ADVERTISEMENT

ಕವಿತೆ | ಕವಿತೆಯೆಂದರೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 3:47 IST
Last Updated 26 ಜುಲೈ 2020, 3:47 IST

ಒಳಗೆ ನೆಲದಾಳವಲ್ಲ
ತುಸು ನೆಲದ ಹೊರಗೂ ಅಲ್ಲ
ಸರಿ‌ಸಮಪಾತ ನೆಟ್ಟ ಬೀಜ ಎತ್ತಬಲ್ಲದು ತಲೆ

ಕುದಿವ ಹಾಗಿಲ್ಲ ಕೊತಕೊತ
ತಣ್ಣಗೆ ಉಳಿವ ಹಾಗಿಲ್ಲ ಹಿಮದಂತೆ
ಹೆಪ್ಪಿಟ್ಟರೆ ಮಾತ್ರ ಘಮಿಸಬಲ್ಲದು ಕೆನೆಮೊಸರು

ಕಡೆದ ಹಾಗಲ್ಲ ನೆಲ ಕೆತ್ತಿದಂತೆ
ನಿಧಾನವಲ್ಲ ಬಳೆ ತೊಡಿಸಿದಂತೆ
ಲಯದಲಿ ತಿರುಗಿದರೆ ಅರಳಬಲ್ಲದು ನವನೀತ.

ADVERTISEMENT

ಕಾದ ತವದ ಮೇಲೆ ಜಾಲಾಡಿದಂತಲ್ಲ
ಹೆಪ್ಪುಗಟ್ಟಿದ ನೀರು ಸುರಿಯುವಂತಿಲ್ಲ
ಹದವಾದ ಕಾವು ಕಣ್ಣ ಧರಿಸಬಲ್ಲದು ಮೊಟ್ಟೆ

ಕಾಯಬೇಕು ಕಾದಂತೆ ಮಾಗಬೇಕು
ಪದಗಳ ಮೆರವಣಿಗೆ ಅಲ್ಲ ಕವಿತೆ

ಮೆಲ್ಲಗೆ ಏರಿದಂತೆ ಹೂ ಮುಡಿಗೆ
ಮೂಗುತಿ ಮಿನುಗಿದಂತೆ ಕಣ್ಣ ನೆರಳಲಿ
ಹೊಸ್ತಿಲ ದಾಟಿದಂತೆ ಮಗು, ಬೆರಳು
ನುಣುಪಾಗಿ ಕುಂಕುಮ ಹಚ್ಚಿಕೊಂಡಂತೆ
ಬೆರಳ ಸಂಧಿಯಿಂದ ರಂಗೋಲಿ ನುಲಿದಂತೆ
ಬಿಡಿಸಿಕೊಂಡಂತೆ ಸೆರಗ ಮುಳ್ಳ ಬೇಲಿಯಿಂದ
ಹಾರಿ ಹೋದಂತೆ ಮೊದಲ ಬಾರಿ ಹಕ್ಕಿ ಬಾನಿಗೆ
ಈಜು ಕಲಿಸಿದಂತೆ ಮೀನು ಕರುಳ ಮರಿಗೆ
ಕಿವಿಯಲಿ ಹೇಳಿದಂತೆ ಮೊದಲ ಪ್ರೇಮವ
ಹೊಕ್ಕುಳಿನ ಬಳ್ಳಿ ಮೆಲ್ಲಗೆ ಕಟ್ಟಿದಂತೆ
ಬೆಳಗು ಮಗ್ಗುಲ ಬದಲಾಯಿಸಿದಂತೆ
ಕದಿವ ಚಿಟ್ಟೆ ಆ ಬದಿ ಮಕರಂದ ಬೆರೆಸಿದಂತೆ
ರೆಪ್ಪೆಗಳು ಧೂಳ ಜೊತೆ ಕದನಕ್ಕೆ ಇಳಿದಂತೆ

ಪದಗಳ ವೃಥಾ ಹತ್ಯೆ ಅಲ್ಲ ಕವಿತೆ
ಕವಿತೆ ಎಂದರೆ
ಕಾದ ಪದಗಳು ಹೆಣೆದ ಆತ್ಮದ ಬಟ್ಟೆ.
-ವಾಸುದೇವ ನಾಡಿಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.