ADVERTISEMENT

ಚೊಚ್ಚಲ ಸಂಭ್ರಮ ಮುಗಿಯಿತಲ್ವೆ.. ಎರಡನೆಯದು ಯಾವಾಗ?

ಪವಿತ್ರಾ ರಾಘವೇಂದ್ರ ಶೆಟ್ಟಿ
Published 19 ಮಾರ್ಚ್ 2021, 19:30 IST
Last Updated 19 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಎಷ್ಟು ಮಕ್ಕಳನ್ನು ಮಾಡಿಕೊಳ್ಳಬೇಕು ಎಂಬ ಆಯ್ಕೆ ತಂದೆ– ತಾಯಿಗಿದ್ದರೂ ಕೂಡ ಕುಟುಂಬದವರು, ಸಂಬಂಧಿಕರು ‘ಇನ್ನೊಂದು ಮಗು ಮಾಡಿಕೊಳ್ಳಿ’ ಎಂದು ಸಲಹೆ ಕೊಡುವ ರೂಢಿ ಈಗಲೂ ಇದೆ. ಆದರೆ ತಮ್ಮ ಆರೋಗ್ಯ, ಆರ್ಥಿಕ ಸ್ಥಿತಿ ನೋಡಿಕೊಂಡು ಇನ್ನೊಂದು ಮಗು ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿದೆ.

‘ಮಗು ಎಷ್ಟೊಂದು ಹಟಮಾರಿ. ಅವನಿಗೊಂದು ತಮ್ಮನೊ ಅಥವಾ ತಂಗಿಯೊ ಬಂದರೆ ಈ ಮೊಂಡಾಟವೆಲ್ಲ ಕಮ್ಮಿಯಾಗಿ ಬಿಡುತ್ತದೆ ನೋಡಿ’

ಸಮಾರಂಭವೊಂದರಲ್ಲಿ ನಾಲ್ಕು ವರ್ಷದ ಮಗನನ್ನು ಸಂಭಾಳಿಸಲು ಕಷ್ಟಪಡುತ್ತಿದ್ದಾಕೆಗೆ ಪಕ್ಕದಲ್ಲಿ ಕುಳಿತ ಮಧ್ಯ ವಯಸ್ಸಿನ ಮಹಿಳೆ ಹೇಳಿದಾಗ ‘ಈಗಿನ ಕಾಲದಲ್ಲಿ, ಗಂಡ– ಹೆಂಡತಿ ಇಬ್ಬರೇ ಇರುವ ಕುಟುಂಬದಲ್ಲಿ ಒಂದು ಮಗುವನ್ನು ಹೊತ್ತು, ಹೆತ್ತು, ಸಾಕಿ, ಭವಿಷ್ಯ ರೂಪಿಸುವ ಕಷ್ಟವೇ ಸಾಕಾಗಿರುವಾಗ ಇನ್ನೊಂದು ಮಗು ಮಾಡಿಕೊಳ್ಳಬೇಕೆಂಬ ಉಪದೇಶ..’ ಎಂದು ಗೊಣಗಿಕೊಂಡಳು, ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿರುವ ಪ್ರತೀಕ್ಷಾ.

ADVERTISEMENT

ಅಪರಿಚಿತರಿಂದಲೇ ಇಂತಹ ಸಲಹೆ ಬರುವಾಗ ಇನ್ನು ಕುಟುಂಬದವರಿಂದ, ಸಂಬಂಧಿಕರಿಂದ, ಪರಿಚಿತರಿಂದ ಪುಂಖಾನುಪುಂಖ ಸಲಹೆಗಳು ಬರುವುದು ಮಾಮೂಲು. ಮನೆಯಲ್ಲಿ ಒಂದು ಮಗು ಇದ್ದು ಅದು ತೀರಾ ಮೊಂಡಾಟಕ್ಕೆ ಬಿದ್ದು ಹೇಳಿದ್ದನ್ನು ಕೇಳದೇ, ತನಗೆ ಬೇಕನಿಸಿದ್ದನ್ನು ಈಗಲೇ ತಂದುಕೊಡು ಎಂದು ಹಟಮಾರಿಯಾಗಿ ವರ್ತಿಸಿದರೆ ಅಜ್ಜಿಯಂದಿರಂತೂ ‘ಇನ್ನೊಂದು ಮಗು ಮಾಡಿಕೊಂಡಿದ್ದರೆ ಈ ಕಷ್ಟ ಇರುತ್ತಿತ್ತಾ…? ಮನೆಗೆ ಇನ್ನೊಂದು ಮಗು ಬಂದ್ರೆ ದೊಡ್ಡ ಮಕ್ಕಳು ಹಟ ಮಾಡುವುದು ನಿಲ್ಲಿಸಿ ಸಭ್ಯರಾಗುತ್ತಾರೆ’ ಎಂದು ಅನುಭವಿ ಮಾತನ್ನು ಹೇಳುತ್ತಿರುತ್ತಾರೆ.

ಅದರಲ್ಲೂ ಮೊದಲನೇ ಮಗು ಗಂಡಾಗಿದ್ದರೆ ‘ಎರಡನೇ ಮಗು ಹೆಣ್ಣಾದರೆ ಚೆನ್ನಾ. ‘‘ಆರತಿಗೊಬ್ಬಳು, ಕೀರ್ತಿಗೊಬ್ಬ’’ ಅಲ್ಲವೇ?’ ಎನ್ನುವವರು ಸಾಕಷ್ಟು ಮಂದಿ. ಇನ್ನು ಮೊದಲನೆಯದು ಹೆಣ್ಣಾಗಿದ್ದರೆ ‘ಒಂದು ಗಂಡು ಮಗು ಇದ್ದರೆ ಮುಂದೆ ಆಸರೆಗಾಗುತ್ತಾನೆ’ ಎಂಬ ಹಾಗೇ ಮಾತನಾಡುತ್ತಿರುತ್ತಾರೆ. ಕೆಲವರು ಮೊದಲನೇ ಮಗು ಹೆಣ್ಣಾಗಿದ್ದರೆ ಮತ್ತೊಮ್ಮೆ ಗರ್ಭದಾರಣೆಗೆ ತುಸು ಭಯ ಪಡುವವರೂ ಇದ್ದಾರೆ. ಹೊರಗಡೆ ‘ಹೆಣ್ಣು– ಗಂಡು ಎರಡೂ ಸಮಾನ. ನನಗೇನೋ ಹೆಣ್ಣೇ ಇಷ್ಟ’ ಎಂದುಕೊಂಡರೂ ‘ಇನ್ನೊಂದು ಹೆಣ್ಣು ಮಗು ಹುಟ್ಟಿದರೆ ಏನು ಮಾಡುವುದು..?’ ಎಂದು ಒಳಗೊಳಗೇ ಹೆದರಿ ಒಂದೇ ಮಗು ಸಾಕಪ್ಪ ಎನ್ನುವವರೂ ಇದ್ದಾರೆ.

‘ಮಕ್ಕಳಿರಲವ್ವ ಮನೆ ತುಂಬ..’ ಎಂಬ ಮಾತು ಮರೆತು ಹಲವು ದಶಕಗಳೇ ಕಳೆದಿವೆ. ಈಗ ಮನೆಯಲ್ಲಿ ಒಂದು ತಪ್ಪಿದರೆ ಎರಡು ಮಕ್ಕಳು ಇದ್ದರೆ ಅದೇ ಹೆಚ್ಚು. ಕೆಲವು ವರ್ಷಗಳಿಂದ ಒಂದೇ ಮಗು ಸಾಕು ಎಂದುಕೊಂಡವರು ಬಹಳಷ್ಟು ಮಂದಿ. ಈಗೀಗ ಮಗು ಇಲ್ಲದಿದ್ದರೂ ಪರವಾಗಿಲ್ಲ ಎಂಬ ನಿರ್ಧಾರ ತಳೆದ ದಂಪತಿಗಳಿಗೂ ಕೊರತೆಯಿಲ್ಲ. ಮಕ್ಕಳನ್ನು ಸಾಕುವುದಕ್ಕೆ ಆಸ್ತಿ ಎಷ್ಟಿದೆ…? ಎಂದು ಪ್ರಶ್ನಿಸುವವರೂ ಇದ್ದಾರೆ.

ಮೊದಲ ಸಂಭ್ರಮ
ಮೊದಲ ಬಾರಿ ಗರ್ಭ ಧರಿಸಿದಾಗ ಮಗುವಿನ ಆಗಮನಕ್ಕಾಗಿ ಮೆತ್ತಗಿನ ಹಾಸಿಗೆ, ಒಂದಷ್ಟು ಕಾಟನ್ ಸೀರೆ, ಅದಕ್ಕೆಂದೇ ಒಂದಷ್ಟು ಆಟದ ಸಾಮಾನು.. ಹೀಗೆ ಎಲ್ಲಾ ತಯಾರಿ ಮಾಡಿಕೊಳ್ಳುವವರಲ್ಲಿ ಅದೇ ಎರಡನೇ ಮಗುವಿನ ವಿಷಯಕ್ಕೆ ಬಂದಾಗ ಈ ತಯಾರಿಯಲ್ಲಿ ತುಸು ಬದಲಾವಣೆ ಕಂಡು ಬರುವುದು ಸಹಜ. ಮೊದಲನೇ ಮಗುವನ್ನು ಸಾಕಿ ಬೆಳೆಸಿದ ಒಂದು ಅನುಭವ ಕೂಡ ಜತೆಗೆ ಇರುವುದರಿಂದ ಆಮೇಲೆ ನೋಡಿಕೊಂಡರಾಯ್ತು ಎಂಬ ಭಾವವೊಂದು ಇರುತ್ತದೆ. ಹೀಗಾಗಿ ಮೊದಲನೇ ಮಗು ಮಾಡಿಕೊಳ್ಳುವಾಗ ವಹಿಸುವ ಆಸ್ಥೆ ಎರಡನೇ ಮಗು ಮಾಡಿಕೊಳ್ಳುವಾಗ ತುಸು ಕಡಿಮೆ ಎನ್ನಬಹುದು.

ಕುಟುಂಬ ಬೆಳೆಯಬೇಕು ಎಂಬ ಆಸೆಯಿಂದ ಅಥವಾ ಎರಡು ಮಕ್ಕಳು ಇದ್ದರೆ ವಯಸ್ಸಾದ ಕಾಲದಲ್ಲಿ ಒಬ್ಬರಲ್ಲದಿದ್ದರೆ ಇನ್ನೊಬ್ಬರಾದರೂ ನೋಡಿಕೊಳ್ಳುತ್ತಾರೆ ಎಂಬಿತ್ಯಾದಿ ನಿರೀಕ್ಷೆಗಳು ಕೆಲವರಲ್ಲಿ ಇರಬಹುದು. ಆದರೆ ವೃದ್ಧ ತಂದೆ– ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಡುವ ಮಕ್ಕಳನ್ನು ಕಂಡಾಗ ಒಂದಿದ್ದರೂ ಅಷ್ಟೆ, ಇಲ್ಲದಿದ್ದರೂ ಅಷ್ಟೆ... ಎಂದುಕೊಂಡು ತಮ್ಮ ಆರ್ಥಿಕ ಸ್ಥಿತಿ, ಆರೋಗ್ಯದ ಬಗ್ಗೆ ಗಮನಹರಿಸುವ ಪೋಷಕರೇ ಹೆಚ್ಚು. ಇದು ಅನಿವಾರ್ಯ ಕೂಡ!

ಬದ್ಧತೆ ಮೊದಲು
ಮೊದಲನೇ ಮಗುವಿನ ಲಾಲನೆ– ಪಾಲನೆ, ನಿದ್ರೆ ಇಲ್ಲದ ರಾತ್ರಿ, ಹೆರಿಗೆ ನಂತರ ಹೆಚ್ಚಾದ ದೇಹ ತೂಕವನ್ನು ಕರಗಿಸಿಕೊಳ್ಳುವುದು, ಮಗು ಬಂದ ಮೇಲೆ ಹೆಚ್ಚಾದ ಖರ್ಚುಗಳು, ಇವೆಲ್ಲದರ ನಡುವೆ ಮತ್ತೆ ಕಚೇರಿ ಕೆಲಸಕ್ಕೆ ಹೋಗುವುದು.. ಹೀಗೆ ಉದ್ದನೆಯ ಪಟ್ಟಿ ಎದುರಿಗಿರುತ್ತದೆ. ಈ ಕಾರಣದಿಂದ ಎರಡನೇ ಮಗುವನ್ನು ಮಾಡಿಕೊಳ್ಳುವುದು ತುಸು ತಡವಾಗಿರುತ್ತದೆ. ಒಂದು 5 ವರ್ಷ ಹೋಗಲಿ, ಈ ಮಗು ದೊಡ್ಡದಾಗಿರುತ್ತದೆ ಆಮೇಲೆ ನೋಡಿಕೊಂಡರಾಯ್ತು ಎಂಬ ಭಾವ. ಕೆಲವರಿಗೆ ಬೇರೆ ಇನ್ಯಾವುದೋ ಬದ್ಧತೆಗಳಿಂದ ಎರಡನೇ ಮಗುವಿನ ಬರುವಿಕೆಗೆ ಸ್ವಾಗತ ಕೋರುವುದು ತುಸು ತಡವೇ ಎನ್ನಬಹುದು!

‘ಒಂದು ಮಗು ಹೆತ್ತಿದ್ದೇವೆ. ಇನ್ನೊಂದು ಮಗು ಸದ್ಯಕಂತೂ ಬೇಡ. ಈಗಲೇ ನಿದ್ದೆ ಇಲ್ಲ. ಹೋಗಬೇಕೆಂದ ಕಡೆ ಹೋಗುವ ಹಾಗಿಲ್ಲ. ಹಟಮಾರಿ ಮಗುವಿನ ಜತೆಗೆ ಇನ್ನೊಂದು ಮಗುವನ್ನು ಹೆತ್ತು ಸಾಕುವುದು ಎಂದರೆ ತಮಾಷೆಯಾ…?’ ಎಂಬ ಮಾತು ಕೂಡ ಮೊದಲನೇ ಮಗುವಿನ ಲಾಲನೆ– ಪಾಲನೆಯಲ್ಲಿ ಸೋತು ಸುಣ್ಣವಾದ ತಾಯಂದಿರ ಬಾಯಲ್ಲಿ ಬರುತ್ತಿರುತ್ತದೆ.

ಇನ್ನು ತಾಯ್ತನದ ಹೊಸತನ, ಕಲಿಯುವುದಕ್ಕೆ ತುಂಬಾ ಇದೆ ಎಂಬ ಕುತೂಹಲ ಎರಡನೇ ಮಗುವಿನ ಸಂದರ್ಭದಲ್ಲಿ ಸ್ವಲ್ಪ ಕಡಿಮೆ ಆಗಿರುತ್ತದೆ. ಹಾಗೇ ಈಗಷ್ಟೇ ಡಯೆಟ್, ಯೋಗ ಎಂದೆಲ್ಲಾ ದಂಡಿಸಿಕೊಂಡ ದೇಹ ಕೂಡ ಸ್ವಲ್ಪ ಮಟ್ಟಿಗೆ ಫಿಟ್ ಆಗಿರುತ್ತದೆ. ಮಗು ಕೂಡ ನರ್ಸರಿ, ಎಲ್‌ಕೆಜಿ ಎಂದು ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಹೋಗಿರುತ್ತದೆ. ಊಟ ತಿನ್ನಿಸುವುದು, ನಿದ್ರೆ ಮಾಡಿಸುವುದು ಒಂದಷ್ಟು ಕೆಲಸಗಳು ಕೂಡ ತುಸು ಕಡಿಮೆಯಾಗಿರುತ್ತವೆ. ಎರಡನೆಯ ಮಗುವೆಂದರೆ ಮತ್ತದೇ ಗರ್ಭಧಾರಣೆ, ಹೆರಿಗೆ, ಚಿಕ್ಕಮಗುವಿನ ಪಾಲನೆ, ನಿದ್ರೆಗೆಡುವುದು, ಉದ್ಯೋಗದ ಮಧ್ಯೆ ಮಗುವಿಗೆ ನೀಡಲು ಸಮಯದ ಅಭಾವ.. ಹೀಗೆ ಅದೇ ಚಕ್ರದೊಳಗೆ ಸುತ್ತಬೇಕು ಎಂದಾಗ ತುಸು ಅಂಜಿಕೆ ಇರುವುದು ಸಹಜವೆನ್ನಬಹುದೇನೋ!

* ಎರಡನೇ ಮಗು ಎನ್ನುವುದು ಒಂದು ಆಯ್ಕೆ ಆದರೆ ಪರವಾಗಿಲ್ಲ. ಆದರೆ ನಿಮ್ಮ ಭಾವನೆಗಳನ್ನು ಮಗುವಿನ ಮೇಲೆ ಹೇರುವುದಕ್ಕೆ ಹೋಗಬೇಡಿ. ಇದು ಮಕ್ಕಳಲ್ಲಿ ಸೆಕೆಂಡ್ ಚೈಲ್ಡ್‌ ಸಿಂಡ್ರೋಮ್‌ಗೆ ಕಾರಣವಾಗುತ್ತದೆ.

* ಮಗು ನಿಮಗೆ ಬೇಕು ಅನಿಸಿದಾಗ ಮಾಡಿಕೊಳ್ಳಿ. ಒತ್ತಾಯಕ್ಕೆ ಮಣಿದು ಮಗುವನ್ನು ಮಾಡಿಕೊಳ್ಳಬೇಡಿ.

* ಮೊದಲನೇ ಮಗು, ಎರಡನೇ ಮಗುವಿನ ನಡುವೆ ಅಂತರ ತುಸು ಕಡಿಮೆ ಇರಲಿ.

* ನಿಮ್ಮ ಆರೋಗ್ಯ, ಆರ್ಥಿಕ ಸ್ಥಿತಿ ಎಲ್ಲವೂ ಗಮನದಲ್ಲಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.