ADVERTISEMENT

ಮಜವಾಗಿದೆ ನೋಡಿ ರಫಿ ಹಾಡಿನ ಜತೆ ನಡೆಯುವ ಪೊಲೀಸ್‌ ಟ್ರೇನಿಂಗ್‌‌

ತೆಲಂಗಾಣ ಪೊಲೀಸರ ಮ್ಯೂಸಿಕಲ್‌ ಡ್ರಿಲ್ ವೈರಲ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 9:16 IST
Last Updated 18 ಜೂನ್ 2020, 9:16 IST
ಹೆಜ್ಜೆ ಮೇಲೆ ಹದ್ದಿನ ಕಣ್ಣು: ಪೊಲೀಸ್ ತರಬೇತಿ ನೀಡುತ್ತಿರುವ ಎಎಸ್‌ಐ ರಫಿ 
ಹೆಜ್ಜೆ ಮೇಲೆ ಹದ್ದಿನ ಕಣ್ಣು: ಪೊಲೀಸ್ ತರಬೇತಿ ನೀಡುತ್ತಿರುವ ಎಎಸ್‌ಐ ರಫಿ    

ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೊಲೀಸ್‌ ಪಥಸಂಚಲನದಟ್ರೇನಿಂಗ್‌ ವಿಡಿಯೊ ತುಣುಕೊಂದು ಡ್ರಿಲ್ ಮಾಸ್ಟರ್‌ ವಿಶಿಷ್ಟ ಮ್ಯಾನರಿಸಂ ಕಾರಣದಿಂದ ಎಲ್ಲರ ಗಮನ ಸೆಳೆಯುತ್ತಿದೆ.

ಹೈದರಾಬಾದ್‌ನ ತೆಲಂಗಾಣ ಪೊಲೀಸ್ ಟ್ರೈನಿಂಗ್‌‌ ಮೈದಾನದಲ್ಲಿ ಹಳೆಯ ಹಿಂದಿ ಚಿತ್ರವೊಂದರ ಹಾಡು ಹಾಡುತ್ತಡ್ರಿಲ್‌ ಮಾಸ್ಟರ್‌ ತರಬೇತಿ ನೀಡುತ್ತಿದ್ದಾರೆ. ಪಥಸಂಚಲನ ನಡೆಸುತ್ತಿರುವಭಾವಿ ಪೊಲೀಸರು ಹಾಡಿನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ.

ಗಂಭೀರತೆ ಮತ್ತು ಶಿಸ್ತಿಗೆ ಮತ್ತೊಂದು ಹೆಸರೇ ಪೊಲೀಸರಡ್ರಿಲ್.‌ ತೆಲಂಗಾಣ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ತರಬೇತಿ ಅದಕ್ಕೆ ಅಪವಾದ. ಗಂಭೀರತೆ ಮತ್ತು ಶಿಸ್ತಿಗೆ ಒಂದಿಷ್ಟು ಸಂಗೀತ, ತಮಾಷೆ ಬೆರೆಸಿದ ಡ್ರಿಲ್‌ ನೋಡಲು ತುಂಬಾ ಮಜವಾಗಿರುತ್ತದೆ.

ADVERTISEMENT

1970ರಲ್ಲಿ ಬಿಡುಗಡೆಯಾದ ‘ಹಮ್‌ಜೋಲಿ’ ಚಿತ್ರದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಮೊಹಮ್ಮದ್‌ ರಫಿ ಹಾಡಿದ ‘ಧಲ್ ಗಯಾ ದಿನ್...’ ಹಾಡಿನ ಟ್ಯೂನ್‌ಗೆ ಪೊಲೀಸರು ಹೆಜ್ಜೆ ಹಾಕುತ್ತಿದ್ದಾರೆ. ಪೊಲೀಸರ ಪಥಸಂಚಲನವನ್ನು ಸಿನಿಮಾ ಹಾಡು ಮತ್ತು ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದು ಡ್ರಿಲ್‌ ಮಾಸ್ಟರ್ ಎಎಸ್‌ಐ ಮೊಹಮ್ಮದ್ ರಫಿ.

ರಫಿ ನಡೆಸಿಕೊಡುವ ಡ್ರಿಲ್‌ ನೋಡುವ ಮಜಾನೇ ಬೇರೆ.ವಿದ್ಯಾರ್ಥಿಗಳ ಪ್ರತಿ ಹೆಜ್ಜೆಗಳನ್ನೂ ಗಮನಿಸುತ್ತ, ಹೆಜ್ಜೆಗೆ ತಕ್ಕಂತೆ ಕೈಯಲ್ಲಿರುವ ಕಟ್ಟಿಗೆಯನ್ನು ಕುಣಿಸುತ್ತ ಟ್ರೇನಿಂಗ್ ನೀಡುತ್ತಿರುವ ರಫಿ ಅವರ ವಿಶಿಷ್ಟ ಆಂಗಿಕ ಅಭಿನಯ ಎಲ್ಲರಿಗೂ ಇಷ್ಟವಾಗುತ್ತದೆ.

ತೆಲಂಗಾಣ ರಾಜ್ಯ ವಿಶೇಷ ರಕ್ಷಣಾ ಪಡೆಯಲ್ಲಿ ಅಸಿಸ್ಟೆಂಟ್‌ ಸಬ್ ಇನ್‌ಸ್ಪೆಕ್ಟರ್ ಆಗಿರುವ ರಫಿ, ಕುಣಿದು, ಕುಪ್ಪಳಿಸುತ್ತ ತರಬೇತಿ ನೀಡುವ ತನ್ಮಯತೆ ಮತ್ತು ವಿಭಿನ್ನ ತರಬೇತಿಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ‘ಏನ್‌ ಗುರೂ...ನಿಮ್ಮ ಸ್ಟೈಲ್! ಮುಂದಿನ ದಿನಗಳಲ್ಲಿ ಎಲ್ಲರೂ ಪೊಲೀಸ್‌ ಇಲಾಖೆಗೆ ಸೇರೋದು ಗ್ಯಾರಂಟಿ’ ಎಂದು ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ.

ಈ ವಿಡಿಯೊ ತುಣುಕನ್ನುಟ್ವಿಟ್ವರ್‌ನಲ್ಲಿ ಹಂಚಿಕೊಂಡಿರುವ ಹೈದರಾಬಾದ್‌ನ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಮತ್ತು ಹಿರಿಯ ಐಪಿಎಸ್‌ ಅಧಿಕಾರಿ ಅನಿಲ್ ಕುಮಾರ್,‌ ‘ಹ್ಯಾಟ್ಸ್‌ ಆಫ್‌ ಟು ದಿಸ್‌ ಡ್ರಿಲ್‌ ಮಾಸ್ಟರ್’ ಎಂದು ಬೆನ್ನು ತಟ್ಟಿದ್ದಾರೆ. #ಟ್ರೇನಿಂಗ್ ಟ್ಯೂನ್ಸ್‌ ಬೈ ರಫಿ’ ಹ್ಯಾಶ್‌ಟ್ಯಾಗ್‌ ಅಡಿ ಐಪಿಎಸ್ ಅಧಿಕಾರಿಗಳ ಅಸೋಸಿಯೇಶನ್‌ ಕೂಡ ಟ್ವೀಟ್‌ ಮಾಡಿದೆ.

ಗಾಯಕ ರಫಿ ತಮ್ಮ ಹಾಡುಗಳ ಮೂಲಕ ಮನಸ್ಸುಗಳಿಗೆ ಮುದ ನೀಡಿದರೆ, ಎಎಸ್‌ಐ ರಫಿ ಮ್ಯೂಸಿಕಲ್‌ ಡ್ರಿಲ್‌ ಮೂಲಕ ಮನರಂಜನೆ ಮತ್ತು ಶಿಕ್ಷಣ ನೀಡುತ್ತಿದ್ದಾರೆ. ಪ್ರಶಿಕ್ಷಣಾರ್ಥಿಗಳಲ್ಲಿ ಹೊಸ ಹುರುಪು ತುಂಬುತ್ತಿದ್ದಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರನ್ನು ತರಬೇತುಗೊಳಿಸುತ್ತಿದ್ದಾರೆ ಎಂದು #HumansInKhakiಹ್ಯಾಶ್‌ಟ್ಯಾಗ್ ಅಡಿ ಟ್ವೀಟ್‌ ಮಾಡಲಾಗಿದೆ.

‘ಇಂಥ ಶಿಕ್ಷಕರು ನಮಗೇಕೆ ಸಿಗಲಿಲ್ಲ....ಗುರು’ ಎಂದು ಅನೇಕರು ಪ್ರಶ್ನಿಸಿದ್ದಾರೆ.‘ಇಂಥ ಶಿಕ್ಷಕರಿದ್ದರೆ ನಾವೂ ಶಾಲೆ ತಪ್ಪಿಸುತ್ತಿರಲಿಲ್ಲ. ತುಂಬಾ ಸ್ಟೈಲಿಶ್‌ ಟೀಚರ್‌. ರಫಿ ಅವರ ಸ್ಟೈಲ್‌ ಮಜವಾಗಿದೆ. ನೋಡಲು ಇಷ್ಟ’ ಎಂದು ಹಲವರು ಬೆನ್ನು ತಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.