ADVERTISEMENT

ಅವನಿಲ್ಲದಿದ್ದರೂ ಅವಳಿಗೊಂದು ಬದುಕಿದೆ...

ಪವಿತ್ರಾ ರಾಘವೇಂದ್ರ ಶೆಟ್ಟಿ
Published 28 ಮೇ 2021, 19:30 IST
Last Updated 28 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಕೆ 28ರ ಯುವತಿ. ಮೂರು ತಿಂಗಳ ಗರ್ಭಿಣಿ. ಕೋವಿಡ್‌ನಿಂದ ಪತಿ ಸಾವನ್ನಪ್ಪಿದಾಗ ದುಃಖ ಸಹಿಸಲಾರದೇ ಆತ್ಯಹತ್ಯೆಗೆ ಶರಣಾದರು. ಪತಿಯ ಸಾವಿನಿಂದ ಮಾನಸಿಕವಾಗಿ ನೊಂದಿದ್ದ ಆಕೆ ದಿಢೀರ್‌ ಆಗಿ ಕೈಗೊಂಡ ಈ ನಿರ್ಧಾರ ಕುಟುಂಬದ ಇತರರನ್ನು ನೋವಿನ ಕಡಲಲ್ಲಿ ಮುಳುಗಿಸಿದೆ.

***

ಇನ್ನೊಬ್ಬಾಕೆ ಎರಡು ವರ್ಷಗಳ ಹಿಂದೆ ತಾನು ಮೆಚ್ಚಿದವನನ್ನು ಮದುವೆಯಾಗಿದ್ದರು. ಪತಿ ಕೊರೊನಾ ಸೋಂಕಿನಿಂದ ಮರಣ ಹೊಂದಿದರು. ಪತಿಯ ಅಂತ್ಯ ಸಂಸ್ಕಾರದ ಬಳಿಕ ಮನೆಗೆ ಮರಳಿದ ಆಕೆ ದುಃಖ ತಡೆಯಲಾರದೆ ಶರಣಾಗಿದ್ದು ನೇಣಿಗೆ.

ADVERTISEMENT

– ಕೋವಿಡ್‌ನ ಈ ಎರಡನೆಯ ಅಲೆಯ ಸಂದರ್ಭದಲ್ಲಿ ಇಂತಹ ನಾಲ್ಕೈದು ಪ್ರಕರಣಗಳು ವರದಿಯಾಗಿವೆ. ಕೆಲವೊಂದಿಷ್ಟು ಸುದ್ದಿಯಾಗದೇ ಇರಲೂಬಹುದು. ಮಗನನ್ನೋ, ಅಳಿಯನನ್ನೋ ಕಳೆದುಕೊಂಡ ಮನೆಯವರ ದುಃಖದ ಕಣ್ಣೀರಿನ ಪಸೆ ಇನ್ನು ಹಸಿಯಾಗಿರುವಾಗಲೇ ಮಗಳೋ, ಸೊಸೆಯೋ ಸಾವಿನ ಮನೆಯತ್ತ ಹೆಜ್ಜೆ ಹಾಕಿದರೆ ಆ ಮನೆಯವರ ಪರಿಸ್ಥಿತಿ ಹೇಗಿರಬಹುದು?

ಮದುವೆಯಾಗಿ ಒಂದೋ, ಎರಡೋ ವರ್ಷಗಳಾಗಿರಬಹುದು. ಜೀವನದಲ್ಲಿ ನೋವು, ನಲಿವಿಗೆ ಜೊತೆಯಾಗಿ ನಿಲ್ಲುವ ಸಂಗಾತಿ ತೀರಿಕೊಂಡಾಗ ಆಘಾತವಾಗುವುದು ಸಹಜವೆ. ಆದರೆ ಇನ್ನೂ ಬಾಳಿ ಬದುಕಿ, ಜೀವನವನ್ನು ಅನುಭವಿಸಬೇಕಿದ್ದವರು ಸಂಗಾತಿ ಇಲ್ಲದ ಬದುಕು ಬೇಡವೆಂದೋ ಅಥವಾ ಭವಿಷ್ಯವನ್ನು ಎದುರಿಸುವುದು ಹೇಗೆ ಎಂಬ ಅಳುಕಿನಿಂದಲೋ ಆತ್ಮಹತ್ಯೆ ಎಂಬ ದುಡುಕಿನ ನಿರ್ಧಾರ ತೆಗೆದುಕೊಂಡು, ಮೊದಲೇ ನೊಂದ ಕುಟುಂಬದ ಇತರ ಸದಸ್ಯರಿಗೆ ಇನ್ನಷ್ಟು ನೋವು ಕೊಡುವುದು ಸಣ್ಣ ಅಘಾತವೇನೂ ಅಲ್ಲ! ಒಂದು ಕ್ಷಣದ ನಿರ್ಧಾರದಿಂದ ಕಂಡ ಕನಸುಗಳು, ಒಂದಷ್ಟು ಜವಾಬ್ದಾರಿಗಳನ್ನು ಮುಗಿಸದೇ ಬದುಕಿಗೆ ಬೆನ್ನು ತಿರುಗಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಏಳುವುದು ಸಹಜವೇ.

ಬದುಕು ಎದುರಿಸುವ ಛಾತಿ ಇರಲಿ..

ಗಂಡ ಸತ್ತ ಮೇಲೆ ಇನ್ನೆಲ್ಲಿಯ ಬದುಕು... ಎಂದು ಹೆಂಡತಿ ಸಾವಿನ ಮೊರೆ ಹೋಗುತ್ತಿರುವುದು ಇಂದು ನಿನ್ನೆಯ ಕತೆಯಲ್ಲ! ಇತಿಹಾಸದ ಪುಟಗಳನ್ನು ತಿರುಗಿಸಿದರೆ, ಯುದ್ಧದ ಸಂದರ್ಭದ ಘಟನೆಗಳನ್ನು ಅವಲೋಕಿಸಿದರೆ ಹೆಣ್ಣು ಇಂತಹುದೇ ಸಂದಿಗ್ಧಗಳನ್ನು ಎದುರಿಸಿಕೊಂಡೇ ಬಂದಿದ್ದಾಳೆ. ಯುದ್ಧದಲ್ಲಿ ಪತಿ ಮರಣ ಹೊಂದಿದ ಎಂದು ತಿಳಿಯುತ್ತಲೇ ಇಲ್ಲಿ ಹೆಣ್ಣು ತನ್ನ ಬದುಕಿಗೆ ಅಂತಿಮ ವಿದಾಯ ಹೇಳಿದಂತಹ ಹಲವು ಘಟನೆಗಳು ದಾಖಲಾಗಿವೆ. ಗಂಡನಿಲ್ಲದೇ ಹೆಂಡತಿ ಬದುಕುವುದು ದುರ್ಭರ ಎಂಬಂತಹ ಪರಿಸ್ಥಿತಿ ಆ ಕಾಲದಲ್ಲಿ ಇತ್ತೇನೋ ಅಂದುಕೊಂಡರೂ ಕೂಡ ಎಲ್ಲರೂ ಅಂತಹ ಕಠಿಣ ನಿರ್ಧಾರ ಕೈಗೊಂಡಿರಲಿಲ್ಲವಲ್ಲ. ಬದುಕನ್ನು ಒಂಟಿಯಾಗಿಯೋ, ಕುಟುಂಬದ ಇತರರ ನೆರವಿನಿಂದಲೋ ಎದುರಿಸುವ ಛಾತಿಯೂ ಹಲವರಲ್ಲಿತ್ತು.

ಆ ಕ್ಷಣಕ್ಕೆ ಅವರ ಮಾನಸಿಕ ಸ್ಥಿತಿ ಹಾಗಿರುತ್ತದೆ. ಇನ್ನು ಅವರ ಆರ್ಥಿಕ ಸ್ಥಿತಿ ಕೂಡ ಈ ದುಡುಕಿನ ನಿರ್ಧಾರಕ್ಕೆ ಕಾರಣವಾಗಿರಲೂ ಬಹುದು. ಗಂಡನನ್ನು ನಂಬಿಕೊಂಡೇ ಜೀವನ ನಡೆಸುವ ಹೆಣ್ಣಿಗೆ ಗಂಡನಿಲ್ಲದೇ ಮುಂದೇನು ಎಂಬ ಪ್ರಶ್ನೆ ಕಾಡುವುದು ಖಂಡಿತ. ಆ ಕ್ಷಣಕ್ಕೆ ಅವರಿಗೆ ಈ ಬದುಕು ಸಹ್ಯ ಅನಿಸದೇ ಇರಬಹುದು. ಮುಂದೆ ಜೀವನ ನಡೆಸುವುದು ಹೇಗೆ ಎಂಬ ಗೊಂದಲವೂ ಅವರನ್ನು ಕಾಡಿರಬಹುದು. ಇವೆಲ್ಲವೂ ಮಾನಸಿಕವಾಗಿ ಹೆಣ್ಣು ಕುಗ್ಗಲು ಕಾರಣವಾಗುತ್ತವೆ.

ಬದುಕಿಗೆ ಸ್ಫೂರ್ತಿಯಾದವರು..

ಜೀವನ ಹೇಗೆ ಸಾಗಿಸುವುದು ಎಂಬುದು ಆ ಕ್ಷಣಕ್ಕೆ ಅವಳಿಗೆ ಕಷ್ಟವಾಗಿ ಕಂಡರೂ ಇದನ್ನೆಲ್ಲಾ ಮೀರಿದ ಒಂದು ಜೀವನ ತನಗಾಗಿ ಕಾದಿದೆ, ತಾನು ತನಗಾಗಿ ಬದುಕಬೇಕು ಎಂಬ ಆಸೆ ಮೂಡಿದಾಗಲೇ ಈ ದುಃಖವನ್ನೆಲ್ಲಾ ಮೀರಿ ಬೆಳೆಯಲು ಸಾಧ್ಯ. ಜೀವನವೆಂದ ಮೇಲೆ ಪ್ರತಿಯೊಂದು ಬದಲಾವಣೆಗೆ ತನ್ನನ್ನು ಒಡ್ಡಿಕೊಂಡಾಗಲೇ ಗಟ್ಟಿಯಾಗಿ ನಿಲ್ಲುವುದಕ್ಕೆ ಸಾಧ್ಯ. ಸಾಕಷ್ಟು ಜನ ಸಂಗಾತಿಯ ಅಗಲಿಕೆಯ ನೋವನ್ನು ಅನುಭವಿಸಿ ಮತ್ತೆ ಹೊಸ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಅಂಥವರು ಬದುಕಿಗೆ ಸ್ಪೂರ್ತಿಯಾಗಿರಬೇಕು. ಆತ್ಮಹತ್ಯೆಯೊಂದೇ ಎಲ್ಲದಕ್ಕೂ ಪರಿಹಾರವಲ್ಲ ಎಂಬುದನ್ನು ಅರಿತಾಗಲೇ ಬದುಕನ್ನು ಮತ್ತೆ ಪ್ರೀತಿಸಲು ಸಾಧ್ಯ.

‘ಕಲೆಯನ್ನೇ ಶಕ್ತಿಯನ್ನಾಗಿಸಿಕೊಂಡೆ’

ಒಂದು ತಿಂಗಳ ಹಿಂದೆಯಷ್ಟೇ ನಾನು ಕೊರೊನಾ ಕಾರಣದಿಂದ ನನ್ನ ಬದುಕಿನ ಎಲ್ಲವೂ ಆಗಿರುವ ಪತಿಯನ್ನು ಕಳೆದುಕೊಂಡೆ. ಒಮ್ಮೆ ದಿಕ್ಕೇ ತೋಚದ ಹಾಗೇ ಆಗಿತ್ತು. ಮುಂದೆ ಬದುಕು ಹೇಗೆ…? ಎಂಬ ಯೋಚನೆ. ಇದರ ನಡುವೆ ಮಗಳಿಗಾಗಿ, ನಾನು ಅವರು ಒಟ್ಟಾಗಿ ಕಂಡ ಕನಸಿಗಾಗಿ ಬದುಕಬೇಕು ಅನಿಸಿತ್ತು. ಅವರೆಲ್ಲೂ ಹೋಗಿಲ್ಲ! ನನ್ನೊಂದಿಗೆ ನನ್ನ ಪ್ರತಿ ಹಜ್ಜೆಯೊಂದಿಗೆ ಇದ್ದಾರೆ ಅನ್ನುವ ಭಾವವೊಂದನ್ನು ಮನಸ್ಸಿನಲ್ಲಿ ಅಚಲವಾಗಿ ಮೂಡಿಸಿಕೊಂಡೆ. ಒಂದಷ್ಟು ಜವಾಬ್ದಾರಿ ನನ್ನ ಹೆಗಲ ಮೇಲಿತ್ತು. ಅದನ್ನೆಲ್ಲಾ ನಿಭಾಯಿಸಲು ನನಗೆ ಸಹಾಯಕವಾಗಿದ್ದು ನನ್ನಲ್ಲಿದ್ದ ಕೌಶಲ. ಮಣ್ಣಿನಿಂದ ಆಭರಣ ಮಾಡುವ ಕಲೆ ನನಗೊಲಿದಿತ್ತು. ಅದನ್ನೇ ನನ್ನ ಶಕ್ತಿಯನ್ನಾಗಿಸಿಕೊಂಡು ನನ್ನ ದುಃಖವನ್ನೆಲ್ಲಾ ಬದಿಗೊತ್ತಿ ಅದರಲ್ಲಿ ಬ್ಯುಸಿಯಾಗಿ ಬಿಟ್ಟೆ. ಸಂಗಾತಿ ಇಲ್ಲದಾಗ ಬದುಕೇ ಇಲ್ಲ ಅನಿಸಿ ಬಿಡುವುದು ಸಹಜ. ಆದರೆ ಅದೇ ನೋವಿನಲ್ಲಿ ಕೊರಗುವ ಬದಲು ಬದಲಾವಣೆಗೆ ನಮ್ಮನ್ನು ತೆರೆದುಕೊಂಡು ಮುಂದೆ ಸಾಗುವುದು ಬಹಳ ಮುಖ್ಯ.

-ನೀಲಿ ಲೋಹಿತ್

***

ಸಮಸ್ಯೆಯನ್ನು ಎದುರಿಸಿ ನಿಲ್ಲಿ!

ಈ ಕೋವಿಡ್ ಎನ್ನುವ ಅನಿಶ್ಚಿತತೆ ಎಲ್ಲರನ್ನೂ ಕಾಡುತ್ತಿರುತ್ತದೆ. ಎಲ್ಲರಲ್ಲೂ ಒಂದು ರೀತಿಯ ಭಯದ ಮನಸ್ಥಿತಿ ಇದ್ದೇ ಇರುತ್ತದೆ. ತಮ್ಮವರ ಹತ್ತಿರ ನಿಂತು ಅವರ ಆರೈಕೆ ಮಾಡುವುದಕ್ಕೂ ಆಗಿಲ್ಲ, ಅವರಿಗೊಂದು ವಿದಾಯ ಹೇಳುವುದಕ್ಕೂ ಆಗಿಲ್ಲ ಎಂಬ ನೋವಿನ ಜತೆ, ಮುಂದೆ ಅವರಿಲ್ಲದೇ ಜೀವನ ಹೇಗೆ ಎಂಬ ಅಘಾತ ತಡೆದುಕೊಳ್ಳುವುದಕ್ಕೆ ಆಗದೇ ಆತ್ಮಹತ್ಯೆಯಂತಹ ಪ್ರಯತ್ನಗಳನ್ನು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಮನೆಯವರು ಅವರ ಜತೆ ನಾವಿದ್ದೇವೆ ಎಂದು ಬೆಂಬಲವಾಗಿ ನಿಲ್ಲಬೇಕು. ಈ ಸಮಸ್ಯೆ ನಿಮಗೊಬ್ಬರಿಗೇ ಅಲ್ಲ, ಎಲ್ಲರೂ ಒಂದಲ್ಲ ಒಂದು ರೀತಿಯ ನೋವು ಅನುಭವಿಸುತ್ತಿದ್ದಾರೆ ಎಂಬುದನ್ನು ಅವರಿಗೆ ಮನದಟ್ಟು ಮಾಡಬೇಕು. ಏನೇ ಸಮಸ್ಯೆ ಬಂದರೂ ಎದುರಿಸಬೇಕು ಎಂಬ ಧೈರ್ಯ ನೀಡಬೇಕು. ಇದರ ಜತೆಗೆ ಅವರನ್ನು 24 ಗಂಟೆಯೂ ನೋಡಿಕೊಳ್ಳಬೇಕು. ಅಗತ್ಯವಿದ್ದಾಗ ತಜ್ಞರ ಸಹಾಯ ತೆಗೆದುಕೊಳ್ಳಬೇಕು. ಆಗ ಮಾತ್ರ ಅವರನ್ನು ಆತ್ಮಹತ್ಯೆಯಂತಹ ಯೋಚನೆಗಳಿಂದ ಹೊರತರಲು ಸಾಧ್ಯ. ನೋವಿನಿಂದ ಚೇತರಿಸಿಕೊಳ್ಳಲು ಸಾಧ್ಯ.

-ಡಾ. ಶಿವಾನಂದ ಬಿ. ಹಿರೇಮಠ, ಮನೋರೋಗ ತಜ್ಞ, ಹುಬ್ಬಳ್ಳಿ

***

covidwidows.in

ಕೊರೊನಾ ಸೋಂಕಿನಿಂದ ಪತಿಯನ್ನು ಕಳೆದುಕೊಂಡ ವಿಧವೆಯರನ್ನು ಸ್ವಾವಲಂಬಿಗಳನ್ನಾಗಿಸಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದು ಹಾಗೂ ಅವರ ಎಳೆಯ ಮಕ್ಕಳ ಭವಿಷ್ಯಕ್ಕೆ ನೆರವು ನೀಡುವ ಸಲುವಾಗಿ coviwidows.in ಜಾಲತಾಣವನ್ನು ಆರಂಭಿಸಲಾಗಿದೆ. ಯುಧ್‌ವೀರ್‌ ಮೋರ್‌, ಕರಣ್‌ ಪ್ರವೇಶ್‌ ಸಿಂಗ್‌, ಅಂಜು ಜಯರಾಮ್‌ ಹಾಗೂ ಹಿಮಾಂಶಿ ಟಂಡನ್ ಈ ನಾಲ್ವರು ಜಾಲತಾಣದ ರೂವಾರಿಗಳು. ವಿಧವೆಯರಿಗೆ ಉದ್ಯೋಗ ಕೊಡಿಸಿ ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಈ ಸಂಸ್ಥೆ ನೆರವಾಗುತ್ತದೆ. ವೃತ್ತಿಗೆ ಸಂಬಂಧಿಸಿ ಸಮಾಲೋಚನೆ, ಕೌಶಲಕ್ಕೆ ಹೊಂದುವಂತಹ ಉದ್ಯೋಗಾವಕಾಶ ಕಲ್ಪಿಸುವುದು, ಸಂದರ್ಶನ ತಯಾರಿಗೆ ತರಬೇತಿ ಮುಂತಾದವುಗಳನ್ನು ಈ ಜಾಲತಾಣ ಒಳಗೊಂಡಿದೆ. ಮೇ 17 ರಿಂದ ಈ ಜಾಲತಾಣ ಕಾರ್ಯನಿರ್ವಹಿಸುತ್ತಿದ್ದು ಸಂಜೆ 5 ರಿಂದ ರಾತ್ರಿ 10ರವರೆಗೆ ಝೂಮ್ ಕರೆಯ ಮೂಲಕ ಸಂಪರ್ಕ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ covidwomenhelp@riseagain.in ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.