ADVERTISEMENT

ಅಗ್ನಿಶಾಮಕ ದಳ ಸೇರಿದ ಮೊದಲ ಮಹಿಳೆ ಹರ್ಷಿಣಿ: ಕೋಟಿ ಕನಸುಗಳಿಗೆ ಪ್ರೇರಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 5:59 IST
Last Updated 29 ಜೂನ್ 2019, 5:59 IST
Image courtesy: thebetterindia.com
Image courtesy: thebetterindia.com   

ಕೇವಲ ಪುರುಷರಿಗಷ್ಟೇ ಎಂಬಂತಿದ್ದ ಅಗ್ನಿಶಾಮಕ ದಳಕ್ಕೆ ಸೇರಲು ಮಹಿಳೆಯರು ಹಿಂದೇಟು ಹಾಕುತ್ತಿದ್ದ ಕಾಲವದು. ಹೀಗಾಗಿ ಸುಮಾರು 46 ವರ್ಷಗಳ ಇತಿಹಾಸ ಹೊಂದಿದ್ದನಾಗ‌್ಪುರ ರಾಷ್ಟ್ರೀಯ ಅಗ್ನಿಶಾಮಕ ಕಾಲೇಜಿನಲ್ಲಿ(ಎನ್‌ಎಫ್‌ಎಸ್‌ಸಿ) ಪದವಿ ಪಡೆಯಲು ಯಾವೊಬ್ಬ ಮಹಿಳೆಯೂ ಮುಂದೆ ಬಂದಿರಲಿಲ್ಲ. ಆ ಹೊತ್ತಿನಲ್ಲಿ ಅಲ್ಲಿಗೆ ಪ್ರವೇಶ ಪಡೆದವರು ಹರ್ಷಿಣಿ ಕನ್ಹೇಕರ್‌.

ಭಾರತೀಯ ವಾಯುಪಡೆಯ ಪೈಲಟ್‌ ಆಗಿ ನೇಮಕವಾಗುವ ಮೂಲಕ ದೇಶದ ಮೊದಲ ಮಹಿಳಾ ಪೈಲಟ್‌ ಎನಿಸಿಕೊಂಡಿದ್ದ ವಿದರ್ಭದ ಶಿವಾನಿ ಕುಲಕರ್ಣಿ ಅವರಿಂದ ಸ್ಫೂರ್ತಿಗೊಂಡಿದ್ದಕನ್ಹೇಕರ್‌,ತಾನೋರ್ವ ಮಹಿಳೆ ಎಂಬುದು ಆಸಕ್ತಿಗೆ ಮಿತಿಯಾಗಬಾರದು ಎಂದು 2002ರಲ್ಲಿ ಈ ಕಾಲೇಜಿಗೆ ಪ್ರವೇಶ ಪಡೆದಿದ್ದರು.ಕನ್ಹೇಕರ್‌ ಸಾಧನೆಯ ಬಗ್ಗೆthebetterindia.comವರದಿ ಮಾಡಿದೆ.

‘ನಾನು ಪದವಿ ಪಡೆಯುವ ಸಲುವಾಗಿ ಎನ್‌ಎಫ್‌ಎಸ್‌ಸಿಗೆ ಸೇರಿದಾಗ ಇಲ್ಲಿಗೆ ಪ್ರವೇಶ ಪಡೆದ ಮೊದಲ ಮಹಿಳೆ ನಾನೇ ಎಂಬುದು ಗೊತ್ತಿರಲಿಲ್ಲ’ ಎನ್ನುವ ಕನ್ಹೇಕರ್‌ ತಾವು ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿರುವ ಬಗ್ಗೆಎನ್‌ಎಫ್‌ಎಸ್‌ಸಿಯಿಂದ ಟೆಲಿಗ್ರಾಂ ಬಂದಿದ್ದ ಘಳಿಗೆಯನ್ನುನೆನಪಸಿಕೊಳ್ಳುತ್ತಾರೆ. ಆ ಕ್ಷಣವನ್ನು ‘ನನ್ನ ಬದುಕಿನ ಅಮೃತ ಘಳಿಗೆ’ ಎಂದೂ ಹೇಳಿಕೊಳ್ಳುತ್ತಾರೆ. ದಾಖಲಾತಿ ಸಲುವಾಗಿ ಕಾಲೇಜಿನ ಬಳಿ ತೆರಳಿದ್ದ ಅವರಿಗೆ ಅಲ್ಲಿನ ಸಿಬ್ಬಂದಿಯೊಬ್ಬರು ಇದು ಪುರುಷರ ಕಾಲೇಜು. ಮಹಿಳಾ ವಿದ್ಯಾರ್ಥಿಗಳಿಗೆ ಸೌಲಭ್ಯವಿರುವ ಬೇರೆ ಯಾವುದಾದರೂ ಕಾಲೇಜಿಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದರಂತೆ. ಆದರೆ ಅದಕ್ಕೆ ತಲೆ ಕೆಡಿಸಿಕೊಳ್ಳದ ಅವರು ಅಲ್ಲಿಯೇ ಪ್ರವೇಶ ಪಡೆದಿದ್ದರು.

ADVERTISEMENT

ಕೇವಲ 30 ಸೀಟುಗಳ ದಾಖಲಾತಿಗಾಗಿಯುಪಿಎಸ್‌ಸಿ ಪರಿಕ್ಷಾ ಮಾದರಿಯಲ್ಲಿ ನಡೆದಿದ್ದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಕನ್ಹೇಕರ್‌, ಎರಡನೇ ಸುತ್ತಿನಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ನಂತರ ಮೌಖಿಕ ಸಂದರ್ಶವನ್ನೂ ಯಶಸ್ವಿಯಾಗಿ ಪೂರ್ಣಗೊಳಸಿದ್ದರು. ಸಂದರ್ಶನ ಪ್ಯಾನಲ್‌ನಲ್ಲಿದ್ದ ಅಧಿಕಾರಿಯೊಬ್ಬರೂ ಪ್ರವೇಶ ಪಡೆಯದಂತೆ ಸೂಚನೆ ನೀಡಿದ್ದರು. ಅದನ್ನೂ ಲೆಕ್ಕಿಸದೆ ಇದೀಗ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ ಅವರು. ಸದ್ಯ ಇಲ್ಲಿಗೆ ಪ್ರವೇಶ ಪಡೆಯುವ ಮಹಿಳಾ ಅಭ್ಯರ್ಥಿಗಳಿಗೆ ಅರ್ಹಾತಾ ಮಾನದಂಡಗಳನ್ನು ನಿಗದಿಪಡಿಸುವ ಮಟ್ಟಕ್ಕೂ ಬೆಳೆದಿದ್ದಾರೆ.

ದೈಹಿಕ ಕ್ಷಮತೆಯನ್ನು ಬೇಡುವ ಅಧ್ಯಯನ ವಿಭಾಗವಾಗಿದ್ದುದರಿಂದ ಹೆಚ್ಚಿನಕಸರತ್ತು ನಡೆಸಬೇಕಾಗುತ್ತದೆ. ನೀರಿನ ಪೈಪುಗಳನ್ನು ಹೊತ್ತು ಸಾಗಬೇಕಾಗುವುದು ಅನಿವಾರ್ಯ. ಅವುಗಳನ್ನೆಲ್ಲ ಸರಿಯಾಗಿ ನಿರ್ವಹಿಸಲು ಬಲ ಬೇಕು. ಅಣುಕು ಪ್ರದರ್ಶನಗಳನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಯೂ ಇರುತ್ತದೆ. ಈ ಎಲ್ಲವನ್ನೂ ಯಶಸ್ವಿಯಾಗಿ ಮಾಡುವ ಸಲುವಾಗಿ ಅವಧಿಗೂ ಮುನ್ನ ಸ್ಥಳಕ್ಕೆ ತೆರಳುತ್ತಿದ್ದ ಕನ್ಹೇಹರ್‌ ಸ್ವತಃ ನಿರಂತರ ಅಭ್ಯಾಸ ನಡೆಸುತ್ತಿದ್ದರು. ‘ನಾನು ಎಂದಿಗೂ ಅಭ್ಯಾಸಕ್ಕೆ ತಡವಾಗಿ ಹೋಗುತ್ತಿರಲಿಲ್ಲ. ಅಣಕು ಪ್ರದರ್ಶನವಾಗಲಿ, ಮೆರವಣಿಗೆಯಾಗಲಿ ನಾನು ದುರ್ಬಲಳಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ’ ಎಂದುಕನ್ಹೇಕರ್‌ ಅಷ್ಟು ದೃಢವಾಗಿ ಹೇಳಿಕೊಳ್ಳುವುದೂಆ ಅಭ್ಯಾಸದ ಕಾರಣದಿಂದಲೇ.

2006ರಲ್ಲಿ ಪದವಿ ಪೂರ್ಣಗೊಳಸಿದ ಅವರು ಗುಜರಾತ್‌ನ ಮಹಾಸೇನಾ ಅಗ್ನಿಶಾಮಕ ಘಟಕಕ್ಕೆ ಸೇರ್ಪಡೆಯಾಗುವ ಮೂಲಕ ವೃತ್ತಿ ಆರಂಭಿಸಿದ್ದರು. ದೇಶದ ಎರಡನೇ ಅತಿದೊಡ್ಡ ಕಡಲಾಚಿನ ಉತ್ಪಾದನಾ ಘಟಕವಾಗಿರುವ ತೈಲ ಮತ್ತು ರಾಷ್ಟ್ರೀಯ ಅನಿಲ ನಿಗಮದಲ್ಲಿ4 ವರ್ಷ ಕರ್ತವ್ಯ ನಿರ್ವಹಿಸಿ 2010ರಲ್ಲಿ ಮುಂಬೈಗೆ ವರ್ಗಾವಣೆಗೊಂಡರು.ಹೆಲಿಕಾಪ್ಟರ್ ಏರಿ ಕೆಲಸಮಾಡುವುದು, ಲೆಕ್ಕಪರಿಶೋಧನೆ ನಡೆಸುವುದು, ತಂಡದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಸೇರಿದಂತೆ ಕಡಲಾಚಿನ ಉತ್ಪಾದನಾ ಘಟಕದಲ್ಲಿ ಕಾರ್ಯನಿರ್ವಹಿಸುವ ಮೊದಲ ಮಹಿಳೆ ಎಂಬ ಶ್ರೇಯಕ್ಕೂ ಭಾಜನರಾದರು.

ಸಾಹಸಿ ಮನೋಭಾವದ ಕ್ಹೇಕರ್‌ಬೈಕ್‌ ಸವಾರಿಯಲ್ಲಿಯೂ ಸಾಕಷ್ಟು ಪಳಗಿದವರು. ಬೈಕ್‌ ಸವಾರಿಗೆ ವಿಶ್ವದಲ್ಲೇ ಖ್ಯಾತಿ ಹೊಂದಿರುವ ಲೇ ಲಡಾಖ್‌ನ ‘ಕುರ್ದಂಗ್‌ ಲೇ ಪಾಸ್‌’ ಹಾಗೂ ಕಾರ್ಗಿಲ್‌ನಲ್ಲಿಯೂ ಬೈಕ್ ಓಡಿಸಿದ್ದಾರೆ. ಅವರು ಮದುವೆ ಆಗಿರುವುದೂ ಬೈಕ್‌ ಸವಾರಿ ಜೊತೆಗಾರನನ್ನೇ.

ಫೇಸ್‌ಬುಕ್‌ ಚಿತ್ರ

‘ಯಾವುದೇ ಕೆಲಸವೂ ಯಾವೊಂದು ವರ್ಗದವರಿಗೆ(ಲಿಂಗದ ಆಧಾರದಲ್ಲಿ)ಮಾತ್ರ ಸೀಮಿತವಾಗಿಲ್ಲ. ಉದಾಹರಣೆಗೆ ಬೈಕ್‌ಗೆ ತನ್ನನ್ನು ಸವಾರಿ ಮಾಡುತ್ತಿರುವುದು ಪುರುಷನೋ.. ಮಹಿಳೆಯೋ.. ಎಂಬುದು ಗೊತ್ತಿರುವುದಿಲ್ಲ. ಮಹಿಳಾ ಪ್ರಾಬಲ್ಯದವೃತ್ತಿಗಳು, ಪುರುಷ ಪ್ರಾಬಲ್ಯದ ವೃತ್ತಿಗಳು ಎಂಬುದೆಲ್ಲ ಭ್ರಮೆ.ನೀವು ಯಾವುದನ್ನಾದರೂ ಪ್ರೀತಿಸುತ್ತಿದ್ದರೆ ಮತ್ತು ಅದರ ಬಗ್ಗೆ ಆಸಕ್ತಿ ಹೊಂದಿದ್ದರೆ, ಅದನ್ನೇ ಮಾಡಿ. ನೀವು ಬದುಕುತ್ತಿರುವುದು ಒಮ್ಮೆ ಮಾತ್ರ. ಹಾಗಾಗಿ ನಿಮ್ಮನ್ನು ನೀವು ಉತ್ತಮಗೊಳಿಸಲು ಮುಂದಾಗಿ. ನಿಮ್ಮ ಕನಸುಗಳ ಬೆನ್ನಟ್ಟುವುದನ್ನು ನಿಲ್ಲಿಸಬೇಡಿ’ ಎಂದು ಯುವಜನರಿಗೆ ಸಲಹೆ ನೀಡುತ್ತಾರೆ.

ಯಾವುದೇ ಕೆಲಸ ಅಥವಾ ಕ್ಷೇತ್ರದಲ್ಲಿ ಲಿಂಗ ತಾರತಮ್ಯ ಹಾಗೂ ಮಹಿಳೆಯರನ್ನು ನಿರುತ್ಸಾಹಿಗಳನ್ನಾಗಿಸುವ ಕಾರ್ಯಗಳು ನಿಲ್ಲಬೇಕು ಎಂಬ ಆಶಯ ಹೊತ್ತಿರುವ ಅವರು,ಸಾಂಪ್ರದಾಯಿಕ ಲಿಂಗ ಅಸಮಾನತೆಯ ಬೆಂಕಿಯನ್ನೂ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ದೇಶದ ಕೋಟಿ ಮಹಿಳೆಯರಿಗೆ ಪ್ರೇರಣೆಯೂ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.