ADVERTISEMENT

ಹಿಂದೂ ದೇವರ ಚಿತ್ರವುಳ್ಳ ಒಳಉಡುಪು, ಮ್ಯಾಟ್‌ ಮಾರಾಟ ಸ್ಥಗಿತಗೊಳಿಸಿದ ಅಮೆಜಾನ್

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ | #BoycottAmazon ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್

ರಾಯಿಟರ್ಸ್
Published 10 ನವೆಂಬರ್ 2020, 16:07 IST
Last Updated 10 ನವೆಂಬರ್ 2020, 16:07 IST
ರಾಯಿಟರ್ಸ್‌ ಚಿತ್ರ
ರಾಯಿಟರ್ಸ್‌ ಚಿತ್ರ   

ನವದೆಹಲಿ: ಹಿಂದೂ ದೇವರ ಚಿತ್ರವುಳ್ಳ ಒಳಉಡುಪು, ಡೋರ್‌ಮ್ಯಾಟ್‌ ಮಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ‘ಅಮೆಜಾನ್‌ ಡಾಡ್‌ ಕಾಮ್ ಇಂಕ್’ ಮಂಗಳವಾರ ತಿಳಿಸಿದೆ. ವಿದೇಶಗಳಲ್ಲಿ ಅಮೆಜಾನ್‌ ಮೂಲಕ ಇಂತಹ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದ್ದು, ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಟ್ವಿಟರ್‌ನಲ್ಲಿ #BoycottAmazon ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್ ಆಗಿತ್ತು. ಹಿಂದೂಗಳು ಆರಾಧಿಸುವ ದೇವ ಗಣೇಶ ಮತ್ತು ಇತರ ದೇವತೆಗಳ ಚಿತ್ರವುಳ್ಳ ಒಳಉಡುಪು, ಡೋರ್‌ಮ್ಯಾಟ್‌ಗಳು ಅಮೆಜಾನ್‌ನಲ್ಲಿ ಮಾರಾಟವಾಗುತ್ತಿರುವುದನ್ನು ಸ್ಕ್ರೀನ್‌ಶಾಟ್‌ ಸಮೇತ ಹಂಚಿಕೊಂಡಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಅಮೆಜಾನ್, ‘ಪ್ರಶ್ನಾರ್ಹ ಉತ್ಪನ್ನಗಳನ್ನು ವಾಪಸ್ ಪಡೆಯುತ್ತಿದ್ದೇವೆ’ ಎಂದು ಹೇಳಿದೆ. ‘ಎಲ್ಲ ಮಾರಾಟಗಾರರು ಮಾರಾಟ ಮಾರ್ಗಸೂಚಿಯನ್ನು ಪಾಲಿಸಬೇಕು. ಇದನ್ನು ಪಾಲಿಸದವರ ವಿರುದ್ಧ ಖಾತೆ ತೆರವುಗೊಳಿಸುವುದೂ ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳಿದೆ.

ADVERTISEMENT

ಅಮೆಜಾನ್‌ನ ಉತ್ಪನ್ನಗಳ ಪಟ್ಟಿಯಲ್ಲಿರುವ ಅನೇಕ ವಸ್ತುಗಳಿಗೆ ಮಾರಾಟಗಾರರೇ ನಿಯಂತ್ರಕರಾಗಿರುತ್ತಾರೆ. ಇವು ಕಂಪನಿಯ ನೇರ ನಿಯಂತ್ರಣದಲ್ಲಿ ಇರುವುದಿಲ್ಲ ಎಂದೂ ಕಂಪನಿಯು ಸ್ಪಷ್ಟಪಡಿಸಿದೆ.

2017ರಲ್ಲಿ ಅಮೆಜಾನ್‌ನ ಕೆನಡಾ ವೆಬ್‌ಸೈಟ್‌ನಲ್ಲಿ ತ್ರಿವರ್ಣಧ್ವಜ ಮುದ್ರಿತ ನೆಲಹಾಸು ಮಾರಾಟ ಮಾಡುತ್ತಿರುವ ಬಗ್ಗೆ ವರದಿಯಾಗಿತ್ತು. ಇದನ್ನು ಸ್ಥಗಿತಗೊಳಿಸದಿದ್ದರೆ ಭಾರತದಲ್ಲಿರುವ ಅಮೆಜಾನ್‌ ಉದ್ಯೋಗಿಗಳ ವೀಸಾ ರದ್ದುಪಡಿಸುವುದಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಂಪನಿಗೆ ಎಚ್ಚರಿಕೆ ನೀಡಿತ್ತು.

2019ರಲ್ಲಿ ಅಮೆಜಾನ್‌ನ ಅಮೆರಿಕದ ವೆಬ್‌ಸೈಟ್‌ನಲ್ಲಿ ಟಾಯ್ಲೆಟ್ ಸೀಟ್ ಕವರ್‌, ಡೋರ್‌ಮ್ಯಾಟ್‌ಗಳ ಮೇಲೆ ಶಿವ, ಗಣಪತಿ ಸೇರಿದಂತೆ ಹಲವು ಹಿಂದೂ ದೇವತೆಗಳ ಚಿತ್ರವಿರುವ ಉತ್ಪನ್ನಗಳು ಮಾರಾಟವಾಗುತ್ತಿರುವುದು ಕಂಡುಬಂದಿತ್ತು. ಆಗಲೂ #BoycottAmazon ಹ್ಯಾಷ್‌ಟ್ಯಾಗ್‌ನಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.