ADVERTISEMENT

PV Web Exclusive: ಗುಡ್‌ನ್ಯೂಸ್‌ ಇದೆಯಾ ಎಂಬ ಬ್ಯಾಡ್‌ ಪ್ರಶ್ನೆ!

ಎಸ್.ರಶ್ಮಿ
Published 18 ಮಾರ್ಚ್ 2021, 12:55 IST
Last Updated 18 ಮಾರ್ಚ್ 2021, 12:55 IST
ನಮ್ಮ ಮಗು, ನಮ್ಮ ಜೀವನ, ನಮ್ಮ ಯೋಜನೆ...
ನಮ್ಮ ಮಗು, ನಮ್ಮ ಜೀವನ, ನಮ್ಮ ಯೋಜನೆ...   

ಏನವಾ.. ವರ್ಷಾಯ್ತಲ್ಲ.. ಯಾವಾಗ ಹೊಸ ಸುದ್ದಿ? (ವರ್ಷದೊಳಗೇ ಕೊಡಬೇಕು ಅಂತೇನರೆ ಖಾತ್ರಿ ಬರದು ಕೊಟ್ಟಿದ್ವಿ?)

ಏನರೆ ಗುಡ್‌ ನ್ಯೂಸ್‌ ಐತೇನು? ಮಾರಿ ಹೊಳಿಯಾಕ್ಹತ್ತದ (ಈಗಷ್ಟೆ ಪಾರ್ಲರ್‌ಗೆ ಹೋಗಿ ಬಂದೇನಿ ಅಂದ್ರ ಅತ್ತಿ ನಗಿ ಮಾಯ ಆಗ್ತದ)

ಅಲ್ಲ, ನಿಮ್ಮತ್ತಿ ತನ್ಮಗನಿಗೆ ನಿಂಗ ಕೊಟ್ಲು. ನೀನು ನಿಮ್ಮತ್ತಿಗೆ ಒಂದು ಮಗ ಕೊಟ್ಬಿಡು. ಆಡ್ಕೊಂತ, ಹಾಡ್ಕೊಂತ ಇರ್ತಾರ...

ADVERTISEMENT

ಎರಡು ವರ್ಷ ಆದ್ವು.. ಅದ್ಯಾಕೋ ದೇವರು ಕಣ್ಣ ಬಿಡವಲ್ಲ (ಇವರಿಗೆ ಗೊತ್ತಿಲ್ಲ.. ಮಕ್ಕಳಾಗಾಕ ದೇವರು ಯಾಕ ಕಣ್ಬಿಡಬೇಕು..)

ಒಮ್ಮೆ ಆ ಗುಡಿಗೆ ಹೋಗಿ ಬರೂನು? ಈ ಡಾಕ್ಟರ್‌ ಕೈಗುಣ ಭಾಳ ಚೊಲೊ ಅದ.. ನಾವೆಲ್ಲ ವರ್ಷ ತುಂಬೂದ್ರೊಳಗ ತೊಟ್ಟಿಲು ಕಟ್ಟಿದ್ವಿ. ಮಂಚ ಬಿಟ್ಟು ಹೊರಸಿಗೆ ಬಂದಿದ್ವಿ...

ಏನು ಹುಡುಗಿಯಾರೋ ಏನೋ...

ಈ ಕೊನೆಯ ವಾಕ್ಯ, ಇನ್ನೊಮ್ಮೆ ಓದಿಬಿಡಿ. ಮತ್ತೊಮ್ಮೆ ಓದಿ ಬಿಡಿ. ಮಗುವಾಗಲು ಹೆಣ್ಮಗಳೊಬ್ಬಳೇ ಕಾರಣವಾಗ್ತಾಳಾ? ಮಗುವಿನ ಬಗ್ಗೆ ನಿರ್ಧಾರ ಹೆಂಡ್ತಿಯದು ಮಾತ್ರ ಆಗಿರುತ್ತದಾ?

ಇಲ್ಲ ಎಂಬುದು ಎಲ್ಲರ ಸ್ಪಷ್ಟ ಉತ್ತರ. ಆದರೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಒತ್ತಡ ಮಾತ್ರ ಹೆಣ್ಣುಮಕ್ಕಳ ಮೇಲೆಯೇ ಯಾಕಿರುತ್ತದೆ?

ಯಾರಾದರೂ ಯಾವತ್ತಾದರೂ ಏನಪ್ಪ.. ಭಾಳ ಗಂಭೀರ ಕಾಣ್ತಿ, ಏನು ವಿಶೇಷ ಅಂತ ಎಂದರೆ ಕೇಳ್ತಾರ?

ಇಲ್ಲ, ಯಾಕೋ ಮಕ್ಕಳಾಗವಲ್ವು.. ಆ ಡಾಕ್ಟರ್‌ ಹತ್ರ ಹೋಗೂನೇನು ಅಂತ ಕೇಳ್ತಾರ?

ಇಲ್ಲ ತರತಮ ನೀತಿ, ಇಲ್ಲಿಂದಲೇ ಆರಂಭವಾಗ್ತದ.

ನಿಮಗೊಂದು ವಿಷಯ ಗೊತ್ತಿರಲಿ, ಈ ಪ್ರಶ್ನೆಗಳು ಮಕ್ಕಳಾಗುವ ಸಾಧ್ಯತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇಂಥ ಪ್ರಶ್ನೆಗಳಿಂದ ಯಾರಿಗೂ ಉತ್ಸಾಹ ಹೆಚ್ಚಾಗಿ, ಹುಮ್ಮಸ್ಸಿನಿಂದ ಮಿಲನ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಿಲ್ಲ. ಅದರ ಬದಲಿಗೆ ಪ್ರತಿ ಸಲವೂ ತಮ್ಮ ಫಲವಂತಿಕೆಯ ಬಗ್ಗೆ ಚಿಂತಿಸುತ್ತ, ಆನಂದಿಸುವುದನ್ನೇ ಮರೆಯತೊಡಗುತ್ತಾರೆ.

ಪ್ರತಿ ಪ್ರಶ್ನೆಯೂ ಹೆಣ್ಣುಮಕ್ಕಳಿಗೆ ಒಂದು ಬಗೆಯ ಒತ್ತಡ ಸೃಷ್ಟಿಸುತ್ತದೆ. ಆ ಒತ್ತಡ ಮೈಮರೆತು ಸಂಗಾತಿಯೊಡನೆ ಬೆರೆಯಲು ಬಿಡುವುದೇ ಇಲ್ಲ.

ಇಷ್ಟಕ್ಕೂ ತಾಯ್ತನ ಮುಂದೂಡಲು ಹಲವು ಕಾರಣಗಳಿರುತ್ತವೆ. ಒಂದು ಜೈವಿಕ ಕಾರಣ. ಫಲವಂತಿಕೆಯ ದಿನಗಳಲ್ಲಿ ಉದ್ಯೋಗದಿಂದಾಗಿ ಅಥವಾ ಇನ್ನಾವುದೇ ಕಾರಣಗಳಿಂದಾಗಿ ಒಟ್ಟಿಗಿರಲು ಸಾಧ್ಯವಾಗಿರಲಿಕ್ಕಿಲ್ಲ.

ಗಂಡ ಹೆಂಡ್ತಿ ಇಬ್ಬರೂ ಜೊತೆಗೂಡಿಯೇ ಒಂದಷ್ಟು ಸಮಯದ ಗಡುವನ್ನು ನಿರ್ಧರಿಸಿರಬಹುದು. ಬಡ್ತಿಯಾಗಲಿ, ಮನೆ ಕೊಳ್ಳುವುದು, ವರ್ಗಾವಣೆ ಇಂಥವನ್ನೆಲ್ಲ ಯೋಚಿಸಿಯೇ ನಿರ್ಧಾರಕ್ಕೆ ಬಂದಿರ್ತಾರೆ. ಇಬ್ಬರ ನಿರ್ಧಾರವನ್ನು ಗೌರವಿಸಬೇಕು. ಇಷ್ಟಕ್ಕೂ ಕಾಳಜಿ ಇದ್ದಲ್ಲಿ ಚುಚ್ಚುಮಾತುಗಳ ಬದಲಿಗೆ, ಇಬ್ಬರನ್ನೂ ಕೂರಿಸಿ, ಕೌಟುಂಬಿಕವಾಗಿಯೇ ಚರ್ಚಿಸಬಹುದು.

ಪದೇಪದೇ ಮಗಳಿಗೆ, ಸೊಸೆಗೆ ಒಟ್ನಲ್ಲಿ ಮದುವೆಯಾಗಿರುವುದೇ ಮಕ್ಕಳನ್ನು ಮಾಡಲು ಎಂಬಂತೆ ಒತ್ತಡ ಹೇರುವವರು ಒಮ್ಮೆ ಈ ಬಗ್ಗೆಯೂ ಯೋಚಿಸಬೇಕು. ಪ್ರತಿಸಲ ತಿಂಗಳ ನೋವಿನೊಂದಿಗೆ ಹಲವು ಕತೆಗಳನ್ನು ಕೇಳಬೇಕಾಗುತ್ತದೆ. ನಿನ್ನ ಜೊತೆಗೆ ಮದುವೆಯಾದವರಲ್ಲಿ.. ಯಾರಿಗೆ ಎಷ್ಟು ಮಕ್ಕಳಾದವು.. ತಾವು ಎಷ್ಟನೆ ವಯಸ್ಸಿಗೆ ತಾಯಿ ಆದರು? ತಾಯ್ತನ ವಿಳಂಬವಾದರೆ, ತಡೆದರೆ, ಆಗುವ ಅನಾಹುತಗಳು, ಮುಂದೂಡುತ್ತಿದ್ದರೆ ಬಂಜೆತನ ಅನುಭವಿಸುವ ಆತಂಕ ಹೀಗೆ ಹಲವು ಮಾತುಗಳು ಕೂರಂಬುವಿನಂತೆ ಇರಿಯುತ್ತಲೇ ಇರುತ್ತವೆ.

ಉದ್ಯೋಗಸ್ಥ ಮಹಿಳೆಯರ ಆದ್ಯತೆ ಹಾಗೂ ಆಯ್ಕೆಗಳು ಬದಲಾಗಿವೆ. ದಿನಗಳೆದಂತೆ ಅಂಡಾಣುವಿನ ಆಯಸ್ಸು ಹಾಗೂ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದೇ ಅಂಡಾಣುಗಳ ಬ್ಯಾಂಕು ಆರಂಭಿಸಲಾಗಿದೆ. ಕೆಲವೊಮ್ಮೆ ಕೆಲಸದ ಒತ್ತಡ, ರಾತ್ರಿಪಾಳಿಗಳು ಮಹಿಳೆಯರ ಜೈವಿಕ ಗಡಿಯಾರದ ಮೇಲೆ ಹಾಗೂ ಜೈವಿಕ ಕ್ರಿಯೆಗಳ ಮೇಲೆಯೂ ಪರಿಣಾಮ ಬೀರುತ್ತವೆ. ಇವನ್ನೆಲ್ಲ ಗಮನದಲ್ಲಿರಿಸಿಕೊಂಡರೆ ಸುರಕ್ಷಿತ ತಾಯ್ತನ ಅಥವಾ ಸುಭದ್ರ ಭವಿಷ್ಯ ಎಂಬ ತಂತಿ ಮೇಲಿನ ನಡಿಗೆಯನ್ನೂ ಹೆಣ್ಣುಮಗಳೇ ನಿಭಾಯಿಸಬೇಕಾಗುತ್ತದೆ.

ಇಂಥ ಸಾಮಾಜಿಕ, ಕೌಟುಂಬಿಕ ಹಾಗೂ ವೈದ್ಯಕೀಯ ಒತ್ತಡಗಳಿಗೆ ಹೆಚ್ಚಾಗಿ ಗುರಿಯಾಗುವುದು ಮಹಿಳೆಯೇ. ಇತ್ತೀಚಿನ ದಿನಗಳಲ್ಲಿ ಮದುವೆಯೇ ತಡವಾಗುತ್ತದೆ. ಮೂವತ್ತರ ನಂತರ ತಾಯ್ತನ ಸಹಜವಾಗಿದೆ. ಮಗು ಬೇಕು ಎಂದು ನಿರ್ಧರಿಸಿದ ತಕ್ಷಣವೇ ದಂಪತಿ ವೈದ್ಯರೊಂದಿಗೆ ಸಮಾಲೋಚಿಸಬೇಕು. ಈ ನಿಟ್ಟಿನಲ್ಲಿ ಮಹಾನಗರದ ಆಸ್ಪತ್ರೆಗಳು ಜಾಗೃತಿ ಮೂಡಿಸುತ್ತಿವೆ. ಹಾಗೆ ನಿರ್ಧರಿಸಿದ ನಂತರ ಒಂದು ವರ್ಷದವರೆಗೂ ಭ್ರೂಣ ಕಟ್ಟದಿದ್ದಲ್ಲಿ ಫಲವಂತಿಕೆಯ ತಜ್ಞರನ್ನು ಕಾಣಬಹುದಾಗಿದೆ.

ಅದಕ್ಕೂ ಮೊದಲೇ ಮಗುವಿಗಾಗಿ ಹಂಬಲಿಸುವ, ತಹತಹಿಸುವವರೆಲ್ಲ ಈ ಪ್ರಶ್ನೆಗಳನ್ನು ಹೆಣ್ಣುಮಗಳಿಗೆ ಮಾತ್ರ ಕೇಳಿ, ಒತ್ತಡ ಸೃಷ್ಟಿಸುವ ಬದಲು, ಅವರ ಆಯ್ಕೆ, ಆದ್ಯತೆಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡರೆ ದೈಹಿಕವಾಗಿಯೂ ಮಾನಸಿಕವಾಗಿಯೂ ತಾಯ್ತನವೆಂಬುದು ಸಂತಸ ನೀಡುವ ಸಮಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.