಿಐಗೆ ರವಾನಿಸಲಾಗುವುದು’ ಎಂದು ಸಿಐಐ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತಿಳಿಸಿದರು. ವಿಚಾರಣೆಯ ಮುಂದಿನ ದಿನಾಂಕದ ಮೊದಲು ವರದಿ ಪೂರ್ಣಗೊಳ್ಳುವುದಿಲ್ಲ ಎಂದೂ ತಿಳಿಸಿದ್ದಾರೆ.

ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ಪ್ರಕರಣದಲ್ಲಿ ಸಿಸಿಐ ಮಹಾನಿರ್ದೇಶಕರು ತನಿಖೆಯ ಭಾಗವಾಗಿಯೇ ಜೂನ್‌ನಲ್ಲಿ ನೋಟಿಸ್ ನೀಡಿದ್ದಾರೆ ಎಂದು ಕೋರ್ಟ್ ಹೇಳಿದೆ. ಈ ನೋಟಿಸ್ ಪ್ರಶ್ನಿಸಿ ಅರ್ಜಿದಾರರು ತಡೆ ನೀಡುವಂತೆ ಕೋರಿದ್ದರು. ವಾಟ್ಸ್‌ಅಪ್ ಮತ್ತು ಫೇಸ್‌ಬುಕ್‌ಗಳಿಗೆ ಕ್ರಮವಾಗಿ ಜೂನ್ 4 ಮತ್ತು ಜೂನ್ 8 ರಂದು ನೋಟಿಸ್ ನೀಡಲಾಗಿತ್ತು.

ADVERTISEMENT

ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಸಲ್ಲಿಸಿರುವ ಮೇಲ್ಮನವಿಯನ್ನು ಜುಲೈ 9ರಂದು ವಿಭಾಗೀಯ ಪೀಠದಲ್ಲಿ ಪರಿಗಣಿಸುವಂತೆ ನಿರ್ದೇಶಿಸಿದ್ದೇವೆ ಎಂದು ನ್ಯಾಯಮೂರ್ತಿಗಳು ಹೇಳಿದರು.

‘ಆತುರದ ಕ್ರಮಕ್ಕೆ ವಿರೋಧ’

‘ಸಮಸ್ಯೆ ಎಂದರೆ, ವಾಟ್ಸ್‌ಆ್ಯಪ್‌ನವರು ಜೂನ್ 4ರಂದು ಹೊಸ ನೋಟಿಸ್ ಸ್ವೀಕರಿಸಿದ್ದಾರೆ ಮತ್ತು ಪ್ರತಿಕ್ರಿಯಿಸಲು ಅವರಿಗೆ ನೀಡಿರುವ ಕೊನೆಯ ದಿನಾಂಕ ಜೂನ್ 21’ ಎಂದು ವಾಟ್ಸ್‌ಆ್ಯಪ್ ಪರ ಹಾಜರಿದ್ದ ವಕೀಲ ಹರೀಶ್ ಸಾಳ್ವೆ ಅವರು ಹೇಳಿದ್ದಾರೆ.

ಗೋಪ್ಯತೆ ನೀತಿ ಪ್ರಶ್ನಿಸಿರುವ ಹಲವು ಅರ್ಜಿಗಳು ಈಗಾಗಲೇ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿವೆ. ಸರ್ಕಾರ ಕೂಡ ಇದನ್ನು ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.

‘ಇಲ್ಲಿ ಪ್ರಶ್ನೆ ಇರುವುದು ಸ್ವಾಮ್ಯಕ್ಕೆ ಸಂಬಂಧಪಟ್ಟಂತೆ. ಇದು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನ ಪರಿಶೀಲನೆಯಲ್ಲಿದೆ’ ಎಂದು ಫೇಸ್‌ಬುಕ್‌ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.