ADVERTISEMENT

ಬುಡಕಟ್ಟು ಸಮುದಾಯದ ಗಟ್ಟಿ ಧ್ವನಿ ದ್ರೌಪದಿ ಮುರ್ಮು

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 12:42 IST
Last Updated 21 ಜುಲೈ 2022, 12:42 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು    

ನವದೆಹಲಿ: ರಾಷ್ಟ್ರಪತಿ ಚುನಾವಣೆ ಯ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವದ್ರೌಪದಿ ಮುರ್ಮು (65) ಅವರುಹಲವು ಹುದ್ದೆಗಳನ್ನು ಅಲಂಕರಿಸಿದ ಬುಡಕಟ್ಟು ಸಮುದಾಯದ ಮೊದಲಿಗರಾಗಿದ್ದಾರೆ ಎಂಬುದು ವಿಶೇಷ.

ಅವರು ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಒಡಿಶಾದಿಂದ ರಾಜ್ಯಪಾಲ ರಾಗಿ ನೇಮಕಗೊಂಡ ಮೊದಲ ಮಹಿಳೆ ಮತ್ತು ಬುಡಕಟ್ಟು ಸಮುದಾಯದವರು ಇವರು. ಜಾರ್ಖಂಡ್‌ನ ರಾಜ್ಯಪಾಲ ರಾಗಿ ಪೂರ್ಣಾ ಅವಧಿ ಸೇವೆ ಸಲ್ಲಿಸಿದ ಮೊದಲಿಗರು ಇವರಾಗಿದ್ದಾರೆ.

‘ದ್ರೌಪದಿ ಮುರ್ಮು ಅವರ ಜೀವನದಿಂದ ಲಕ್ಷಾಂತರ ಜನರು, ವಿಶೇಷವಾಗಿ ಬಡತನ ಮತ್ತು ಕಷ್ಟಗಳನ್ನು ಎದುರಿಸಿದವರು ಹೆಚ್ಚಿನ ಶಕ್ತಿ ಪಡೆಯುತ್ತಾರೆ. ಮುರ್ಮು ಅವರು ಸಮಾಜ ಸೇವೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಬಡವರು, ದೀನದಲಿತರನ್ನು ಸಬಲೀಕರಿಸಲು ದುಡಿದಿದ್ದಾರೆ. ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ಅವರಿಗೆ ಆಡಳಿತದ ಅನುಭವವೂ ಇದೆ’ ಎಂದು ಪ್ರಧಾನಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

2017ರ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿಯೂ ಮುರ್ಮು ಅವರ ಹೆಸರು ಕೇಳಿಬಂದಿತ್ತು. ಒಡಿಶಾದ ಮಯೂರ್ಭಂಜ್‌ ಜಿಲ್ಲೆಯವರಾದ ಅವರು ಬಿ.ಎ ಪದವೀಧರೆ. ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದವರು.ಒಡಿಶಾದ ರಾಯರಂಗ್‌ಪುರ ಜಿಲ್ಲೆಯಲ್ಲಿ 1997ರಲ್ಲಿ ಕೌನ್ಸಿಲರ್‌ ಆಗಿ ಆಯ್ಕೆಯಾಗುವಮೂಲಕ ಅವರು ರಾಜಕೀಯ ಪಯಣ ಆರಂಭವಾಯಿತು.

ಅವರು 2000ರಲ್ಲಿ ರಾಯರಂಗ್‌ಪುರದಲ್ಲಿ ಬಿಜೆಪಿ ಶಾಸಕಿಯಾಗಿ ಆಯ್ಕೆಯಾದರು. ಬಳಿಕ 2009ರಲ್ಲಿ ಮತ್ತೊಮ್ಮೆ ಚುನಾಯಿತರಾದರು. 2000ರಿಂದ 2002ರ ಅವಧಿಯಲ್ಲಿ ಬಿಜೆಪಿ ಮತ್ತು ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ ವಾಣಿಜ್ಯ ಮತ್ತು ಸಾರಿಗೆ ಸಚಿವರಾಗಿ, 2002ರಿಂದ 2004 ಅವಧಿಯಲ್ಲಿ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಒಡಿಶಾ ಬಿಜೆಪಿಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷೆಯಾಗಿದ್ದ ಅವರು, ಹಲವು ಬಾರಿ ಮಯೂರ್ಭಂಜ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಮುರ್ಮು ಅವರ ಪತಿ ಮತ್ತು ಪುತ್ರರು ನಿಧನರಾಗಿದ್ದಾರೆ.ಅವರಿಗೆ ಒಬ್ಬ ಮಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.