ADVERTISEMENT

ಯುವತಿಯರಲ್ಲಿ ಹೆಚ್ಚಾಗಿರುವ ‘ನೋ ಮ್ಯಾರೇಜ್’ ಟ್ರೆಂಡ್‌

ನಂಗೆ ಮದ್ವೇನೆ ಬೇಡಪ್ಪ!

ರೇಷ್ಮಾ
Published 18 ಸೆಪ್ಟೆಂಬರ್ 2021, 4:12 IST
Last Updated 18 ಸೆಪ್ಟೆಂಬರ್ 2021, 4:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೂರದ ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಪ್ರಣವಿ ರಾವ್‌ಗೆ ಕೈ ತುಂಬಾ ಸಂಬಳ. ಅಮ್ಮ–ಅಪ್ಪ ಇಬ್ಬರೂ ನಿವೃತ್ತ ಶಿಕ್ಷಕರು. ಒಬ್ಬಳೇ ಮಗಳಾದ ಪ್ರಣವಿ ಹೆಸರಿನಲ್ಲಿ ಆಸ್ತಿ, ಮನೆ ಎಲ್ಲವೂ ಇದೆ. ಅವಳಿಗೆ ಈಗ ವಯಸ್ಸು 30 ಮೀರಿದೆ. ಪೋಷಕರಿಗೆ ಅವಳ ಮದುವೆಯ ಚಿಂತೆ. ಆದರೆ ಪ್ರಣವಿ ಮದುವೆ ಎಂದರೆ ಅಲರ್ಜಿ ಎನ್ನುವ ಹಾಗೇ ವರ್ತಿಸುತ್ತಾಳೆ. ಮಗಳಿಗೆ ವಯಸ್ಸು ಮೀರುತ್ತಿದೆ.. ಹೀಗೆ ಇದ್ದರೆ ಹೇಗೆ ಎಂಬ ಚಿಂತೆ ಪೋಷಕರನ್ನು ಸದಾ ಕಾಡುತ್ತಿರುತ್ತದೆ. ಆದರೆ ಮಗಳು ಮಾತ್ರ ಮದುವೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಮಾಡುವ ಪ್ರಯತ್ನವೆಲ್ಲಾ ಮಾಡಿ ಕೈಚೆಲ್ಲಿದ್ದಾರೆ ಪ್ರಣವಿ ತಂದೆ–ತಾಯಿ.

ಪ್ರಣವಿಯಂತೆ ಹಲವು ಹೆಣ್ಣುಮಕ್ಕಳು ಇತ್ತೀಚೆಗೆ ‘ನೋ ಮ್ಯಾರೇಜ್ ಟ್ರೆಂಡ್‌’ ನತ್ತ‌ ಒಲವು ಮೂಡಿಸಿಕೊಳ್ಳುತ್ತಿದ್ದಾರೆ. ಮಿಲೇನಿಯಲ್ ಜಮಾನದ ಯುವತಿಯರು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ. ಜಂಟಿಯಾಗುವುದಕ್ಕಿಂತ ಒಂಟಿ ಜೀವನವೇ ಬೆಸ್ಟ್ ಎನ್ನುವ ಯುವತಿಯರು ಮದುವೆಗೆ ನೋ ಎನ್ನುತ್ತಿದ್ದಾರೆ. ಮದುವೆ, ಸಂಸಾರ, ಗಂಡ, ಮನೆ, ವೃತ್ತಿ ಇವನ್ನೆಲ್ಲಾ ನಿಭಾಯಿಸಲು ಒಲ್ಲೆ ಎನ್ನುವ ಇವರು ಮದುವೆಯಾಗಿ ಗೃಹಿಣಿಯಾಗುವುದಕ್ಕಿಂತ ಹಾಗೇ ಇರುವುದು ಬೆಸ್ಟ್ ಎನ್ನುತ್ತಿದ್ದಾರೆ.

‘ಮದುವೆ ಎಂದರೆ ಬಂಧನ ಎನ್ನುವುದಕ್ಕಿಂತ ನಾನು ನನ್ನ ಜೀವನವನ್ನು ಹೀಗೇ ರೂಪಿಸಿಕೊಂಡು ಬದುಕಬೇಕು ಎಂದು ಕನಸು ಕಂಡವಳು. ಇಲ್ಲಿಯವರೆಗೆ ಹಾಗೆ ಬದುಕಿದ್ದೇನೆ ಕೂಡ. ಆದರೆ ಮದುವೆಯಾದ ಮೇಲೆ ನನ್ನ ಕನಸಿನ ಬದುಕು ನನಗೆ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲ. ನಮ್ಮನ್ನು ಎಷ್ಟೇ ಅರ್ಥ ಮಾಡಿಕೊಳ್ಳುವವರು ಸಿಕ್ಕರೂ ನಮ್ಮೆಲ್ಲಾ ಆಸೆ– ಕನಸುಗಳಿಗೆ ಅವರು ಸಹಕಾರ ನೀಡುತ್ತಾರೆ ಎಂಬ ನಂಬಿಕೆ ನನಗಿಲ್ಲ. ಹಾಗಂತ ಒಂಟಿಯಾಗಿಯೇ ಇದ್ದು ಬಿಡುತ್ತೇನೆ ಎಂಬ ಭಂಡ ಧೈರ್ಯವೂ ನನ್ನದಲ್ಲ. ಆದರೆ ಮದುವೆ ಸದ್ಯ ಬೇಡ ಎಂಬ ಗಟ್ಟಿ ನಿರ್ಧಾರ ಮಾಡಿದ್ದೇನೆ’ ಎನ್ನುತ್ತಾರೆ ಕಾಲೇಜ್ ಒಂದರಲ್ಲಿ ಪ್ರಾಧ್ಯಾಪಕಿ ಆಗಿರುವ ಸಹನಾ ಗೌಡ.

ADVERTISEMENT

ಕೋವಿಡ್‌ ಶುರುವಾದ ಮೇಲೆ ಮದುವೆ ಎಂದರೆ ಬಂಧನ ಎನ್ನುವ ಸ್ವೇಚ್ಛೆಯ ಮನೋಭಾವಕ್ಕಿಂತ ಕೆಲವೊಂದು ಭಾವನಾತ್ಮಕ ಕಾರಣಗಳಿಂದಲೂ ಹೆಣ್ಣುಮಕ್ಕಳು ಮದುವೆಯ ವಿಚಾರದಲ್ಲಿ ಹಿಂದೆ– ಮುಂದೆ ನೋಡುತ್ತಿದ್ದಾರೆ. ಹೆಣ್ಣುಮಕ್ಕಳು ಮದುವೆ ಬೇಡ ಎಂಬ ನಿರ್ಧಾರದ ಹಿಂದೆ ಈ ಕೆಲವು ಕಾರಣಗಳು ಪ್ರಮುಖವಾಗಿವೆ.

ಆರ್ಥಿಕ ಸಮಸ್ಯೆ

ಭಾರತದಲ್ಲಿ ಹಲವು ಹೆಣ್ಣುಮಕ್ಕಳು ಕುಟುಂಬದಲ್ಲಿನ ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಮದುವೆ ಬೇಡ ಎನ್ನುತ್ತಿದ್ದಾರೆ. ಮನೆಯಲ್ಲಿ ತಮಗಿಂತ ದೊಡ್ಡವರ ಮದುವೆಯ ಖರ್ಚುಗಳನ್ನೆಲ್ಲಾ ನೋಡಿದ ಅವರು, ಮದುವೆಯಾಗಿ ತಂದೆ–ತಾಯಿಗೆ ತಾನು ಇನ್ನಷ್ಟು ಹೊರೆಯಾಗಬಾರದು ಎಂದು ಮದುವೆ ಬೇಡ ಎಂಬ ನಿರ್ಧಾರಕ್ಕೆ ಬರುತ್ತಿದ್ದಾರೆ.

ಕೌಟುಂಬಿಕ ಜವಾಬ್ದಾರಿಗಳು

ಇತ್ತೀಚಿನ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಹೆಣ್ಣುಮಕ್ಕಳು ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಬಡತನ, ಇನ್ಯಾವುದೋ ಸಂಕಷ್ಟ, ತಂದೆ ಅಥವಾ ತಾಯಿಯ ಮರಣ ಈ ಎಲ್ಲಾ ಕಾರಣಗಳಿಂದ ಮನೆಯ ಸಂಪೂರ್ಣ ಜವಾಬ್ದಾರಿ ಅವಳ ಹೆಗಲ ಮೇಲಿರುತ್ತದೆ. ಹಲವು ಮನೆಗಳಲ್ಲಿ ಹೆಣ್ಣುಮಗಳು ಮನೆಯ ಮಗನಂತೆ ಮುಂದೆ ನಿಂತು ಮನೆಯ ಜವಾಬ್ದಾರಿ ನಿಭಾಯಿಸುತ್ತಿರುತ್ತಾಳೆ. ಅಂತಹ ಸಂದರ್ಭದಲ್ಲಿ ತಾನು ಮದುವೆಯಾಗಿ ಗಂಡನ ಮನೆಗೆ ಹೋದರೆ ತನ್ನ ಮನೆ ಪರಿಸ್ಥಿತಿ ಹದಗೆಡುತ್ತದೆ ಎಂದು ಹೆದರಿ ಮದುವೆ ಬೇಡ ಎನ್ನುತ್ತಾಳೆ.

ಭಾವನಾತ್ಮಕ ಕಾರಣಗಳು

ಕೋವಿಡ್ ಸಂದರ್ಭದಲ್ಲಿ ಹಲವರು ತಂದೆ–ತಾಯಿ, ಅಕ್ಕ–ತಮ್ಮ, ಅಣ್ಣ–ತಂಗಿ, ಪತಿ–ಪತ್ನಿ ಹೀಗೆ ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಮದುವೆ ಆಗಿ ವರ್ಷದೊಳಗೇ ಗಂಡನನ್ನು ಕಳೆದುಕೊಂಡವರೂ ಇದ್ದಾರೆ. ಈ ಕಳೆದುಕೊಳ್ಳುವ ನೋವು ಹಾಗೂ ಆತಂಕ ಕೂಡ ಹೆಣ್ಣುಮಕ್ಕಳು ಮದುವೆ ಬೇಡ ಎನ್ನಲು ಪ್ರಮುಖ ಕಾರಣವಾಗಿದೆ. ಇಷ್ಟಪಟ್ಟವರನ್ನು ಕಳೆದುಕೊಂಡು ಒಂಟಿಯಾಗಿ ನೋವು ಅನುಭವಿಸುತ್ತಾ ಬದುಕುವುದಕ್ಕಿಂತ ಒಂಟಿಯಾಗಿಯೇ ಇರುವುದು ಉತ್ತಮ ಎನ್ನುವ ಮನೋಭಾವ ಹಲವರದ್ದು ಎನ್ನುತ್ತಾರೆ ಮನಶ್ಶಾಸ್ತ್ರಜ್ಞರು.

ಬದ್ಧತೆಗೆ ಒಲ್ಲೆ…

ಮದುವೆ ಎಂಬ ಸುಂದರ ಸಂಬಂಧದಲ್ಲಿ ಬದ್ಧತೆ ಬಹಳ ಮುಖ್ಯ. ಮದುವೆ ಎಂಬ ಮೂರಕ್ಷರದ ನಂಟು ನಿಂತಿರುವುದೇ ಬದ್ಧತೆಯ ಮೇಲೆ. ಆದರೆ ಇತ್ತೀಚಿನ ಹೆಣ್ಣುಮಕ್ಕಳು ಸಂಬಂಧದಲ್ಲಿ ಬದ್ಧತೆ ನಮ್ಮಿಂದ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಯಾವುದೇ ಸಂಬಂಧವಾಗಲಿ ಆ ಸಂಬಂಧಕ್ಕೆ ಬದ್ಧರಾಗಿದ್ದು ಸಾಮಾಜಿಕ ಬದ್ಧತೆಯನ್ನೂ ಪಾಲಿಸುವುದು ತಮ್ಮಿಂದ ಸಾಧ್ಯವಿಲ್ಲ ಎನ್ನುವ ಮನಸ್ಥಿತಿಯೂ ಮದುವೆಗೆ ಹಿಂದೇಟು ಹಾಕಲು ಕಾರಣ ಎನ್ನಬಹುದು.

ಲಿವಿಂಗ್‌ಗೆ ಸೈ

ಮದುವೆ ಎಂಬ ಬಂಧನದಲ್ಲಿ ಸಿಲುಕಿ ಮದುವೆ, ಮಕ್ಕಳು ಸಂಸಾರದ ಜಂಟಾಟ ಬೇಡ ಎನ್ನುವವರು ಸಹಜೀವನ ಅಥವಾ ಲಿವಿಂಗ್ ರಿಲೇಷನ್‌ಶಿಪ್‌ಗೆ ಸೈ ಎನ್ನುತ್ತಿದ್ದಾರೆ. ಲಿವಿಂಗ್‌ನಲ್ಲಿ ಇದ್ದರೆ ಯಾವುದೇ ರಗಳೆ ಇಲ್ಲ. ಇರುವಷ್ಟು ದಿನ ಇರಬಹುದು, ಬೇಡವೆಂದಾಗ ಬಿಟ್ಟು ಒಂಟಿ ಜೀವನ ನಡೆಸಬಹುದು ಎಂಬುದು ಇಂದಿನ ಮಿಲೇನಿಯಲ್ ಯುವತಿಯರ ಅಭಿಮತ.

ಮಾನಸಿಕ ವ್ಯಥೆ

ಪ್ರೀತಿ–ಪ್ರೇಮದ ವಿಚಾರದಲ್ಲಿ ಹೆಣ್ಣುಮಕ್ಕಳು ಬಹಳ ಭಾವನಾತ್ಮಕವಾಗಿ ವರ್ತಿಸುತ್ತಾರೆ. ತಾನು ಪ್ರೀತಿಸಿದ ವ್ಯಕ್ತಿ ತನಗೆ ಮಾತ್ರ ಸ್ವಂತ ಎಂದು ಭವಿಷ್ಯದ ಕನಸು ಕಟ್ಟಿಕೊಂಡು ಬದುಕುತ್ತಿರುತ್ತಾರೆ. ಆದರೆ ಪ್ರೇಮಿಸಿದ ಹುಡುಗನ ಮರಣ ಅಥವಾ ಆ ಹುಡುಗ ತನಗೆ ಮೋಸ ಮಾಡಿ ಬೇರೆಯವರೊಂದಿಗೆ ಮದುವೆಯಾಗುವುದು.. ಇದರಿಂದ ಕೂಡ ಹೆಣ್ಣುಮಕ್ಕಳು ಬೇರೆ ಗಂಡಿನೊಂದಿಗೆ ಮದುವೆಯಾಗಲು ಒಪ್ಪದೇ ಒಂಟಿಯಾಗಿ ಉಳಿದು ಬಿಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.