ADVERTISEMENT

ಬಾಲಿವುಡ್‌ ಅಂಗಳದಲ್ಲಿ ಮಹಿಳಾ ಕೇಂದ್ರಿತ ಚಿತ್ರಗಳ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 19:30 IST
Last Updated 6 ಮಾರ್ಚ್ 2020, 19:30 IST
ಮಹಿಳಾ ಪ್ರಧಾನ ಚಿತ್ರಗಳು
ಮಹಿಳಾ ಪ್ರಧಾನ ಚಿತ್ರಗಳು   

ನಾಯಕ ಪ್ರಧಾನ ಸಿನಿಮಾಗಳೇ ಹೆಚ್ಚು ತೆರೆ ಕಾಣುತ್ತಿದ್ದ ಕಾಲವೊಂದಿತ್ತು. ಸಿನಿಮಾ ಎಂದರೆ ಹೀರೊ ಸುತ್ತಲೇ ಕಥೆ; ನಾಯಕಿ ಕೇವಲ ಒಂದೆರಡು ದೃಶ್ಯಗಳಲ್ಲಿ ಬಂದು ಹೋಗಿ, ನಾಯಕನ ಜೊತೆ ಮರ ಸುತ್ತಿ ನೃತ್ಯ ಮಾಡುವುದಕ್ಕಷ್ಟೇ ಸೀಮಿತಳಾಗಿದ್ದಳು. ಆದರೆ ಇತ್ತೀಚೆಗೆ ಸಿನಿರಂಗದ ಕಥಾ ನಿರೂಪಣೆಗಳು ಬದಲಾಗಿವೆ. ನಾಯಕಿ ಕೇಂದ್ರಿತ ಅಥವಾ ಮಹಿಳಾ ಕೇಂದ್ರಿತ ಹಲವು ಸಿನಿಮಾಗಳು ತೆರೆ ಕಾಣುತ್ತಿವೆ. 2020ನೇ ಇಸವಿಯನ್ನು ಮಹಿಳಾ ಕೇಂದ್ರಿತ ಸಿನಿಮಾಗಳ ವರ್ಷ ಎಂದೇ ಕರೆಯಬಹುದು. ಬಾಲಿವುಡ್‌ ಅಂಗಳದಲ್ಲಂತೂ ಕೆಲವು ನಾಯಕಿ ಪ್ರಧಾನಚಲನಚಿತ್ರಗಳು ಈಗಾಗಲೇ ತೆರೆ ಕಂಡಿವೆ; ಇನ್ನೂ ಹಲವಾರು ಬಿಡುಗಡೆಯಾಗಲು ಸಾಲುಗಟ್ಟಿ ನಿಂತಿವೆ. ಆದರೆ ಕನ್ನಡದಲ್ಲಿ ಮಾತ್ರ ಅಂತಹ ಸಿನಿಮಾಗಳ ಬಗ್ಗೆ ಸದ್ಯಕ್ಕಂತೂ ಸುದ್ದಿ ಇಲ್ಲ.

ಅಂತಹ ಸಿನಿಮಾಗಳಲ್ಲಿ ದೀಪಿಕಾ ಪಡುಕೋಣೆ ಅಭಿಯನದ ‘ಚಪಾಕ್’ ಮೊದಲನೆಯದ್ದು. ಈ ಚಿತ್ರ ಜನವರಿ ತಿಂಗಳ ಮಧ್ಯದಲ್ಲಿ ಬಿಡುಗಡೆಯಾಗಿದ್ದು, ನಂತರ ಕಂಗನಾ ರನೋಟ್‌ ಅಭಿಯನದ ‘ಪಂಗಾ’ ಸಿನಿಮಾ ತೆರೆ ಕಂಡಿತ್ತು. ತಾಪ್ಸಿ ಪನ್ನು ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಥಪ್ಪಡ್’ ಕಳೆದ ತಿಂಗಳು ಬಿಡುಗಡೆಯಾಗಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿಅಂತಹ ಕೆಲವು ಸಿನಿಮಾಗಳ ಕುರಿತ ಕಿರು ಪರಿಚಯ ಇಲ್ಲಿದೆ.

ಶಕುಂತಲಾ ದೇವಿ

ADVERTISEMENT

‘ಮಾನವ ಕಂಪ್ಯೂಟರ್’ ಎಂದೇ ಖ್ಯಾತಿ ಪಡೆದ ಶಕುಂತಲಾ ದೇವಿ ಅವರ ಜೀವನ ಆಧಾರಿತ ‘ಶಕುಂತಲಾ ದೇವಿ’ ಸಿನಿಮಾ ಮೇ 8ಕ್ಕೆ ಬಿಡುಗಡೆಯಾಗಲಿದೆ. ಶಕುಂತಲಾ ದೇವಿ ಪಾತ್ರದಲ್ಲಿವಿದ್ಯಾ ಬಾಲನ್ ಬಣ್ಣ ಹಚ್ಚಿದ್ದಾರೆ.ಈ ಚಿತ್ರಕ್ಕೆ ಅನು ಮೆನನ್ ನಿರ್ದೇಶನವಿದೆ. ಲೇಖಕಿ ಹಾಗೂ ಗಣಿತ ತಜ್ಞೆಯಾಗಿದ್ದ ಶಕುಂತಲಾ ಅವರ ಹೆಸರು 1982ರಲ್ಲಿಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆಯಾಗಿದೆ.

ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್

ಭಾರತೀಯ ವಾಯುಪಡೆಯ ಮೊದಲ ಪೈಲಟ್ ಗುಂಜನ್ ಅವರ ಬದುಕಿನ ಕುರಿತ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಜಾಹ್ನವಿ ಕ‍‍ಪೂರ್ ನಾಯಕಿಯಾಗಿ ನಟಿಸಲಿದ್ದಾರೆ. ಗುಂಜನ್ ಅವರುಶ್ರೀವಿದ್ಯಾ ರಾಜನ್ ಅವರೊಂದಿಗೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ಯುದ್ಧ ವಲಯದಿಂದ ಸ್ಥಳಾಂತರ ಮಾಡುವ ಕೆಲಸವನ್ನು ಮಾಡಿದ್ದು, ಅವರ ಸಾಹಸಕ್ಕಾಗಿ ಶೌರ್ಯಚಕ್ರ ಪ್ರಶಸ್ತಿ ಲಭಿಸಿದೆ. ಈ ಸಿನಿಮಾವನ್ನು ಶರಣ್‌ ಶರ್ಮಾ ನಿರ್ದೇಶಿಸಲಿದ್ದು, ಇದೇ ಏಪ್ರಿಲ್ 24ಕ್ಕೆ ಬಿಡುಗಡೆಯಾಗಲಿದೆ.

ತಲೈವಿ

ಈ ವರ್ಷ ಸಿನಿರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಚಿತ್ರ ತಲೈವಿ. ನಟಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಜೀವನ ಚರಿತ್ರೆಯನ್ನು ಆಧರಿಸಿದ ಈ ಸಿನಿಮಾವು ಜೂನ್ 26ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಜಯಲಲಿತಾ ಪಾತ್ರಕ್ಕೆ ಕಂಗನಾ ರನೋಟ್ ಜೀವ ತುಂಬಿದ್ದು ಚಿತ್ರದ ಪೋಸ್ಟರ್‌ ಈಗಾಗಲೇ ಸಿನಿಪ್ರಿಯರ ಮನ ಸೆಳೆದಿದೆ. ಇದು ತಮಿಳು, ತೆಲುಗು ಹಾಗೂ ಹಿಂದಿ ಈ ಮೂರು ಭಾಷೆಗಳಲ್ಲೂ ಬಿಡುಗಡೆಯಾಗಲಿದೆ.

ಗಂಗೂಬಾಯಿ ಕಾಥಿಯಾವಾಡಿ

ಈ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಲಿದ್ದಾರೆ. 1960ರ ದಶಕದಲ್ಲಿ ಮುಂಬೈನಲ್ಲಿ ಕುಖ್ಯಾತಿ ಪಡೆದಿದ್ದ ವೇಶ್ಯಾವಾಟಿಕೆ ನಡೆಸುತ್ತಿದ್ದ ಗಂಗೂಬಾಯಿ ‘ಕೋಠಿವಾಲಿ’ ಬದುಕಿನ ಕುರಿತು ಹುಸೇನ್ ಝೈದಿ ಬರೆದಿರುವ ಕಾದಂಬರಿಯನ್ನು ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗೆ ಅಳವಡಿಸುತ್ತಿದ್ದಾರೆ. ‘ಮ್ಯಾಡಂ ಆಫ್ ಕಾಮಾಟಿಪುರ’ ಎಂದೇ ಕರೆಸಿಕೊಳ್ಳುತ್ತಿದ್ದ ಆಕೆ ಭೂಗತ ಜಗತ್ತಿನೊಂದಿಗೆ ಹೊಂದಿದ್ದ ಸಂಪರ್ಕದ ಕಾರಣಕ್ಕೆ ಮುಂಬೈನಲ್ಲಿ ಅತ್ಯಂತ ಪ್ರಭಾವಶಾಲಿ ಎನ್ನಿಸಿಕೊಂಡಿದ್ದಳು.

ಸೈನಾ

ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನಾಧಾರಿತ ಈ ಸಿನಿಮಾದಲ್ಲಿ ನಟಿ ಪರಿಣತಿ ಚೋಪ್ರಾ ನಾಯಕಿಯಾಗಿ ನಟಿಸಲಿದ್ದಾರೆ. ಅಮೋಲ್ ಗುಪ್ತಾ ನಿರ್ದೇಶನದ ಈ ಸಿನಿಮಾದಲ್ಲಿ ಸೈನಾ ಕೋಚ್ ಪುಲ್ಲೇಲ ಗೋಪಿಚಂದ್ ಪಾತ್ರಕ್ಕೆ ಮಾನವ್ ಕೌಲ್ ಬಣ್ಣ ಹಚ್ಚಲಿದ್ದಾರೆ.

ಗುಲ್ ಮಕೈ

ಹೆಣ್ಣುಮಕ್ಕಳ ಶಿಕ್ಷಣದ ವಿಷಯಕ್ಕೆ ಹೋರಾಟ ನಡೆಸುತ್ತಿರುವ ಹಾಗೂ ತಾಲಿಬಾನ್ ಉಗ್ರರಿಂದ ಗುಂಡೇಟು ತಿಂದ ಮಲಾಲ ಯೂಸುಫ್ ಜೈ ಜೀವನಾಧಾರಿತ ಸಿನಿಮಾ ಗುಲ್ ಮಕೈ. ಕಿರಿಯ ವಯಸ್ಸಿನಲ್ಲೇ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಖ್ಯಾತಿ ಮಲಾಲ ಅವರದ್ದು. ಅಮ್ಜದ್ ಖಾನ್ ನಿರ್ದೇಶನದ ಈ ಸಿನಿಮಾದಲ್ಲಿ ಬಾಲ ನಟಿ ರೀಮಾ ಸಮೀರ್ ಶೇಕ್ ನಟಿಸುತ್ತಿದ್ದಾಳೆ.

ಧಾಕಡ್‌

ಕಂಗನಾಳ ಇನ್ನೊಂದು ಸಿನಿಮಾ ‘ಧಾಕಡ್‌’ ಕೂಡ ಮಹಿಳಾ ಪ್ರಧಾನ ಚಿತ್ರ. ಈ ಆ್ಯಕ್ಷನ್‌ ಸಿನಿಮಾ ಸಲುವಾಗಿ ಕಂಗನಾ ಕುಂಗ್‌ಫು ಕೂಡ ಕಲಿತಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.