ADVERTISEMENT

ಮಕ್ಕಳಲ್ಲಿ ಸಾಮಾಜಿಕ ಜಾಲತಾಣ ಬಳಕೆ: ಪೋಷಕರಲ್ಲಿರಲಿ ಸುರಕ್ಷತೆಯ ಕೀಲಿಕೈ

ಮಕ್ಕಳಲ್ಲಿ ಸಾಮಾಜಿಕ ಜಾಲತಾಣ ಬಳಕೆ

ರೇಷ್ಮಾ
Published 12 ಮಾರ್ಚ್ 2021, 19:30 IST
Last Updated 12 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ನಾನು ಆನ್‌ಲೈನ್‌ ತರಗತಿಗೆ ನೆರವಾಗಲಿ ಎಂದು ನನ್ನ ಮಗಳಿಗೆ ಮೊಬೈಲ್ ಕೊಡಿಸಿದ್ದೆ. ಮೊದಲು ಪಾಠ ಕೇಳಲು, ನೋಟ್ಸ್ ಬರೆಯಲಷ್ಟೇ ಮೊಬೈಲ್ ಬಳಸುತ್ತಿದ್ದ ಮಗಳು ಈಗ ದಿನವಿಡೀ ಮೊಬೈಲ್ ಹಿಡಿದಿರುತ್ತಾಳೆ. ಮೊನ್ನೆ ಯಾಕೆ ಇಷ್ಟೊಂದು ಮೊಬೈಲ್ ಬಳಸುತ್ತಾಳೆ ಎಂದು ಪರಿಶೀಲಿಸಿದಾಗ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಎಲ್ಲವನ್ನೂ ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ತನ್ನ ಖಾತೆ ತೆರೆದಿದ್ದಳು. ಅಲ್ಲದೇ ಫೇಸ್‌ಬುಕ್‌ನಲ್ಲಿ ಈಗಾಗಲೇ 200ಕ್ಕೂ ಹೆಚ್ಚು ಸ್ನೇಹಿತರಾಗಿದ್ದರು. ನನಗೆ ಶಾಕ್ ಆಗಿತ್ತು. ಆಕೆಗಿನ್ನೂ 11 ವರ್ಷ. ಅಲ್ಲದೇ ತನ್ನ ಫೋಟೊಗಳನ್ನೆಲ್ಲಾ ಅಪ್‌ಲೋಡ್ ಮಾಡಿದ್ದು ಪರಿಚಯ ಇಲ್ಲದವರೆಲ್ಲಾ ಲೈಕ್, ಕಮೆಂಟ್ ಮಾಡಿದ್ದರು. ಇದನ್ನೆಲ್ಲಾ ನೋಡಿ ನನಗೆ ತುಂಬಾ ಭಯವಾಯ್ತು. ಕೇಳಿದರೆ ‘ನನ್ನ ಸ್ನೇಹಿತರೆಲ್ಲರ ಬಳಿ ಫೇಸ್‌ಬುಕ್‌ ಇದೆ, ಅದಕ್ಕೆ ನಾನು ಅಕೌಂಟ್ ಓಪನ್‌ ಮಾಡಿದೆ’ ಎನ್ನುತ್ತಾಳೆ’ ಎಂದು ಸ್ನೇಹಿತೆಯ ಬಳಿ ಗೋಳು ತೋಡಿಕೊಂಡಿದ್ದಳು ಸುಮಾ.

ಇತ್ತೀಚೆಗೆ ಸುಮಾಳಂತೆ ಹಲವು ಪೋಷಕರು ತಮ್ಮ ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈಗ 10– 12 ವಯಸ್ಸಿನ ಮಕ್ಕಳು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಸ್ನಾಪ್‌ಚಾಟ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆ. ಆದರೆ ಅವುಗಳ ಸಮರ್ಪಕ ಬಳಕೆಯ ಕುರಿತ ತಿಳಿವಳಿಕೆ ಅವರಿಗಿರುವುದಿಲ್ಲ. ಅಲ್ಲದೇ ಆ ಮೂಲಕ ಅಪರಿಚಿತರಿಗೆ ವೈಯಕ್ತಿಕ ಮಾಹಿತಿಗಳು, ಫೋಟೊಗಳು ಸಿಗುವಂತೆ ಮಾಡುತ್ತಿದ್ದಾರೆ. ಇದು ಪೋಷಕರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

ಹಾಗಾದರೆ ಮಕ್ಕಳು ಯಾವ ವಯಸ್ಸಿನಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಶುರು ಮಾಡಬಹುದು ಎಂಬ ಪ್ರಶ್ನೆ ಕಾಡುವುದು ಸಹಜ. 13 ವರ್ಷ ದಾಟಿದ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸಬಹುದು ಎನ್ನುತ್ತದೆ ‘ಚಿಲ್ಡ್ರನ್ಸ್‌ ಆನ್‌ಲೈನ್ ಪ್ರೈವೆಸಿ ಅಂಡ್ ಪ್ರೊಟೆಕ್ಷನ್ ಆ್ಯಕ್ಟ್‌ (ಸಿಒಪಿಪಿಎ)’.

ADVERTISEMENT

‘ಸಾಮಾಜಿಕ ಜಾಲತಾಣಗಳ ಬಳಕೆ ಸರಿ, ತಪ್ಪು ಎನ್ನುವುದಕ್ಕಿಂತ ಅದು ನಿಮ್ಮ ಮಗುವಿನ ವಯಸ್ಸಿಗೆ ಸೂಕ್ತವಾಗಿದೆಯೇ ಎಂಬುದು ಮುಖ್ಯವಾಗುತ್ತದೆ. ಸಾಮಾಜಿಕ ಜಾಲತಾಣಗಳ ಬಳಕೆಗೆ ಯಾವ ವಯಸ್ಸು ಸೂಕ್ತ ಎಂಬ ಕಾನೂನು ಇದೆ. ಆದರೆ ಆ ಕಾನೂನಿಗಿಂತ ಪೋಷಕರು ತಮ್ಮ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸುವುದು ಅಗತ್ಯವಾಗಿದೆ. ಇದರೊಂದಿಗೆ ಮಕ್ಕಳ ಸಾಮಾಜಿಕ ಜಾಲತಾಣಗಳ ಮೇಲೆ ಪೋಷಕರು ನಿಗಾ ವಹಿಸುವುದು ತುಂಬಾ ಮುಖ್ಯವಾಗುತ್ತದೆ’ ಎನ್ನುತ್ತಾರೆ ನಿಮ್ಹಾನ್ಸ್‌ನ ಮಕ್ಕಳ ಮತ್ತು ಹದಿಹರೆಯದ ಮನೋವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಮಾದೇಗೌಡ ಕಿರಗಸೂರು.

ಪೋಷಕರಿಗೆ ಅರಿವಿಲ್ಲದೇ ಬಳಕೆ

ಇತ್ತೀಚೆಗೆ ಹಲವು ಮಕ್ಕಳು ತಮ್ಮ ಪೋಷಕರಿಗೆ ತಿಳಿಯದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಇದರೊಂದಿಗೆ ತಂತ್ರಜ್ಞಾನದ ಬಗೆಗಿನ ಅವರಿಗಿರುವ ಅತಿಯಾದ ತಿಳಿವಳಿಕೆಯು ತಂದೆತಾಯಿ ಮೋಸ ಹೋಗುವಂತೆ ಮಾಡುತ್ತಿದೆ. ಜೊತೆಗೆ ಕೆಲವೊಂದು ಆ್ಯಪ್‌ಗಳು ಹಾಗೂ ತಂತ್ರಗಳು ಸಾಮಾಜಿಕ ಜಾಲತಾಣಗಳನ್ನು ಮುಚ್ಚಿಡಲು ನೆರವಾಗುತ್ತಿವೆ. ಇದರಿಂದ ಮಕ್ಕಳು ತಂದೆ–ತಾಯಿಯನ್ನು ಸುಲಭವಾಗಿ ಮೂರ್ಖರನ್ನಾಗಿಸುತ್ತಿದ್ದಾರೆ. ಪೋಷಕರು ಮಕ್ಕಳಿಂದಾಗಿ ಇಂಥದ್ದನ್ನು ಅನುಭವಿಸಬಾರದು ಎಂದರೆ ಅವರಿಗೆ ಯಾವ ವಯಸ್ಸಿನಲ್ಲಿ ಸ್ಮಾರ್ಟ್‌ಫೋನ್ ನೀಡಬೇಕು ಹಾಗೂ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸಲು ಸೂಕ್ತ ವಯಸ್ಸು ಯಾವುದು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗುವ ಅಪಾಯಗಳು

ಆಕ್ರಮಣಕಾರಿ, ಹಿಂಸಾತ್ಮಕ ಹಾಗೂ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದ ಕಮೆಂಟ್‌ಗಳು ಹಾಗೂ ಚಿತ್ರಗಳಂತಹ ಅನುಚಿತ ಅಥವಾ ಅಸಂಬದ್ಧ ವಿಷಯಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುವುದು.

ತನಗೆ ಅಥವಾ ಇತತರಿಗೆಸಂಬಂಧಿಸಿದ ಮುಜುಗರವೆನ್ನಿಸುವ ಅಥವಾ ಪ್ರಚೋದನಕಾರಿ ಫೋಟೊಗಳು ಅಥವಾ ವಿಡಿಯೊಗಳನ್ನು ಅಪ್‌ಲೋಡ್ ಮಾಡುವುದು.

ಅಪರಿಚಿತರೊಂದಿಗೆ ಫೋನ್‌ ನಂಬರ್‌, ಜನ್ಮದಿನಾಂಕ ಹಾಗೂ ತಾವಿರುವ ಸ್ಥಳ ಮುಂತಾದ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವುದು.

ಸೈಬರ್‌ ಬುಲ್ಲಿಯಿಂಗ್‌

ಅನಗತ್ಯ ಜಾಹೀರಾತು ಹಾಗೂ ಮಾರ್ಕೆಟಿಂಗ್ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುವುದು ಹಾಗೂ ಅವುಗಳನ್ನು ಬಳಸಿಕೊಳ್ಳುವುದು.

ಸಮಸ್ಯೆಗಳನ್ನು ನಿರ್ವಹಿಸುವುದು ಹೇಗೆ?

ಸಾಮಾಜಿಕ ಜಾಲತಾಣಗಳ ಆಗುಹೋಗುಗಳ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವುದು.

ಸುರಕ್ಷಿತ ಅಂತರ್ಜಾಲ ಸೇವೆ ಸಿಗುವಂತೆ ಮಾಡುವುದು.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪೋಸ್ಟ್‌ಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದರ ಬಗ್ಗೆ ತಿಳಿವಳಿಕೆ ನೀಡುವುದು.

ಪಾಸಿಟಿವ್‌ ಕಮೆಂಟ್ ನೀಡುವುದನ್ನು ಕಲಿಸುವುದು, ಅಪರಿಚಿತರಿಗೆ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸದಂತೆ ನೋಡಿಕೊಳ್ಳುವುದು.

ಅವರ ಪಾಸ್‌ವರ್ಡ್ ಹಾಗೂ ಲಾಗಿನ್ ಐಡಿ ಪ‍ಡೆದು ಆಗಾಗ ಪರಿಶೀಲನೆ ಮಾಡುವುದು.

ಅಪರಿಚಿತ ಸಂಬಂಧಗಳ ಬಗ್ಗೆ ಎಚ್ಚರಿಕೆ ಮೂಡಿಸುವುದು.

ಪ್ರತಿ ತಿಂಗಳು ಮಕ್ಕಳ ಸಾಮಾಜಿಕ ಜಾಲತಾಣದ ಚಟುವಟಿಕೆಯ ಬಗ್ಗೆ ಅಪ್‌ಡೇಟ್‌ ಪಡೆಯುವುದು.

ಮಕ್ಕಳ ಮೇಲೆ ನಿಗಾ: ಸಲಹೆ

ವೈಯಕ್ತಿಕ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡದಂತೆ ನೋಡಿಕೊಳ್ಳುವುದು.

ಪ್ರತಿದಿನ ಪ್ರೈವೆಸಿ ಹಾಗೂ ಲೊಕೇಷನ್ ಸೆಟ್ಟಿಂಗ್ಸ್‌ಗಳನ್ನು ಪರಿಶೀಲನೆ ಮಾಡುವುದು.

ಲಾಗಿನ್ ಪಾಸವರ್ಡ್‌, ಮೊಬೈಲ್‌ ಪಾಸ್‌ವರ್ಡ್‌ ಇತ್ಯಾದಿಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ತಿಳಿಸಿ ಹೇಳುವುದು.

ಸಾರ್ವಜನಿಕ ಕಂಪ‍್ಯೂಟರ್‌ಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿದ ನಂತರ ಮರೆಯದೇ ಲಾಗ್‌ಆಫ್ ಮಾಡಲು ತಿಳಿಸುವುದು. ಆದಷ್ಟು ಸಾರ್ವಜನಿಕ ಕಂಪ್ಯೂಟರ್‌ಗಳಲ್ಲಿ ಸಾಮಾಜಿಕ ಜಾಲತಾಣ ಬಳಸದೇ ಇರುವುದು ಉತ್ತಮ.

ಹಲವು ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಬಾರಿಗೆ ಪೋಸ್ಟ್ ಆಗುವ ಆಯ್ಕೆಯನ್ನು ಡಿಸೇಬಲ್ ಮಾಡುವುದು.

ಮಕ್ಕಳ ಮನಸ್ಸಿಗೆ ಘಾಸಿಗೊಳಿಸುವಂತಹ ಪೋಸ್ಟ್ ಮಾಡುವ ಹಾಗೂ ಕಮೆಂಟ್ ಮಾಡುವ ವ್ಯಕ್ತಿಗಳನ್ನು ಬ್ಲಾಕ್ ಮಾಡುವುದು.

ನಿಯಂತ್ರಣ ಸಲ್ಲ

ಹದಿಹರೆಯದ ಮಕ್ಕಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿಯಂತ್ರಣ ಹೇರುವುದು ಒಳ್ಳೆಯದಲ್ಲ. ಒಂದು ವೇಳೆ ನಿಯಂತ್ರಣ ಹೇರಿದರೆ ಅವರು ರಹಸ್ಯ ಮಾರ್ಗಗಳಿಂದ ಅವುಗಳನ್ನು ಬಳಸಲು ಆರಂಭಿಸುತ್ತಾರೆ. ಆ ಕಾರಣಕ್ಕೆ ಕೆಲವೊಂದು ನಿಯಮ ಹಾಗೂ ಷರತ್ತುಗಳನ್ನು ವಿಧಿಸುವ ಮೂಲಕ ಬಳಸಲು ಅನುಮತಿ ನೀಡಬೇಕು. ಮಕ್ಕಳ ಸಾಮಾಜಿಕ ಜಾಲತಾಣದ ಫ್ರೆಂಡ್ಸ್‌ ಲಿಸ್ಟ್‌, ಅವರ ಚಟುವಟಿಕೆಯ ಮೇಲೆ ಪೋಷಕರು ಸದಾ ಗಮನ ಹರಿಸುವುದು ಮುಖ್ಯವಾಗುತ್ತದೆ. ಜೊತೆಗೆ ಸಾಮಾಜಿಕ ಜಾಲತಾಣದಿಂದಾಗುವ ಅಪಾಯಗಳ ಬಗ್ಗೆಯೂ ‍ಪೋಷಕರು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು

– ಡಾ. ರಾಜೇಂದ್ರ ಮಾದೇಗೌಡ ಕಿರಗಸೂರು, ಮಕ್ಕಳ ಮತ್ತು ಹದಿಹರೆಯದ ಮನೋವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ, ನಿಮ್ಹಾನ್ಸ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.