ADVERTISEMENT

ವಿಚ್ಛೇದಿತ ಪತಿಯ ತಂದೆಯನ್ನೇ ವಿವಾಹವಾದ ಮಹಿಳೆ: ಆರ್‌ಟಿಐನಿಂದ ಮಾಹಿತಿ ಬಹಿರಂಗ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜುಲೈ 2021, 7:03 IST
Last Updated 5 ಜುಲೈ 2021, 7:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ತನ್ನ ಮಾಜಿ ಪತ್ನಿ ಈಗ ತನ್ನ ಮಲತಾಯಿ ಎಂದು ತಿಳಿದ ಯುವಕನೊಬ್ಬ ಆಘಾತಕ್ಕೊಳಗಾಗಿರುವ ಘಟನೆ ಉತ್ತರ ಪ್ರದೇಶದ ಬದನೌನಲ್ಲಿ ನಡೆದಿದೆ. ಮನೆ ಬಿಟ್ಟು ತೆರಳಿ ಬೇರೆಡೆ ವಾಸಿಸುತ್ತಿದ್ದ ತನ್ನ ತಂದೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಮಗ ಜಿಲ್ಲಾ ಪಂಚಾಯತ್ ರಾಜ್ ಕಚೇರಿಯಲ್ಲಿ ಆರ್‌ಟಿಐ ಸಲ್ಲಿಸಿದಾಗ ಈ ಸಂಗತಿ ಬಹಿರಂಗವಾಗಿದೆ.

ಜೀ ನ್ಯೂಸ್ ಕನ್ನಡದ ವರದಿ ಪ್ರಕಾರ, ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ತಂದೆಯು ಮಗನಿಗೆ ಹಣ ನೀಡುವುದನ್ನು ನಿಲ್ಲಿಸಿ ಸಂಭಾಲ್‌ನಲ್ಲಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದಾರೆ. ಬಳಿಕ ತಂದೆಯು ಎಲ್ಲಿದ್ದಾರೆ ಎಂಬ ಕುರಿತು ತಿಳಿಯಲು ಆರ್‌ಟಿಐ ಸಲ್ಲಿಸಿದ್ದಾನೆ.

ಅಪ್ರಾಪ್ತನಾಗಿದ್ದ ಮಗ 2016ರಲ್ಲಿ ಬಾಲಕಿಯೊಂದಿಗೆ ವಿವಾಹವಾಗಿದ್ದ. ಅದಾದ ಆರು ತಿಂಗಳಿಗೆ ಇಬ್ಬರು ಬೇರೆಯಾಗಿದ್ದರು. ಹೊಂದಾಣಿಕೆ ಮಾಡಿಕೊಳ್ಳಲು ಆತ ಪ್ರಯತ್ನಿಸಿದರೂ, ಕುಡಿಯುತ್ತಾನೆ ಎಂದು ಹೇಳಿ ಯುವತಿ ವಿಚ್ಛೇದನಕ್ಕೆ ಒತ್ತಾಯಿಸಿದ್ದಳು. ಕೊನೆಗೆ ತನ್ನ ತಂದೆಯೇ ತನ್ನ ಮಾಜಿ ಪತ್ನಿಯನ್ನು ಮದುವೆಯಾಗಿದ್ದಾನೆ ಎಂದು ಮಗನಿಗೆ ತಿಳಿದಾಗ, ಆತ ಬಿಸೌಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಬಳಿಕ ಇಬ್ಬರನ್ನೂ ಶನಿವಾರ (ಜುಲೈ 3) ಸಭೆಗೆ ಕರೆಯಲಾಗಿದೆ.

ADVERTISEMENT

'ನಾವು ಮಧ್ಯಸ್ಥಿಕೆಗಾಗಿ ಪ್ರಯತ್ನಿಸುತ್ತಿದ್ದೇವೆ, ಆದರೆ ಶನಿವಾರ (ಜುಲೈ 3) ನಡೆದ ಸಭೆಯಲ್ಲಿ ತಂದೆ ಮತ್ತು ಮಗ ಇಬ್ಬರೂ ವಾಗ್ವಾದ ನಡೆಸಿದ್ದಾರೆ. ದೂರಿನ ತನಿಖೆ ನಡೆಯುತ್ತಿದೆ ಮತ್ತು ಕಾನೂನಿನ ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ' ಎಂದು ಸರ್ಕಲ್ ಅಧಿಕಾರಿ ವಿನಯ್ ಚೌಹಾಣ್ ತಿಳಿಸಿದ್ದಾರೆ.

ಈ ಮಧ್ಯೆ, ಮಾಜಿ ಪತಿಯಿಂದಾಗಿ ‘ತಾಯಿ’ ಆಗಿರುವ ಯುವತಿಯು ಆತನ ಬಳಿಗೆ ಮರಳಲು ನಿರಾಕರಿಸಿದ್ದಾಳೆ ಮತ್ತು ತನ್ನ ಎರಡನೇ ಗಂಡನೊಂದಿಗೆ ತುಂಬಾ ಸಂತೋಷವಾಗಿರುವುದಾಗಿ ತಿಳಿಸಿದ್ದಾಳೆ. 'ಇಬ್ಬರೂ ಅಪ್ರಾಪ್ತ ವಯಸ್ಸಿನಲ್ಲಿ ವಿವಾಹವಾಗಿರುವುದರಿಂದಾಗಿ ಮೊದಲನೇ ಮದುವೆಯ ಯಾವುದೇ ದಾಖಲೆಗಳನ್ನು ನೀಡಿಲ್ಲ. ಹೀಗಾಗಿ ಪ್ರಕರಣವನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ವಿಚಾರಣೆಗಾಗಿ ಎರಡೂ ಕಡೆಯವರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ' ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.