ADVERTISEMENT

ಸ್ತ್ರೀಯರ ಲೈಂಗಿಕತೆಯ ಸ್ವರೂಪ

ನಡಹಳ್ಳಿ ವಂಸತ್‌
Published 19 ಫೆಬ್ರುವರಿ 2021, 19:30 IST
Last Updated 19 ಫೆಬ್ರುವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪತ್ನಿ ಒಂದೇ ಭಂಗಿಯಲ್ಲಿ ಲೈಂಗಿಕ ಕ್ರಿಯೆಯನ್ನು ಇಷ್ಟಪಡುತ್ತಾಳೆ. 2-3 ನಿಮಿಷಗಳಲ್ಲಿ ಅವಳಿಗೆ ತೃಪ್ತಿಯಾಗುತ್ತದೆ. ನಂತರ ಉತ್ಸಾಹ ಕಳೆದುಕೊಳ್ಳುತ್ತಾಳೆ. ಆದರೆ ದಿನದಲ್ಲಿ ಬಾರಿಬಾರಿ ಲೈಂಗಿಕ ತೃಪ್ತಿ ಬೇಕು ಎಂದು ಹಂಬಲಿಸುತ್ತಾಳೆ. ಅವಳಿಗೆ ಲೈಂಗಿಕ ತೃಪ್ತಿಯ ವೇಳೆಯನ್ನು ಹೆಚ್ಚಿಸಲು ಆಗುತ್ತಿಲ್ಲ. ಪರಿಹಾರ ತಿಳಿಸಿ.

ಬಸವರಾಜ್‌, ಧಾರವಾಡ

ಪ್ರಶ್ನೆ ಅಪೂರ್ಣವಾಗಿದೆ. ನಿಮ್ಮಿಬ್ಬರ ವಯಸ್ಸು ಇತ್ಯಾದಿ ವಿವರಗಳಿದ್ದರೆ ಸಹಾಯವಾಗುತ್ತಿತ್ತು. ಸಾಮಾನ್ಯವಾಗಿ ಸ್ತ್ರೀಯರು ಕಾಮಸುಖದ ಉತ್ತುಂಗವನ್ನು (ಭಾವಪ್ರಾಪ್ತಿ-ಆರ್ಗಸಮ್‌) ಒಮ್ಮೆ ತಲುಪಿದ ಮೇಲೆ ಅವರ ದೇಹ, ಮನಸ್ಸು ಪ್ರತಿಕ್ರಿಯೆ ಮುಂದುವರೆಸುವುದನ್ನು ಕಡಿಮೆ ಮಾಡುತ್ತವೆ. ಆದರೆ ಕಾಮಾಸಕ್ತಿ ಕಡಿಮೆಯಾಗಿರುತ್ತದೆ ಎಂದೇನಲ್ಲ. ಒಂದೇ ಕೂಟದಲ್ಲಿ ಸ್ತ್ರೀಯರಿಗೆ ಹಲವಾರು ಬಾರಿ ಭಾವಪ್ರಾಪ್ತಿಯಾಗುವ ಸಾಧ್ಯತೆಗಳಿರುತ್ತವೆ. ಆದರೆ ಎರಡು ಉತ್ತುಂಗಗಳ ನಡುವಿನ ಸಮಯ ಇಂತಿಷ್ಟೇ ಎಂದು ಹೇಳಲಾಗುವುದಿಲ್ಲ. ಪತ್ನಿಗೆ ತೃಪ್ತಿಯಾದ ಮೇಲೆಯೂ ನಿಮಗೆ ಸ್ಖಲನವಾಗಿರದಿದ್ದರೆ, ಸ್ವಲ್ಪ ನಿಧಾನಿಸಿ ಅಪ್ಪುಗೆ, ಚುಂಬನ, ಪ್ರೀತಿಯ ಮಾತುಗಳನ್ನು ಮುಂದುವರಿಸಿ. ಒಂದೆರಡು ನಿಮಿಷಗಳಲ್ಲಿ ಅವರ ಕಾಮಾಸಕ್ತಿ ಮತ್ತೆ ಮರಳುವ ಸಾಧ್ಯತೆಗಳಿರುತ್ತವೆ. ಹೀಗೆ ಒಂದೇ ಕೂಟದಲ್ಲಿ ಅವರು ಪೂರ್ಣ ತೃಪ್ತರಾಗಬಹುದು. ನೀವು ಇತ್ತೀಚೆಗೆ ಮದುವೆಯಾಗಿದ್ದರೆ ಒಂದೇ ದಿನದಲ್ಲಿ ಮತ್ತೆಮತ್ತೆ ಸೇರಬೇಕೆನ್ನುವ ಕಾಮಾಸಕ್ತಿ ಸಹಜವಾದದ್ದು. ನಿಮ್ಮನ್ನು ಹತ್ತಿರ ಕರೆಯುವುದು ಕೇವಲ ಕೂಟದ ಆಹ್ವಾನವಾಗಿರದೆ ಒಡನಾಟದ ಬೇಡಿಕೆಯೂ ಇರಬಹುದು. ಹಾಗಾಗಿ ಇಬ್ಬರೂ ಸರಸವಾಗಿ ಕಳೆಯುವ ಸಮಯವನ್ನು ಸಾಧ್ಯವಿರುವಷ್ಟು ಹೆಚ್ಚುಮಾಡಿ.

ADVERTISEMENT

ವಯಸ್ಸು 24. ಮೊದಲಿನಿಂದ ಸಾಮಾನ್ಯ ವಿದ್ಯಾರ್ಥಿ. ಎಂಎಸ್‌ಸಿ ಓದುತ್ತಿದ್ದೇನೆ. ಉತ್ತಮ ಅಂಕಗಳನ್ನು ಪಡೆಯುತ್ತಿದ್ದರೂ ಆತ್ಮವಿಶ್ವಾಸದ ಕೊರತೆಯಿದೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳುವ ಮೊದಲು ನನ್ನಿಂದ ಸಾಧ್ಯವೇ ಎಂದು ಅನುಮಾನಿಸುತ್ತೇನೆ. ಮಧ್ಯೆ ಸ್ವಲ್ಪ ಹೆಚ್ಚುಕಡಿಮೆಯಾದರೂ ಭಯವಾಗುತ್ತದೆ. ಸರ್ಕಾರಿ ನೌಕರಿಗೆ ಸೇರಲು ಬಯಸುತ್ತೇನೆ. ಭಯದಿಂದ ಓದಲಾಗುತ್ತಿಲ್ಲ. ಇಲ್ಲಿಯವರೆಗೆ ಅದೃಷ್ಟದಿಂದ ಮೇಲೆ ಬಂದಿದ್ದೇನೆ, ಇನ್ನು ಸಾಧ್ಯವಿಲ್ಲವೆನಿಸುತ್ತದೆ. ಪರಿಹಾರವೇನು?

ಮಾನಸ, ಊರಿನ ಹೆಸರಿಲ್ಲ.

‘ನಾನು ಸಾಮಾನ್ಯ ವಿದ್ಯಾರ್ಥಿ, ನನ್ನ ಎಲ್ಲಾ ಸಾಧನೆಗಳೂ ಆಕಸ್ಮಿಕ, ಅದೃಷ್ಟ’ ಎಂದು ಹೇಳುತ್ತಿದ್ದೀರಿ. ನಿಮ್ಮ ಬಗೆಗೆ ನೀವೇ ಬಹಳ ಕೆಟ್ಟದಾಗಿ ಯೋಚಿಸುತ್ತಿದ್ದೀರಲ್ಲವೇ? ಏನನ್ನಾದರೂ ಸಾಧಿಸಿದವರಿಗೆಲ್ಲಾ ಆತ್ಮವಿಶ್ವಾಸವಿರುತ್ತದೆ ಅಥವಾ ಆತ್ಮವಿಶ್ವಾಸವಿದ್ದರೆ ಮಾತ್ರ ಏನನ್ನಾದರೂ ಸಾಧಿಸಬಹುದು ಎನ್ನುವುದು ಎಲ್ಲರ ತಪ್ಪುಕಲ್ಪನೆ. ಆತ್ಮವಿಶ್ವಾಸವೆಂಬ ಸಿದ್ಧವಸ್ತು ಎಲ್ಲಿದೆ? ಹಿಂಜರಿಕೆ, ಸೋಲುಗಳನ್ನು ಸಹಜವೆಂದು ಒಪ್ಪಿಕೊಂಡು ಪ್ರಯತ್ನವನ್ನು ಮುಂದುವರಿಸುತ್ತಾ ಹೋದರೆ ಆತ್ಮವಿಶ್ವಾಸ ತಾನಾಗಿಯೇ ಮೂಡುತ್ತದೆ. ಅದೃಷ್ಟವೆಂದರೆ ಏನು, ಎಲ್ಲಿ ಸಿಗುತ್ತದೆ ಎನ್ನುವುದು ಯಾರಿಗಾದರೂ ಗೊತ್ತಿದೆಯೇ? ನಮ್ಮ ಹಿಡಿತದಲ್ಲಿಲ್ಲದ ಅದರ ಕುರಿತು ಯೋಚಿಸಿದರೆ ನಮಗೇನು ಪ್ರಯೋಜನ? ನಿಮಗೆ ಆತ್ಮವಿಶ್ವಾಸದ ಕೊರತೆಯಿಲ್ಲ, ಆತ್ಮಗೌರವದ ಕೊರತೆಯಿದೆ. ಇಲ್ಲಿಯವರೆಗಿನ ಸಾಧನೆಗಳು ನಿಮ್ಮದೇ ಪ್ರಯತ್ನದ ಫಲ ಎಂದುಕೊಂಡರೆ ಏನಾಗಬಹುದು ಗೊತ್ತೇ? ಸಾಧನೆಗಳಿಗೆ ಖುಷಿಪಡುತ್ತೀರಿ. ಹಾಗೆಯೇ ಸೋಲುಗಳೂ ನಿಮ್ಮವೇ ಎಂದುಕೊಂಡರೆ ಅದರ ಜವಾಬ್ದಾರಿ ಹೊರುತ್ತೀರಿ. ಸೋಲುಗಳನ್ನು ಜೀರ್ಣಿಸಿಕೊಂಡು ಪ್ರಯತ್ನವನ್ನು ಮುಂದುವರಿಸಿ. ಅಲ್ಲಿಂದ ಬದಲಾವಣೆಗಳು ಪ್ರಾರಂಭವಾಗುತ್ತವೆ.

21ರ ಯುವಕ. ಅಕ್ಷರಗಳಾದ ಲ ಮತ್ತು ಳ ಗಳನ್ನು ಒಂದೇ ರೀತಿಯಾಗಿ ಉಚ್ಚರಿಸುತ್ತೇನೆ. ಯಾರ ಜೊತೆಗಾದರೂ ಮಾತನಾಡುವಾಗ ಹಿಂಸೆಯಾಗುತ್ತದೆ. ಇದರಿಂದಾ ತುಂಬಾ ನೊಂದಿದ್ದೇನೆ. ಪರಿಹಾರವೇನು?

ಊರು, ಹೆಸರು ಇಲ್ಲ.

ನಿಮ್ಮ ಸಮಸ್ಯೆ ಹುಟ್ಟಿನಿಂದಲೇ ಬಂದಿರಬಹುದು ಅಥವಾ ಬಾಲ್ಯದ ಕಲಿಕೆಯಲ್ಲಿನ ತೊಂದರೆಯಿರಬಹುದು. ಇದನ್ನು ತಿಳಿಯಲು ವಾಕ್‌ಶ್ರವಣ ತಜ್ಞರನ್ನು ಸಂಪರ್ಕಿಸಿಬೇಕು. ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅವರ ಸೇವೆ ಲಭ್ಯವಿರಬಹುದು. ಸಾಧ್ಯವಿದ್ದರೆ ಮೈಸೂರಿನ ವಾಕ್‌ಶ್ರವಣ ಸಂಸ್ಥೆಗೆ ಭೇಟಿಕೊಡಿ. ಹಾಗೊಮ್ಮೆ ಹುಟ್ಟಿನಿಂದ ಬಂದಿರುವ ತೊಂದರೆಯಾಗಿದ್ದರೆ ಅದು ನಿಮ್ಮ ಮಿತಿಯೆಂದು ಒಪ್ಪಿಕೊಳ್ಳಲೇಬೇಕು. ಈ ಮಿತಿಯೊಂದೇ ನಿಮ್ಮ ವ್ಯಕ್ತಿತ್ವದ ಗುರುತಾಗಿರಲು ಸಾಧ್ಯವೇ? ನಿಮ್ಮೊಳಗಿರುವ ಇತರ ಪ್ರತಿಭೆ, ಸದ್ಗುಣಗಳು ಮತ್ತು ಸಿಗುವ ಅವಕಾಶಗಳನ್ನು ಬಳಸಿಕೊಂಡು ಈ ಮಿತಿಯನ್ನು ಮೀರಲು ಸಾಧ್ಯವಿದೆ. ಅಗತ್ಯವಿದ್ದರೆ ಮನೋಚಿಕಿತ್ಸಕರನ್ನು ಭೇಟಿಯಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.