ADVERTISEMENT

ಪೋಷಕಸ್ನೇಹಿ ಕಚೇರಿ; ಅವಳಿಗಿಲ್ಲ ಕಿರಿಕಿರಿ!

ಮಂಜುಶ್ರೀ ಎಂ.ಕಡಕೋಳ
Published 27 ಆಗಸ್ಟ್ 2021, 19:30 IST
Last Updated 27 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುವ ಶಾಲಿನಿಗೆ ತನ್ನ ಆರು ತಿಂಗಳ ಮಗುವನ್ನು ಕೆಲಸದಾಕೆಯ ಕೈಗೊಪ್ಪಿಸಿ ಕಚೇರಿಗೆ ಬರುವಾಗ ನಿತ್ಯವೂ ಮನಸಿನಲ್ಲಿ ಕಸಿವಿಸಿ. ಕಚೇರಿಗೆ ಬಂದರೂ ಚಿತ್ತವೆಲ್ಲಾ ಮಗುವಿನತ್ತಲೇ. ಮೀಟಿಂಗ್‌ ಮಧ್ಯೆ ಮನೆಯಿಂದ ಕರೆ ಬಂದಾಗಲೆಲ್ಲ ಸಹೋದ್ಯೋಗಿಗಳ ನೋಟ ಎದುರಿಸಲಾಗದೇ ಒಳಗೊಳಗೇ ತಳಮಳಿಸುತ್ತಾಳೆ. ಪ್ರಮುಖ ಪ್ರಾಜೆಕ್ಟ್‌ವೊಂದರ ಜವಾಬ್ದಾರಿ ಅವಳ ಹೆಗಲೇರಿದಾಗ ಅದನ್ನು ಯಶಸ್ವಿಯಾಗಿ ಮುಗಿಸುವಷ್ಟು ಸಮಯ ತನಗೆ ಸಿಗುವುದೇ ಎನ್ನುವ ಪ್ರಶ್ನೆ ಅವಳದು.

ಶಾಲಿನಿಯ ತಳಮಳಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಾಸ್ ಒಂದು ದಿನ ಅವಳ ಇಡೀ ಕ್ಯಾಬಿನ್ ಅನ್ನು ಮಗುಸ್ನೇಹಿಯಾಗಿ ರೂಪಿಸಿ ಅಚ್ಚರಿ ಮೂಡಿಸಿದಾಗ ಅವಳ ಕಣ್ಣಂಚಿನಲ್ಲಿ ಸದ್ದಿಲ್ಲದೇ ಹನಿಯೊಂದು ಜಾರಿತ್ತು. ‘ನೀನಿನ್ನು ನಿನ್ನ ಮಗುವನ್ನು ಕಚೇರಿಗೆ ಕರೆದುಕೊಂಡು ಬರಬಹುದು. ಅದಕ್ಕಾಗಿ ಈ ತೊಟ್ಟಿಲು’ ಎಂದು ಬಾಸ್ ಹೇಳಿದಾಗ ಕಚೇರಿಯೊಂದು ಹೀಗೂ ಇರಬಹುದೇ ಎನ್ನುವ ಅಚ್ಚರಿ ಅವಳದಾಗಿತ್ತು.

ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣವೊಂದರಲ್ಲಿ ಬಂದಿದ್ದ ಜಾಹೀರಾತಿನ ತುಣುಕಿದು. ಇದಕ್ಕೆ ಇಂಬುಗೊಡುವಂತೆ ತಿಂಗಳ ಹಿಂದೆಯಷ್ಟೇ ಅಮೆರಿಕದ ಮಿಸ್ಸೋರಿ ರಾಜ್ಯದ ಸೇಂಟ್ ಲೂಯಿಸ್ ನಗರದ ಮ್ಯಾಗಿ ಮುಂಡ್‌ವಿಲ್ಲರ್ ಅವರ ಇಂಥದ್ದೇ ವಿಡಿಯೊವೊಂದು ವೈರಲ್ ಆಗಿದೆ.

ADVERTISEMENT

‌ಕೋವಿಡ್ ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ ಕೆಲಸ ಕಳೆದುಕೊಂಡಿದ್ದ ಮ್ಯಾಗಿ, ಎರಡನೇ ಅಲೆಯ ವೇಳೆಗೆ ತನ್ನ ಒಂದು ವರ್ಷದ ಮಗುವಿನ ಪೋಷಣೆಯ ಖರ್ಚು ನಿಭಾಯಿಸಲು ಉದ್ಯೋಗ ಮಾಡಲು ಮುಂದಾಗುತ್ತಾರೆ. ಹೊಸ ಉದ್ಯೋಗಕ್ಕಾಗಿ ಸಂದರ್ಶನದ ಕರೆ ಬಂದಾಗ ಮ್ಯಾಗಿ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಸಂದರ್ಶನದ ಸಮಯದಲ್ಲಿ ಮಗುವನ್ನು ಬಿಟ್ಟು ಹೋಗುವ ಸ್ಥಿತಿ ಎದುರಾದಾಗ ಅವರಿಗಾದ ಸಂಕಟ ಅಷ್ಟಿಷ್ಟಲ್ಲ. ಸಂದರ್ಶಕರಲ್ಲಿ ‘ನನಗೆ ಮಗುವಿದ್ದು, ಸಂದರ್ಶನಕ್ಕೆ ಬೇರೆ ಸಮಯ ನಿಗದಿ ಪಡಿಸಲು ಸಾಧ್ಯವೇ’ ಎಂದು ಮ್ಯಾಗಿ ಕೋರಿದಾಗ, ಅತ್ತಲಿಂದ ಬಂದ ಪ್ರತಿಕ್ರಿಯೆ ‘ನಮ್ಮ ಕಚೇರಿ ಮಕ್ಕಳ ಸ್ನೇಹಿಯಾಗಿದೆ’ ಎಂದಾಗಿತ್ತು!

ಈ ಪ್ರತಿಕ್ರಿಯೆಗೆ ಅಚ್ಚರಿ ವ್ಯಕ್ತಪಡಿಸಿದ್ದ ಮ್ಯಾಗಿ, ‘ಇದು ನಿಜವೇ’ ಎಂದು ಕೇಳಿದಾಗ ಸಂದರ್ಶಕರು ‘ಹೌದು. ನಿಮ್ಮ ಮಗುವನ್ನೂ ಜತೆಗೆ ಕರೆದುಕೊಂಡು ಬನ್ನಿ’ ಎಂದೂ ಆಹ್ವಾನಿಸಿದರು.

ಈ ವಿಚಾರ ಕುರಿತು ಮ್ಯಾಗಿ ಹಂಚಿಕೊಂಡ ವಿಡಿಯೊ ಜಗತ್ತಿನ ವಿವಿಧೆಡೆ ಸಣ್ಣದೊಂದು ಸಂಚಲನವನ್ನೇ ಸೃಷ್ಟಿಸಿದೆ. ಪೋಷಕಸ್ನೇಹಿ ಅಥವಾ ಮಗುಸ್ನೇಹಿ ಕಚೇರಿಯ ಅಗತ್ಯವನ್ನು ಪ್ರತಿಪಾದಿಸುವ ಈ ವಿಡಿಯೊ ಉದ್ಯೋಗಸ್ಥ ಮಹಿಳೆಯರಿಗೆ‌ ಪೂರಕ ವಾತಾವರಣ ಕಲ್ಪಿಸಿದಲ್ಲಿ ಕಂಪನಿಯ ಏಳ್ಗೆಗೂ ಸಹಕಾರಿಯಾಗುವ ಕುರಿತೂ ಪರೋಕ್ಷವಾಗಿ ಬೆಳಕು ಚೆಲ್ಲಿದೆ.

ಇದು ಸಕಾಲ..
ಕೋವಿಡ್‌ಗೂ ಮುನ್ನ ಮನೆಯಿಂದ ಕೆಲಸ ಮಾಡುವ ಅವಕಾಶ ಇರದಿದ್ದ ಸಂದರ್ಭದಲ್ಲಿ ಅನೇಕ ಉದ್ಯೋಗಸ್ಥ ಪೋಷಕರು ವಿಶೇಷವಾಗಿ ಮಹಿಳೆಯರು ಮಕ್ಕಳು–ಕುಟುಂಬದ ಸಲುವಾಗಿ ಉದ್ಯೋಗ ಬಿಡುವ ಸ್ಥಿತಿ ಇತ್ತು. ಆದರೆ, ಕೋವಿಡ್ ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ದೊರೆತಿದ್ದರಿಂದ ಉದ್ಯೋಗಸ್ಥ ಪೋಷಕರಿಗೆ ಕಚೇರಿ ಕೆಲಸದ ಜತೆಗೇ ಮಕ್ಕಳ ಜತೆಗಿರುವ ಅವಕಾಶವು ದೊರೆಯುವಂತಾಯಿತು. ಕೋವಿಡ್ ನಂತರವೂ ಉದ್ಯೋಗಸ್ಥ ಪೋಷಕರಿಗೆ ಇಂಥ ಅವಕಾಶ ದೊರೆಯುತ್ತದೆಯೇ ಎನ್ನುವ ಪ್ರಶ್ನೆಗಳೂ ಎದುರಾಗುತ್ತಿದ್ದು, ಪೋಷಕಸ್ನೇಹಿ ಇಲ್ಲವೇ ಮಕ್ಕಳಸ್ನೇಹಿ ಕಚೇರಿ ರೂಪಿಸಲು ಇದು ಸಕಾಲ ಎನ್ನುತ್ತದೆ ವರದಿಯೊಂದು.

‘ಮನೆಯಿಂದ ಕೆಲಸ ಮಾಡುತ್ತಿದ್ದ ಪೋಷಕರಲ್ಲಿ ಬಹುತೇಕರು ಕಚೇರಿಯ ಕೆಲಸಗಳು ದುಪ್ಪಟ್ಟಾಗಿದ್ದರೂ ಅವುಗಳನ್ನು ಸರಿಯಾದ ಸಮಯಕ್ಕೆ ಮಾಡಿದ್ದಾರೆ. ಮನೆಯಲ್ಲಿರುವುದರಿಂದ ಮಕ್ಕಳಿಗೆ ಹೆಚ್ಚಿನ ಸಮಯ ನೀಡಿರುವ ಕಾರಣ ಪೋಷಕರ ಮಾನಸಿಕ ಒತ್ತಡವೂ ಕಡಿಮೆಯಾಗಿದೆ’ ಎನ್ನುತ್ತಾರೆ ಕಂಪನಿಯೊಂದರಲ್ಲಿ ಉದ್ಯೋಗಿಗಳ ಯೋಗಕ್ಷೇಮ ಮೇಲ್ವಿಚಾರಕಿಯಾಗಿರುವ ಮಿಷೆಲ್.

ಭಾರತದಲ್ಲಿ ಕೋವಿಡ್‌ಗೂ ಮುನ್ನ ಅನೇಕ ಕಚೇರಿಗಳು ಪೋಷಕಸ್ನೇಹಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿವೆ. ಐಟಿ ಹಬ್ ಆಗಿರುವ ಬೆಂಗಳೂರಿನಲ್ಲೇ 13ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗಸ್ಥ ತಾಯಂದಿರಿಗೆ ಅನುಕೂಲ ಕಲ್ಪಿಸಲು ಕಚೇರಿ ಆವರಣದಲ್ಲಿ ಇಲ್ಲವೇ ಕಚೇರಿಯಿಂದ ತುಸು ದೂರದಲ್ಲೇ ಶಿಶುವಿಹಾರ ಮಾದರಿಯ ಕೇಂದ್ರಗಳನ್ನು ಸ್ಥಾಪಿಸಿದ್ದವು.

ದೇಶದ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಸಿಟಿ ಬ್ಯಾಂಕ್, ಫ್ಲಿಪ್ ಕಾರ್ಟ್, ಗೂಗಲ್ ಇಂಡಿಯಾ, ಆಕ್ಸೆಂಚರ್, ಎಚ್‌ಎಸ್‌ಬಿಸಿ ಇಂಡಿಯಾದಂಥ ಕಂಪನಿಗಳು ಉದ್ಯೋಗಸ್ಥ ತಾಯಂದಿರಿಗೆ ಕಾರ್ಮಿಕ ಕಾಯ್ದೆಯ ಪ್ರಕಾರ 6 ತಿಂಗಳು ವೇತನಸಹಿತ ರಜೆ, ಹಾಲೂಡಿಸುವ ಕೇಂದ್ರ, ವಿಶ್ರಾಂತಿ ಗೃಹ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿವೆ.

ಮನೆಯಿಂದಲೇ ಕಚೇರಿ ಕೆಲಸ
ಕೋವಿಡ್‌ ಪೂರ್ವದಲ್ಲಿಯೇ ದೇಶದ ಅನೇಕ ಐಟಿ–ಬಿಟಿ ಕಂಪನಿಗಳು ತಮ್ಮಲ್ಲಿನ ಮಹಿಳಾ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದವು. ಬಸಿರು, ಬಾಣಂತನದ ನಂತರವೂ ಈ ಉದ್ಯೋಗಿಗಳು ತಮ್ಮ ಕಚೇರಿಯ ಉನ್ನತಿಗೆ ಶ್ರಮಿಸುತ್ತಲೇ ಬಡ್ತಿಯನ್ನೂ ಪಡೆದವರಿದ್ದಾರೆ.

‘ಉದ್ಯೋಗಸ್ಥ ತಾಯಂದಿರು ಪುಟ್ಟ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರುವಾಗ ಮಾನಸಿಕ ಒತ್ತಡದಿಂದ ಬಳಲುತ್ತಾರೆ. ಈ ಒತ್ತಡ ಕಚೇರಿಯಲ್ಲಿ ಕೆಲಸದ ಗುಣಮಟ್ಟದ ಮೇಲೂ ಪ್ರಭಾವ ಬೀರಬಲ್ಲದು. ಹಾಗಾಗಿ, ಅಂಥ ತಾಯಂದಿರಿಗೆ ಪೋಷಕಸ್ನೇಹಿ ಅಥವಾ ಮಗುಸ್ನೇಹಿ ಕೆಲಸದ ವಾತಾವರಣ ಕಲ್ಪಿಸಿದರೆ ಕಚೇರಿಯ ಉತ್ಪಾದಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ’ ಎನ್ನುತ್ತಾರೆ ಖಾಸಗಿ ಕಂಪನಿಯೊಂದರ ಉದ್ಯೋಗಿ ವಿದ್ಯಾ.

‘ಕಚೇರಿಗಳು, ಉದ್ದಿಮೆಗಳು ಪುನರಾರಂಭವಾಗಿರುವ ಈ ಸಮಯದಲ್ಲಿ ಶಿಶುಸ್ನೇಹಿ ಕೆಲಸದ ವಾತಾವರಣದ ಅಗತ್ಯ ಹಿಂದಿಗಿಂತಲೂ ಹೆಚ್ಚಾಗಿದೆ. ಕೋವಿಡ್‌ನಿಂದಾಗಿ ಅನೇಕ ಉದ್ಯೋಗಸ್ಥ ಮಹಿಳೆಯರು ತಮ್ಮ ಪೋಷಕರು ಇಲ್ಲವೇ ಅತ್ತೆ–ಮಾವಂದಿರನ್ನು, ಪತಿಯನ್ನು ಕಳೆದುಕೊಂಡಿದ್ದಾರೆ. ಮನೆಕೆಲಸದವರೂ ತಮ್ಮ ಊರುಗಳಿಗೆ ಮರಳಿದ್ದಾರೆ. ಈ ನಡುವೆ ಕಚೇರಿ ಪುನರಾರಂಭವಾದಲ್ಲಿ ಮಕ್ಕಳನ್ನು ಮನೆಯಲ್ಲೇ ಬಿಟ್ಟುಬರುವ ಸ್ಥಿತಿ ಎದುರಿಸಲಾಗದು. ಹಾಗಾಗಿ, ಇಂಥ ಮಹಿಳೆಯರಿಗೆ ಮನೆಯಿಂದಲೇ ಕೆಲಸ ಮಾಡುವ ಇಲ್ಲವೇ ಕಚೇರಿಯಲ್ಲೇ ಪೂರಕವಾದ ವಾತಾವರಣ ಕಲ್ಪಿಸಿಕೊಡುವುದು ಅಗತ್ಯ’ ಎನ್ನುವ ಅಭಿಪ್ರಾಯ ವಿದ್ಯಾ ಅವರದ್ದು.

‘ಈ ಹಿಂದೆ ನಮ್ಮ ಕೇಂದ್ರಗಳಲ್ಲಿ ಮಕ್ಕಳನ್ನು ಬಿಟ್ಟು ತಾಯಂದಿರು ನೆಮ್ಮದಿಯಿಂದ ಕೆಲಸಕ್ಕೆ ತೆರಳುತ್ತಿದ್ದರು. ಆದರೆ, ಕೆಲ ಕಂಪನಿಗಳು ಮನೆಯಿಂದಲೇ ಕೆಲಸ ಮುಂದುವರಿಸಲು ಹೇಳಿರುವುದರಿಂದ ಪುಟ್ಟ ಮಕ್ಕಳ ಆರೈಕೆ ಮಾಡುವುದು ಪೋಷಕರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ಪೋಷಕರಿಬ್ಬರೂ ಉದ್ಯೋಗಸ್ಥರಾಗಿದ್ದರೆ ಹೆಚ್ಚಿನ ಹೊರೆ ತಾಯಂದಿರ ಮೇಲೆ ಬೀಳುತ್ತಿದೆ. ಸರ್ಕಾರ ಒಪ್ಪಿಗೆ ನೀಡಿದಲ್ಲಿ ಕ್ರೀಚ್ ಆರಂಭಿಸಬಹುದು’ ಎನ್ನುತ್ತಾರೆ ‘ವೀ ಕೇರ್’ ಕ್ರೀಚ್ ನಡೆಸುವ ಲಕ್ಷ್ಮೀಕಾಂತ್.

ಉದ್ಯೋಗಸ್ಥ ಪೋಷಕರಿಗೆ ಕೆಲಸದ ಸ್ಥಳದಲ್ಲಿ ಮಗುಸ್ನೇಹಿ ಇಲ್ಲವೇ ಪೋಷಕಸ್ನೇಹಿ ವಾತಾವರಣ ಕಲ್ಪಿಸಿದಲ್ಲಿ ಅದು ಕಚೇರಿಯ ಉತ್ಪಾದಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಕಂಪನಿ ಮತ್ತು ಉದ್ಯೋಗಿ ಇಬ್ಬರಿಗೂ ಇದು ಲಾಭದಾಯಕ ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.