ADVERTISEMENT

ಎಂಜಿನಿಯರ್‌ಗಳ ದಿನ: ಮೇಧಾವಿ ವಿಶ್ವೇಶ್ವರಯ್ಯ ಸ್ಮರಿಸುವ ಹೊತ್ತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಸೆಪ್ಟೆಂಬರ್ 2021, 9:17 IST
Last Updated 15 ಸೆಪ್ಟೆಂಬರ್ 2021, 9:17 IST
ಮೋಕ್ಷಗುಂಡಂ ವಿಶ್ವೇಶ್ವರಯ್ಯ
ಮೋಕ್ಷಗುಂಡಂ ವಿಶ್ವೇಶ್ವರಯ್ಯ   

ಇಂದಿನ ಆಧುನಿಕ ಜಗತ್ತಿನ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಕೊಡುಗೆ ಅಪಾರ.ಚಕ್ರಗಳ ತಯಾರಿಯಿಂದ ಹಿಡಿದು, ಆಧುನಿಕ ವಿಜ್ಞಾನಕ್ಕೆ ಕನ್ನಡಿ ಹಿಡಿದ ರಾಕೆಟ್‌ಗಳ ತಯಾರಿವರೆಗೆ ಎಂಜಿನಿಯರ್‌ಗಳ ಶ್ರಮ ಎದ್ದು ಕಾಣುತ್ತದೆ. ಎಂಜಿನಿಯರ್‌ಗಳ ಸಂಶೋಧನೆಗಳೆಲ್ಲವೂ ನಾಗರಿಕತೆ ಮತ್ತು ವಿಕಾಸದ ಸಂಕೇತಗಳು.

ದೇಶದ ಪ್ರಗತಿಗೆ ಮಹತ್ತರ ಕೊಡುಗೆ ನೀಡುವ ಎಂಜಿನಿಯರ್‌ಗಳನ್ನು ಸ್ಮರಿಸಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ಎಂಜಿನಿಯರ್‌ಗಳ ದಿನ ಆಚರಿಸಲಾಗುತ್ತದೆ. ತಮ್ಮ ಸೃಜನಶೀಲತೆ, ಬುದ್ಧಿವಂತಿಕೆಯಿಂದಲೇ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದ ಸರ್‌ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನದಂದು (ಸೆಪ್ಟೆಂಬರ್‌ 15) ಭಾರತದಲ್ಲಿ ಪ್ರತಿ ವರ್ಷ ಎಂಜಿನಿಯರ್‌ಗಳ ದಿನ ಆಚರಿಸಲಾಗುತ್ತದೆ.

ಈ ದಿನ ವಿಶೇಷವಾಗಿ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ಸ್ಮರಿಸುವುದು ಹಾಗೂ ಎಂಜಿನಿಯರ್‌ಗಳ ಕೊಡುಗೆಯ ಬಗ್ಗೆ ಸಮಾಜಕ್ಕೆ ತಿಳಿಸಿಕೊಡುವ ಕಾರ್ಯಕ್ರಮಗಳು ದೇಶದ ತುಂಬ ನಡೆಯುತ್ತವೆ.

ADVERTISEMENT

ಜಗತ್ತು ಕಂಡ ಶ್ರೇಷ್ಟ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1861 ಸೆಪ್ಟೆಂಬರ್‌ 15ರಂದು ವಿಶ್ವೇಶ್ವರಯ್ಯನವರು ಜನಿಸಿದರು. ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು,1881ರಲ್ಲಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್‌ ಎಂಜಿನಿಯರಿಂಗ್ ಪದವಿ ಪಡೆದರು. 23ನೇ ವಯಸ್ಸಿನಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ ಆಗಿ ವೃತ್ತಿ ಜೀವನ ಆರಂಭಿಸಿದರು.

ಕೆಲ ವರ್ಷ ಹೈದರಾಬಾದ್ ದಿವಾನರಿಗೆ ಹಾಗೂ ಒಡಿಶಾದಲ್ಲಿ ವಿಶ್ವೇಶ್ವರಯ್ಯನವರು ಕೆಲಸ ಮಾಡಿದರು.

1909 ರಲ್ಲಿ ಮೈಸೂರು ರಾಜ್ಯದ ಮುಖ್ಯ ಎಂಜಿನಿಯರ್‌ ಆಗಿ ಕೆಲಸ ಪ್ರಾರಂಭಿಸಿದರು.ನಂತರ 1912 ರಲ್ಲಿ ಮೈಸೂರು ರಾಜ್ಯದ ದಿವಾನರಾದರು. ರೈತರಿಗಾಗಿ ಆರಂಭಿಸಿದ ಕೆಆರ್‌ಎಸ್ ಡ್ಯಾಂನಿಂದ (ಕೃಷ್ಣರಾಜ ಸಾಗರ ಜಲಾಶಯ) ಹಿಡಿದು ಹಲವು ಜನೋಪಯೋಗಿ ಯೋಜನೆಗಳನ್ನು ಮೈಸೂರು ರಾಜ್ಯದಲ್ಲಿ ಆರಂಭಿಸಿ ಇಂದಿನ ಆಧುನಿಕ ಕರ್ನಾಟಕದ ಅಭಿವೃದ್ಧಿಗೆ ನಾಂದಿ ಹಾಡಿದರು.

1962 ರಲ್ಲಿ ವಿಶ್ವೇಶ್ವರಯ್ಯನವರು ನಿಧನರಾದರು.ಸಿವಿಲ್‌, ಎಲೆಕ್ಟ್ರಿಕಲ್, ಮೆಕಾನಿಕಲ್, ತಾಂತ್ರಿಕ ಸೇರಿದಂತೆ ಹಲವು ಎಂಜಿನಿಯರಿಂಗ್ ವಿಷಯಗಳಲ್ಲಿ ಪ್ರತಿ ವರ್ಷ ಭಾರತದಲ್ಲಿ ಸುಮಾರು 20 ಲಕ್ಷ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳೆಲ್ಲರೂ ಸಂಶೋಧನೆಗಳನ್ನು ಮಾಡಿ ದೇಶದ ಅಭಿವೃದ್ಧಿಗೆ ನೆರವಾಗಬೇಕು ಎಂಬ ಉದ್ದೇಶದಿಂದ 1968ರಲ್ಲಿ ಎಂಜಿನಿಯರ್‌ಗಳ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.


ವಿಶ್ವೇಶ್ವರಯ್ಯನವರ ಸಾಧನೆಗಳು

* ನೀರಿನ ಪ್ರವಾಹವನ್ನು ತಡೆದುಕೊಳ್ಳುವುದರ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ ಸಾಮರ್ಥ್ಯವಿರುವ ಅಣೆಕಟ್ಟುಗಳ ನಿರ್ಮಾಣ ಕಾರ್ಯದಲ್ಲಿ ದೇಶದಾದ್ಯಂತ ಅವರು ವಿಶಿಷ್ಟ ಛಾಪು ಮೂಡಿಸಿದರು. ಇಂದಿಗೂ ಅವರು ರೂಪಿಸಿದ ಹಲವು ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.

* ಅಣೆಕಟ್ಟುಗಳಲ್ಲಿ ಸ್ವಯಂಚಾಲಿತ ಬಾಗಿಲುಗಳ ನಿರ್ಮಾಣಕ್ಕೆ ಹಕ್ಕುಸ್ವಾಮ್ಯ ಪಡೆದರು.

* ಕಾವೇರಿ ನದಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣವನ್ನು 1911 ರಲ್ಲಿ ಆರಂಭಿಸಲಾಯಿತು. ಇದು 1932ರಂದು ಲೋಕಾಪರ್ಣೆಗೊಂಡಿತು. ಈ ವಿಶ್ವಪ್ರಸಿದ್ದ ಜಲಾಶಯದ ಹಿಂದಿನ ಶಕ್ತಿಯೇ ವಿಶ್ವೇಶ್ವರಯ್ಯನವರಾಗಿದ್ದರು.

* ಮೂಸಿ ನದಿಯಿಂದ ಸದಾ ಪ್ರವಾಹ ಎದುರಿಸುತ್ತಿದ್ದ ಹೈದರಾಬಾದ್ ನಗರದಲ್ಲಿ ಪ್ರವಾಹ ಸಮಸ್ಯೆ ಎದುರಾಗದಂತೆ ವಿಶೇಷ ವ್ಯವಸ್ಥೆ ರೂಪಿಸಿದರು.

* ತಿರುಮಲ ತಿರುಪತಿ ದೇವಸ್ಥಾನಕ್ಕೆ ಉತ್ತಮವಾದ ರಸ್ತೆ ನಿರ್ಮಿಸಿದರು.

* ಆಂಧ್ರಪ್ರದೇಶದ ವಿಶಾಖಪಟ್ಟಣ ನಗರವನ್ನು ಕಡಲಕೊರೆತ ಸಮಸ್ಯೆ ಎದುರಾಗದಂತೆ ತಡೆಗೋಡೆ ನಿರ್ಮಿಸಿದರು.

* 1909ರಲ್ಲಿ ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಿದರು.

* 1912ರಿಂದ 1918ರ ವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು.

* ಮೈಸೂರು ಸಾಬೂನು ಕಾರ್ಖಾನೆ, ಭದ್ರಾವತಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜು, ಮೈಸೂರು ಬ್ಯಾಂಕ್‌ (ಈಗ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ವಿಲೀನವಾಗಿದೆ) ಬೆಂಗಳೂರು ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

* ಸತತ 50 ವರ್ಷಗಳ ಕಾಲ ಲಂಡನ್‌ನ ಸಿವಿಲ್‌ ಎಂಜಿನಿಯರ್ ಇನ್‌ಸ್ಟಿಟ್ಯೂಟ್‌ನ ಗೌರವ ಸದಸ್ಯರಾಗಿದ್ದರು.

* 1934ರಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ರೂಪಿಸಲು ಪ್ರಮುಖ ಪಾತ್ರ ವಹಿಸಿದರು.

* 1955ರಲ್ಲಿ ಇವರ ಸಾಧನೆಗಳನ್ನು ಪರಿಗಣಿಸಿ ಭಾರತ ಸರ್ಕಾರ ಅತ್ಯುನ್ನತ ‘ಭಾರತರತ್ನ’ ಭಾರತ ಪುರಸ್ಕಾರದೊಂದಿಗೆ ಸತ್ಕರಿಸಿತು. ಅವರು 1962 ಏಪ್ರಿಲ್‌ 12ರಂದು ನಿಧನರಾದರು.

ವಿವಿಧ ದೇಶಗಳಲ್ಲಿ ಎಂಜಿನಿಯರ್ ದಿನ

ವಿಶ್ವಸಂಸ್ಥೆ ಮೇ 4 ನ್ನು ಜಾಗತಿಕ ಎಂಜಿನಿಯರ್‌ಗಳ ದಿನ ಎಂದು ಗುರುತಿಸಿದೆ.

ಆಸ್ಟ್ರೇಲಿಯಾ; ಆಗಸ್ಟ್ 4

ಕೆನಡಾ; ಮಾರ್ಚ್‌ 1ರಿಂದ 31

ಫ್ರಾನ್ಸ್‌; ಏಪ್ರಿಲ್‌ 3

ಮಲೇಷ್ಯಾ; ಸೆಪ್ಟೆಂಬರ್ 15

ಪಾಕಿಸ್ತಾನ; ಜನವರಿ 10

ರಷ್ಯಾ; 22 ಡಿಸೆಂಬರ್

ಬ್ರಿಟನ್; ಮಾರ್ಚ್ 14

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.