ADVERTISEMENT

ಗೂಗಲ್‌ನಲ್ಲಿ ‘ಹುಡುಕಾಟ’ದ ಇತಿಹಾಸ, ಇಲ್ಲಿದೆ ಇದರ ಕೆಲಸದ ಪರಿಪಾಠ!

ಕೃಷ್ಣ ಭಟ್ಟ
Published 3 ಆಗಸ್ಟ್ 2021, 19:30 IST
Last Updated 3 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಅಂಗೈ ವಿಶ್ವಕೋಶ’ ಎಂದೇ ನಾವು ಕರೆದಿರುವ ಗೂಗಲ್‌ನಲ್ಲಿ ನಾವು ಯಾವುದೇ ಒಂದು ಶಬ್ದವನ್ನು ಹುಡುಕಾಟ ನಡೆಸಿದರೂ ಅದು ಸಾವಿರಾರು ಪುಟಗಳಷ್ಟು ಆಕರವನ್ನು ನಮಗೆ ತೆರೆದಿಡುತ್ತದೆ. ಅದರ ಹಿಂದೆ ಅಪಾರ ಪ್ರಮಾಣದ ಅಲ್ಗೊರಿಥಮ್‌ಗಳು ಕೆಲಸ ಮಾಡಿರುತ್ತವೆ. ಆದರೆ, ಹೇಗೆ ಇದು ನಮಗೆ ಇಷ್ಟೆಲ್ಲ ಆಕರಗಳನ್ನು ತಂದಿಡುತ್ತದೆ ಎಂಬುದು ನಮಗೆ ಗೊತ್ತಾಗುವುದಿಲ್ಲ.

ಕೆಲವೇ ತಿಂಗಳುಗಳ ಹಿಂದೆ ಗೂಗಲ್‌ನಲ್ಲಿ ‘ಕೆಟ್ಟ ಭಾಷೆ ಯಾವುದು’ ಎಂದು ಹುಡುಕಾಟ ನಡೆಸಿದಾಗ ‘ಕನ್ನಡ’ ಎಂಬ ಸರ್ಚ್‌ ರಿಸಲ್ಟ್ ಬಂದು ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದು ಗೂಗಲ್‌ಗೂ ಭಾರಿ ಮುಜುಗರ ಉಂಟುಮಾಡಿತ್ತು. ಆದರೆ, ಅದು ಯಾವುದೋ ಒಂದು ವೆಬ್‌ಸೈಟ್‌ನಲ್ಲಿ ಬರೆದ ಒಂದು ಆಕ್ಷೇಪಾರ್ಹ ಲೇಖನವಾಗಿತ್ತು. ಅದು ಗೂಗಲ್‌ ಹುಡುಕಾಟದಲ್ಲಿ ಮೇಲೆದ್ದು ಕಾಣಿಸುವಂತಿತ್ತು ಅಷ್ಟೇ! ಕನ್ನಡಿಗರು ಆಕ್ಷೇಪಿಸಿದ ನಂತರ ಗೂಗಲ್ ಆ ತಪ್ಪನ್ನು ಸರಿಪಡಿಸಿಕೊಂಡು, ಆ ವೆಬ್‌ಸೈಟ್‌ನ ಆ ಪುಟವನ್ನು ಮರೆ ಮಾಡಿತು.

ಇಂಥ ಸಮಸ್ಯೆಗಳು ಮತ್ತೆ ಮತ್ತೆ ಮರುಕಳಿಸದಂತಿರಲಿ ಎಂಬ ಕಾರಣಕ್ಕೆ ಗೂಗಲ್‌ ತನ್ನ ಸರ್ಚ್‌ ರಿಸಲ್ಟ್ ಬಗ್ಗೆ ಒಂದಷ್ಟು ಮಾಹಿತಿಯನ್ನು ಕೊಡುವುದಕ್ಕೆ ಆರಂಭಿಸಿದೆ.

ADVERTISEMENT

ಗೂಗಲ್‌ನಲ್ಲಿ ಏನಾದರೂ ಹುಡುಕಾಟ ನಡೆಸಿದರೆ, ಆ ಗೂಗಲ್‌ ಪುಟದ ಬಲಮೂಲೆಯಲ್ಲಿ ಮೂರು ಚುಕ್ಕೆಗಳು ಇರುತ್ತವೆ. ಅದರ ಮೇಲೆ ಕ್ಲಿಕ್ ಮಾಡಿದರೆ ‘ಈ ಫಲಿತಾಂಶದ ಬಗ್ಗೆ’ ಎಂಬ ಪ್ಯಾನೆಲ್ ತೆರೆದುಕೊಳ್ಳುತ್ತದೆ. ಇದರಲ್ಲಿ ಮಾಡಿದ ಹುಡುಕಾಟದ ಬಗ್ಗೆ ಎಲ್ಲ ಮಾಹಿತಿ ಇರುತ್ತದೆ. ಯಾಕೆ ಆ ಮಾಹಿತಿ ಪ್ರದರ್ಶನವಾಯಿತು. ಆ ವೆಬ್‌ಸೈಟ್‌ಗಳು ಪ್ರದರ್ಶನವಾಗಿದ್ದರ ಹಿಂದೆ ಯಾವ ಯಾವ ಕೀವರ್ಡ್‌ಗಳು ಕೆಲಸ ಮಾಡಿವೆ – ಎಂಬ ಎಲ್ಲ ಮಾಹಿತಿ ಸಿಗುತ್ತದೆ.

ವಾಸ್ತವವಾಗಿ ಈ ಪ್ಯಾನೆಲ್‌ ಕಳೆದ ಫೆಬ್ರುವರಿಯಲ್ಲೇ ಆರಂಭವಾಗಿದ್ದರೂ, ಆಗ ಕೇವಲ ವಿಕಿಪೀಡಿಯಾ ವೆಬ್‌ಪೇಜ್ ಮೂಲ ಮಾತ್ರ ಇರುತ್ತಿತ್ತು. ಕಂಡುಬಂದ ಫಲಿತಾಂಶ ಸುರಕ್ಷಿತವಾಗಿದೆಯೇ ಹಾಗೂ ಹುಡುಕಾಟದಲ್ಲಿ ಬಂದ ಫಲಿತಾಂಶಗಳು ಸಹಜವಾಗಿವೆಯೇ ಅಥವಾ ಜಾಹೀರಾತು ನೀಡಿರುವ ಫಲಿತಾಂಶಗಳೂ ಇವೆಯೇ ಎಂಬ ಮಾಹಿತಿಯಷ್ಟೇ ಇರುತ್ತಿತ್ತು. ಆದರೆ, ಈಗ ಇದಕ್ಕೆ ಇನ್ನಷ್ಟು ಮಾಹಿತಿ ಸೇರಿಸಲಾಗಿದೆ.

ಗೂಗಲ್‌ ಹೇಳುವ ಪ್ರಕಾರ ಇದು ಉತ್ತಮ ಫಲಿತಾಂಶವನ್ನು ನಾವು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆದರೆ, ಇದರ ಜೊತೆಗೆ ಕೆಟ್ಟ ಫಲಿತಾಂಶ ಕೊಟ್ಟಿದ್ದಕ್ಕೆ ಗೂಗಲ್‌ಗೆ ಬೈಯುವುದನ್ನೂ ತಪ್ಪಿಸುವ ಪ್ರಯತ್ನವೂ ಹೌದು. ಏಕೆಂದರೆ, ಬಹುತೇಕ ಜನರಿಗೆ ಗೂಗಲ್‌ ತನ್ನ ಬಳಕೆದಾರರು ಬಳಸುವ ಕೀವರ್ಡ್‌ಗಳನ್ನು ಆಧರಿಸಿ ಕೆಲಸ ಮಾಡುತ್ತದೆ ಎಂಬ ಮಾಹಿತಿ ಇಲ್ಲದ್ದರಿಂದ ಕೆಟ್ಟ ಫಲಿತಾಂಶ ಬಂದಾಗ ಗೂಗಲ್‌ ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದೆ ಎಂಬ ಅಭಿಪ್ರಾಯಕ್ಕೆ ಬರುವಂತಾಗುತ್ತದೆ. ಆದರೆ, ಈ ಮಾಹಿತಿ ಕೊಡುವುದರಿಂದ ಈ ಫಲಿತಾಂಶದ ತೆರೆಯ ಹಿಂದೆ ಏನು ನಡೆದಿರಬಹುದು ಎಂಬುದನ್ನು ಜನರು ಊಹಿಸಲು ಸಾಧ್ಯವಾಗುತ್ತದೆ.

ಆದರೆ ಗೂಗಲ್‌ನ ಮೂಲ ಉದ್ದೇಶವೇನೆಂದರೆ, ಇದು ಬೇಕಾದ ಮಾಹಿತಿಯನ್ನು ಇನ್ನಷ್ಟು ನಿಖರವಾಗಿ ಹುಡುಕಲು ಸಹಾಯ ಮಾಡಬೇಕು. ಯಾವ ಶಬ್ದಗಳನ್ನು ಸರ್ಚ್ ಮಾಡಿದರೆ ಯಾವ ಮಾಹಿತಿ ಕಾಣಿಸಿಕೊಳ್ಳುತ್ತದೆ ಮತ್ತು ಯಾವ ಶಬ್ದಗಳ ಜೊತೆಗೆ ಯಾವ ಶಬ್ದ ಸೇರಿದರೆ ನಮಗೆ ಬೇಡದ ಮಾಹಿತಿ ಬರುತ್ತದೆ ಎಂಬ ತಿಳಿವಳಿಕೆ ಹುಡುಕಾಟ ನಡೆಸುವವರಿಗೆ ಬರುವುದರಿಂದ ಜನರು ಇನ್ನಷ್ಟು ಹೆಚ್ಚು ಸೂಕ್ತವಾದ ಶಬ್ದಗಳನ್ನು ಬಳಸಿಯೇ ಹುಡುಕಾಟ ನಡೆಸುತ್ತಾರೆ. ಅದರಿಂದ ಫಲಿತಾಂಶ ಹೆಚ್ಚು ನಿಖರವಾಗಿ ಕಾಣಿಸಿಕೊಳ್ಳುತ್ತದೆ.

ಇನ್ನೂ ಒಂದು ಪ್ರಮುಖ ಸಂಗತಿಯೆಂದರೆ, ಹುಡುಕಾಟದ ಹಿಂದಿನ ಮಾಹಿತಿಯನ್ನು ನೀಡುವುದರ ಜೊತೆಗೆ ಗೂಗಲ್‌ ಕೆಲವು ಸಲಹೆಗಳನ್ನೂ ನೀಡಲಿದೆ. ಇದರಲ್ಲಿ ಇನ್ನಷ್ಟು ನಿಖರವಾದ ಶಬ್ದಗಳ ಸಲಹೆ ನೀಡುತ್ತದೆ. ನಿಮಗೆ ಬೇಕಾಗಿರಬಹುದಾದ ಫಲಿತಾಂಶಗಳನ್ನು ಹುಡುಕಲು ಯಾವುದೋ ಒಂದು ಶಬ್ದಕ್ಕೆ ಉದ್ಧರಣ ಚಿಹ್ನೆಯನ್ನು ಹಾಕುವಂತೆ ಸಲಹೆ ನೀಡಬಹುದು. ಇವೆಲ್ಲವೂ ಜನರು ಹೆಚ್ಚು ನಿಖರವಾಗಿ ಹುಡುಕಾಟ ನಡೆಸಲಿ ಮತ್ತು ಸೂಕ್ತ ಫಲಿತಾಂಶವನ್ನು ಪಡೆಯಲಿ ಎಂಬ ನೇರ ಉದ್ದೇಶವನ್ನೇ ಹೊಂದಿದೆ.

ಗೂಗಲ್‌ ತನ್ನ ಅಲ್ಗೊರಿಥಮ್‌ ಅನ್ನು ಕಾಲಕಾಲಕ್ಕೆ ಹೆಚ್ಚು ಹೆಚ್ಚು ಸುಭದ್ರಗೊಳಿಸುತ್ತಲೇ ಬಂದಿದೆ. ಅದು ಹೆಚ್ಚು ಹೆಚ್ಚು ನಿಖರವಾದ ಫಲಿತಾಂಶಗಳನ್ನು ಜನರಿಗೆ ಒದಗಿಸಬೇಕು ಎಂಬುದರತ್ತಲೇ ಗಮನ ನೆಟ್ಟಿದೆ. ಆದರೆ, ಇದೇ ಸಮಯದಲ್ಲಿ ಇನ್ನೂ ಒಂದು ಪ್ರಮುಖ ಸಂಗತಿಯನ್ನು ಗಮನಿಸಬಹುದಾದ್ದೆಂದರೆ, ಹೀಗೆ ಹೆಚ್ಚು ಮಾಹಿತಿಯನ್ನು ಗೂಗಲ್‌ ಜನರಿಗೆ ನೀಡುವುದರಿಂದ ಹೊಸದಾಗಿ ಹುಡುಕಾಟ ನಡೆಸುವವರು ಹಾದಿ ತಪ್ಪುವ ಸಾಧ್ಯತೆ ಇರುತ್ತದೆ. ಅಲ್ಲದೆ, ಅವರಿಗೆ ಬೇಕಾದ ಮಾಹಿತಿಯನ್ನು ಹುಡುಕುವುದು ಕಷ್ಟವಾಗುತ್ತ ಹೋಗಲಿದೆ. ಮುಂದೊಂದು ದಿನ, ಆಗಷ್ಟೇ ಗೂಗಲ್‌ ಪರಿಚಯವಾದ ವ್ಯಕ್ತಿಯೊಬ್ಬ ಒಂದು ಶಬ್ದ ಬರೆದು ತನಗೆ ಬೇಕಾದ ಅಥವಾ ಸರಿಯಾದ ಅರ್ಥವೋ ವೆಬ್‌ ಪುಟವೋ ಸಿಗದಿದ್ದಾಗ ಕಂಗಾಲಾಗುವ ಪರಿಸ್ಥಿತಿಯೂ ಬರಬಹುದು. ಏಕೆಂದರೆ ವಿವರಣೆ ಹೆಚ್ಚಿದಷ್ಟೂ ಗೊಂದಲಕ್ಕೊಳಗಾಗುವುದು ಮನುಷ್ಯ ಸ್ವಭಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.