ADVERTISEMENT

₹4,000 ಬೆಲೆಯ ಸ್ಮಾರ್ಟ್‌ಫೋನ್‌ ಹೊರತರುವ ಪ್ರಯತ್ನದಲ್ಲಿದೆ ರಿಲಯನ್ಸ್‌

ಏಜೆನ್ಸೀಸ್
Published 22 ಸೆಪ್ಟೆಂಬರ್ 2020, 15:33 IST
Last Updated 22 ಸೆಪ್ಟೆಂಬರ್ 2020, 15:33 IST
ರಿಲಯನ್ಸ್‌ ಕಂಪನಿ ಮುಖ್ಯಸ್ಥ ಮುಕೇಶ್‌ ಅಂಬಾನಿ
ರಿಲಯನ್ಸ್‌ ಕಂಪನಿ ಮುಖ್ಯಸ್ಥ ಮುಕೇಶ್‌ ಅಂಬಾನಿ   

(ಬ್ಲೂಮ್‌ಬರ್ಗ್‌)– ಮುಂದಿನ ಎರಡು ವರ್ಷಗಳಲ್ಲಿ ಸುಮಾರು 20 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಸಿದ್ಧಪಡಿಸುವುದು ಸಾಧ್ಯವಾಗಿಸುವ ನಿಟ್ಟಿನಲ್ಲಿ ತಯಾರಿಕೆ ಸಾಮರ್ಥ್ಯ ವೃದ್ಧಿಸಿಕೊಳ್ಳುವಂತೆ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಸ್ಥಳೀಯ ಪೂರೈಕೆದಾರರಿಗೆ ಕೇಳಿರುವುದಾಗಿ ವರದಿಯಾಗಿದೆ. ಇದು ದೇಶದ ತಂತ್ರಜ್ಞಾನ ಉದ್ದೇಶಗಳಿಗೆ ಮತ್ತಷ್ಟು ಬಲ ನೀಡಬಹುದಾಗಿದೆ ಹಾಗೂ ಶವೊಮಿ ಕಾರ್ಪೊರೇಷನ್‌ನಂತಹ ಪ್ರತಿಸ್ಪರ್ಧಿಗಳಿಗೆ ಎಚ್ಚರಿಕೆಯಾಗಿ ತೋರಿದೆ.

ಗೂಗಲ್‌ ಆ್ಯಂಡ್ರಾಯ್ಡ್‌ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಬಹುದಾದ ಹಾಗೂ ₹4,000 (54 ಡಾಲರ್‌) ಬೆಲೆಯಲ್ಲಿ ಸಿಗಬಹುದಾದ ಜಿಯೊ ಫೋನ್‌ ತಯಾರಿಸಲು ರಿಲಯನ್ಸ್‌ ಕಂಪನಿಯು ಮೊಬೈಲ್‌ ಫೋನ್‌ ಸಿದ್ಧಪಡಿಸುವ ದೇಶೀಯ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಕೈಗೆಟುಕುವ ದರದ ಫೋನ್‌ಗಳು ರಿಲಯನ್ಸ್‌ ಜಿಯೊ ಪ್ಲಾನ್‌ಗಳೊಂದಿಗೆ ಕಾರ್ಯನಿರ್ವಹಿಸುವಂತೆ ರೂಪಿಸಲಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಮಾಹಿತಿ ನೀಡಿರುವುದಾಗಿ ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಅಗ್ಗದ ಡೇಟಾ ಪ್ಲಾನ್‌ಗಳ ಮೂಲಕ ಹೊಸ ಅಲೆ ಎಬ್ಬಿಸಿದಂತೆ ಸ್ಮಾರ್ಟ್‌ಫೋನ್‌ ಉದ್ಯಮದಲ್ಲಿ ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳ ಮೂಲಕ ಮತ್ತೊಂದು ಬದಲಾವಣೆ ತರಲು ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಯೋಜನೆ ರೂಪಿಸುತ್ತಿದೆ. ಪ್ರಾದೇಶಿಕವಾಗಿ ತಯಾರಿಕೆಗೆ ಒತ್ತು ಕೊಡುವ ಭಾರತ ಸರ್ಕಾರದ ಯೋಜನೆಯೊಂದಿಗೆ ಕೈಜೋಡಿಸಲು ಮುಂದಾಗಿದ್ದು, ಇದರಿಂದಾಗಿ ಲಾವಾ ಇಂಟರ್‌ನ್ಯಾಷನಲ್‌, ಕಾರ್ಬೊನ್ ಮೊಬೈಲ್ಸ್ ಹಾಗೂ ಡಿಕ್ಸನ್‌ ಟೆಕ್ನಾಲಜೀಸ್ ಇಂಡಿಯಾದಂತಹ ದೇಶೀಯ ಸಂಸ್ಥೆಗಳಿಗೆ ಬೆಂಬಲ ದೊರೆಯಬಹುದಾಗಿದೆ.

ADVERTISEMENT

'ವಾಣಿಜ್ಯ ವಹಿವಾಟು ನಡೆಸಲು ಹಾಗೂ ವಸ್ತುಗಳನ್ನು ಸಿದ್ಧಪಡಿಸಲು ಭಾರತ ಉತ್ತಮ ಸ್ಥಳವಾಗಿದೆ ಎಂಬುದನ್ನು ಇಡೀ ಜಗತ್ತು ಅರಿತುಕೊಂಡಿದೆ. ಆರಂಭಿಕ ಹಂತದ ಫೋನ್‌ಗಳಿಗೆ ಅತ್ಯುತ್ತಮ ಅವಕಾಶಗಳಿದ್ದು, ಪ್ರಾದೇಶಿಕ ಫೋನ್‌ ತಯಾರಿಕಾ ಕಂಪನಿಗಳನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿರುವುದಾಗಿ' ಇಂಡಿಯಾ ಸೆಲ್ಯುಲರ್‌ ಆ್ಯಂಡ್‌ ಎಲೆಕ್ಟ್ರಾನಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಪಂಕಜ್‌ ಮೊಹಿಂದ್ರೊ ಹೇಳಿದ್ದಾರೆ.

ರಿಲಯನ್ಸ್‌ ಕಂಪನಿಯ ಪ್ರತಿನಿಧಿ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ರಿಲಯನ್ಸ್‌ ಎರಡು ವರ್ಷಗಳಲ್ಲಿ 15 ಕೋಟಿಯಿಂದ 20 ಕೋಟಿ ಫೋನ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಕಳೆದ ಹಣಕಾಸು ವರ್ಷದಲ್ಲಿ ಅಂದಾಜು 16.50 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಜೋಡಿಸುವ ಕಾರ್ಯಾಚರಣೆ ನಡೆಸಲಾಗಿದೆ. ಅಷ್ಟೇ ಪ್ರಮಾಣದಲ್ಲಿ ಬೇಸಿಕ್‌ ಫೀಚರ್‌ ಫೋನ್‌ಗಳನ್ನು ತಯಾರಿಸಲಾಗಿದೆ ಎಂದು ಮೊಹಿಂದ್ರೊ ಅವರ ಅಸೋಸಿಯೇಷನ್‌ ಮೂಲಕ ತಿಳಿದು ಬಂದಿದೆ. ಐದು ಸ್ಮಾರ್ಟ್‌ಫೋನ್‌ಗಳಲ್ಲಿ ಒಂದು ಫೋನ್‌ ₹7,000ಕ್ಕಿಂತಲೂ ಕಡಿಮೆ ಬೆಲೆಯದ್ದಾಗಿದೆ.

ರಿಲಯನ್ಸ್‌ ಪ್ರತಿಸ್ಪರ್ಧಿಯಾಗಿರುವ ಭಾರ್ತಿ ಏರ್‌ಟೆಲ್‌ ಸಹ ಪ್ರತ್ಯೇಕ 4ಜಿ ಸಾಧನವನ್ನು ಅಭಿವೃದ್ಧಿ ಪಡಿಸಲು ಮೊಬೈಲ್‌ ತಯಾರಿಕಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.

ರಿಲಯನ್ಸ್‌ ಜಿಯೊ ಪ್ಲಾಟ್‌ಫಾರ್ಮ್‌ಗೆ ಅಮೆರಿಕ ಮೂಲದ ಕಂಪನಿಗಳಿಂದ 20 ಬಿಲಿಯನ್‌ ಡಾಲರ್‌ಗಳಷ್ಟು ಹೂಡಿಕೆ ಸೆಳೆದುಕೊಂಡಿದೆ. ಭಾರತವು ಸೇರಿದಂತೆ ಇಡೀ ವಿಶ್ವ 5ಜಿ ಹೊಸ್ತಿಲಲ್ಲಿ ನಿಂತಿದ್ದರೆ, ದೇಶದ ಅಂದಾಜು 35 ಕೋಟಿ ಗ್ರಾಹಕರು ಫೀಚರ್‌ ಫೋನ್‌ಗಳನ್ನು ಬಳಸುತ್ತಿದ್ದಾರೆ. ಅವರನ್ನು ರಿಲಯನ್ಸ್‌ ಗುರಿಯಾಗಿಸಿಕೊಂಡು 4ಜಿ ಸ್ಮಾರ್ಟ್‌ಫೋನ್‌ ಹೊರತರಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.