ADVERTISEMENT

ಕಾಮೆಂಟರಿ ಜತೆ ಮಕ್ಕಳ ಕ್ರಿಕೆಟ್: ಟ್ವೀಟ್‌ ಮೂಲಕ ಬಾಲ್ಯ ನೆನೆದ ಆನಂದ್ ಮಹೀಂದ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2021, 10:25 IST
Last Updated 13 ಸೆಪ್ಟೆಂಬರ್ 2021, 10:25 IST
ಆನಂದ್ ಮಹೀಂದ್ರಾ ಅವರ ಟ್ವೀಟ್‌ನಲ್ಲಿರುವ ವಿಡಿಯೊದ ಸ್ಕ್ರೀನ್‌ಗ್ರ್ಯಾಬ್
ಆನಂದ್ ಮಹೀಂದ್ರಾ ಅವರ ಟ್ವೀಟ್‌ನಲ್ಲಿರುವ ವಿಡಿಯೊದ ಸ್ಕ್ರೀನ್‌ಗ್ರ್ಯಾಬ್   

ಕ್ರಿಯಾಶೀಲ ಟ್ವೀಟ್‌ಗಳ ಮೂಲಕ ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹೀಂದ್ರಾ ಇದೀಗ ಮತ್ತೆ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಕಾಮೆಂಟರಿ ಹಿನ್ನೆಲೆಯೊಂದಿಗೆ ಮಕ್ಕಳು ಕ್ರಿಕೆಟ್ ಆಡುತ್ತಿರುವ ಮತ್ತು ಟಿವಿ ಮೂಲಕ ಒಂದಷ್ಟು ಮಕ್ಕಳು ಅದನ್ನು ನೋಡುತ್ತಿರುವ ವಿಡಿಯೊವೊಂದನ್ನು ಟ್ವೀಟ್ ಮಾಡಿರುವ ಅವರು ಬಾಲ್ಯವನ್ನು ನೆನೆದಿದ್ದಾರೆ. ಕೋವಿಡ್ ಸಾಂಕ್ರಾಮಿಕವು ಮಕ್ಕಳೂ ಸೇರಿದಂತೆ ಎಲ್ಲರ ಬದುಕನ್ನು ಹೇಗೆ ಸ್ಕ್ರೀನ್‌ ಒಳಗೆ ಬಂಧಿಯಾಗಿಸಿದೆ ಎಂಬುದನ್ನು ವಿವರಿಸಿದ್ದಾರೆ.

ವಿಡಿಯೊದಲ್ಲೇನಿದೆ?

ADVERTISEMENT

ಒಂದಷ್ಟು ಮಕ್ಕಳು ಕ್ರಿಕೆಟ್ ಆಡುತ್ತಿರುವುದು ಟಿವಿ ಒಳಗಿನಿಂದ ಕಾಣಿಸುತ್ತಿರುತ್ತದೆ. ಹೊರಗಡೆ ಕುಳಿತ ಮಕ್ಕಳು ಕಾಮೆಂಟರಿಯ ಹಿನ್ನೆಲೆ ಧ್ವನಿಯೊಂದಿಗೆ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿರುತ್ತಾರೆ. ಕೆಲವೇ ಕ್ಷಣಗಳಲ್ಲಿ ಬ್ಯಾಟ್ಸ್‌ಮನ್ ಹೊಡೆದ ಚೆಂಡು ಟಿವಿ ಪರದೆ ದಾಟಿ (ಅಲ್ಲಿ ಸ್ಕ್ರೀನ್ ಇರುವುದಿಲ್ಲ) ಹೊರಗೆ ಕುಳಿತವರ ಬಳಿ ಬರುತ್ತದೆ. ಇದಾದ ಬಳಿಕ ಟಿವಿ ಒಳಗಿನಿಂದ ಓಡಿ ಬರುವ ಬಾಲಕನೊಬ್ಬ ಹೊರಗೆ ಇರುವವರ ಬಳಿಯಿಂದ ಚೆಂಡನ್ನು ಕೇಳಿ ಪಡೆಯುತ್ತಾನೆ. ಅಂದರೆ, ಸ್ಕ್ರೀನ್‌ ಇಲ್ಲದ ಟೊಳ್ಳು ಟಿವಿಯೊಂದನ್ನು ಅಲ್ಲಿ ಇಡಲಾಗಿತ್ತಷ್ಟೆ. ಆಚೆ ಬದಿಯಲ್ಲಿ ಮಕ್ಕಳು ನೈಜವಾಗಿ ಕ್ರಿಕೆಟ್ ಆಡುತ್ತಿದ್ದರು.

ಮಹೀಂದ್ರಾ ಹೇಳಿದ್ದು...

‘ಇದೊಂದು ಹಳೆಯ ವಿಡಿಯೊ. ಆದರೆ ಸಾಂಕ್ರಾಮಿಕವು ನಮ್ಮ ಪ್ರತಿಯೊಂದು ಚಟುವಟಿಕೆಗಳನ್ನೂ ಹೇಗೆ ಸ್ಕ್ರೀನ್‌ನೊಳಗೆ ಬಂಧಿಯಾಗಿಸಿದೆ ಎಂಬುದು ಈ ವಿಡಿಯೊ ತೋರಿಸಿದೆ. ನಾನು ಆ ಪರದೆಯ ಮೂಲಕ ಮೆಲ್ಲನೆ ಒಳಗೆ ತೆರಳಲು ಮತ್ತು ಹಿಂದಿನ ನೈಜ ಘಟನೆಗಳನ್ನು ಅನುಭವಿಸಲು ಬಯಸುತ್ತೇನೆ’ ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.‌

ಮಹೀಂದ್ರಾ ಅವರು ಭಾನುವಾರ ರಾತ್ರಿ ಈ ಟ್ವೀಟ್ ಮಾಡಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ 1.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅನೇಕರು ಟ್ವಿಟರ್ ಸಂದೇಶದ ಕ್ರಿಯಾಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ವೀಟ್‌ಗೆ ಬಂದಿರುವ ಪ್ರತಿಕ್ರಿಯೆಗಳಲ್ಲಿ ಕೆಲವು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.