ADVERTISEMENT

ಅವಕಾಶದ ಬಾಗಿಲು ತೆರೆದ ಆಸಕ್ತಿ

ಅಭಿಲಾಷ ಬಿ.ಸಿ.
Published 11 ಅಕ್ಟೋಬರ್ 2020, 19:30 IST
Last Updated 11 ಅಕ್ಟೋಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""
""

ಕೊರೊನಾ ಎನ್ನುವುದು ಎಷ್ಟು ಸಂಕಷ್ಟಗಳನ್ನು ತಂದಿದೆಯೋ ಅದೇ ರೀತಿಯಲ್ಲಿ ಹಲವು ಟ್ರೆಂಡ್‌ಗಳನ್ನು ಕೂಡ ಹುಟ್ಟು ಹಾಕಿದೆ. ಈ ಸಂದರ್ಭದಲ್ಲಿ ಆರಂಭವಾದ ಕೇಕ್‌ ತಯಾರಿಕೆ ಹವ್ಯಾಸವು ಉದ್ಯೋಗ ನಷ್ಟ ಅನುಭವಿಸಿದ ಮಹಿಳೆಯರಿಗೆ ಉದ್ಯಮ ಸ್ಥಾಪಿಸಲು ನೆರವಾಗಿದೆ.

ಡಿಸೆಂಬರ್‌ನ ತಣ್ಣನೆ ನಡುಗಿಸುವ ಚಳಿಗೆ ಸವಾಲು ಹಾಕುವಂತೆ ದೇಶ, ಭಾಷೆಯ ಚೌಕಟ್ಟು ಮೀರಿ ಎಲ್ಲೆಡೆ ಎದ್ದು ನಿಲ್ಲುತ್ತಿತ್ತು ಕೇಕ್‌ ಸಾಮ್ರಾಜ್ಯ. ಆದರೆ ಈ ವರ್ಷ ಕೊರೊನಾ, ಲಾಕ್‌ಡೌನ್‌ ಸೃಷ್ಟಿಸಿದ ಬಿಕ್ಕಟ್ಟು ಎಪ್ರಿಲ್‌, ಮೇ ತಿಂಗಳಿನಲ್ಲಿಯೇ ಮನೆಯಲ್ಲಿನ ಬಹು ಬಗೆಯ, ಬಣ್ಣ ಬಣ್ಣದ ಕೇಕ್‌ಗಳ ತಯಾರಿಕೆಗೆ ಪ್ರೇರಣೆ ನೀಡಿತು.

ಕೋವಿಡ್‌ ಮೂಡಿಸಿದ ಆಹಾರ, ಆರೋಗ್ಯ, ಸ್ವಚ್ಛತೆಯ ಕಾಳಜಿ ಮನೆಯಲ್ಲಿಯೇ ತಯಾರಿಸುವ ಕೇಕ್‌ ಸೇರಿದಂತೆ ಬೇಕರಿ ಖಾದ್ಯಗಳಿಗೆ ಹೊಸ ಬಗೆಯ ಗ್ರಾಹಕರು, ಮಾರುಕಟ್ಟೆ ಸೃಷ್ಟಿಸಿದೆ. ಉದ್ಯೋಗ ಕಳೆದುಕೊಂಡ ಹಲವರಿಗೆ ಪ್ರವೃತ್ತಿಯನ್ನೇ ವೃತ್ತಿಯಾಗಿಸುವ ಅವಕಾಶವನ್ನೂ ತೆರೆದಿದೆ.

ADVERTISEMENT

ಲಾಕ್‌ಡೌನ್‌ನಲ್ಲಿ ಉದ್ಯೋಗ ಕಳೆದುಕೊಂಡ ಹಲವು ಮಹಿಳೆಯರು ಆರ್ಥಿಕ ಸ್ಥಿರತೆ, ಮಾನಸಿಕ ಸ್ಥಿಮಿತ ಕಾಯ್ದುಕೊಳ್ಳಲು ಹೊಸ ದಾರಿ ಹುಡುಕತೊಡಗಿದ್ದರು. ಅದೇ ಸಂದರ್ಭದಲ್ಲಿ ಮನೆಯಲ್ಲೆ ತಯಾರಿಸಿದ ಖಾದ್ಯಗಳಿಗೆ ಹೆಚ್ಚಿನ ಬೇಡಿಕೆಯೂ ಸೃಷ್ಟಿಯಾಗಿತ್ತು. ಇದನ್ನು ಸದುಪಯೋಗ ಪಡಿಸಿಕೊಂಡ ಅನೇಕರು ಅದುವರೆಗೆ ಪ್ರವೃತ್ತಿಯಾಗಿ, ಮನೆಯವರಿಗೆ ಸೀಮಿತವಾಗಿದ್ದ, ಅಡುಗೆ, ಬೇಕಿಂಗ್‌ನ್ನು ಉದ್ಯೋಗವಾಗಿಯೇ ಆಯ್ದುಕೊಂಡರು. ಉದ್ಯಮದ ಕನಸು ಹೊತ್ತರು.

ಬೇಕಿಂಗ್‌ ಆಸಕ್ತಿ ಉದ್ಯಮಕ್ಕದೆ ದಾರಿ
‘ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಳ್ಳಬೇಕಾಯಿತು’ ಎನ್ನುವ ಬೆಂಗಳೂರಿನ ಇಂದಿರಾನಗರದ ನಿವಾಸಿ ನಿಶೀನ್‌ ಸುಬ್ಬಯ್ಯ ಅವರು ‘ಬೇಕಿಂಗ್ ಬಗ್ಗೆ ಮೊದಲಿನಿಂದಲೂ ಆಸಕ್ತಿಯಿತ್ತು. ಮನೆಯಲ್ಲೇ ವಿವಿಧ ಬಗೆಯ ಕೇಕ್‌, ಬ್ರೆಡ್‌, ವಿವಿಧ ಬಗೆಯ ಬನ್‌ ತಯಾರಿಸಿ ಮಾರಾಟ ಮಾಡುತ್ತಿದ್ದೇನೆ’ ಎನ್ನುತ್ತಾರೆ. ಅದನ್ನೇ ಉದ್ಯಮವಾಗಿಸುವ ಕನಸನ್ನೂ ಅವರು ಹೊತ್ತಿದ್ದಾರೆ.

ಕೊಡಗಿನ ದೇಶಿಕ್‌ ಗಂಗಮ್ಮ ಸಹ ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಮನೆಯಲ್ಲಿಯೇ ಕೇಕ್‌ಗಳನ್ನು ತಯಾರಿಸಿ ಮಾರಾಟಮಾಡುತ್ತಿದ್ದಾರೆ. ‘ಲಾಕ್‌ಡೌನ್‌ನಲ್ಲಿ ಯೂಟ್ಯೂಬ್‌ನಲ್ಲಿ ಹೆಚ್ಚು ವಿಡಿಯೊಗಳನ್ನು ವೀಕ್ಷಿಸಿ ಬೇಕಿಂಗ್ ಕಲಿತಿದ್ದೇನೆ’ ಎನ್ನುವ ಗಂಗಮ್ಮ, ಅದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ.

ಪ್ರಯೋಗಕ್ಕೊಳಗಾದ ಖಾದ್ಯ
ಗೂಗಲ್‌ ಟ್ರೆಂಡ್‌ ವರದಿ ಪ್ರಕಾರ ಕೊರೊನಾ ಆತಂಕದ ಸಮಯ ಹಾಗೂ ಲಾಕ್‌ಡೌನ್‌ ಸಮಯದಲ್ಲಿ ದಹಿವಡಾ, ಡಾಲ್ಗೊನಾ ಕಾಫಿ, ಪಾನಿಪೂರಿಯೊಂದಿಗೆ ಪೈಪೋಟಿಗೆ ಬಿದ್ದಂತೆ ಅತಿಹೆಚ್ಚು ಪ್ರಯೋಗಕ್ಕೆ ಒಳಗಾದ ಆಹಾರಗಳಲ್ಲಿ ಕೇಕ್‌ ಕೂಡ ಒಂದು. ಅದರಲ್ಲೂ ಚಾಕೊಲೇಟ್‌ ಕೇಕ್‌ ರೆಸಿಪಿಯನ್ನು ಅತಿಹೆಚ್ಚು ಜನರು ಗೂಗಲ್‌ನಲ್ಲಿ ಹುಡುಕಿದ್ದಾರೆ. ಅನೇಕರು ಯೂಟ್ಯೂಬ್‌, ಫೇಸ್‌ಬುಕ್ ನೋಡಿ ಬಗೆಬಗೆಯ ಕೇಕ್‌ ತಯಾರಿಕೆಯಲ್ಲಿ ತಲ್ಲೀನರಾದರು. ಅದಕ್ಕಾಗಿ ಈ ಅವಧಿಯಲ್ಲಿ ನೂರಾರು ಯೂಟ್ಯೂಬ್ ಚಾನೆಲ್‌ಗಳು, ಫೇಸ್‌ಬುಕ್‌ ಅಡುಗೆ ಪೇಜ್‌ಗಳು ಸೃಷ್ಟಿಯಾಗಿವೆ.

ಬಾಳೆಹಣ್ಣಿನ ಕೇಕ್‌ಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಮನೆಯಲ್ಲಿಯೇ ಬೇಕಿಂಗ್ ಮಾಡುವವರು ಬಾಳೆಹಣ್ಣಿನ ಜತೆಗೆ ವಿವಿಧ ವಸ್ತುಗಳನ್ನು ಬಳಸಿ ಕೇಕ್‌ ತಯಾರಿಸಿದ್ದಾರೆ. ನೋಡಲು, ಸವಿಯಲು ರಸಗುಲ್ಲಾ, ಜಾಮೂನ್‌ಗಳನ್ನು ಹೋಲುವ ಕೇಕ್‌ಗಳು ಕೇಕ್‌ ಪ್ರಿಯರ ಜತೆಗೆ ಸಿಹಿತಿನಿಸು ಪ್ರಿಯರನ್ನು ಬಹುವಾಗಿ ಆಕರ್ಷಿಸಿವೆ.

ಬಹುತೇಕರು ಬ್ರೆಡ್‌, ಬನ್, ಕಪ್‌ಕೇಕ್‌, ಮಗ್‌ಕೇಕ್‌ಗಳ ಪ್ರಯೋಗದಲ್ಲಿ ತೊಡಗಿದ್ದಾರೆ. ಕೊರೊನಾದಿಂದಾಗಿ ಜನರಲ್ಲಿ ಆರೋಗ್ಯ ಕಾಳಜಿ ಕೂಡ ಹೆಚ್ಚಿದೆ. ಹಾಗಾಗಿ ಕೇಕ್‌ ತಯಾರಿಕೆಯಲ್ಲಿ ಮೈದಾ ಹಿಟ್ಟಿನ ಜಾಗವನ್ನು ಓಟ್ಸ್‌, ಗೋಧಿ ಆವರಿಸಿವೆ. ಸಕ್ಕರೆ ಬದಲಿಗೆ ಜೇನುತುಪ್ಪ, ಖರ್ಜೂರದ ಬಳಕೆ ಹೆಚ್ಚಿದೆ.

‘ಜನರ ಅಭಿರುಚಿಗೆ ತಕ್ಕಂತೆ ಕೇಕ್‌ ವಿನ್ಯಾಸ, ಬಳಸುವ ಸಾಮಗ್ರಿಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಂಡಿದ್ದೇನೆ’ ಎನ್ನುವ ನಿಶೀನ್‌ ತಮ್ಮದೇ ಬೇಡಿಕೆ ವಲಯವನ್ನು ಸೃಷ್ಟಿಸಿಕೊಂಡಿದ್ದಾರೆ. ಇವರು ತಯಾರಿಸುತ್ತಿರುವ ‘ಶುಗರ್ ಫ್ರೀ, ಎಗ್‌ಲೆಸ್‌, ಡೇರಿ ‍ಫ್ರಿ ಕೇಕ್‌’ ಇದಕ್ಕೆ ಉತ್ತಮ ಉದಾಹರಣೆ. ‘ಕ್ಯಾರೆಟ್, ಬೀಟ್ರೂಟ್‌ ಮತ್ತು ವಿವಿಧ ಹಣ್ಣುಗಳ ಕೇಕ್‌ಗಳಿಗೆ ಬೇಡಿಕೆ ಇದೆ’ ಎನ್ನುತ್ತಾರೆ ಅವರು.

ನಿಶೀನ್‌
ದೇಶಿಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.