ADVERTISEMENT

ಡಿಜಿಟಲ್‌ ವಹಿವಾಟು ಶೇ 80ರಷ್ಟು ಏರಿಕೆ: ಕಾರ್ಡ್‌ಗಳನ್ನು ಹಿಂದಿಕ್ಕಿದ ಯುಪಿಐ

ಪಿಟಿಐ
Published 12 ಜನವರಿ 2021, 19:31 IST
Last Updated 12 ಜನವರಿ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳಲ್ಲೂ ಡಿಜಿಟಲ್‌ ವಹಿವಾಟಿಗೆ ಉತ್ತೇಜನ ಲಭಿಸಿದ ಪರಿಣಾಮವಾಗಿ, 2020ರಲ್ಲಿ ಡಿಜಿಟಲ್‌ ವಹಿವಾಟಿನ ಪ್ರಮಾಣವು ಶೇ 80ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಹಣಕಾಸು ತಂತ್ರಜ್ಞಾನ ಸೇವಾ ಸಂಸ್ಥೆ ‘ರೇಜರ್‌ಪೇ’ಯ ವರದಿ ಹೇಳಿದೆ.

ಈ ಹಿಂದೆ ಕಾರ್ಡ್‌ಗಳ (ಕ್ರೆಡಿಟ್‌, ಡೆಬಿಟ್‌) ಮೂಲಕವೇ ಡಿಜಿಟಲ್‌ ವಹಿವಾಟು ಹೆಚ್ಚಾಗಿ ನಡೆಯುತ್ತಿತ್ತು. ಆದರೆ, 2020ರಲ್ಲಿ ಯುಪಿಐ (ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್) ಮೂಲಕ ನಡೆದ ವಹಿವಾಟಿನ ಪ್ರಮಾಣವು ಕಾರ್ಡ್‌ಗಳನ್ನು ಹಿಂದಿಕ್ಕಿದೆ. ಯುಪಿಐ ವಹಿವಾಟಿನ ಪ್ರಮಾಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2020ರಲ್ಲಿ ಶೇ 120ರಷ್ಟು ಏರಿಕೆ ದಾಖಲಿಸಿದೆ. ಅದರಲ್ಲೂ ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಯುಪಿಐ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ.

ದೇಶದಲ್ಲಿ ಲಾಕ್‌ಡೌನ್‌ ಜಾರಿ ಆದಾಗ ಡಿಜಿಟಲ್‌ ಪಾವತಿಯು ಶೇ 30ರಷ್ಟು ಇಳಿಕೆಯಾಗಿತ್ತು. ಆದರೆ, ಮೊದಲ 70 ದಿನಗಳ ಲಾಕ್‌ಡೌನ್‌ ಅವಧಿ ಮುಗಿದಾಗ ಇದು ಒಮ್ಮೆಲೇ ಶೇ 23ರಷ್ಟು ಏರಿಕೆ ದಾಖಲಿಸಿತು ಎಂದು ವರದಿ ತಿಳಿಸಿದೆ. ಲಾಕ್‌ಡೌನ್‌ ಬಳಿಕ, ಕಳೆದ ವರ್ಷದ ಉತ್ತರಾರ್ಧದಲ್ಲಿ ಕೆಲವು ವ್ಯಾಪಾರ ಚಟುವಟಿಕೆಗಳು ಮತ್ತೆ ಆರಂಭವಾದವು. ಆರ್ಥಿಕ ವಲಯವು ಮತ್ತೆ ಚೇತರಿಕೆಯ ಹಾದಿ ಹಿಡಿಯುವ ಲಕ್ಷಣಗಳೂ ಕಾಣಿಸಲಾರಂಭಿಸಿದ್ದವು. ಆದ್ದರಿಂದ, ಕೊನೆಯ ಆರು ತಿಂಗಳ ಅವಧಿಯಲ್ಲೇ ಡಿಜಿಟಲ್‌ ವಹಿವಾಟು ಗರಿಷ್ಠ ಪ್ರಮಾಣವನ್ನು ತಲುಪಿದೆ. 2020ರ ಮೊದಲ ಆರು ತಿಂಗಳ ವಹಿವಾಟಿಗೆ ಹೋಲಿಸಿದರೆ ಡಿಜಿಟಲ್‌ ವಹಿವಾಟು ಜುಲೈ–ಡಿಸೆಂಬರ್‌ ಅವಧಿ ಯಲ್ಲಿ ಶೇ 73ರಷ್ಟು ಹೆಚ್ಚಳ ದಾಖಲಿಸಿದೆ.

ADVERTISEMENT

ದೇಶದ ಒಟ್ಟು ಡಿಜಿಟಲ್‌ ವಹಿವಾಟಿನ ಶೇ 54ರಷ್ಟು ವಹಿವಾಟು ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ನಡೆದಿದೆ ಎಂಬುದು ವಿಶೇಷವಾಗಿದೆ. ಈ ನಗರಗಳಲ್ಲಿ ಒಂದೇ ವರ್ಷದಲ್ಲಿ ಡಿಜಿಟಲ್‌ ವಹಿವಾಟು ಶೇ 92ರಷ್ಟು ಅಭಿವೃದ್ಧಿ ದಾಖಲಿಸಿದಂತಾಗಿದೆ. ಎಲ್ಲಾ ರಾಜ್ಯಗಳಲ್ಲೂ ಈ ಬೆಳವಣಿಗೆ ಕಂಡುಬಂದಿದೆ.

ಮೊದಲ ಸ್ಥಾನಕ್ಕೆ ಯುಪಿಐ

2019ರಲ್ಲಿ ಆದ್ಯತೆಯ ಪಾವತಿ ವಿಧಾನಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಯುಪಿಐ, 2020ರಲ್ಲಿ ಕಾರ್ಡ್‌ಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದಿದೆ. ನೆಟ್‌ಬ್ಯಾಂಕಿಂಗ್‌ ಹಾಗೂ ಬೇರೆಬೇರೆ ಕಂಪನಿಗಳ ವಾಲೆಟ್‌ಗಳೂ ಶೇ 120ರಷ್ಟು ಪ್ರಗತಿ ದಾಖಲಿಸಿವೆ. ಕ್ಯಾಶ್‌ಬ್ಯಾಕ್‌ ಮುಂತಾದ ಯೋಜನೆಗಳು ಹಾಗೂ ಇನ್ನಷ್ಟು ಕಂಪನಿಗಳು ಈ ಕ್ಷೇತ್ರಕ್ಕೆ ಬಂದಿರುವ ಕಾರಣದಿಂದ ವಾಲೆಟ್‌ಗಳ ಬಳಕೆಯ ಪ್ರಮಾಣ 2020ರಲ್ಲಿ ಹೆಚ್ಚಿದೆ.

ನಿಧಾನ ಚೇತರಿಕೆ

ಲಾಕ್‌ಡೌನ್‌ ತೆರವುಗೊಂಡ ನಂತರ ಎಲ್ಲಾ ಕ್ಷೇತ್ರಗಳು ಕ್ಷಿಪ್ರಗತಿಯ ಚೇತರಿಕೆ ಕಾಣುತ್ತಿದ್ದರೂ ಪ್ರವಾಸೋದ್ಯಮ ಹಾಗೂ ಗೃಹನಿರ್ಮಾಣ ಮತ್ತು ರಿಯಲ್‌ಎಸ್ಟೇಟ್‌ ಕ್ಷೇತ್ರಗಳು ಮಾತ್ರ ಕೋವಿಡ್‌ಪೂರ್ವದ ಸ್ಥಿತಿಗೆ ಬಂದಿಲ್ಲ. ಆದ್ದರಿಂದ ಕಳೆದ ವರ್ಷದ ಕೊನೆಯ ಆರು ತಿಂಗಳಲ್ಲಿ ಈ ಕ್ಷೇತ್ರಗಳ ಡಿಜಿಟಲ್‌ ವ್ಯವಹಾರದಲ್ಲೂ ಅಂಥ ಚೇತರಿಕೆ ಕಂಡುಬಂದಿಲ್ಲ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.