ADVERTISEMENT

International Womens Day | ಸಮಸ್ಯೆಯನ್ನೇ ಅವಕಾಶ ಮಾಡಿಕೊಂಡಾಗ...

ದಿವ್ಯ ಗೋಕರ್ಣ
Published 7 ಮಾರ್ಚ್ 2023, 19:30 IST
Last Updated 7 ಮಾರ್ಚ್ 2023, 19:30 IST
ದಿವ್ಯ ಗೋಕರ್ಣ, ಯುವ ಉದ್ಯಮಿ
ದಿವ್ಯ ಗೋಕರ್ಣ, ಯುವ ಉದ್ಯಮಿ   

ಸಾಧನೆಯ ಹಾದಿ ಮಹಿಳೆಯರಿಗೆ ಸಹಜ, ಸರಳವಾಗಿರುವುದೇ ಇಲ್ಲ. ಸಾಮಾಜಿಕ ಸಿದ್ಧಚೌಕಟ್ಟನ್ನು ಮೀರುತ್ತ ತಮ್ಮದೊಂದು ಅಸ್ಮಿತೆಯನ್ನು ಸ್ಥಾಪಿಸಬೇಕಾಗುತ್ತದೆ. ಅವಳಿ ದೋಣಿಗಳಲ್ಲಿ ಯಾನ ಮಾಡಿದಂತೆ ಈ ಮಾರ್ಗ ಕಸರತ್ತಿನಿಂದ ಕೂಡಿರುತ್ತದೆ. ಸಮತೋಲನ ತಪ್ಪಿದರೆ ತಾನು ಕಳೆದುಹೋಗುವುದಲ್ಲದೇ ತನ್ನವರನ್ನೂ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇಂಥ ಸಂದರ್ಭಗಳಲ್ಲಿಯೂ ತನ್ನ ಹೃದಯದ ಮಾತನ್ನು ಕೇಳುತ್ತ, ತಾನೂ ಬೆಳೆದು, ಉಳಿದವರಿಗೂ ಬೆಳೆಯುವ ಅವಕಾಶ ಮಾಡಿಕೊಟ್ಟ ಹಲವಾರು ಉದಾಹರಣೆಗಳು ನಮ್ಮಲ್ಲಿವೆ. ಸಾಧನೆಯ ಕನಸುಗಳಿಗೆ ಪ್ರೋತ್ಸಾಹ ನೀಡುತ್ತ, ಸಮಾನತೆಗಿಂತಲೂ ಹೆಚ್ಚಾಗಿ ಅವಶ್ಯವಿದ್ದಷ್ಟು ಕಸುವು ತುಂಬುವ ಕೆಲಸ ಅವಕಾಶಗಳನ್ನು ನೀಡುತ್ತ, ಪ್ರೋತ್ಸಾಹಿಸುತ್ತ, ಸಹಭಾಗಿತ್ವವನ್ನು ನೀಡುತ್ತ ಹೋಗಬೇಕಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವೂ ಪೂರಕವಾಗಿ ನಿಲ್ಲಲಿದೆ. ಲಿಂಗ ತಾರತಮ್ಯ ತಡೆಯುವುದೇ ಈ ವರ್ಷದ ಆಶಯ.

**

ಬೆಂಗಳೂರಿನ ಎಂಎನ್‌ಸಿಯೊಂದರಲ್ಲಿ ಉದ್ಯೋಗದಲ್ಲಿದ್ದೆ. ಮುಟ್ಟಿನ ವೇಳೆ ಸ್ಯಾನಿಟರಿ ಪ್ಯಾಡ್‌ನಿಂದಾಗಿ ನಾನು ಅನುಭವಿಸುತ್ತಿದ್ದ ಕಿರಿಕಿರಿ ಅಷ್ಟಿಷ್ಟಲ್ಲ. ಬಳಿಕ ನನ್ನ ಸಮಸ್ಯೆಯನ್ನೇ ಅವಕಾಶವನ್ನಾಗಿ ಬದಲಾಯಿಸಿಕೊಂಡೆ.

ADVERTISEMENT

ಪ್ಯಾಡ್‌ನಿಂದಾಗುತ್ತಿದ್ದ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು 2016ರಲ್ಲಿ ‘ಮೆನ್ಸ್ಟುರಲ್‌ ಕಪ್‌’ ಮೊರೆಹೋದೆ. ಶೇ 80ರಷ್ಟು ಮಹಿಳೆಯರು ಪ್ಯಾಡ್‌ನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿರುತ್ತಾರೆ ಎನ್ನುವುದು ಬಳಿಕವೇ ತಿಳಿದಿದ್ದು. ಹಾಗಾಗಿ ಕಪ್‌ಗಳ ಬಳಕೆಯ ಕುರಿತು ಕಾಲೇಜುಗಳಿಗೆ, ಸ್ವಸಹಾಯ ಸಂಘಗಳಿಗೆ ತೆರಳಿ ಅರಿವು ಮೂಡಿಸುವ ಕೆಲಸ ಆರಂಭಿಸಿದೆ. ಎಲ್ಲ ಕಡೆಯಿಂದ ಬರುತ್ತಿದ್ದ ಸಾಮಾನ್ಯ ಪ್ರಶ್ನೆ ‘ಯಾವ ಬ್ರ್ಯಾಂಡ್‌ನ ಕಪ್‌ ಉತ್ತಮ’.

ಇದು ಕಷ್ಟದ ಪ್ರಶ್ನೆಯಾಗಿತ್ತು. ಏಕೆಂದರೆ, ಕಡಿಮೆ ಬೆಲೆಗೆ ಅತ್ಯುತ್ತಮ ಗುಣಮಟ್ಟದ ಕಪ್‌ಗಳು ಮಾರುಕಟ್ಟೆಯಲ್ಲಿ ಇರಲಿಲ್ಲ. ಈ ಕೊರತೆ ನೀಗಿಸಲು ನಾನೇ ಕಪ್‌ಗಳ ಉತ್ಪಾದನಾ ಕ್ಷೇತ್ರಕ್ಕೆ ಇಳಿಯಲು ತೀರ್ಮಾನಿಸಿದೆ. ‘ಕಾಂಫಿ ಕಪ್‌’ ಹೆಸರಿನಲ್ಲಿ ನನ್ನೂರು ಶಿರಸಿಯಲ್ಲೇ ಉದ್ಯಮ ಆರಂಭಿಸಲು ನಿರ್ಧರಿಸಿದೆ. ಒಂದಷ್ಟು ಸಮಾನ ಮನಸ್ಕರು ಜೊತೆಗೂಡಿದರು. 2020ರಲ್ಲಿ ಉದ್ಯಮ ಆರಂಭವಾಯಿತು.

ಕಪ್‌ಗಳ ತಯಾರಿಕೆ, ಮಾರುಕಟ್ಟೆ ಕುರಿತು ಸಾಕಷ್ಟು ತಯಾರಿ ಮಾಡಿಕೊಂಡಿದ್ದರೂ, ಬಂಡವಾಳ ಹೂಡುವುದು ಅಷ್ಟು ಸುಲಭದ್ದಾಗಿರಲಿಲ್ಲ. ಬ್ಯಾಂಕ್‌ನಿಂದ ಸಾಲ ಪಡೆದು ಸಂಸ್ಥೆಯನ್ನು ಆರಂಭಿಸಿದೆವು. ಶುರುವಿನಲ್ಲಿ ಸಾಕಷ್ಟು ಕಷ್ಟನಷ್ಟ ಅನುಭವಿಸಬೇಕಾಯಿತು. ನಮ್ಮ ಉತ್ಪನ್ನ ಮತ್ತು ಮುಟ್ಟಿನ ನಿರ್ವಹಣೆ ಕುರಿತು ಹಮ್ಮಿಕೊಳ್ಳುತ್ತಿದ್ದ ಕಾರ್ಯಕ್ರಮಗಳಿಗೆ ಪುರುಷರು ಹಾಜರಾಗುತ್ತಿರಲಿಲ್ಲ. ಮಹಿಳೆಯರೂ ಮುಜುಗರಪಡುತ್ತಿದ್ದರು. ಬಳಿಕ, ಪುರುಷರನ್ನೂ ಅಭಿಯಾನದ ಭಾಗವಾಗಿಸಿಕೊಂಡೆವು. ನಂತರ ಸಾಕಷ್ಟು ಬದಲಾವಣೆಗಳು ಆದವು.

ಹಳ್ಳಿಯೊಂದರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದವು. ವ್ಯಕ್ತಿಯೊಬ್ಬರು ತಮ್ಮ ಹೆಂಡತಿಗಾಗಿ ಕಪ್‌ ಕೊಂಡು ಹೋಗಿದ್ದರು. ಎರಡು ತಿಂಗಳ ಬಳಿಕ ಪುನಃ ಬಂದು ತಾಯಿಗಾಗಿ ಕಪ್‌ ಕೊಂಡುಹೋದರು. ಮುಟ್ಟಿನ ವಿಚಾರದಲ್ಲಿ ಜನರ ನಡವಳಿಕೆ ಬದಲಾಗುತ್ತಿರುವುದಕ್ಕೆ ಹೆಮ್ಮೆ ಅನಿಸಿದೆ.

ನಿರೂಪಣೆ: ಚೇತನ ಜೆ.ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.