ADVERTISEMENT

ಮಹಿಳಾ ದಿನಾಚರಣೆ: ಪ್ರಜ್ಞಾ; ಪ್ರತಿಭೆಯ ಪ್ರಭೆ

ಸ್ತ್ರೀ ಸವಾಲು ಸಾಧನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 19:30 IST
Last Updated 7 ಮಾರ್ಚ್ 2021, 19:30 IST
ಪ್ರಜ್ಞಾ ಕಾಕಡೆ
ಪ್ರಜ್ಞಾ ಕಾಕಡೆ   

ನನಗೆ ಸಿ.ಎ. ಬಗ್ಗೆ ಏನೂ ಗೊತ್ತಿರಲಿಲ್ಲ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 97ರಷ್ಟು ಅಂಕ ಗಳಿಸಿದೆ. ದ್ವಿತೀಯ ಪಿಯುನಲ್ಲೂ ಉತ್ತರ ಕನ್ನಡ ಜಿಲ್ಲೆಗೆ ರ‍್ಯಾಂಕ್‌ ಬಂತು. ಆಗ ನಾನು ಓದುತ್ತಿದ್ದ ಮಾರಿಕಾಂಬ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ‘ಮುಂದೆ ಸಿ.ಎ. ಓದು, ಒಳ್ಳೆಯ ಅವಕಾಶಗಳಿವೆ’ ಎಂದರು. ಬಿ.ಕಾಂ. ಮೊದಲ ವರ್ಷದಲ್ಲಿದ್ದಾಗಲೇ ಫೌಂಡೇಷನ್‌ ಪರೀಕ್ಷೆಗೆ ಕೂತು ಪಾಸಾದೆ. ಬಿ.ಕಾಂ. ಮುಗಿಯುವ ಹೊತ್ತಿಗಾಗಲೇ ಸಿ.ಎ. ಇಂಟರ್‌ ಪಾಸ್‌ ಮಾಡಿದೆ. ಬಿ.ಕಾಂ.ನಲ್ಲೂ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಐದನೇ ರ‍್ಯಾಂಕ್‌. ಕಳೆದ ನವೆಂಬರ್‌ನಲ್ಲಿ ಸಿ.ಎ. ಫೈನಲ್‌ ಪರೀಕ್ಷೆ ಕೂಡ ಪಾಸ್‌ ಆಯಿತು.

ಓದಿದ್ದೆಲ್ಲ ಸರ್ಕಾರಿ ಶಾಲೆ– ಕಾಲೇಜಿನಲ್ಲಿ. ಅಪ್ಪ ಗಣೇಶ ಕಾಕಡೆ ಮತ್ತು ಅಮ್ಮ ಕಲಾವತಿ ಬೀದಿ ಬದಿಯಲ್ಲಿ ಬಟ್ಟೆ ಮಾರಾಟ ಮಾಡುತ್ತಾರೆ. ಎಸ್‌ಎಸ್‌ಎಲ್‌ಸಿ, ಪಿಯುನಲ್ಲಿ ಸುಮಾರು ಕಡೆಯಿಂದ ಬೇರೆ ಬೇರೆ ಸ್ಕಾಲರ್‌ಶಿಪ್‌ಗಳು ಸಿಕ್ಕಿದವು. ನಾನು ಆ ಸ್ಕಾಲರ್‌ಶಿಪ್‌ ದುಡ್ಡನ್ನೆಲ್ಲ ಜೋಪಾನ ಮಾಡಿದ್ದೆ. ಬಿ.ಕಾಂ. ಓದುತ್ತಿರುವಾಗಲೇ ಎರಡೂವರೆ ವರ್ಷಗಳ ಕಾಲ ಒಂದರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಮನೆಪಾಠ ಮಾಡಿ ದುಡ್ಡು ಗಳಿಸಿದೆ. ಮತ್ತೆ ಅಮ್ಮ ಒಂದಿಷ್ಟು ಸಾಲ ಮಾಡಿ ಹಣ ಕೊಟ್ಟರು. ಇದನ್ನೆಲ್ಲ ಸಿ.ಎ. ಓದಿಗೆ ಬಳಸಿಕೊಂಡೆ.

ಆರ್ಟಿಕಲ್‌ಶಿಪ್‌ ಅನ್ನು ಶಿರಸಿಯ ಲೆಕ್ಕ ಪರಿಶೋಧಕ ಎಸ್‌.ಜಿ. ಹೆಗಡೆ ಸರ್‌ ಅವರಲ್ಲಿ ಮಾಡಿದೆ. ಅವರೇ ಎಲ್ಲಾ ಮಾರ್ಗದರ್ಶನ ನೀಡಿದರು. ಈಗಲೂ ಅಲ್ಲೇ ಕೆಲಸ ಮಾಡುತ್ತಿದ್ದು, ಮುಂದೆ ಶಿರಸಿಯಲ್ಲೇ ಇದ್ದು ಪ್ರ್ಯಾಕ್ಟೀಸ್‌ ಮಾಡಬೇಕು ಎಂದುಕೊಂಡಿದ್ದೇನೆ. ಇದರಿಂದ ಬೇರೆಯವರಿಗೂ ಉದ್ಯೋಗ ಕೊಡಬಹುದು. ಹಾಗೆಯೇ ಬೇರೆ ದೇಶಗಳ ಔಟ್‌ಸೋರ್ಸ್‌ ಕೂಡ ತಗೋಬಹುದು. ಇಷ್ಟು ಬೇಗ ಸಿ.ಎ. ಪಾಸ್‌ ಮಾಡಿದ್ದಕ್ಕೆ ಕಾರಣ ಹಾರ್ಡ್‌ವರ್ಕ್‌ ಮತ್ತು ಡೆಡಿಕೇಶನ್‌. ಇದರ ಜೊತೆಗೆ ಪ್ಯಾಶನ್‌ ಕೂಡ ಇದ್ದರೆ ಯಾರು ಬೇಕಾದರೂ ಸಿ.ಎ. ಮಾಡಬಹುದು. ಇದರಲ್ಲಿ ಉದ್ಯೋಗಾವಕಾಶ ಸಾಕಷ್ಟಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.