ADVERTISEMENT

ಮಹಿಳಾ ದಿನಾಚರಣೆ: ಕರುಣೆಯ ‘ಕಾವೇರಿ’ ರಾಧಿಕಾ

ಸಂಧ್ಯಾ ಹೆಗಡೆ
Published 7 ಮಾರ್ಚ್ 2021, 19:30 IST
Last Updated 7 ಮಾರ್ಚ್ 2021, 19:30 IST
ಆಂಬುಲೆನ್ಸ್ ಚಾಲನೆಯಲ್ಲಿ ರಾಧಿಕಾ
ಆಂಬುಲೆನ್ಸ್ ಚಾಲನೆಯಲ್ಲಿ ರಾಧಿಕಾ   

ಮೃದು ಮನದ ಮಹಿಳೆಯರಿಗೆ ಆಂಬುಲೆನ್ಸ್ ಓಡಿಸುವುದು ಸುಲಭದ ಮಾತಲ್ಲ. ಆಂಬುಲೆನ್ಸ್‌ ವಾಹನದ ಚಾಲನಾ ಸೀಟಿನಲ್ಲಿ ಮಹಿಳೆ ಕುಳಿತಳೆಂದರೆ ಕುಹಕದಿಂದ ನೋಡುವ ಕಣ್ಣುಗಳು ನೂರಾರು. ಈ ವಕ್ರದೃಷ್ಟಿಯ ನೋಟವೇ ನನ್ನಲ್ಲಿ ಆತ್ಮವಿಶ್ವಾಸದ ಕಿಚ್ಚು ಹಚ್ಚಿ, ಬದುಕಿನ ದಿಕ್ಕನ್ನೇ ಬದಲಿಸಿತು.

ಲೆಕ್ಕವಿಲ್ಲದಷ್ಟು ಸಂಖ್ಯೆಯ ರೋಗಿಗಳನ್ನುಆಂಬುಲೆನ್ಸ್‌ನಲ್ಲಿ ಕರೆದೊಯ್ದಿದ್ದೇನೆ. ಒಮ್ಮೆ ಬಳ್ಳಾರಿಗೆ ಹೋಗಿ ಬಂದಿದ್ದು ಮಾತ್ರ ಮಾಸದ ಸ್ಮರಣೆ. ಪುಟ್ಟ ಮಗುವಿನ ಶವ, ಅದರೊಂದಿಗಿದ್ದ ಹಸಿ ಮನಸ್ಸಿನ ತಾಯಿಯನ್ನು ಕುಳ್ಳಿರಿಸಿಕೊಂಡು 200 ಕಿ.ಮೀ ಗಾಡಿ ಓಡಿಸಿ, ಬಳ್ಳಾರಿ ತಲುಪಿದೆ. ಇನ್ನೇನು ಊರು ಪ್ರವೇಶಿಸುವ ಹೊತ್ತಿಗೆ, ಗ್ರಾಮಸ್ಥರು ದಾರಿಗೆ ತಡೆ ಒಡ್ಡಿದರು. ಕೌಟುಂಬಿಕ ಜಗಳದಲ್ಲಿ ಶವ ಅನಾಥವಾಯಿತು. ಅಧಿಕಾರಿಗಳು, ಅವರಿವರಿಗೆಲ್ಲ ಫೋನಾಯಿಸಿದ್ದೂ ಫಲ ನೀಡಲಿಲ್ಲ. ಆಂಬುಲೆನ್ಸ್‌ ಅನ್ನು ಪುನಃ ಊರ ಕಡೆಗೆ ತಿರುಗಿಸಿ, ಆ ಮಗುವಿನ ಅಂತ್ಯಕ್ರಿಯೆಯನ್ನು ನಮ್ಮೂರಿನಲ್ಲಿ ನಡೆಸಿದೆ. ಮಗುವನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಆ ತಾಯಿಗೆ ನಮ್ಮ ಮನೆಯಲ್ಲೇ ಆಸರೆ ನೀಡಿ, ಅವಳಿಗೊಂದು ಉದ್ಯೋಗವನ್ನು ಕೊಡಿಸಿದೆ.

ನನಗೆ ಡ್ರೈವಿಂಗ್ ಇಷ್ಟದ ಕೆಲಸವೇನಲ್ಲ. ಆಂಬುಲೆನ್ಸ್ ಚಾಲಕರಾಗಿದ್ದ ಪತಿ ಸುರೇಶ್, ಒತ್ತಾಯದಿಂದ ಡ್ರೈವಿಂಗ್ ಕಲಿಸಿದರು. ಪತಿ ಅಕಾಲಿಕವಾಗಿ ನಿಧನರಾದರು. ಆಗ ಅವರ ಬಳಿಯಿದ್ದ ‘ಕಾವೇರಿ’ ನನಗೆ ಜೀವದಾಯಿನಿಯಾದಳು. ಜೀವನೋಪಾಯಕ್ಕೆ ಆಂಬುಲೆನ್ಸ್‌ ಅನ್ನು ಹಿಡಿದು ರೋಗಿಗಳ ಸೇವೆ ಶುರು ಮಾಡಿದೆ.

ADVERTISEMENT

ಆಂಬುಲೆನ್ಸ್‌ ಅಂದರೆ, ಅದರೊಳಗೆ ತುಂಬಿರುವುದೆಲ್ಲ ರೋದನ, ಆಕ್ರಂದನ, ಹತಾಶೆ ಇವೇ. ಆರ್ದ್ರವಾಗುವ ಹೃದಯವನ್ನು ತಹಬಂದಿಗೆ ತಂದು, ರೋಗಿಗಳ ಜೀವ ರಕ್ಷಣೆ ಮೊದಲ ಕರ್ತವ್ಯ ಎಂದು ನನಗೆ ನಾನೇ ಸಾಂತ್ವನ ಹೇಳಿಕೊಂಡು ಡ್ರೈವಿಂಗ್ ಮಾಡುತ್ತಿದ್ದೆ. ನಿರಂತರ ಆರೆಂಟು ವರ್ಷ ಆಂಬುಲೆನ್ಸ್ ಅನ್ನು ಸ್ವತಃ ಚಲಾಯಿಸಿ, ಸಾವಿರಾರು ರೋಗಿಗಳ ಜೀವ ಉಳಿಸಿದ ಸಮಾಧಾನವಿದೆ.

ಈಗ, ಸಹೋದರರಂತಿರುವ ಚಾಲಕರು ಜೊತೆಯಾಗಿದ್ದಾರೆ. ತುರ್ತು ಸಂದರ್ಭದಲ್ಲಿ ನಾನೇ ವಾಹನ ಓಡಿಸುತ್ತೇನೆ. ಮಹಿಳೆಗೆ ನಿರ್ಬಂಧಿತ ಎನ್ನಬಹುದಾದ ಸೇವೆಯಲ್ಲಿ ತೊಡಗಿಕೊಂಡು ಯಶಸ್ಸು ಪಡೆದ ಹೆಮ್ಮೆ ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.