ADVERTISEMENT

ಸಂಚಾರಿ ವಿಜಯ್‌ ನಿಧನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಹಸ್ರಾರು ಮಂದಿಯ ಕಂಬನಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 3:28 IST
Last Updated 15 ಜೂನ್ 2021, 3:28 IST
ಸಂಚಾರಿ ವಿಜಯ್‌
ಸಂಚಾರಿ ವಿಜಯ್‌   

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ನಿಧನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಹಸ್ರಾರು ಮಂದಿ ಕಂಬನಿ ಮಿಡಿದಿದ್ದಾರೆ.

ಅಭಿಮಾನಿಗಳು, ಗಣ್ಯರು, ಚಿತ್ರರಂಗದವರು ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ಸಂತಾಪ ಸೂಚಿಸಿದ್ದಾರೆ.

‘ಯಾಕೆ ಒಳ್ಳೆಯವರಿಗೇ ಹೀಗಾಗುತ್ತದೆ. ಕೊನೆಯ ಕ್ಷಣದ ವರೆಗೂ, ವೈದ್ಯರು ಘೋಷಣೆ ಮಾಡುವ ವರೆಗೂ ಭರವಸೆಯಿಂದ ಇದ್ದೆ. ನನ್ನ ಸ್ನೇಹಿತನ ಬಗ್ಗೆ ಹೀಗೆ ಬರೆಯಬೇಕಾಗಬಹುದು ಅಂದುಕೊಂಡಿರಲಿಲ್ಲ. ಇನ್ನೂ ಆಘಾತದಲ್ಲಿದ್ದೇನೆ’ ಎಂದು ನಟಿ ಶ್ವೇತಾ ಚಂಗಪ್ಪ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

‘ರಾಷ್ಟ್ರ ಪ್ರಶಸ್ತಿ ರಾಜ್ಯ ಪ್ರಶಸ್ತಿ ಮೀರಿ ನೀವು ಜನರ ಮನಸು ಗೆದ್ದಿದ್ದೀರಿ. ನಿಮಗೆ ಸಾಟಿ ಇಲ್ಲ. ಓo ಶಾಂತಿ’ ಎಂದು ನಟಿ ಪ್ರಣೀತಾ ಸುಭಾಷ್ ಫೇಸ್‌ಬುಕ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

‘ಅದ್ಭುತ ನಟ, ಸಹೃದಯಿ, ಪರೋಪಕಾರಿ, ಎಲ್ಲದಕ್ಕಿಂತ ಮಿಗಿಲಾಗಿ ನನ್ನ ಆತ್ಮೀಯ ಗೆಳೆಯ ಸಂಚಾರಿ ವಿಜಯ್ ಅವರು ಇಂದು ಇಹಲೋಕವನ್ನ ತ್ಯಜಿಸಿದ್ದಾರೆ. ದೇವರು ನಿಮ್ಮ ಆತ್ಮಕ್ಕೆ ಶಾಂತಿ ಕೊಡಲಿ’ ಎಂದು ನಿರಂಜನ್ ದೇಶಪಾಂಡೆ ಫೇಸ್‌ಬುಕ್‌ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಸೋಮವಾರ ಸಂಜೆ ತಿಳಿಸಿದ್ದರು. ವಿಜಯ್ ಅವರು ಬದುಕುಳಿಯುವುದು ಕಷ್ಟ ಎಂಬುದು ಖಚಿತವಾಗುತ್ತಿದ್ದಂತೆಯೇ ಅನೇಕ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಸಂತಾಪ, ಬೇಸರದ ಸಂದೇಶಗಳ ಜತೆಗೆ ವಿಜಯ್ ಬದುಕಿ ಬರುವಂತಾಗಲಿ ಎಂಬ ಹಾರೈಕೆಯ ಸಂದೇಶಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು.

ಈ ಮಧ್ಯೆ, ಲಕ್ಷಾಂತರ ಮಂದಿ ಹಾಕಿರುವ ಸಂತಾಪದ ಟ್ವೀಟ್‌ಗಳು, ಸಂದೇಶಗಳನ್ನು ಡಿಲೀಟ್ ಮಾಡುವಂತಾಗಲಿ, ಪವಾಡ ನಡೆದು ಅವರು ಮರಳಿ ಬರುವಂತಾಗಲಿ ಎಂದೂ ಹಲವರು ತಡರಾತ್ರಿಯವರೆಗೂ ನಿರೀಕ್ಷಿಸುತ್ತಲೇ ಇದ್ದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಟ್ವೀಟ್ ಮಾಡಿದ್ದರು.

‘ಸಂಚಾರಿ ವಿಜಯ್ ಅವರನ್ನು ನೋಡಲು ತೆರಳುತ್ತಿರುವೆ, ಆರ್‌ಐಪಿ’ ಎಂದು ನಟ ಪುನೀತ್ ರಾಜ್‌ಕುಮಾರ್ ಟ್ವೀಟ್ ಮಾಡಿದ್ದರು.

‘ಸಂಚಾರಿ ವಿಜಯ್ ಅವರ ನಿಧನದಿಂದ ಬಹಳ ಬೇಸರವಾಗಿದೆ. ಲಾಕ್‌ಡೌನ್ ವೇಳೆ ಹಲವು ಬಾರಿ ಅವರನ್ನು ಭೇಟಿಯಾಗಿದ್ದೆ. ಅವರ ಮುಂದಿನ ಸಿನಿಮಾದ ಬಗ್ಗೆ ಎಲ್ಲರೂ ಕುತೂಹಲಿಗಳಾಗಿದ್ದರು’ ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದರು.

‘ಸರಳ, ಸಜ್ಜನಿಕೆಯ ವಿಜಯ್‌ ಅವರು ಕೋವಿಡ್‌ ಪರಿಹಾರ ಕಾರ್ಯಗಳಲ್ಲಿಯೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು ಎಂದು ಅವರ ಸ್ನೇಹಿತರು ಹೇಳಿದ್ದಾರೆ. ಇದು ಅವರ ಜನಪರ ನಿಲುವಿಗೆ ಹಿಡಿದ ಕನ್ನಡಿ. ವಿಜಯ್‌ ಸಾವಿನ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಿಲಿ. ಸಂಚಾರಿ ವಿಜಯ್‌ ಅವರ ಕುಟುಂಬಸ್ಥರ ದುಃಖ ನಮ್ಮದೂ ಆಗಿದೆ’ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

‘ಕೆಲವು ವರ್ಷಗಳ ಹಿಂದೆ ಕೊಡಗು ಪ್ರವಾಹದ ಸಂದರ್ಭದಲ್ಲಿ, ಸಂಚಾರಿ ವಿಜಯ್ ಕೊಡಗಿಗೆ ಹೋಗಿ ನಮ್ಮ ಮನೆಯಿಲ್ಲದ ಕನ್ನಡಿಗರಿಗೆ ಸೇವೆ ಸಲ್ಲಿಸಿದ್ದರು. ನಮ್ಮ ಜನರ ಜೀವನವನ್ನು ಉತ್ತಮಗೊಳಿಸಲು ವಿಜಯ್ ತಮ್ಮ ಚಲನಚಿತ್ರ ವೇದಿಕೆಯನ್ನು ಬಳಸಿದರು. ಅವರು ನಿಜವಾದ ಕಲಾವಿದರಾಗಿದ್ದರು. ಕಲೆ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಕರ್ನಾಟಕ ಯಾವಾಗಲೂ ನೆನಪಿಸಿಕೊಳ್ಳುತ್ತದೆ’ ಎಂದು ನಟ ಚೇತನ್‌ ಕುಮಾರ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಹಲವಾರು ಗಣ್ಯರು, ಚಿತ್ರ ತಾರೆಯರು, ಅಭಿಮಾನಿಗಳು ವಿಜಯ್ ನಿಧನಕ್ಕೆ ಸಂತಾಪ ಸೂಚಿಸಿ ಸಂದೇಶಗಳನ್ನು ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.