ADVERTISEMENT

‘ಆ ದಿನ’ಗಳಿಗೆ ಮನೆಯಲ್ಲೂ ತಯಾರಿಸಬಹುದು ಪ್ಯಾಡ್‌

ಉಷಾ ದಿವಾಕರ ಹಲಗೇರಿ
Published 22 ಜನವರಿ 2021, 19:30 IST
Last Updated 22 ಜನವರಿ 2021, 19:30 IST
ಸ್ಯಾನಿಟರಿ ಪ್ಯಾಡ್ (ಸಾಂದರ್ಭಿಕ ಚಿತ್ರ)
ಸ್ಯಾನಿಟರಿ ಪ್ಯಾಡ್ (ಸಾಂದರ್ಭಿಕ ಚಿತ್ರ)   

ಕೋವಿಡ್‌ ಸಂದರ್ಭದಲ್ಲಿ ಉಂಟಾಗಿರುವ ಆರ್ಥಿಕ ಸಮಸ್ಯೆಗಳಿಂದಾಗಿ ಎಷ್ಟೋ ಮಂದಿ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ ಖರೀದಿಸಲೂ ಸಾಧ್ಯವಾಗುತ್ತಿಲ್ಲ. ಆದರೆ ಇದರಿಂದ ಹಿಂಜರಿಯದೇ ಮನೆಯಲ್ಲೇ ಪ್ಯಾಡ್‌ ತಯಾರಿಸಿಕೊಂಡು ಬೇರೆಯವರಿಗೂ ಮಾದರಿಯಾಗಬಹುದು.

ಕೋವಿಡ್‌ ಶುರುವಾಗುವುದಕ್ಕಿಂತ ಮುನ್ನ ಹುಬ್ಬಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶೀಲಾ ವೆರ್ಣೇಕರ್‌ಗೆ ತಿಂಗಳಿಗೆ 9 ಸಾವಿರ ರೂಪಾಯಿ ವೇತನವಿತ್ತು. ಗಂಡನ ಆದಾಯವೂ ಸೇರಿ ನೆಮ್ಮದಿಯಿಂದ ಸಂಸಾರ ನಡೆಯುತ್ತಿತ್ತು. ಆದರೆ ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡ ಶೀಲಾಗೆ ಸದ್ಯ ನಿಗದಿತ ಆದಾಯ ಬರುವ ಕೆಲಸವಿಲ್ಲ. ಎಷ್ಟೇ ಅಚ್ಚುಕಟ್ಟಾಗಿ ಮನೆ ಖರ್ಚು ತೂಗಿಸಿದರೂ ತಿಂಗಳ ಕೊನೆಗೆ ಬಿಡಿಗಾಸನ್ನೂ ಉಳಿಸಲಾರದ ಪರಿಸ್ಥಿತಿ. ಸ್ವಂತಕ್ಕೆಂದು ಯಾವುದೇ ಖರ್ಚು ಇಲ್ಲದಿದ್ದರೂ ಋತುಸ್ರಾವದ ಸಂದರ್ಭದಲ್ಲಿ 150– 200 ರೂಪಾಯಿಯ ಸ್ಯಾನಿಟರಿ ಪ್ಯಾಡ್‌ ಖರೀದಿಸಲು ಹಿಂದೆಮುಂದೆ ನೋಡಬೇಕಾಗಿದೆ. ಹಳೆಯ ಬಟ್ಟೆ ಬಳಸಿದ್ದರಿಂದ ಸೋಂಕಾಗಿ ಅದಕ್ಕೆ ಬೇರೆ ಔಷಧಿಯ ಖರ್ಚು.

‘ನಿಗದಿತ ಆದಾಯವಿದ್ದರೆ ಪ್ಯಾಡ್‌ ಅಥವಾ ಟ್ಯಾಂಪನ್‌ಗಾಗಿ ತಿಂಗಳಿಗೆ 200– 300 ರೂಪಾಯಿ ವೆಚ್ಚ ಮಾಡುವುದು ದೊಡ್ಡದೇನಲ್ಲ. ಆದರೆ ಈಗಿನ ಸಂದರ್ಭದಲ್ಲಿ ಇದು ಕೂಡ ದೊಡ್ಡ ಮೊತ್ತವೇ’ ಎಂದು ಶೀಲಾ ಅಳಲು ತೋಡಿಕೊಳ್ಳುತ್ತಾಳೆ.

ADVERTISEMENT

ಇದು ಶೀಲಾಳ ಸಮಸ್ಯೆ ಮಾತ್ರವಲ್ಲ, ಹಾಗೆಯೇ ಕೇವಲ ಅಭಿವೃದ್ಧಿಶೀಲ ರಾಷ್ಟ್ರಗಳ ಸಮಸ್ಯೆಯೂ ಅಲ್ಲ, ಯುರೋಪ್‌, ಅಮೆರಿಕದಂತಹ ದೇಶಗಳಲ್ಲೂ ಲಕ್ಷಾಂತರ ಹೆಣ್ಣುಮಕ್ಕಳು ಮುಟ್ಟಿನ ಸಂದರ್ಭ ಬಳಸುವ ಉತ್ಪನ್ನಗಳಿಂದ ವಂಚಿತರಾಗುತ್ತಿದ್ದಾರೆ. ಕೋವಿಡ್‌ ತಂದ ಆರ್ಥಿಕ ಸಂಕಷ್ಟಕ್ಕಿಂತ ಮುನ್ನವೇ ಎಷ್ಟೋ ಮಂದಿ ಮಹಿಳೆಯರು ಸ್ಯಾನಿಟರಿ ಪ್ಯಾಡ್‌, ಟ್ಯಾಂಪನ್‌ಗಾಗಿ ಹಣ ಹೊಂದಿಸಲು ಕಷ್ಟಪಡುತ್ತಿದ್ದರು. 2019ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಜಗತ್ತಿನ ಮೂರನೇ ಎರಡರಷ್ಟು ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಬಳಸುವ ಉತ್ಪನ್ನಗಳನ್ನು ಖರೀದಿಸಲು ಕಷ್ಟಪಡುತ್ತಾರಂತೆ. ಹಳೆಯ ಬಟ್ಟೆ, ಇನ್ನು ಕೆಲವು ಕಡೆ ಟಿಶ್ಯೂ ಪೇಪರ್‌ ಬಳಸುತ್ತಾರಂತೆ. ಹೆಣ್ಣುಮಕ್ಕಳು ಋತುಸ್ರಾವವಾದಾಗ ಶಾಲೆಗೆ ಗೈರು ಹಾಜರಾಗುವುದಂತೂ ಸಾಮಾನ್ಯ ವಿಷಯ ಎಂಬಂತಾಗಿದೆ.

ಕೋವಿಡ್‌ ಎಂಬುದು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲ ಮಾಡಿದೆ. ನಮ್ಮ ದೇಶವನ್ನೇ ತೆಗೆದುಕೊಂಡರೆ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಪ್ಯಾಡ್‌ಗಳನ್ನು ಉಚಿತವಾಗಿ ವಿತರಿಸುತ್ತಿದ್ದವು. ಈಗ ಅವುಗಳ ಕೈ ಕೂಡ ಕಟ್ಟಿ ಹಾಕಿದಂತಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಂತೂ ಪ್ಯಾಡ್‌ ಪೂರೈಕೆಯಲ್ಲೂ ಕೊರತೆ ತಲೆದೋರಿತ್ತು.

‘ಇನ್ನೊಂದು ಸಮಸ್ಯೆ ಎಂದರೆ ಕೋವಿಡ್‌ನಿಂದಾಗಿ ಕೆಲಸ ಕಳೆದುಕೊಂಡ ಹೆಣ್ಣುಮಕ್ಕಳ ಸಂಖ್ಯೆ ಜಾಸ್ತಿಯಿದೆ. ಹೀಗಾಗಿ ಆದಾಯವಿಲ್ಲದೇ ಇಂತಹ ಸಣ್ಣಪುಟ್ಟ ಖರ್ಚು ನಿಭಾಯಿಸಲು ಕೂಡ ಅವರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಬೆಂಗಳೂರಿನಲ್ಲಿ ವನಿತಾ ಸಮಾಜ ಸೇವಾ ಸಂಸ್ಥೆ ನಡೆಸುತ್ತಿದ್ದ ವೀಣಾ ಭಟ್‌ ಹೇಳುತ್ತಾರೆ.

ಮನೆಯಲ್ಲೇ ಪ್ಯಾಡ್‌ ತಯಾರಿಕೆ
ಹಾಗಾದರೆ ಇಂತಹ ಮಹಿಳೆಯರು ಏನು ಮಾಡಬೇಕು? ‘ಮನೆಯಲ್ಲೇ ಸುಲಭವಾಗಿ ಪ್ಯಾಡ್‌ ತಯಾರಿಸಿಕೊಳ್ಳಬಹುದು. ಸ್ವಚ್ಛವಾದ ಬಟ್ಟೆ, ಹತ್ತಿಯನ್ನು ಖರೀದಿಸಿ, ಹೆಣ್ಣುಮಕ್ಕಳು ತಮಗೆ ಬೇಕಾದಷ್ಟು ಪ್ಯಾಡ್‌ ತಯಾರಿಸಿಕೊಳ್ಳುವುದು ಮಾತ್ರವಲ್ಲ, ಇದರ ಮಾರಾಟವನ್ನೂ ಮಾಡಬಹುದು’ ಎಂದು ಶಿರಸಿಯಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿರುವ ಲಕ್ಷ್ಮಿ ನಾಯ್ಕ್‌ ಸಲಹೆ ಕೊಡುತ್ತಾರೆ.

‘ಬಟ್ಟೆಯನ್ನು ಬಳಸಿದರೂ ತೊಂದರೆಯಿಲ್ಲ. ಆದರೆ ಕೆಲವೊಂದು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಬಟ್ಟೆಯನ್ನು ಬಳಸುವ ಮುನ್ನ ಅದನ್ನು ಸ್ವಚ್ಛವಾಗಿ ತೊಳೆದು ಬಿಸಿಲಿನಲ್ಲಿ ಒಣ ಹಾಕಬೇಕು. ಹತ್ತಿಯ, ಮೆತ್ತನೆಯ ಬಟ್ಟೆಯಾದರೆ ಸೂಕ್ತ. ಬಳಸಿದ ನಂತರ ಅದನ್ನು ಸೋಪ್‌ನಿಂದ ಶುಚಿಯಾಗಿ ತೊಳೆದು ಡೆಟಾಲ್‌ನಲ್ಲಿ ಅದ್ದಿ ಹಿಂಡಬೇಕು. ಬಿಸಿ ನೀರಿನಲ್ಲೇ ತೊಳೆದರೆ ಉತ್ತಮ’ ಎನ್ನುವ ವೈದ್ಯೆ ಡಾ. ವೈಶಾಲಿ ಎಂ., ‘ಬಟ್ಟೆ ಪ್ಯಾಂಟಿಯಿಂದ ಈಚೆ ಬರದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ತ್ವಚೆಗೆ ಗಾಯವಾಗಿ ಸೋಂಕಾಗಬಹುದು’ ಎಂದು ಎಚ್ಚರಿಸುತ್ತಾರೆ. ಇದಕ್ಕಿಂತ ಹತ್ತಿಯ ಬಟ್ಟೆ ಹಾಗೂ ಹತ್ತಿಯನ್ನು ಬಳಸಿ ಸ್ವತಃ ಪ್ಯಾಡ್‌ ತಯಾರಿಸಿಕೊಳ್ಳುವುದು ಒಳ್ಳೆಯದು ಎಂದು ಅವರು ಸಲಹೆ ನೀಡುತ್ತಾರೆ.

ತರಬೇತಿ
ಇಂತಹ ಪ್ಯಾಡ್‌ ತಯಾರಿಕೆಗೆ ಬಹುತೇಕ ಅಂಗನವಾಡಿ ಸಂಸ್ಥೆಗಳು ತರಬೇತಿ ನೀಡುತ್ತವೆ. ಸ್ವಯಂ ಸೇವಾ ಸಂಸ್ಥೆಗಳೂ ಕೈಜೋಡಿಸಿವೆ. ‘ಹೀಗಾಗಿ ಹೆಣ್ಣುಮಕ್ಕಳು ಧೃತಿಗೆಡದೆ ಕಡಿಮೆ ಖರ್ಚಿನಲ್ಲಿ ಪ್ಯಾಡ್‌ ತಯಾರಿಸಿಕೊಂಡು ಬಳಸಬಹುದು. ಇತರರಿಗೂ ಈ ಬಗ್ಗೆ ಅರಿವು ಮೂಡಿಸಬಹುದು’ ಎನ್ನುತ್ತಾರೆ ಲಕ್ಷ್ಮಿ ನಾಯ್ಕ್‌.

ಕೋವಿಡ್‌ ಶುರುವಾಗುವುದಕ್ಕಿಂತ ಮೊದಲೇ ಅಮೆರಿಕದಲ್ಲಿ ‘ಋತುಸ್ರಾವ ಸಮಾನತೆ’ ಎಂಬ ಆಂದೋಲನ ಶುರುವಾಗಿತ್ತು. ಅಂದರೆ ಹೆಣ್ಣುಮಕ್ಕಳ ಇಂತಹ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸುವುದು, ಈ ಕುರಿತು ತಿಳಿವಳಿಕೆ ಮೂಡಿಸುವುದು ಇದರ ಹಿಂದಿನ ಉದ್ದೇಶ. ಈ ಕೋವಿಡ್‌ ಸಂದರ್ಭದಲ್ಲಿ ಇಂತಹ ಜಾಗೃತಿ ನಮ್ಮಲ್ಲೂ ಚುರುಕು ಪಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.