ADVERTISEMENT

ಬಾಲಕಿಯರು ಡಿಜಿಟಲ್‌ ಸಾಕ್ಷರತೆಯಿಂದ ವಂಚಿತ

ಶೇ 42 ಬಾಲಕಿಯರಿಗೆ ದಿನಕ್ಕೆ 1 ಗಂಟೆಗೂ ಕಡಿಮೆ ಅವಧಿ ಮೊಬೈಲ್‌ ಫೋನ್‌ ಲಭ್ಯತೆ

ಪಿಟಿಐ
Published 23 ಜನವರಿ 2021, 13:21 IST
Last Updated 23 ಜನವರಿ 2021, 13:21 IST
ಚೀನಾದ ಶಾಂಘೈ ನಗರದಲ್ಲಿ ಮೊಬೈಲ್‌ ಫೋನ್‌ಗಳಿಂದಲೇ ಅಲಂಕಾರ ಮಾಡಲಾದ ಮೊಬೈಲ್‌ ಅಂಗಡಿಯ ಪಕ್ಕದಲ್ಲಿ ಬಾಲಕಿಯೊಬ್ಬಳು ಬೈಸಿಕಲ್‌ ತುಳಿಯುತ್ತಾ ಸಾಗಿದ ಸನ್ನಿವೇಶ (ರಾಯಿಟರ್ಸ್‌ ಚಿತ್ರ)
ಚೀನಾದ ಶಾಂಘೈ ನಗರದಲ್ಲಿ ಮೊಬೈಲ್‌ ಫೋನ್‌ಗಳಿಂದಲೇ ಅಲಂಕಾರ ಮಾಡಲಾದ ಮೊಬೈಲ್‌ ಅಂಗಡಿಯ ಪಕ್ಕದಲ್ಲಿ ಬಾಲಕಿಯೊಬ್ಬಳು ಬೈಸಿಕಲ್‌ ತುಳಿಯುತ್ತಾ ಸಾಗಿದ ಸನ್ನಿವೇಶ (ರಾಯಿಟರ್ಸ್‌ ಚಿತ್ರ)   

ನವದೆಹಲಿ: ಶೇ 42ರಷ್ಟು ಹದಿಹರೆಯದ ಬಾಲಕಿಯರಿಗೆ ದಿನಕ್ಕೆ ಒಂದು ಗಂಟೆಗಿಂತಲೂ ಕಡಿಮೆ ಅವಧಿಗೆ ಮೊಬೈಲ್‌ ಫೋನ್‌ಗಳನ್ನು ಬಳಕೆ ಮಾಡಲು ಅವಕಾಶ ನೀಡಲಾಗುತ್ತಿದೆ. ಅಲ್ಲದೆ ಮೊಬೈಲ್‌ ಫೋನ್‌ಗಳು ಇವರಿಗೆ ಅಸುರಕ್ಷಿತ ಮತ್ತು ಮನಸ್ಸನ್ನು ಬದಲಿಸುವ ವಸ್ತು ಎಂದು ಬಹುತೇಕ ಪೋಷಕರು ಅಭಿಪ್ರಾಯ ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಉಲ್ಲೇಖಿಸಿದೆ.

ಡಿಜಿಟಲ್‌ ಎಂಪವರ್‌ಮೆಂಟ್‌ ಪ್ರತಿಷ್ಠಾನದ (ಡಿಇಎಫ್‌) ಜೊತೆಗೂಡಿ ದೆಹಲಿ ಮೂಲದ ಸರ್ಕಾರೇತರ ಸಂಸ್ಥೆ(ಎನ್‌ಜಿಒ) ಸೆಂಟರ್‌ ಫಾರ್‌ ಕ್ಯಾಟಲೈಜಿಂಗ್‌ ಚೇಂಜ್‌ ಈ ಸಮೀಕ್ಷೆ ನಡೆಸಿದೆ.

ಭಾರತದಲ್ಲಿ ಹದಿಹರೆಯದ ಬಾಲಕಿಯರಿಗೆ ಡಿಜಿಟಲ್‌ ಉಪಕರಣಗಳ ಲಭ್ಯತೆಯ ಕುರಿತು ಕರ್ನಾಟಕ, ಅಸ್ಸಾಂ, ಹರಿಯಾಣ, ತಮಿಳುನಾಡು, ಉತ್ತರ ಪ್ರದೇಶ, ತೆಲಂಗಾಣ ಸೇರಿದಂತೆ 10 ರಾಜ್ಯಗಳ 29 ಜಿಲ್ಲೆಗಳಿಂದ 4,100ಕ್ಕೂ ಅಧಿಕ ಜನರ ಪ್ರತಿಕ್ರಿಯೆಯನ್ನು ಸಮೀಕ್ಷೆ ವೇಳೆ ಪಡೆಯಲಾಗಿದೆ.

ADVERTISEMENT

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಹಿನ್ನೆಲೆಯಲ್ಲಿ ಈ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಲಾಗಿದ್ದು, ಹರೆಯದ ಬಾಲಕಿಯರು, ಕುಟುಂಬ ಸದಸ್ಯರು, ಶಿಕ್ಷಕರು ಹಾಗೂ ಸಮುದಾಯ ಸಂಸ್ಥೆಗಳ ಸದಸ್ಯರಿಂದ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ.

ಕರ್ನಾಟಕದಲ್ಲಿ ಶೇ 65ರಷ್ಟು ಹೆಣ್ಣು ಮಕ್ಕಳಿಗೆ ಲಭ್ಯ

ಡಿಜಿಟಲ್‌ ಉಪಕರಣಗಳ ಲಭ್ಯತೆಯು ರಾಜ್ಯದಿಂದ ರಾಜ್ಯಕ್ಕೆ ಬದಲಾಗಿದೆ. ಕರ್ನಾಟಕದಲ್ಲಿ ಹರೆಯದ ಬಾಲಕಿಯರಿಗೆ ಡಿಜಿಟಲ್‌ ಉಪಕರಣಗಳು ಅಥವಾ ಮೊಬೈಲ್‌ ಫೋನ್‌ಗಳ ಲಭ್ಯತೆ ಅಧಿಕವಾಗಿದೆ. ಇಲ್ಲಿ ಶೇ 65ರಷ್ಟು ಬಾಲಕಿಯರು ಮೊಬೈಲ್‌ ಫೋನ್‌ ಬಳಕೆ ಮಾಡುತ್ತಿದ್ದಾರೆ. ಬಾಲಕಿಯರಿಗೆ ಹೋಲಿಸಿದರೆ ಬಾಲಕರಿಗೆ ಇವುಗಳ ಲಭ್ಯತೆ ಅಧಿಕವಾಗಿದೆ. ಹರಿಯಾಣದಲ್ಲಿ ಈ ವ್ಯತ್ಯಾಸವು ಅತ್ಯಧಿಕವಾಗಿದೆ.

ಹೆಣ್ಣು ಮಗಳು ಎಂಬ ಕಾರಣವೂ ಡಿಜಿಟಲ್‌ ಉಪಕರಣಗಳ ಲಭ್ಯತೆಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ಶೇ 65ರಷ್ಟು ಶಿಕ್ಷಕರು ಹಾಗೂ ಶೇ 60 ಸಮುದಾಯ ಸಂಸ್ಥೆಯ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹರೆಯದ ಬಾಲಕ, ಬಾಲಕಿಯರಿರುವ ಕುಟುಂಬವು ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಸೇರಿದಂತೆ ಇತರೆ ಡಿಜಿಟಲ್‌ ಉಪಕರಣಗಳನ್ನು ಖರೀದಿಸುವ ಸಾಮರ್ಥ್ಯ ಹೊಂದಿದ್ದರೂ, ಇವುಗಳ ಬಳಕೆಯಲ್ಲಿ ಪುರುಷರಿಗೆ ಆದ್ಯತೆ ಸಿಗುತ್ತಿದೆ ಎಂದು ಸಮೀಕ್ಷೆಯ ವೇಳೆ ಪತ್ತೆಯಾಗಿದೆ.

ಡಿಜಿಟಲ್‌ ಸಾಕ್ಷರತೆಯೂ ಇಲ್ಲ

ಕುಟುಂಬದ ಆರ್ಥಿಕ ಸಮಸ್ಯೆಯೂ ಡಿಜಿಟಲ್‌ ಉಪಕರಣಗಳ ಲಭ್ಯತೆಗೆ ಅಡೆತಡೆಯಾಗಿದೆ. ಶೇ 71ರಷ್ಟು ಬಾಲಕಿಯರ ಬಳಿ ಮೊಬೈಲ್‌ ಫೋನ್‌ ಇಲ್ಲ, ಏಕೆಂದರೆ ಇದನ್ನು ಖರೀದಿಸಲು ಬೇಕಾದ ಹಣ ಅವರ ಬಳಿ ಇಲ್ಲ. ಶೇ 81ರಷ್ಟು ಕುಟುಂಬಗಳು ಹಣಕಾಸು ಸಮಸ್ಯೆಯನ್ನು ಉಲ್ಲೇಖಿಸಿದ್ದರೆ, ಶೇ 79ರಷ್ಟು ಜನರ ಮನೆಯಲ್ಲಿ ಕಂಪ್ಯೂಟರ್ ಇಲ್ಲ. ಶೇ 32ರಷ್ಟು ಬಾಲಕಿಯರಿಗಷ್ಟೇ ಮೊಬೈಲ್‌ನಲ್ಲಿ ಕರೆ ಹೇಗೆ ಸ್ವೀಕರಿಸುವುದು ಎಂಬ ಮಾಹಿತಿ ಇದ್ದು, ಶೇ 26 ಬಾಲಕಿಯರಿಗೆ ಮೊಬೈಲ್‌ನಲ್ಲಿ ಇರುವ ಕ್ಯಾಲ್ಕುಲೇಟರ್‌, ಟಾರ್ಚ್‌, ಆ್ಯಪ್‌ಗಳನ್ನು ಬಳಕೆ ಮಾಡುವುದು ತಿಳಿದಿದೆ. ಡಿಜಿಟಲ್‌ ಸಾಕ್ಷರತೆಯಿಂದಲೂ ಅವರು ವಂಚಿತರಾಗಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಸಮೀಕ್ಷೆ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.