ADVERTISEMENT

ವೈರಲ್: ಆಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಕಿಲೋಮೀಟರ್ ದೂರ ಓಡಿದ ತೆಲಂಗಾಣ ಪೊಲೀಸ್

ಏಜೆನ್ಸೀಸ್
Published 6 ನವೆಂಬರ್ 2020, 5:06 IST
Last Updated 6 ನವೆಂಬರ್ 2020, 5:06 IST
ಸಾಂದರ್ಭಿಕ ಚಿತ್ರ (ಕೃಪೆ: ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ: ಐಸ್ಟಾಕ್)   

ಹೈದರಾಬಾದ್: ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುವುದಕ್ಕಾಗಿ ಹೈದರಾಬಾದ್‌ನಲ್ಲಿ ಪೊಲೀಸರೊಬ್ಬರು ಇತ್ತೀಚೆಗೆ ಟ್ರಾಫಿಕ್ ಜಾಮ್‌ ನಡುವೆ ಕಿಲೋಮೀಟರ್ ದೂರ ಓಡಿರುವುದು ಸಾಮಾಜಿಕ ಜಾಲತಣಾಗಳಲ್ಲಿ ವೈರಲ್ ಆಗಿದೆ.

ಹೈದರಾಬಾದ್‌ನ ಅಬಿಡ್ಸ್ ರಸ್ತೆ ಪೊಲೀಸ್ ಠಾಣೆಯ ಜಿ.ಬಾಬ್‌ಜಿ ಅವರು ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುವುದಕ್ಕಾಗಿ ರಸ್ತೆಯಲ್ಲಿ ವಾಹನಗಳನ್ನು ದೂರ ಸರಿಯುವಂತೆ ಸಂಜ್ಞೆ ಮಾಡುತ್ತಾ ಓಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಅವರು ಎಂಜೆ ಮಾರ್ಕೆಟ್‌ನಿಂದ ನಗರದ ಹೃದಯ ಭಾಗವಾದ ಕೋಟಿವರೆಗೆ ಆಂಬುಲೆನ್ಸ್ ಸಂಚಾರಕ್ಕೆ ಅನುವು ಮಾಡಿಕೊಡುತ್ತಾ ಓಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಅವರ ಈ ಕಾರ್ಯಕ್ಕೆ ನೆಟ್ಟಿಗರಿಂದ ಹಾಗೂ ಮೇಲಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.

ಪೊಲೀಸ್ ಸಂಚಾರಕ್ಕೆ ಅನುವುಮಾಡಿಕೊಡಲು ರಸ್ತೆಯಲ್ಲಿ ಓಡುತ್ತಿರುವ ದೃಶ್ಯವನ್ನು ಆಂಬುಲೆನ್ಸ್‌ನಲ್ಲಿದ್ದ ರೋಗಿಯ ಸಂಬಂಧಿಕರು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ಆ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ADVERTISEMENT

‘ಆ ದಿನ ಸಂಜೆ ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಪ್ರದೇಶದಲ್ಲಿ ತೀವ್ರವಾದ ಸಂಚಾರ ದಟ್ಟಣೆ ಉಂಟಾಗಿತ್ತು. ಆಗ ಅಲ್ಲಿಗೆ ಬಂದ ಆಂಬುಲೆನ್ಸ್‌ಗೆ ಮುಂದೆ ತರಳಲು ಸಾಧ್ಯವಾಗಲಿಲ್ಲ. ನಾನು ಆಂಬುಲೆನ್ಸ್‌ನ ಮುಂದಿನಿಂದ ಓಡುತ್ತಾ ಸಂಚಾರಕ್ಕೆ ಅನುವು ಮಾಡಿಕೊಡಲು ಯತ್ನಿಸಿದೆ. ನಾನು ನನ್ನ ಕರ್ತವ್ಯ ಮಾಡಿದ್ದೇನಷ್ಟೆ. ನನ್ನ ಕಾರ್ಯದಿಂದ ರೋಗಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಿರುವುದು, ಜೀವ ಉಳಿಸಲು ಸಾಧ್ಯವಾಗಿರುವುದು ಸಂತಸ ಮೂಡಿಸಿದೆ’ ಎಂದು ಬಾಬ್‌ಜಿ ಪ್ರತಿಕ್ರಿಯಿಸಿದ್ದಾರೆ.

ತೆಲಂಗಾಣದ ಹಣಕಾಸು ಸಚಿವ ಹರಿಶ್ ರಾವ್ ಸಹ ವಿಡಿಯೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ಬಾಬ್‌ಜಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಕೂಡ ಬಾಬ್‌ಜಿ ಕಾರ್ಯವನ್ನು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.