ADVERTISEMENT

ಒಂದೇ ವೃತ್ತಿ: ಏಕತಾನತೆಯಿಂದ ಹೊರಬರಲು ಉದ್ಯೋಗ ಬದಲಾವಣೆಯೆಂಬ ಹೊಸ ಹಾದಿ!

ರೇಷ್ಮಾ
Published 24 ಜುಲೈ 2021, 0:42 IST
Last Updated 24 ಜುಲೈ 2021, 0:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಖಾಸಗಿ ಕಂ‍ಪನಿಯೊಂದರಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌ ಆಗಿದ್ದ ಮಹತಿ ಇತ್ತೀಚೆಗೆ ಕೆಲಸಕ್ಕೆ ರಾಜೀನಾಮೆ ನೀಡಿದ್ದಳು. ದೊಡ್ಡ ಹುದ್ದೆ, ಕೈ ತುಂಬಾ ಸಂಬಳ, ಎಲ್ಲವನ್ನೂ ಅನುಸರಿಸಿಕೊಂಡು ಹೋಗುವ ಗಂಡ–ಮಕ್ಕಳು.. ಆದರೂ ಆಕೆ ಕೆಲಸಕ್ಕೆ ರಾಜೀನಾಮೆ ನೀಡಿದ್ದು ಎಲ್ಲರಿಗೂ ಆಶ್ಚರ್ಯ. ಎಲ್ಲರೂ ಅವಳ ಬಳಿ ರಾಜೀನಾಮೆ ನೀಡಲು ಕಾರಣ ಏನು ಎಂದು ಕೇಳುವವರೇ. ‘ನಾನು ಬಹಳ ಕಷ್ಟಪಟ್ಟು ಓದಿ, ಕೆಲಸಕ್ಕೆ ಸೇರಿದ್ದೆ. ಮೊದ ಮೊದಲು ಎಲ್ಲವೂ ಚೆನ್ನಾಗಿತ್ತು. ಆದರೆ ಕೆಲಸದಲ್ಲಿ ಏಕತಾನತೆ ಕಾಡಲು ಶುರುವಾಯಿತು. ಅದರೊಂದಿಗೆ ವೃತ್ತಿ ಜೀವನ ಬಹಳವೇ ಒತ್ತಡ ಎನ್ನಿಸುತ್ತಿತ್ತು. ಒತ್ತಡದಿಂದ ಮನೆಯವರನ್ನೂ ಖುಷಿಯಾಗಿ ಇಡಲು ಆಗುತ್ತಿರಲಿಲ್ಲ. ಆರೋಗ್ಯ ಸಮಸ್ಯೆಗಳು ಬೇರೆ. ನನಗೆ ನನ್ನದೇ ಆದ ಜೀವನವೇ ಇಲ್ಲದಂತಾಗಿತ್ತು. ಸಂಬಳಕ್ಕಿಂತ ಜೀವನವೇ ಮುಖ್ಯ ಎಂದು ಈಗ ಅನ್ನಿಸುತ್ತಿದೆ’ ಎಂದು ಹೇಳುವಾಗ ಅವಳ ಕಣ್ಣುಗಳು ನೆಮ್ಮದಿಯ ನಾಳೆಗಳನ್ನು ಹುಡುಕುತ್ತಿದ್ದವು.

ಮಹತಿಯಂತೆ ಹಲವು ಹೆಣ್ಣುಮಕ್ಕಳು ಉದ್ಯೋಗದ ಏಕತಾನತೆ, ಕೌಟುಂಬಿಕ ತೊಂದರೆಗಳು, ಆರೋಗ್ಯ ಸಮಸ್ಯೆ ಮೊದಲಾದ ಕಾರಣಗಳಿಂದ ಉದ್ಯೋಗ ತ್ಯಜಿಸುವುದು ಅಥವಾ ಉದ್ಯೋಗ ಬದಲಾಯಿಸುವುದು ಮಾಡುತ್ತಿದ್ದಾರೆ. ಈ ಉದ್ಯೋಗ ಬದಲಾವಣೆಯ ಮನೋಭಾವ ಕೋವಿಡ್‌ ಶುರುವಾದಾಗಿನಿಂದ ಹೆಚ್ಚಿದೆ ಎನ್ನುತ್ತದೆ ಒಂದು ಅಧ್ಯಯನ.

ವೃತ್ತಿ ಬದಲಿಸುವುದು ಅಥವಾ ಕೆಲಸಕ್ಕೆ ರಾಜೀನಾಮೆ ನೀಡುವ ಮೂಲಕ ಬದುಕಿನ ಪಥವನ್ನು ಬದಲಿಸಿಕೊಂಡಿರುವ ಹೆಣ್ಣುಮಕ್ಕಳು ಮುಂಚಿಗಿಂತ ಈಗಲೇ ಹೆಚ್ಚು ಸಂತೋಷವಾಗಿದ್ದೇವೆ ಎನ್ನುತ್ತಾರೆ. ಕೈ ತುಂಬ ಸಂಬಳ ಸಿಗುವ ಉದ್ಯೋಗವಿದ್ದರೂ ನೆಮ್ಮದಿ ಇಲ್ಲದ, ನನ್ನದು ಎನ್ನುವ ಸ್ವಂತ ಬದುಕಿಲ್ಲದ ಜೀವನದಲ್ಲಿ ಬದುಕುವುದು ಕಷ್ಟಸಾಧ್ಯ ಎನ್ನುವುದು ಹಲವು ಮಹಿಳೆಯರ ಅಭಿಮತ. ಉದ್ಯೋಗ ಎಂದರೆ ಕೇವಲ ತಿಂಗಳ ಸಂಬಳದ ಖುಷಿ ಹೊರತು ಪಡಿಸಿದರೆ ಬೇರೇನೂ ಇಲ್ಲ ಎನ್ನುವವರೂ ಇದ್ದಾರೆ.

ADVERTISEMENT

ದುಡಿಮೆಯ ಮಧ್ಯೆ ತಮ್ಮ ಖುಷಿ, ಹವ್ಯಾಸ, ವೈಯಕ್ತಿಕ ಜೀವನ, ಕುಟುಂಬ ಎಲ್ಲವನ್ನೂ ಮರೆಯುವಂತಹ ಪರಿಸ್ಥಿತಿ ಬರಬಹುದು. ಬದುಕಿನ ಆರ್ಥಿಕತೆಗೆ ದುಡಿಮೆ ಬೇಕು ನಿಜ, ಆದರೆ ದುಡಿಮೆಯೇ ಬದುಕಾಗಬಾರದು. ದುಡಿಮೆಯ ಒತ್ತಡ ಎನ್ನುವುದು ಮಹಿಳೆಯರಲ್ಲಿ ಹಲವು ರೀತಿಯ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಉದ್ಯೋಗದಲ್ಲಿನ ಬೇಸರವು ಬದುಕಿನ ಬೇಸರಕ್ಕೂ ಕಾರಣವಾಗಿದೆ. ಹಾಗಾಗಿ ಉದ್ಯೋಗಕ್ಕೆ ರಾಜೀನಾಮೆ ನೀಡುವುದು, ಉದ್ಯೋಗವನ್ನು ಬದಲಿಸುವುದು, ಇಲ್ಲವೇ ಸ್ವಂತ ಉದ್ಯಮ ಶುರು ಮಾಡುವುದರ ಮೂಲಕ ಹೊಸ ಹಾದಿಯಲ್ಲಿ ಸಾಗುತ್ತಿದ್ದಾರೆ ಮಹಿಳೆಯರು. ಇದು ಅವರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗೆ ನಾಂದಿ ಹಾಡಿರುವುದು ಸುಳ್ಳಲ್ಲ.

ಮಾನಸಿಕ ಮತ್ತು ದೈಹಿಕ ಸಮಸ್ಯೆ

ಅತಿಯಾದ ಒತ್ತಡ ಕೆಲಸದ ಮೇಲೆ ನಿರ್ಲಕ್ಷ್ಯ ಮನೋಭಾವ ತಾಳುವಂತೆ ಮಾಡುತ್ತದೆ. ಕೆಲಸದ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಬೇಸರವು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇದರೊಂದಿಗೆ ದೀರ್ಘಕಾಲದ ಒತ್ತಡ ಪಾರ್ಶ್ವವಾಯು, ಹೃದ್ರೋಗ, ಸ್ನಾಯುಸೆಳೆತ, ತಲೆನೋವಿನಂತಹ ದೈಹಿಕ ಸಮಸ್ಯೆಯನ್ನೂ ಹುಟ್ಟು ಹಾಕುತ್ತದೆ. ಹಾರ್ಮೋನ್ ವ್ಯತ್ಯಾಸವನ್ನು ಉಂಟು ಮಾಡುತ್ತದೆ ಎನ್ನುತ್ತಾರೆ ತಜ್ಞರು.

ಒತ್ತಡದಿಂದ ಇಲ್ಲಸಲ್ಲದ ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳುವ ಬದಲು ತಮಗೆ ಸೂಕ್ತ ಎನ್ನಿಸುವ ಬೇರೆ ಉದ್ಯೋಗ ಅಥವಾ ಸ್ವಂತ ಉದ್ಯೋಗ ಉತ್ತಮ ಎನ್ನುವುದು ಹಲವರ ಅಭಿಪ್ರಾಯ.

ಕೌಟುಂಬಿಕ ಬಾಂಧವ್ಯ ವೃದ್ಧಿ

‘ಕೆಲಸದ ಮೇಲಿನ ಒತ್ತಡದಿಂದ ಸಂಬಂಧಗಳು ಹಳಸುತ್ತಿವೆ. ಕೆಲಸದ ಅವಧಿ, ಶಿಫ್ಟ್‌ಗಳು, ಕೆಲಸಕ್ಕೆ ಸಂಬಂಧಿಸಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುವುದು ಸಂಬಂಧ ಹಳಸಲು ಪ್ರಮುಖ ಕಾರಣ‌. ವೃತ್ತಿಯಲ್ಲಿರುವ ಎಷ್ಟೋ ಹೆಣ್ಣುಮಕ್ಕಳು ತಮ್ಮ ಗಂಡ–ಮಕ್ಕಳು ಹಾಗೂ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದಾರೆ, ಇಲ್ಲವೆ ವೃತ್ತಿ ಬದಲಾವಣೆಯ ಹಾದಿ ಕಂಡುಕೊಳ್ಳುತ್ತಾರೆ’ ಎನ್ನುತ್ತಾರೆ ಆಪ್ತ ಸಮಾಲೋಚಕಿ ಪ್ರಮೀಳಾ ಎಸ್‌.

ಸ್ವಂತ ಉದ್ಯಮದ ಹಾದಿ

ಈಗೀಗ ಉದ್ಯೋಗ ತ್ಯಜಿಸುವ ಹೆಣ್ಣುಮಕ್ಕಳು ಸ್ವಂತ ಉದ್ಯಮದತ್ತ ಒಲವು ಮೂಡಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಬದುಕಿಗೆ ಆರ್ಥಿಕ ಭದ್ರತೆಯನ್ನು ರೂಪಿಸಿಕೊಳ್ಳುತ್ತಿದ್ದಾರೆ. ಆನ್‌ಲೈನ್‌ ಮಾರುಕಟ್ಟೆಗಳು, ಸಾಮಾಜಿಕ ಜಾಲತಾಣಗಳು ಇಂತಹ ಹೆಣ್ಣುಮಕ್ಕಳಿಗೆ ಹೊಸ ಹಾದಿಯನ್ನು ಪರಿಚಯಿಸುವುದರ ಜೊತೆಗೆ ಅವರನ್ನು ಸ್ವಾವಲಂಬಿಗಳನ್ನಾಗಿಸಲು ಸಹಾಯ ಮಾಡುತ್ತಿವೆ.

ನಾನು ಎಂದಿಗೂ ಒಂದೇ ಕಡೆ ಕುಳಿತುಕೊಳ್ಳುವವಳಲ್ಲ. ನನಗೆ ಮೊದಲಿನಿಂದಲೂ ವಿವಿಧ ಕ್ಷೇತ್ರದಲ್ಲಿ ನನ್ನನ್ನು ತೊಡಗಿಸಿಕೊಳ್ಳಬೇಕು ಎಂಬ ಹಂಬಲವಿತ್ತು. ಎಲ್ಲಾ ಕಡೆ ಕೆಲಸ ಮಾಡಿ ಅನುಭವ ಗಿಟ್ಟಿಸಿಕೊಳ್ಳಬೇಕು ಎಂಬ ಬಯಕೆ. ಆಕಾಶವಾಣಿ, ರೇಡಿಯೊ ಮಿರ್ಚಿ, ಟಿವಿ ಪ್ರೊಡಕ್ಷನ್, ಉಪನ್ಯಾಸಕಿ ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಒಂದೇ ಉದ್ಯೋಗದಲ್ಲಿ ಹಲವು ವರ್ಷಗಳ ಕಾಲ

ಕಳೆದರೆ ನಮ್ಮಲ್ಲಿರುವ ಸೃಜನಶೀಲತೆ ಹಳ್ಳಕ್ಕೆ ಹಿಡಿಯುತ್ತದೆ. ನಾನು ನನ್ನ ಆಸಕ್ತಿ ಹಾಗೂ ಪ್ರವೃತ್ತಿಯನ್ನು ಮುಂದುವರಿಸುವ ಸಲುವಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ಸದ್ಯ ರೇಡಿಯೊದಲ್ಲಿ ಅರೆಕಾಲಿಕ ವೃತ್ತಿ ಹಾಗೂ ಮಳೆ ನೀರು ಕೊಯ್ಲು ಮಾಡುತ್ತಿದ್ದೇನೆ. ಈಗ ನನ್ನ ಕುಟುಂಬಕ್ಕೂ ಸಮಯ ನೀಡುತ್ತಾ ಪ್ರವೃತ್ತಿಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿದೆ. ಯಾಂತ್ರಿಕ ಬದುಕಿಗೆ ಪೂರ್ಣವಿರಾಮ ಹಾಕಿ ನನ್ನದೇ ಜೀವನ ರೂಪಿಸಿಕೊಂಡಿರುವುದಕ್ಕೆ ಖುಷಿ ಇದೆ.

- ಜ್ಯೋತಿ ಸಾಲಿಗ್ರಾಮ

ನಾನು ಮೊದಲು ಆಂಗ್ಲ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆಗ ನನಗೆ ನನ್ನ ಹವ್ಯಾಸ, ವೈಯಕ್ತಿಕ ಬದುಕಿಗೆ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಆ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ನೀಡಿ ಫ್ರೀಲಾನ್ಸರ್ ಆಗಿ ವೃತ್ತಿ ಬದುಕನ್ನು ಮುಂದುವರಿಸಿದೆ. ಶುರುವಿಗೆ ಆರ್ಥಿಕವಾಗಿ ಕಷ್ಟವೆನಿಸಿತು. ಆದರೆ ಮನಸ್ಸಿಗೆ ಖುಷಿ ಸಿಕ್ಕಿತು. ಕೆಲಸ ಬಿಡುವಾಗ ಭಂಡ ಧೈರ್ಯ ಮಾಡಿ ಕೆಲಸ ಬಿಟ್ಟಿದ್ದೆ. ಕೆಲಸವಿದ್ದರೆ ತಿಂಗಳಿಗೆ ಸರಿಯಾಗಿ ಸಂಬಳ ಬರುತ್ತದೆ ಎಂಬುದಿರುತ್ತದೆ. ಆದರೆ ವೈಯಕ್ತಿಕ ಜೀವನ, ಕುಟುಂಬದ ಜೊತೆ ಸಮಯ ಕಳೆಯುವುದು, ಪ್ರವಾಸ ಮಾಡುವುದು, ಓದುವುದು, ಅಡುಗೆ ಮಾಡುವುದು ಇವೆಲ್ಲವನ್ನೂ ಮರೆಯಬೇಕಿತ್ತು. ನನ್ನೆಲ್ಲಾ ಹವ್ಯಾಸಗಳನ್ನು ಪುನಃ ಆರಂಭಿಸಲು ಸಾಧ್ಯವಾಗಿದ್ದು ಕೆಲಸ ಬಿಟ್ಟ ಮೇಲೆ. ಬೆಂಗಳೂರು ಬಿಟ್ಟು ಬಂದು ನಮ್ಮೂರು ಮಡಿಕೇರಿಯಲ್ಲಿ ಬದುಕುತ್ತಿದ್ದೇವೆ. ಈಗಂತೂ ಅಂತರ್ಜಾಲ ವ್ಯವಸ್ಥೆ ಎಲ್ಲಾ ಕಡೆಯಲ್ಲೂ ಇರುವುದರಿಂದ ಕುಳಿತಲ್ಲೇ ಕೆಲಸ ಮಾಡುವ ಅವಕಾಶವಿದೆ. ನಾನು ಫ್ರೀಲಾನ್ಸರ್ ವೃತ್ತಿ ಮುಂದುವರಿಸಿಕೊಂಡು ಖುಷಿಯಿಂದ ಜೀವನ ಸಾಗಿಸುತ್ತಿದ್ದೇನೆ.

- ದೀ‍ಪಾ ಭಾಸ್ತಿ, ಫ್ರೀಲಾನ್ಸರ್ ಬರಹಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.