ADVERTISEMENT

ಸ್ಪಂದನ: ಗರ್ಭಧಾರಣೆಗೆ ವಯಸ್ಸಿನ ಆತಂಕ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 19:30 IST
Last Updated 26 ಫೆಬ್ರುವರಿ 2021, 19:30 IST
ಡಾ. ವೀಣಾ ಎಸ್‌. ಭಟ್‌
ಡಾ. ವೀಣಾ ಎಸ್‌. ಭಟ್‌   

ಪ್ರಶ್ನೆ: ನನಗೆ 33 ವರ್ಷ, ಮದುವೆಯಾಗಿ 5 ತಿಂಗಳುಗಳಾಗಿವೆ. ಇನ್ನೂ ಗರ್ಭ ಧರಿಸಿಲ್ಲ. ತಡವಾದರೆ ಗರ್ಭ ನಿಲ್ಲುವುದಿಲ್ಲವೆಂಬ ಭಯ. ಎರಡು ತಿಂಗಳುಗಳಿಂದ ಋತುಸ್ರಾವದ ನಂತರ ವಿಪರೀತ ಹೊಟ್ಟೆನೋವು ಮತ್ತು ಹೆಚ್ಚು ರಕ್ತಸ್ರಾವ ಆಗುತ್ತಿದೆ. ಏನು ಮಾಡಲಿ?

- ಹೆಸರು, ಊರು ಬೇಡ

ನಿಮ್ಮ ವಯಸ್ಸಿನಲ್ಲಿ ನೋವಿನಿಂದ ಕೂಡಿದ ಋತುಸ್ರಾವಕ್ಕೆ ಕಾರಣಗಳೆಂದರೆ ಗರ್ಭಕೋಶದ ನಾರುಗಡ್ಡೆಗಳು (ಫೈಬ್ರಾಯಿಡ್) ಮತ್ತು ಗರ್ಭಕೋಶ, ಅಂಡಾಶಯ, ಗರ್ಭನಾಳಗಳ ಸೋಂಕು (ಪಿ.ಐ.ಡಿ). ಇವಲ್ಲದೆ ಎಂಡೋಮೆಟ್ರಿಯೋಸಿಸ್ ಅಂದರೆ ಗರ್ಭಕೋಶದ ಒಳಪದರ ಅಂಗಾಂಶವು ಬೇರೆಡೆಗೆ ಇದ್ದು ದೀರ್ಘಾವಧಿ ಉರಿಯೂತ ಉಂಟುಮಾಡುವ ಸ್ಥಿತಿ (ಗರ್ಭನಾಳ, ಅಂಡಾಶಯ, ಸುತ್ತಲಿನ ಕರುಳು ಇತ್ಯಾದಿ ಜಾಗದಲ್ಲಿ), ಒಳಪದರ ಗರ್ಭಕೋಶದ ಸ್ನಾಯುವನ್ನು ಆಕ್ರಮಿಸಿದರೆ ಆ ಸ್ಥಿತಿಯನ್ನು ಅಡಿನೋಮಯೋಸಿಸ್ ಅನ್ನುತ್ತೇವೆ. ಈ ಮೇಲಿನ ಕಾರಣಗಳಿದ್ದರೆ ಋತುಚಕ್ರದಲ್ಲಿ ವಿಪರೀತ ನೋವು ಸಾಮಾನ್ಯ. ಹಾಗಾಗಿ ಮೊದಲು ತಜ್ಞ ವೈದ್ಯರ ಸಲಹೆಯ ಮೇರೆಗೆ ಒಂದು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿದರೆ ಕಾರಣ ಗೊತ್ತಾಗುತ್ತದೆ. ಎಲ್ಲದಕ್ಕೂ ಸೂಕ್ತ ಚಿಕಿತ್ಸೆ ಲಭ್ಯವಿದೆ. ನಿಮ್ಮ ವಿವಾಹವೇ ತಡವಾಗಿ ಆಗಿದೆ. ಇನ್ನೂ ವಯಸ್ಸಾದರೆ ಅಂಡಾಣು ಬಿಡುಗಡೆಯಾಗುವ ಸಂಭವವೂ ಕಡಿಮೆಯಾಗುತ್ತಾ ಹೋಗುವುದರಿಂದ ಮಕ್ಕಳಾಗುವುದು ಕಷ್ಟವಾಗಬಹುದು. ನಿರ್ಲಕ್ಷಿಸದೆ ಚಿಕಿತ್ಸೆಗಾಗಿ ತಜ್ಞವೈದ್ಯರನ್ನು ಆದಷ್ಟು ಬೇಗ ಸಂಪರ್ಕಿಸಿ.

ADVERTISEMENT

ಪ್ರಶ್ನೆ: ನನಗೆ 22 ವರ್ಷ. ಆರಂಭದಿಂದಲೂ 3–4 ವಾರ ಅಥವಾ ಐದು ವಾರಗಳಿಗೆ ಒಮ್ಮೆ ಮುಟ್ಟಾಗುತ್ತದೆ. 2-3 ದಿನ ಸಹಜ ಸ್ರಾವವಾಗಿ ನಂತರ ಎರಡು ದಿನ ಕಡಿಮೆ ಸ್ರಾವವಾಗಿ ನಿಂತುಹೋಗುತ್ತದೆ. ಐದು ವಾರಗಳಿಗೆ ಒಮ್ಮೆ ಮುಟ್ಟಾದರೆ ಮಕ್ಕಳಾಗುತ್ತವೆಯೇ? ತಿಳಿಸಿ.

- ಹೆಸರು, ಊರು ಬೇಡ

ಐದು ವಾರಗಳಿಗೆ ಒಮ್ಮೆ ಮುಟ್ಟಾದರೆ ಮಕ್ಕಳಾಗುವುದಕ್ಕೆ ಏನೂ ತೊಂದರೆಯಿಲ್ಲ. ಸಹಜ ಋತುಚಕ್ರವೆಂದರೆ 22 ದಿನದಿಂದ 35 ದಿನದೊಳಗೆ (3 ರಿಂದ 5 ವಾರ) ಋತುಚಕ್ರ ಯಾವಾಗಲಾದರೂ ಸಂಭವಿಸಬಹುದು. ಅದು ಅವರವರ ದೇಹಸ್ಥಿತಿಗೆ ಅನುಗುಣವಾಗಿರುತ್ತದೆ. ಪ್ರತಿ ಹೆಣ್ಣಿಗೂ ಮಾಸಿಕ ಋತುಚಕ್ರದ ಕನಿಷ್ಠ ವೈಜ್ಞಾನಿಕ ಮಾಹಿತಿಯಾದರೂ ಗೊತ್ತಿರಲೇಬೇಕು.

ಪ್ರಾಪ್ತ ವಯಸ್ಸಿಗೆ ಬಂದಾಗ ಮೆದುಳಿನ ಹೈಪೋಥಲಾಮಸ್-ಪಿಟ್ಯೂಟರಿ ಗ್ರಂಥಿಯನ್ನು ಪ್ರಚೋದಿಸಿ ಎಫ್‌ಎಸ್‌ಹೆಚ್ (FSH) ಎಂಬ ಹಾರ್ಮೋನ್‌ ಬಿಡುಗಡೆ ಮಾಡುತ್ತದೆ. ಆ ಮೂಲಕ ಅಂಡಾಶಯವನ್ನು ಪ್ರಚೋದಿಸಿ ಅಂಡಾಶಯದಿಂದ ಈಸ್ಟ್ರೋಜೆನ್ ಹಾರ್ಮೋನ್ ಉತ್ಪಾದನೆಯಾಗುತ್ತದೆ. ನಂತರ ಎಲ್‌ಹೆಚ್ (LH) ಹಾರ್ಮೋನ್‌ನ ಅಧಿಕ ಸ್ರಾವವಾಗಿ ಅಂಡಾಶಯದಲ್ಲಿ ಒಂದೇ ಕೋಶಿಕೆ ಪಕ್ವವಾಗಿ ಅಂಡಾಣು ಬಿಡುಗಡೆಯಾಗುತ್ತದೆ. ಅಂಡಾಣು ಬಿಡುಗಡೆಯ ನಂತರ ಕೋಶಿಕೆಯು ಕಾರ್ಪಸ್‌ಲೂಟಿಯಮ್ ಆಗಿ ಪರಿವರ್ತನೆ ಹೊಂದಿ ಪ್ರೊಜೆಸ್ಟಿರಾನ್ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಅಂಡಾಣು ಬಿಡುಗಡೆಯಾಗಿ 48 ಗಂಟೆಯೊಳಗೆ ವೀರ್ಯಾಣುವಿನೊಡನೆ ಸಮಾಗಮವಾಗಿ ಗರ್ಭಧಾರಣೆಯಾಗದಿದ್ದಲ್ಲಿ 14 ದಿನದ ನಂತರ ಋತುಸ್ರಾವವಾಗುತ್ತದೆ. ಅಂಡಾಣು ಬಿಡುಗಡೆಯಾಗುವುದೇ ತಡವಾದರೆ ಉದಾ: 20ನೇ ದಿನಕ್ಕೆ ಆಯಿತೆಂದರೆ 34ನೇ ದಿನಕ್ಕೆ ಮುಟ್ಟಾಗುತ್ತದೆ. ಅಂಡೋತ್ಪತ್ತಿ 14ನೇ ದಿನಕ್ಕಾದರೆ 28 ದಿನಕ್ಕೆ ಮುಟ್ಟಾಗುತ್ತದೆ. ಆದ್ದರಿಂದ ನಿಮ್ಮದು ಸಹಜ ಋತುಚಕ್ರವೇ. ಯಾವುದೇ ಆತಂಕ ಬೇಡ. ಧೈರ್ಯದಿಂದಿರಿ.

ಪ್ರಶ್ನೆ: ನನಗೆ 22 ವರ್ಷ. ನಾನು 45 ಕೆ.ಜಿ. ತೂಕವಿದ್ದು ಇನ್ನೂ ಮದುವೆಯಾಗಿಲ್ಲ, ವಿದ್ಯಾರ್ಥಿನಿ. ಎರಡು ತಿಂಗಳುಗಳಿಂದ ನನಗೆ ಮುಟ್ಟಾಗಿಲ್ಲ. ಸ್ಕ್ಯಾನಿಂಗ್ ವರದಿ, ಥೈರಾಯಿಡ್ ವರದಿ ಸರಿಯಾಗಿದೆ. ಹೀಮೊಗ್ಲೋಬಿನ್ ಮಟ್ಟವು ಸಾಮಾನ್ಯವಿದೆ. ಈ ರೀತಿ ಮುಟ್ಟಾಗದಿರಲು ಕಾರಣವೇನು? ಪರಿಹಾರ ತಿಳಿಸಿ.

- ಹೆಸರು, ಊರು ಇಲ್ಲ

ನಿಮಗೆ ಥೈರಾಯಿಡ್ ಅಥವಾ ತೂಕದ ಕಾರಣಗಳಿಂದ ಮುಟ್ಟಿನ ಏರುಪೇರಾಗಿಲ್ಲ ಎಂಬುದು ಸ್ಪಷ್ಟ. ಆದರೆ ಋತುಚಕ್ರ ನಿಯಮಿತವಾಗಲೂ ಹಿಂದಿನ ಉತ್ತರದಲ್ಲಿ ತಿಳಿಸಿದ ಹಾಗೆ ಹೈಪೋಥಲಾಮಸ್-ಪಿಟ್ಯೂಟರಿ-ಅಂಡಾಶಯ-ಅಕ್ಷೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ನಿಮಗೆ ಮಾನಸಿಕ ಒತ್ತಡಗಳಿದ್ದಾಗಲೂ (ಪರೀಕ್ಷೆ ಬಗ್ಗೆ, ಉದ್ಯೋಗ ಹಾಗೂ ವಿವಾಹದ ಬಗ್ಗೆ) ಹಾರ್ಮೋನ್‌ ಅಸಮತೋಲನ ಉಂಟಾಗಿ ಅದು ಮೆದುಳಿನ ಮಟ್ಟದಲ್ಲಿ ಪ್ರಭಾವ ಬೀರಿ ಈ ಹೈಪೋಥಲಾಮಸ್-ಪಿಟ್ಯೂಟರಿ-ಅಂಡಾಶಯ-ಅಕ್ಷೆ ಮೇಲೆ ಪರಿಣಾಮ ಉಂಟುಮಾಡಿ ಮುಟ್ಟು ಬರದೆ ಇರಲು ಸಾಧ್ಯವಿದೆ. ನಿಮ್ಮ ಮನಸ್ಸಿಗೆ ಒತ್ತಡವಾಗಿದ್ದಲ್ಲಿ ಪಾಲಕರೊಂದಿಗೆ, ಆಪ್ತಸ್ನೇಹಿತೆಯರಲ್ಲಿ ಮನಬಿಚ್ಚಿ ಮಾತನಾಡಿ, ಉತ್ತಮ ಸಂಗೀತ ಆಲಿಸಿ, ಉತ್ತಮ ಸಾಹಿತ್ಯ ಓದಿ ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ನಂತರವೂ ಮುಟ್ಟಾಗದಿದ್ದಲ್ಲಿ ತಜ್ಞವೈದ್ಯರನ್ನು ಸಂಪರ್ಕಿಸಿ.

ಸ್ಪಂದನ

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌ ಅವರು ಉತ್ತರಿಸಲಿದ್ದಾರೆ.ಪ್ರಶ್ನೆಗಳನ್ನು bhoomika@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.