ADVERTISEMENT

ವಂಚನೆಗಿವೆ ‌ನಾನಾ ಮುಖಗಳು: ಇರಲಿ ಎಚ್ಚರ!

ವಿಶ್ವನಾಥ ಎಸ್.
Published 19 ಮೇ 2021, 5:37 IST
Last Updated 19 ಮೇ 2021, 5:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆನ್‌ಲೈನ್‌ನಲ್ಲಿ ಜನರು ಮೋಸ ಹೋಗುತ್ತಿರುವ ಪ್ರಕರಣಗಳು ಈಚೆಗೆ ಹೆಚ್ಚು ವರದಿಯಾಗುತ್ತಿವೆ. ಭಾರಿ ಕ್ಯಾಷ್‌ಬ್ಯಾಕ್‌ ಕೊಡುಗೆ, ಬಂಪರ್‌ ಬಹುಮಾನ, ಕೆಲಸ ಕೊಡಿಸುವ ಆಮಿಷ, ಸಿಮ್‌ ಕಾರ್ಡ್‌ ನಿಷ್ಕ್ರಿಯ ಆಗಲಿದೆ... ಹೀಗೆ ವಂಚನೆಯ ದಾರಿಗಳನ್ನು ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ! ವಂಚನೆಗೆ ಒಳಗಾಗದೇ ಇರುವಂತೆ ಬ್ಯಾಂಕುಗಳು, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ, ಆರ್‌ಬಿಐ, ಪೊಲೀಸ್‌ ಇಲಾಖೆ ಎಲ್ಲರೂ ಆಗಾಗ್ಗೆ ಎಚ್ಚರಿಕೆ ಸಂದೇಶ, ಜಾಹೀರಾತು ನೀಡುತ್ತಲೇ ಇರುತ್ತವೆ. ಆದರೆ, ಕ್ಷಣಕಾಲ ಮೈಮರೆತು ಅಥವಾ ಧಾವಂತದಲ್ಲಿ ನಾವು ವಂಚಕರ ಮೋಸದ ಜಾಲಕ್ಕೆ ಸಿಲುಕಿಬಿಡುತ್ತೇವೆ.

ಕೆಲಸ ಬೇಕೆ:? ನಿಮ್ಮ ರೆಸ್ಯುಮೆಯನ್ನು ಅಪ್‌ಲೋಡ್‌ ಮಾಡಿ ಎಂದು ಸಾಕಷ್ಟು ಮೇಲ್‌ಗಳು ಬರುತ್ತಿರುತ್ತವೆ. ಕೆಲಸ ಇಲ್ಲದಿರುವ ಅದೆಷ್ಟೋ ಜನರು ಹೀಗೆ ಬರುವ ಮೇಲ್‌ಗಳಲ್ಲಿ ಇರುವ ಜಾಲತಾಣಕ್ಕೆ ತಮ್ಮ ರೆಸ್ಯುಮೆ ಅಪ್‌ಲೋಡ್‌ ಮಾಡುತ್ತಾರೆ. ಆಗ ವಂಚಕರು ಅರ್ಜಿದಾರರಿಗೆ ಕರೆ ಮಾಡಿ ಪ್ರತಿಷ್ಠಿತ ಕಂಪನಿಯೊಂದರ ಹೆಸರು ಹೇಳಿ ಕೆಲಸದ ಆಮಿಷ ತೋರಿಸುತ್ತಾರೆ. ಅರ್ಜಿ ಸಲ್ಲಿಸಲು, ಸಂದರ್ಶನಕ್ಕೆ ಎಂಬಿತ್ಯಾದಿ ಕಾರಣಗಳಿಗೆ ಶುಲ್ಕ ತುಂಬುವಂತೆ ಹೇಳುತ್ತಾರೆ. ಈ ರೀತಿಯ ಪ್ರಕರಣವೊಂದರಲ್ಲಿ ಬೆಂಗಳೂರಿನ ಹೊಸಕೆರೆಹಳ್ಳಿಯ ನಿವಾಸಿಯೊಬ್ಬರು ₹ 7 ಲಕ್ಷ ಕಳೆದುಕೊಂಡಿದ್ದಾರೆ.

ಮೊಬೈಲ್ ನಂಬರ್‌ ನಿಷ್ಕ್ರಿಯ: ನಿಮ್ಮ ಮೊಬೈಲ್‌ ನಂಬರ್‌ ಶೀಘ್ರದಲ್ಲೇ ನಿಷ್ಕ್ರಿಯ ಆಗಲಿದೆ. ಹಾಗಾಗದಂತೆ ಮಾಡಲು ಈ ನಂಬರ್‌ಗೆ ಕರೆ ಮಾಡಿ ಎನ್ನುವ ಸಂದೇಶವು ಹಲವು ಜನರಿಗೆ ಪದೇ ಪದೇ ಬರಲಾರಂಭಿಸಿದೆ. ಮೊಬೈಲ್ ನಂಬರ್‌ ನಿಷ್ಕ್ರಿಯ ಆಗಲಿದೆ ಎಂದರೆ ಯಾರಾದರೂ ತಕ್ಷಣಕ್ಕೇ ಗಾಬರಿಗೆ ಒಳಗಾಗುತ್ತಾರೆ. ಸ್ನೇಹಿತರೊಬ್ಬರಿಗೂ ಆಗಿದ್ದು ಹೀಗೆಯೇ. ಮೆಸೇಜ್‌ ಬಂತು.ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದರೆ, ಕರೆ ಸ್ವೀಕರಿಸಿದ ವ್ಯಕ್ತಿ, ಬಿಎಸ್‌ಎನ್‌ಎಲ್‌ ಪ್ರತಿನಿಧಿ ಎಂದು ಹೇಳಿದ. ‘ಈಗ ನಿಮ್ಮ ನಂಬರ್‌ಗೆ ತಕ್ಷಣವೇ ₹ 49 ರಿಚಾರ್ಜ್‌ ಮಾಡಿದರೆ ಮಾತ್ರವೇ ನಂಬರ್‌ ಉಳಿಯಲಿದೆ. ನಾನು ರಿಚಾರ್ಜ್‌ ಮಾಡುತ್ತೇನೆ. ನೀವು ಆ ಹಣವನ್ನು ನನಗೆ ಪಾವತಿಸಿ’ ಎಂದ. ‘ನಾನೇ ರಿಚಾರ್ಜ್‌ ಅಂಗಡಿಯಲ್ಲಿ ಮಾಡಿಸುತ್ತೇನೆ ಎಂದಿದ್ದಕ್ಕೆ, ಹಾಗಾಗುವುದಿಲ್ಲ. ಅವರು ಇನ್ನೇನೋ ರೀಚಾರ್ಜ್‌ ಮಾಡಿಬಿಡುತ್ತಾರೆ. ನಿಮಗೇ ನಷ್ಟ. ನಂಬರ್‌ ನಿಷ್ಕ್ರಿಯ ಆದರೆ ಮತ್ತೆ ನಾವು ಜವಾಬ್ದಾರರಲ್ಲ’ ಎಂದು ಆತ ಎಚ್ಚರಿಸಿದ. ಅದಕ್ಕವರು, ‘ಅಷ್ಟಕ್ಕೂ ಇದು ಸೆಕೆಂಡರಿ ನಂಬರ್‌. ಹೋದರೆ ಹೋಗಲಿ ಬಿಡಿ’ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಕಾಲ್‌ ಕಟ್‌ ಮಾಡಿದರು. ಅವರ ನಂಬರ್‌ ಈಗಲೂ ಚಾಲ್ತಿಯಲ್ಲೇ ಇದೆ!

ADVERTISEMENT

ಉಡುಗೊರೆಯ ಆಮಿಷ: ಇ–ಕಾಮರ್ಸ್‌ ತಾಣಗಳಲ್ಲಿ ವಹಿವಾಟು ನಡೆಸುವವರಿಗೆ ಮೋಸ ಮಾಡಲು ವಂಚಕರು ಸದಾ ಹವಣಿಸುತ್ತಲೇ ಇರುತ್ತಾರೆ. ಆನ್‌ಲೈನ್ ಖರೀದಿಗೆ ಉಡುಗೊರೆ ನೀಡುವುದಾಗಿ ಕರೆ ಮಾಡುವುದು ಈಚೆಗೆ ಸಾಮಾನ್ಯವಾಗಿಬಿಟ್ಟಿದೆ. ಈಗಂತೂ ವಾಟ್ಸ್‌ಆ್ಯಪ್‌ ಪೇ, ಗೂಗಲ್‌ ಪೇ, ಪೇಟಿಎಂ ಇರುವುದರಿಂದ ಮೋಸ ಮಾಡಲು ವಂಚಕರು ಇದನ್ನೇ ಅಸ್ತ್ರವಾಗಿಸಿಕೊಳ್ಳುತ್ತಿದ್ದಾರೆ.

ಈ ಅಂಶಗಳು ಗಮನದಲ್ಲಿ ಇರಲಿ

ಮೊಬೈಲ್‌ ನಂಬರ್‌ ನಿಷ್ಕ್ರಿಯ ಆಗುವುದಿದ್ದರೆ, ಆ ಕುರಿತು ಮೊಬೈಲ್‌ಗೆ ಸಂದೇಶ ಬರುತ್ತದೆ. ಸಂಬಂಧಪಟ್ಟ ಕಂಪನಿಯ ಗ್ರಾಹಕ ಸೇವಾ ಕೇಂದ್ರದಿಂದ ಕರೆ ಬರುತ್ತದೆ. ಆದರೆ, ಯಾವುದೇ ಕಾರಣಕ್ಕೂ ಇಂತಹ ನಂಬರ್‌ಗೆ ಕರೆ ಮಾಡಿ ಎಂದು ಮೆಸೇಜ್‌ನಲ್ಲಿ ಇರುವುದಿಲ್ಲ. ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿಯೂ ವೈಯಕ್ತಿಕ ಮಾಹಿತಿ ಭರ್ತಿ ಮಾಡಲು ಹೇಳುವುದಿಲ್ಲ. ಹೆಚ್ಚೆಂದರೆ, ಇಂತಿಷ್ಟು ರೂಪಾಯಿಯ ರೀಚಾರ್ಜ್‌ ಮಾಡಿಸಿ, ನಿಮ್ಮ ಹತ್ತಿರದ ಮಳಿಗೆಯಲ್ಲಿ ವೈಯಕ್ತಿಕ ಮಾಹಿತಿಯ ಜೆರಾಕ್ಸ್‌ ಪ್ರತಿ ನೀಡಿ ಎಂದಷ್ಟೇ ಹೇಳುತ್ತಾರೆ.

ಕೆಲಸ ಇಲ್ಲ ಎನ್ನುವ ಕಾರಣಕ್ಕೆ ಕಂಡ, ಕಂಡ ಜಾಲತಾಣದಲ್ಲಿ ರೆಸ್ಯುಮ್ಅಪ್‌ಲೋಡ್‌ ಮಾಡದಿರುವುದು ಒಳಿತು. ವಿಶ್ವಾಸಕ್ಕೆ ಪಾತ್ರವಾಗಿರುವ, ವೃತ್ತಿಪರ ಜಾಲತಾಣ ಆಗಿರುವ ಲಿಂಕ್ಡ್‌ಇನ್‌ನ 50 ಕೋಟಿಗೂ ಅಧಿಕ ಬಳಕೆದಾರರ ವೈಯಕ್ತಿಕ ಮಾಹಿತಿಗಳು ಸೋರಿಕೆ ಆಗಿರುವುದನ್ನು ಸೈಬರ್‌ನ್ಯೂಸ್‌ ಈಚೆಗಷ್ಟೇ ವರದಿ ಮಾಡಿತ್ತು. ಹೀಗಿರುವಾಗ, ಜನಪ್ರಿಯ ಅಲ್ಲದೇ ಇರುವ ಜಾಲತಾಣಗಳಿಗೆ ರೆಸ್ಯುಮೆ ಅಪ್‌ಲೋಡ್‌ ಮಾಡುವುದು ಸರಿಯಲ್ಲ. ಇದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಷ್ಟೇ ಅಲ್ಲದೆ, ಹಣ ಕಳೆದುಕೊಳ್ಳುವ, ಬ್ಲಾಕ್‌ಮೇಲ್‌ಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ.

ಇ–ಕಾಮರ್ಸ್‌ ಕಂಪನಿಗಳು ಕೊಡುಗೆ ನೀಡುತ್ತವೆ ಎಂದಾಕ್ಷಣ ಮಾರುಹೋಗದಿರಿ. ಒಂದೊಮ್ಮೆ ಉಡುಗೊರೆ ನೀಡುವುದು ನಿಜವೇ ಆಗಿದ್ದರೂ ಉಡುಗೊರೆ ಕೈಸೇರಿ, ಅದನ್ನು ತೆಗೆದು ನೋಡಿದ ಬಳಿಕವಷ್ಟೇ ಶುಲ್ಕ ಪಾವತಿಸುವುದಾಗಿ ಹೇಳಿ. ಪ್ರತಿಷ್ಠಿತ ಇ–ಕಾಮರ್ಸ್‌ ಕಂಪನಿಗಳ ಹೆಸರಿನಲ್ಲಿ ಈ ರೀತಿ ವಂಚನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಹಾಗಾಗಿ, ಪುಕ್ಕಟೆಯಾಗಿ ಸಿಗುತ್ತದೆ ಎನ್ನುವ ಕಾರಣಕ್ಕೆ ತಕ್ಷಣವೇ ಯಾವುದೇ ನಿರ್ಧಾರಕ್ಕೆ ಬರಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.